More

    ಅಧಿಕಾರಿಗಳ ತಂಡದಿಂದ ಬೆಳೆ ಹಾನಿ ಸರ್ವೆ ಕಾರ್ಯ

    ಹಾನಗಲ್ಲ: ಹಾವೇರಿ ಜಿಲ್ಲೆಯ ಮೂರು ತಾಲೂಕು ಬರಪೀಡಿತ ಪಟ್ಟಿಗೆ ಸರ್ಕಾರ ಸೇರ್ಪಡೆಗೊಳಿಸಿದ ಬೆನ್ನಲ್ಲೇ ಜಿಲ್ಲಾಡಳಿತ ಹಾನಗಲ್ಲ, ಶಿಗ್ಗಾಂವಿ ಹಾಗೂ ಬ್ಯಾಡಗಿ ತಾಲೂಕುಗಳಲ್ಲಿ ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು ಮಂಗಳವಾರ ಬೆಳೆ ಹಾನಿ ಸರ್ವೆ ಕಾರ್ಯ ಕೈಗೊಂಡರು.

    ಜಿಲ್ಲಾಡಳಿತದ ಸೂಚನೆಯ ಮೇರೆಗೆ ಹಾನಗಲ್ಲ ತಾಲೂಕಿನ 16, ಶಿಗ್ಗಾಂವಿಯ 9, ಬ್ಯಾಡಗಿಯ 7 ಗ್ರಾಮಗಳಲ್ಲಿ ಅಧಿಕಾರಿಗಳು ಬೆಳೆ ಹಾನಿಯ ಪರೀಶಿಲನೆ ಕೈಗೊಂಡರು. ಕಳೆದ 5 ದಿನಗಳಿಂದ ಈ ಮೂರು ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸುವಂತೆ ರೈತ ಸಂಘಟನೆಗಳು ತಾಲೂಕು ಕಚೇರಿ ಆವರಣದಲ್ಲಿ ಅಹೋರಾತ್ರಿ, ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಂಡಿದ್ದವು.

    ರಾಜ್ಯ ಸರ್ಕಾರ ಸೋಮವಾರ ಜಿಲ್ಲೆಯ ಮೂರು ತಾಲೂಕುಗಳನ್ನೂ ಬರಪೀಡಿತ ಪ್ರದೇಶಗಳೆಂದು ಘೋಷಿಸಿತ್ತು. ನಂತರ ಮಧ್ಯಾಹ್ನ ಜಿಲ್ಲಾಡಳಿತ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ, ತರಬೇತಿ ನೀಡಿತ್ತು. ಜಿಲ್ಲೆಯ ಮೂರು ತಾಲೂಕುಗಳಲ್ಲಿ ಬೆಳೆ ನಷ್ಟದ ನೆಲ ಸ್ಥಿತಿಯನ್ನು (ಫುಟ್ ರಿಪೋರ್ಟ್) ಮೊಬೈಲ್ ಆ್ಯಪ್ ಮೂಲಕ ಮಂಗಳವಾರ ಸಂಜೆಯೊಳಗೆ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಬೆಳೆ ಹಾನಿಯಾಗಿರುವ ಹೊಲಗಳ ರೈತ ಫಲಾನುಭವಿಯೊಂದಿಗೆ ಪರಿಶೀಲಿಸಿ ಛಾಯಾಚಿತ್ರ ಸಹಿತ ಅಪ್‌ಲೋಡ್ ಮಾಡುವಂತೆ ಸಲಹೆ ನೀಡಲಾಗಿತ್ತು. ಮಂಗಳವಾರ ಹಾನಗಲ್ಲ ತಾಲೂಕಿನ 16 ಗ್ರಾಮಗಳಿಗೆ ಅಧಿಕಾರಿಗಳು ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿದರು. ನಂತರ ತಾಲೂಕಿನ ಸಮಗ್ರ ವರದಿ ಕ್ರೋಢೀಕರಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸುವ ಕಾರ್ಯ ನಡೆಯಿತು.

    ಈ ಸಂದರ್ಭದಲ್ಲಿ ಅಧಿಕಾರಿಗಳೊಂದಿಗೆ ಮಾತನಾಡಿದ ರೈತಸಂಘದ ಅಧ್ಯಕ್ಷ ಮರಿಗೌಡ ಪಾಟೀಲ, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ತಾಲೂಕಿನ ರೈತರು 2-3 ಬಾರಿ ಬಿತ್ತನೆ ಕೈಗೊಂಡಿದ್ದಾರೆ. ಆದರೆ, ಮಳೆಯ ಕೊರತೆಯಿಂದಾಗಿ ಸರಿಯಾದ ಬೆಳೆ ಬಂದಿಲ್ಲ. ಇನ್ನು ಕೆಲವೆಡೆ ಪೈರು ಭೂಮಿ ಬಿಟ್ಟು ಮೇಲೆದ್ದಿಲ್ಲ. ಬೆಳೆದು ನಿಂತ ಪೈರುಗಳಲ್ಲಿ ತೆನೆಯೂ ಕಟ್ಟಿಲ್ಲ. ಹೀಗಾಗಿ ರೈತರು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ. ತಾಲೂಕಿನಲ್ಲಿ ಬಹುಪಾಲು ಗೋವಿನಜೋಳ, ಭತ್ತದ ಬೆಳೆ ಕೈಕೊಟ್ಟಿದೆ. ಸದ್ಯದಲ್ಲಿ ಎದುರಾಗುವ ಬೇಸಿಗೆಯಲ್ಲಿ ಅಡಕೆ ತೋಟಗಳಿಗೂ ಸಮಸ್ಯೆ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ನ್ಯಾಯವೊದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ವರದಿ ಸಲ್ಲಿಸಬೇಕು ಎಂದು ಮನವಿ ಮಾಡಿದರು.

    ಹಾನಗಲ್ಲ ತಾಲೂಕು ನೋಡಲ್ ಅಧಿಕಾರಿ, ಕೃಷಿ ಇಲಾಖೆ ಉಪನಿರ್ದೇಶಕ ಟಿ. ಹುಲಿರಾಜ್, ತಹಸೀಲ್ದಾರ್ ರವಿಕುಮಾರ ಕೊರವರ, ಸಹಾಯಕ ಕೃಷಿ ನಿರ್ದೇಶಕ ಕೆ. ಮೋಹನಕುಮಾರ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಬಣಕಾರ, ಪ್ರಿಯಾಂಕಾ ಬೆಟಗೇರಿ, ಸಹಾಯಕ ತೋಟಗಾರಿಕೆ ಅಧಿಕಾರಿ ಮೃತ್ಯುಂಜಯ ಹಿರೇಮಠ, ರೈತ ಸಂಘದ ಕಾರ್ಯದರ್ಶಿ ರಾಜೀವ ದಾನಪ್ಪನವರ, ಸಿದ್ದನಗೌಡ ಪಾಟೀಲ, ಬಸವಂತಪ್ಪ ಪೂಜಾರ, ಗಣಪತಿ ಚಿಕ್ಕೇರಿ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts