More

    ಜನವಸತಿ ಪ್ರದೇಶಕ್ಕೆ ನುಗ್ಗುತ್ತಿದೆ ಮೊಸಳೆ

    ಯು.ಎಸ್.ಪಾಟೀಲ ದಾಂಡೇಲಿ

    ಮೊಸಳೆಗಳ ಮಾಂಸ ದಾಹಕ್ಕೆ ಉದ್ಯಮನಗರಿ ದಾಂಡೇಲಿ ಬೆಚ್ಚಿದೆ. ಇದುವರೆಗೆ ಕಾಳಿ ನದಿಯ ಕೆಸರು ತಿಂದು ತೆಪ್ಪಗಿರುತ್ತಿದ್ದ ಮೊಸಳೆಗಳು ಇತ್ತೀಚೆಗೆ ನದಿ ದಡ ಮೇಲೆ, ವೋಣಿಗಳಲ್ಲಿ ಓಡಾಟ ನಡೆಸುತ್ತಿವೆ. ಮನೆಗಳ ಪಕ್ಕ ಬಂದು ಕೂರುತ್ತಿವೆ. ಸಂತಾನೋತ್ಪತ್ತಿ ಮಾಡುತ್ತಿವೆ. ಅಷ್ಟೇ ಅಲ್ಲ, ಮಾನವನ, ಪ್ರಾಣಿಗಳ ಮೇಲೆ ದಾಳಿಗೆ ಮುಂದಾಗಿವೆ. ಕಳೆದ ಕೆಲ ತಿಂಗಳಲ್ಲಿ ಇಬ್ಬರು ಮೊಸಳೆಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಇದ್ದಕ್ಕಿದ್ದಂತೆ ಮೊಸಳೆಗಳ ವರ್ತನೆಯಲ್ಲಿ ಆದ ಬದಲಾವಣೆಯಿಂದ ಜನ ಅಚ್ಚರಿಗೊಂಡಿದ್ದು, ಅವುಗಳ ನಿಯಂತ್ರಣಕ್ಕೆ ಇಲಾಖೆಗಳು ಸೂಕ್ತ ಕ್ರಮ ವಹಿಸುವಂತೆ ಆಗ್ರಹಿಸಿದ್ದಾರೆ.

    10 ವರ್ಷಗಳ ಹಿಂದೆ ಕರಿಯಂಪಲ್ಲಿ ಬಳಿ ವ್ಯಕ್ತಿಯೊಬ್ಬ ಮೊಸಳೆ ದಾಳಿಗೆ ಬಲಿಯಾಗಿದ್ದು ಬಿಟ್ಟರೆ ನಂತರ ಅಂಥ ಘಟನೆಗಳು ಮರುಕಳಿಸಿರಲಿಲ್ಲ. ನದಿ ದಡದಲ್ಲೇ ದಾಂಡೇಲಿ ನಗರವಿದ್ದರೂ ಮೊಸಳೆಗಳು ಈಶ್ವರ ದೇವಸ್ಥಾನ ಪಕ್ಕದ ಸೇತುವೆಯಿಂದೀಚೆ ಬಂದು ಯಾರ ಮೇಲೂ ದಾಳಿ ನಡೆಸಿದ ಉದಾಹರಣೆ ಇರಲಿಲ್ಲ.

    ಈ ಮಧ್ಯೆ, ಕಳೆದ ವರ್ಷ ಅಕ್ಟೋಬರ್ 24 ರಂದು ಹಳಿಯಾಳ ರಸ್ತೆಯ ಪಂಪ್ ಹೌಸ್ ಬಳಿ ಮೊಹಿನ್ ಮೆಹಬೂಬ್ ಅಲಿಮಿಯಾ ಗುಲ್ಬರ್ಗಾ(15) ಎಂಬ ಬಾಲಕ ಮೊಸಳೆ ದಾಳಿಗೆ ಬಲಿಯಾಗಿದ್ದ. ಈಗ ಸೋಮವಾರ ಸಾಯಂಕಾಲ ಪಟೇಲನಗರ ಬಳಿ ಅರ್ಷದ್ ಖಾನ್ ರಾಯಚೂರ್(23) ಎಂಬ ಯುವಕನನ್ನು ಮೊಸಳೆ ಎಳೆದೊಯ್ದಿದ್ದನ್ನು ಆತನ ಸ್ನೇಹಿತರು ನೋಡಿದ್ದಾರೆ. ಮಂಗಳವಾರ ಇಡೀ ದಿನ ಕಾಳಿ ನದಿಯಲ್ಲಿ ಹುಡುಕಾಟ ನಡೆದ ನಂತರ ಸಾಯಂಕಾಲ ಮೃತ ದೇಹ ಪತ್ತೆಯಾಗಿದೆ. ಇತ್ತೀಚೆಗೆ ಕೆಲ ಕುರಿ, ಜಾನುವಾರುಗಳನ್ನು ಮೊಸಳೆಗಳು ಎಳೆದೊಯ್ದಿದ್ದನ್ನು ಸ್ಥಳೀಯರು ಗಮನಿಸಿ ಆತಂಕಿತರಾಗಿದ್ದರು.

    ಪ್ರವಾಸೋದ್ಯಮಕ್ಕೂ ತೊಡಕು: ದಾಂಡೇಲಿ ಪ್ರವಾಸೋದ್ಯಮಕ್ಕೆ ಹೆಸರಾಗಿದೆ. ಕಾಳಿ ನದಿಯಲ್ಲಿ ಬೋಟಿಂಗ್ ಚುಟುವಟಿಕೆಗಳು ನಡೆಯುತ್ತವೆ. ಮೊಸಳೆಗಳ ವರ್ತನೆಯಲ್ಲಿ ಆದ ಈ ಬದಲಾವಣೆಯಿಂದ ಪ್ರವಾಸಿಗರು ಆತಂಕಕ್ಕೊಳಗಾಗಬಹುದು. ಪ್ರವಾಸೋದ್ಯಮ ಚಟುವಟಿಕೆಗಳಿಗೆ ಹಿನ್ನಡೆಯಾಗಬಹುದು ಎಂಬುದು ಸ್ಥಳೀಯ ಉದ್ಯಮಿಗಳ ಆತಂಕವಾಗಿದೆ.

    ಆಹಾರದ ಕೊರತೆ ಕಾರಣ?: ‘ದಾಂಡೇಲಿಯಲ್ಲಿ ಕಂಡು ಬರುವ ಮೊಸಳೆಗಳು ಮಾರ್ಷ್ ಮಗರ್ ಜಾತಿಯದ್ದು, ಒಂದು ಹೆಣ್ಣು ಮೊಸಳೆ ವರ್ಷಕ್ಕೆ ಕನಿಷ್ಠ 50 ಮರಿಗಳನ್ನು ಹಾಕುತ್ತವೆ. ಮೌಳಂಗಿಯಿಂದ ಬೊಮ್ಮನಳ್ಳಿ ಅಣೆಕಟ್ಟೆವರೆಗೆ ಕನಿಷ್ಠ 100ಕ್ಕಿಂತಲೂ ಹೆಚ್ಚು ಮೊಸಳೆಗಳಿವೆ. ಈ ಮೊದಲು ಅವು ಕಾಗದ ಕಾರ್ಖಾನೆಯ ಕಾಗದದ ಪಲ್ಪ್ ತಿನ್ನುತ್ತಿದ್ದವು. ಈಗ ಕಾರ್ಖಾನೆ ನದಿಗೆ ನೇರವಾಗಿ ತ್ಯಾಜ್ಯ ಬಿಡುವುದನ್ನು ನಿಲ್ಲಿಸಿದೆ. ಇದರಿಂದ ನದಿಯ ನೀರು ಶುದ್ಧವಾಗಿದ್ದರೂ ಮೊಸಳೆಗಳಿಗೆ ಆಹಾರ ಕಡಿಮೆಯಾಗಿದೆ. ಇನ್ನು ಕಾಳಿ ನದಿಯಲ್ಲಿ ಮೊಸಳೆಗಳಿಗೆ ಆಹಾರವಾಗಬಲ್ಲ ಮೀನಿನ ಲಭ್ಯತೆಯೂ ಕಡಿಮೆಯಿದೆ. ಈ ನಡುವೆ ಮೊಸಳೆಗಳ ಸಂಖ್ಯೆಯೂ ಹೆಚ್ಚಿದ್ದು, ಅವು ಆಹಾರಕ್ಕಾಗಿ ಜೀವಂತ ಪ್ರಾಣಿಗಳು, ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ’ ಎನ್ನುತ್ತಾರೆ ದಾಂಡೇಲಿ ವೈಲ್ಡ್ ರಿವರ್ ಎಡ್ವೆಂಚರ್ಸ್ ತಂಡದ ಮುಖ್ಯಸ್ಥ ರವಿ ನಾಯಕ. ಪ್ರವಾಹದಿಂದ ನದಿ ಪಕ್ಕದ ಮಣ್ಣು ಕೊಚ್ಚಿ ಹೋಗಿ ಮೊಸಳೆಗಳ ಸಂತಾನೋತ್ಪತ್ತಿಗೆ ದಡದ ಮೇಲೆ ಬರುವಂತಾಗಿದೆ. ಕೆಲವು ನದಿಯ ಅತಿಕ್ರಮಣಗಳೂ ಅವುಗಳು ಮೇಲೆ ಬರಲು ಕಾರಣವಾಗಿರಬಹುದು ಎಂಬುದು ಸ್ಥಳೀಯರ ಅಭಿಪ್ರಾಯ.

    ‘ಮೊಸಳೆಗಳು ಇವೆ ಎಚ್ಚರಿಕೆ’ ಎಂಬ ಫಲಕಗಳನ್ನು ಅರಣ್ಯ ಇಲಾಖೆ ಅಳವಡಿಸಿದೆ. ದಂಡೆಯ ಮೇಲೆ ಇರುವ ಜನ ನದಿಯಲ್ಲಿ ಮಾಂಸಹಾರ ಹಾಗೂ ಇತರೆ ಆಹಾರ ಪದಾರ್ಥಗಳನ್ನು ಎಸೆಯಕೂಡದು. ನಗರ ವ್ಯಾಪ್ತಿಯಲ್ಲಿ ನಗರಸಭೆ, ಜಿಲ್ಲಾಡಳಿತ, ಮೊಸಳೆ ರಕ್ಷಣೆಗೆ ತಡೆ ಗೋಡೆ ಅಥವಾ ತಂತಿ ಜಾಲಿ ಅಳವಡಿಸುವ ಬಗ್ಗೆ ಚಿಂತಿಸಬೇಕು. ಅರಣ್ಯ ಇಲಾಖೆಗೆ ಸಂಬಂಧಪಟ್ಟ ಜಾಗೆಗೆ ಅರಣ್ಯ ಇಲಾಖೆ ಈ ಮುಂಜಾಗ್ರತೆ ಕ್ರಮಕ್ಕೆ ಯೋಜನೆ ಸಿದ್ಧಪಡಿಸಲಿದೆ. ಮೊಸಳೆ ದಾಳಿಯಿಂದ ಬಚಾವಾಗಲು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ.

    | ಡಾ. ಅಜ್ಜಯ್ಯ ಜಿ.ಆರ್.

    ಡಿಎಫ್​ಒ ಹಳಿಯಾಳ

    ಕಾಳಿ ನದಿಯಲ್ಲಿ ಮೊಸಳೆ ಇರುವೆಡೆ ಜಾಲರಿ ಅಳವಡಿಸಬೇಕು. ಅವುಗಳ ಆಹಾರಕ್ಕೆ ಮೀನಿನ ಸಂಖ್ಯೆ ಹೆಚ್ಚು ಮಾಡಲು ಕ್ರಮ ವಹಿಸಬೇಕು. ನದಿ ದಂಡೆಯ ಮೇಲೆ ಮುಂಜಾಗ್ರತಾ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅರಣ್ಯ ಇಲಾಖೆ, ನಗರಸಭೆಯ ಅಧಿಕಾರಿಗಳ ಸಭೆ ಕರೆದು ಕ್ರಮ ಕೈಗೊಳ್ಳಬೇಕು.

    | ಉಮಾ ಹರಿಜನ

    ಸ್ಥಳೀಯ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts