More

    4,200 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ

    ಹಾವೇರಿ: ಜಿಲ್ಲೆಯಲ್ಲಿ ಮಳೆ ಕಳೆದ ಮೂರು ದಿನದಿಂದ ಪೂರ್ಣವಾಗಿ ಕಡಿಮೆಯಾಗಿದ್ದು, ಪ್ರವಾಹ ಪರಿಸ್ಥಿತಿ ಮಾತ್ರ ಇನ್ನೂ ತಗ್ಗಿಲ್ಲ. ಜಮೀನು, ಗದ್ದೆಗಳಿಗೆ ನುಗ್ಗಿದ್ದ ನೀರು ಹಾಗೆಯೇ ಇದೆ. ಕೆಲ ಗ್ರಾಮಗಳಲ್ಲಿ ನುಗ್ಗಿದ ನೀರು ನಿಧಾನವಾಗಿ ಕಡಿಮೆಯಾಗುತ್ತಿದೆ.

    ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ದರೂ ಪಕ್ಕದ ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಅತಿಹೆಚ್ಚಿನ ಮಳೆಯಾಗಿದ್ದರಿಂದ ನದಿಗಳಲ್ಲಿ ನೀರಿನ ಹರಿವು ಹೆಚ್ಚಿದೆ. ನೀರು ಸಾಕಷ್ಟು ಪ್ರಮಾಣದಲ್ಲಿ ಬರುತ್ತಿರುವುದರಿಂದ ನದಿಗಳಲ್ಲಿನ ನೀರಿನ ಪ್ರಮಾಣ ಕಡಿಮೆಯಾಗದೇ ಅನೇಕ ಕಡೆಗಳಲ್ಲಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ನಾಗನೂರ, ಕಲಕೋಟಿ, ಹಿರೇಮುಗದೂರ, ಹಲಸೂರ, ಕುಣಿಮೆಳ್ಳಿಹಳ್ಳಿ ಸೇರಿ ಕೆಲ ಗ್ರಾಮಗಳಲ್ಲಿಯೂ ನೀರು ನುಗ್ಗಿದೆ. ತಗ್ಗು ಪ್ರದೇಶದಲ್ಲಿನ ಮನೆ, ಮಸೀದಿ ಕಟ್ಟಡಗಳು ಇನ್ನೂ ನೀರಿನಲ್ಲಿಯೇ ನಿಂತಿವೆ.

    ವರದಾ, ತುಂಗಭದ್ರಾ, ಕುಮದ್ವತಿ ನದಿಗಳ ಪ್ರವಾಹ ಹಾಗೂ ಕೆಲ ಕಡೆಗಳಲ್ಲಿ ಕೆರೆಗಳ ನೀರಿನ ಹೊಡೆತಕ್ಕೆ ಸಿಲುಕಿ ಈವರೆಗೆ ಜಿಲ್ಲೆಯಾದ್ಯಂತ ಒಟ್ಟು 4,200 ಹೆಕ್ಟೇರ್ ಪ್ರದೇಶದಲ್ಲಿ ಅಂದಾಜು 8.55 ಕೋಟಿ ಕೃಷಿ ಬೆಳೆ, 1.95 ಕೋಟಿ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಮೆಕ್ಕೆಜೋಳ ಅತಿಹೆಚ್ಚು 1,773 ಹೆಕ್ಟೇರ್, ಸೋಯಾಬೀನ್ 329 ಹೆ, ಹತ್ತಿ 250 ಹೆ, ಭತ್ತ 241 ಹೆ, ಶೇಂಗಾ 209 ಹೆ, ಜೋಳ 22 ಹೆ, 10 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆ ಹಾನಿಯಾಗಿದೆ. ಹಿರೇಕೆರೂರ ಹಾಗೂ ರಟ್ಟಿಹಳ್ಳಿ ತಾಲೂಕಿನಲ್ಲಿ ತೋಟಗಾರಿಕೆ ಬೆಳೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ.

    ಶಿಗ್ಗಾಂವಿ ತಾಲೂಕಿನಲ್ಲಿ 64, ರಟ್ಟಿಹಳ್ಳಿ 60, ಹಾನಗಲ್ಲ 51, ರಾಣೆಬೆನ್ನೂರ 18 ಹಾಗೂ ಹಾವೇರಿ ತಾಲೂಕಿನಲ್ಲಿ 3 ಮನೆಗಳು ಭಾಗಶಃ ಕುಸಿದಿವೆ. ಇದರೊಂದಿಗೆ ಜಿಲ್ಲೆಯಾದ್ಯಂತ ಈವರೆಗೆ ಒಟ್ಟು ಸಾವಿರಕ್ಕೂ ಅಧಿಕ ಮನೆಗಳು ಹಾನಿಗೀಡಾಗಿವೆ.

    ಕೂಡಲ-ನಾಗನೂರ, ಹಾವೇರಿ-ಕಳಸೂರ, ಕರ್ಜಗಿ-ಕಲಕೋಟಿ, ಹಾಲಗಿ-ಮರೋಳ, ಬೆಳವಿಗಿ-ಮೇವುಂಡಿ ಸೇರಿದಂತೆ ಅನೇಕ ಕಡೆಗಳಲ್ಲಿ ವರದಾ ನದಿಯ ನೀರಿನ ಪ್ರವಾಹ ಪೂರ್ಣ ಪ್ರಮಾಣದಲ್ಲಿ ಕಡಿಮೆಯಾಗದೇ ಇರುವುದರಿಂದ ರಸ್ತೆ ಸಂಪರ್ಕ ಇನ್ನೂತೆರವುಗೊಂಡಿಲ್ಲ. ಹೀಗಾಗಿ ಈ ಗ್ರಾಮಗಳ ಜನರು ಸುತ್ತುವರಿದು ಬೇರೆ ಬೇರೆ ಗ್ರಾಮಗಳಿಗೆ ಸಂಚರಿಸುವಂತಾಗಿದೆ.

    ನೀರಿನ ಸಮಸ್ಯೆಯೂ ಉಲ್ಬಣ

    ವರದಾ ನದಿ ತೀರದಗುಂಟ ಇರುವ ಅನೇಕ ಗ್ರಾಮಗಳಿಗೆ ನೀರು ಪೂರೈಸುವ ಕೊಳವೆ ಬಾವಿಗಳು ನದಿ ದಂಡೆಯಲ್ಲಿಯೇ ಇವೆ. ಪ್ರವಾಹದಿಂದ ಅವುಗಳೆಲ್ಲ ನೀರಿನಲ್ಲಿ ಮುಳುಗಿದ್ದು, ಅನೇಕ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಗ್ರಾಮದ ಸುತ್ತ ಎತ್ತ ನೋಡಿದರತ್ತ ನೀರಿದ್ದರೂ ಮನೆಯಲ್ಲಿ ಕುಡಿಯಲು ನೀರು ಇಲ್ಲದಂತಹ ಸ್ಥಿತಿ ಅನೇಕ ಗ್ರಾಮಗಳಲ್ಲಿ ಕಂಡುಬರತೊಡಗಿದೆ. ನದಿಯ ನೀರನ್ನೇ ತಿಳಿ ಮಾಡಿಕೊಂಡು ಕುಡಿಯುವ ಸ್ಥಿತಿ ನಿರ್ವಣವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts