More

    ದೇಶದಲ್ಲಿ ಪ್ರತಿದಿನ 80 ಕೊಲೆ: ಕರೊನಾ ಕಾಲದಲ್ಲಿ ಮಹಿಳಾ ದೌರ್ಜನ್ಯ, ಅಪಹರಣ ಇಳಿಕೆ

    ನವದೆಹಲಿ: ಕರೊನಾ ಸಾಂಕ್ರಾಮಿಕತೆಯಿಂದ ಜಝರ್ರಿತ ವಾಗಿದ್ದ 2020ರಲ್ಲಿ ಭಾರತದಲ್ಲಿ ಪ್ರತಿ ದಿನ ಸರಾಸರಿ 80 ಕೊಲೆಗಳು ಹಾಗೂ 77 ಅತ್ಯಾಚಾರಗಳು ನಡೆದಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (ಎನ್​ಸಿಆರ್​ಬಿ) ಬುಧವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಿದೆ. ಕಳೆದ ವರ್ಷ ದೇಶದಲ್ಲಿ ಒಟ್ಟು 29,193 ಜನರ ಕೊಲೆಯಾಗಿದ್ದು ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು, ಅಂದರೆ 3,779 ಹತ್ಯೆಗಳು ನಡೆದಿವೆ. ಬಿಹಾರ -3150, ಮಹಾರಾಷ್ಟ್ರ -2,163, ಮಧ್ಯ ಪ್ರದೇಶ -2,101 ಮತ್ತು ಬಂಗಾಳ -1,948 ಕೊಲೆಗಳೊಂದಿಗೆ ನಂತರದ ಸ್ಥಾನಗಳಲ್ಲಿವೆ. ಈ ಅವಧಿಯಲ್ಲಿ ದೆಹಲಿಯಲ್ಲಿ 472 ಕೊಲೆಗಳಾಗಿವೆ. 2019ರಲ್ಲಿ ಸರಾಸರಿ 79 ದೈನಿಕ ಕೊಲೆಗಳಾಗಿದ್ದು ಒಟ್ಟು 28,915 ಜನರ ಪ್ರಾಣ ಹರಣವಾಗಿತ್ತು. ದೇಶದಲ್ಲಿ 2020ರಲ್ಲಿ ಪ್ರತಿ ದಿನ ಸರಾಸರಿ 77 ಅತ್ಯಾಚಾರ ನಡೆದು ಒಟ್ಟು 28,046 ರೇಪ್​ ಕೇಸ್​ಗಳು ದಾಖಲಾಗಿವೆ.

    ದೌರ್ಜನ್ಯ ಇಳಿಕೆ: ಹಿಂದಿನ ಎರಡು ವರ್ಷಗಳಿಗೆ ಹೋಲಿಸಿದರೆ 2020ರಲ್ಲಿ ಕರೊನಾ ಸಾಂಕ್ರಾಮಿಕತೆಯ ಅಬ್ಬರವಿದ್ದಾಗ ದೇಶದಲ್ಲಿ ಮಹಿಳೆಯರ ವಿರುದ್ಧದ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗಿವೆ. 2018ರಲ್ಲಿ 3,78,236 ಹಾಗೂ 2019ರಲ್ಲಿ 4,05,326 ಮಹಿಳಾ ದೌರ್ಜನ್ಯದ ಪ್ರಕರಣಗಳು ದಾಖಲಾಗಿದ್ದವು. 2020ರಲ್ಲಿ 3,71,503 ಕೇಸ್​ಗಳು ನಡೆದಿವೆ.

    ಅಪಹರಣ 19% ಕಡಿಮೆ: 2019ಕ್ಕೆ ಹೋಲಿಸಿದರೆ ಕಳೆದ ವರ್ಷ ಅಪಹರಣ ಪ್ರಕರಣಗಳು ಶೇಕಡ 19 ಕಡಿಮೆಯಾಗಿವೆ. 2019ರಲ್ಲಿ 1,05,036 ಅಪಹರಣ ಪ್ರಕರಣಗಳು ದಾಖಲಾಗಿದ್ದವು. 2020ರಲ್ಲಿ ಅದು 84,805ಕ್ಕೆ ಇಳಿದಿದೆ ಎಂದು ಎನ್​ಸಿಆರ್​ಬಿ ವರದಿ ವಿವರಿಸಿದೆ.

    ರಾಜಸ್ಥಾನದಲ್ಲಿ ಗರಿಷ್ಠ ರೇಪ್​: ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ (ಯುಟಿ) ಪೈಕಿ ರಾಜಸ್ಥಾನದಲ್ಲಿ 2020ರಲ್ಲಿ ಅತಿ ಹೆಚ್ಚು 5,310 ಅತ್ಯಾಚಾರಗಳು ನಡೆದಿವೆ. ಉತ್ತರ ಪ್ರದೇಶ 2,769, ಮಧ್ಯ ಪ್ರದೇಶ 2,339, ಮಹಾರಾಷ್ಟ್ರ 2,061 ಮತ್ತು ಅಸ್ಸಾಂ 1,657 ರೇಪ್​ ಕೇಸ್​ಗಳಿಗೆ ಸಾಯಾಗಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 997 ಲೈಂಗಿಕ ದೌರ್ಜನ್ಯ ನಡೆದಿವೆ.
    ಸೈಬರ್​ ಅಪರಾಧದಲ್ಲೂ ಏರಿಕೆ: 2020ರಲ್ಲಿ ಸೈಬರ್​ ಅಪರಾಧಗಳಲ್ಲಿ ಶೇಕಡ 11.8ರಷ್ಟು ಏರಿಕೆ ದಾಖಲಾಗಿದೆ.

    ದಲಿತರ ಮೇಲಿನ ದೌರ್ಜನ್ಯ
    2019ಕ್ಕೆ ಹೋಲಿಸಿದರೆ 2020ರಲ್ಲಿ ಪರಿಶಿಷ್ಟ ಜಾತಿ (ಎಸ್​ಸಿ) ಜನರ ಮೇಲಿನ ದೌರ್ಜನ್ಯದಲ್ಲಿ ಶೇಕಡ 9.4 ಹಾಗೂ ಪರಿಶಿಷ್ಟ ಪಂಗಡಗಳ (ಎಸ್​ಟಿ) ಮೇಲಿನ ಅನ್ಯಾಯದಲ್ಲಿ ಶೇ. 9.3ರಷ್ಟು ಏರಿಕೆಯಾಗಿರುವುದನ್ನು ಎನ್​ಸಿಆರ್​ಬಿ ದಾಖಲಿಸಿದೆ. ಎಸ್​ಸಿಗಳ ಮೇಲೆ ದೌರ್ಜನ್ಯದ ಒಟ್ಟು 50,291 ಪ್ರಕರಣಗಳು ದಾಖಲಾಗಿವೆ. ಎಸ್​ಸಿ/ಎಸ್​ಟಿ ದೌರ್ಜನ್ಯ ತಡೆ ಕಾನೂನಿನಡಿ 4,273 ಕೇಸ್​ಗಳು ಹಾಗೂ ಕ್ರಿಮಿನಲ್​ ದಬ್ಬಾಳಿಕೆ ಕಾನೂನು ಅನ್ವಯ 3,788 ಮೊಕದ್ದಮೆಗಳು ದಾಖಲಾಗಿವೆ. ಎಸ್​ಟಿಗಳ ವಿರುದ್ಧ ದೌರ್ಜನ್ಯದ ಒಟ್ಟು 8,272 ಕೇಸ್​ಗಳು ಈ ಅವಧಿಯಲ್ಲಿ ದಾಖಲಾಗಿವೆ.

    ಆ್ಯಸಿಡ್​ ದಾಳಿ, ವರದಕ್ಷಿಣೆ ಸಾವು
    2020ರಲ್ಲಿ ದೇಶದಾದ್ಯಂತ ಮಹಿಳೆಯರ ಮೇಲೆ ಆ್ಯಸಿಡ್​ ಎರಚಿದ 105 ಘೋರ ಪ್ರಕರಣಗಳು ನಡೆದಿವೆ. 6,966 ಮಹಿಳೆಯರು ವರದಣೆ ಕ್ರೌರ್ಯಕ್ಕೆ ಬಲಿಯಾಗಿದ್ದಾರೆ. ಹಿಂದಿನ ವರ್ಷ 7,045 ಸ್ತ್ರೀಯರು ವರದಣೆ ಪಿಡುಗಿನಿಂದ ಪ್ರಾಣ ಕಳೆದುಕೊಂಡಿದ್ದರು.

    ಪತಿ, ಬಂಧುಗಳ ಕ್ರೌರ್ಯ
    ಕಳೆದ ವರ್ಷ ಮಹಿಳೆಯರ ವಿರುದ್ಧ ನಡೆದ ದೌರ್ಜನ್ಯಗಳಲ್ಲಿ ಗರಿಷ್ಠ, ಅಂದರೆ 1,11,549 ಪ್ರಕರಣಗಳು ಪತಿ ಅಥವಾ ಸಂಬಂಧಿಕರಿಂದ ನಡೆದ ದೌರ್ಜನ್ಯಗಳಾಗಿವೆ ಎಂಬುದನ್ನು ಎನ್​ಸಿಆರ್​ಬಿ ಡೇಟಾ ಹೊರಗೆಡಹಿದೆ. ಮಾನಭಂಗಕ್ಕಾಗಿ ದೌರ್ಜನ್ಯದ 85,392 ಹಾಗೂ ಅತ್ಯಾಚಾರ ಯತ್ನದ 3,741 ಕೇಸ್​ಗಳೂ ದಾಖಲಾಗಿವೆ.

    ಕರೊನಾ ನಿಯಮ ಉಲ್ಲಂಘನೆ
    2019ಕೆ ಹೋಲಿಸಿದರೆ, 2020ರಲ್ಲಿ ಅಪರಾಧ ಪ್ರಕರಣಗಳ ದಾಖಲಾತಿಯಲ್ಲಿ ಶೇಕಡ 28ರಷ್ಟು ಏರಿಕೆ ದಾಖಲಾಗಿದೆ. ದೇಶದಾದ್ಯಂತ ಜಾರಿಯಲ್ಲಿದ್ದ ಕೋವಿಡ್​-19 ನಿಯಂತ್ರಣ ನಿಯಮಗಳ ವ್ಯಾಪಕ ಉಲ್ಲಂನೆಯೇ ಇದಕ್ಕೆ ಕಾರಣವಾಗಿದೆ. ಸರ್ಕಾರಿ ನೌಕರರ ಮೇಲಿನ ದಾಳಿಯಲ್ಲಿ ಗಣನೀಯ ಏರಿಕೆಯಾಗಿದೆ.

    ಉಪ್ರದಲ್ಲಿ ಅಧಿಕ ಅಪಹರಣ
    ಅಪಹರಣ ಕೇಸ್​ಗಳಲ್ಲಿ ಉತ್ತರ ಪ್ರದೇಶ ಮುಂಚೂಣಿಯಲ್ಲಿದೆ. ಅಲ್ಲಿ 2020ರಲ್ಲಿ 12,913 ಅಪಹರಣ ಮೊಕದ್ದಮೆಗಳು ದಾಖಲಾಗಿವೆ. ಬಂಗಾಳ -9,309, ಮಹಾರಾಷ್ಟ್ರ -8,103, ಬಿಹಾರ -7,889, ಮಧ್ಯ ಪ್ರದೇಶ -7,320, ದೆಹಲಿ – 4,062 ಪ್ರಕರಣಗಳು ದಾಖಲಾಗಿವೆ. 84,805 ಅಪಹರಣ ಸಂತ್ರಸ್ತರಲ್ಲಿ ಮಕ್ಕಳೇ ಅಧಿಕವಾಗಿದ್ದಾರೆ. 56,591 ಮಕ್ಕಳು ಅಪಹರಣಕ್ಕೆ ತುತ್ತಾಗಿದ್ದು ಉಳಿದವರು ವಯಸ್ಕರು ಎಂದು ಎನ್​ಸಿಆರ್​ಬಿ ವಿವರಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts