More

    ಜಿಲ್ಲೆಯಲ್ಲಿ 9 ತಿಂಗಳಲ್ಲಿ 29 ಕೊಲೆ : ಗ್ರಾಮಾಂತರ ಕ್ಷೇತ್ರದಲ್ಲೇ 5 ಕೊಲೆ : ವಿಧಾನಮಂಡಲದ ಸದನದಲ್ಲಿ ವಿಚಾರ ಬಯಲು

    ತುಮಕೂರು : ಜಿಲ್ಲೆಯಾದ್ಯಂತ 9 ತಿಂಗಳಲ್ಲಿ 29 ಕೊಲೆ ಪ್ರಕರಣ ವರದಿಯಾಗಿವೆ. ಗ್ರಾಮಾಂತರ ಕ್ಷೇತ್ರವೊಂದರಲ್ಲೇ 5 ಕೊಲೆಗಳು ನಡೆದಿದ್ದು ವಿಧಾನ ಮಂಡಲದ ಕಲಾಪದಲ್ಲಿ ಸರ್ಕಾರ ನೀಡಿರುವ ಉತ್ತರದಲ್ಲಿ ಇದು ಬಹಿರಂಗವಾಗಿದೆ.

    ಗ್ರಾಮಾಂತರ ಕ್ಷೇತ್ರ ಹಿರೇಹಳ್ಳಿಯ ಚೋಟೆಸಾಬರಪಾಳ್ಯದಲ್ಲಿ ದನ ಮೇಯಿಸಲು ಹೋಗಿದ್ದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಗೈದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಡಿ.ಸಿ.ಗೌರಿಶಂಕರ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಉತ್ತರ ನೀಡಿದ್ದು, 2021ರಲ್ಲಿ 5 ಕೊಲೆ, 31 ಅಕ್ರಮ ಮದ್ಯ ಮಾರಾಟ, 70 ಜೂಜುಗಾರಿಕೆ, 21 ಅಕ್ರಮ ಮರಳು ಸಾಗಣೆ ಪ್ರಕರಣಗಳು ದಾಖಲಾಗಿರುವುದಾಗಿ ಮಾಹಿತಿ ನೀಡಿದ್ದಾರೆ.

    5 ಕೊಲೆ ಪ್ರಕರಣ: ತುಮಕೂರು ತಾಲೂಕು ವ್ಯಾಪ್ತಿಗೆ ಬರುವ ಕ್ಯಾತಸಂದ್ರ, ಕೋರಾ, ಬೆಳ್ಳಾವಿ ಹೆಬ್ಬೂರು ಠಾಣೆ ವ್ಯಾಪ್ತಿಗಳಲ್ಲಿ 5 ಕೊಲೆ ನಡೆದಿವೆ. ಕೋರಾ-2, ಹೆಬ್ಬೂರು-2 ಹಾಗೂ ಕ್ಯಾತಸಂದ್ರ-1 ಕೊಲೆ ಪ್ರಕರಣ ನಡೆದಿದ್ದು ಹಿರೇಹಳ್ಳಿಯ ಚೋಟಸಾಬರಪಾಳ್ಯದಲ್ಲಿ ನಡೆದ ಮಹಿಳೆ ಕೊಲೆ, ಅತ್ಯಾಚಾರ ಪ್ರಕರಣವನ್ನು ತಿಂಗಳಾದರೂ ಪೊಲೀಸರು ಭೇದಿಸಲಾಗದೆ ಕೈಚೆಲ್ಲಿ ಕುಳಿತಿದ್ದಾರೆ. ಇದು ಪೊಲೀಸ್ ಇಲಾಖೆ ವೈಫಲ್ಯ ಎತ್ತಿತೋರುತ್ತಿದೆ. 2020ರಲ್ಲಿ 3 ಕೊಲೆ, 54 ಅಕ್ರಮ ಮದ್ಯ ಮಾರಾಟ, 69 ಜೂಜುಗಾರಿಕೆ, 02 ಅಕ್ರಮ ಮರಳು ಸಾಗಣೆ ಪ್ರಕರಣಗಳು ವರದಿಯಾಗಿದೆ. 2019ರಲ್ಲಿ 5 ಕೊಲೆ, 36 ಅಕ್ರಮ ಮದ್ಯಮಾರಾಟ, 54 ಜೂಜುಗಾರಿಕೆ, 15 ಅಕ್ರಮ ಮರಳು ಸಾಗಾಣಿಕೆ ಪ್ರಕರಣಗಳು ನಡೆದಿರುವುದಾಗಿ ಸದನದಲ್ಲಿ ಗೃಹ ಸಚಿವರು ನೀಡಿರುವ ಉತ್ತರದಲ್ಲಿ ತಿಳಿದುಬಂದಿದೆ.

    ನಿಧಿಗಾಗಿ ಮಹಿಳೆ ಕೊಲೆ ಶಂಕೆ! : ತುಮಕೂರು ತಾಲೂಕಿನ ಜಕ್ಕೆನಹಳ್ಳಿ ಸಮೀಪದ ಮಿಂಚುಕಲ್ಲು ಬೆಟ್ಟದಲ್ಲಿ ಮಹಿಳೆಯ ಕೊಳತೆ ಸ್ಥಿತಿಯಲ್ಲಿದ್ದ ದೇಹವು ಜುಲೈ 4 ರಂದು ಪತ್ತೆಯಾಗಿದ್ದು ಈ ಪ್ರಕರಣವನ್ನೂ ಪೊಲೀಸರು ಭೇದಿಸಲಾಗಿಲ್ಲ. ಮಿಂಚುಕಲ್ಲು ಬೆಟ್ಟದ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗ ನಿಧಿಗಾಗಿ ಈ ಹತ್ಯೆ ನಡೆದಿರಬಹುದಾದ ಶಂಕೆ ಇದ್ದು ಮಹಿಳೆ ದೇಹ ಸಂಪೂರ್ಣವಾಗಿ ಕೊಳೆತು ಹೋಗಿದ್ದು ಹಂತಕರ ಪತ್ತೆ ಸಾಧ್ಯವಾಗದೆ ಕೈಚೆಲ್ಲುವಂತಾಗಿದೆ. ಈ ಪ್ರಕರಣ ಬೆಳಕಿಗೆ ಬಂದ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪೂರವಾಡ್ ಅವರು ತನಿಖಾ ತಂಡದೊಂದಿಗೆ ಬೆಟ್ಟದಲ್ಲೇ ರಾತ್ರಿ ವಾಸ್ತವ್ಯ ಹೂಡಿ ಭರವಸೆ ಮೂಡಿಸಿದ್ದರಾದರೂ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲಾಗಿಲ್ಲ.

    4 ಸಾವಿರ ಮೊಬೈಲ್ ಕರೆ ಪರಿಶೀಲನೆ : ತುಮಕೂರು ತಾಲೂಕಿನ ಚಿಕ್ಕಹಳ್ಳಿ ಬಳಿ ಅರಣ್ಯ ಪ್ರದೇಶದಲ್ಲಿ ಮಹಿಳೆ ಬರ್ಬರ ಕೊಲೆ, ಸಾಮೂಹಿಕ ಅತ್ಯಾಚಾರದ ಘಟನೆ ನಡೆದು ಸೆ.24ಕ್ಕೆ ಬರೋಬ್ಬರಿ ತಿಂಗಳಾಗಿದ್ದು ಹಂತಕರ ಸುಳಿವೇ ಈವರೆಗೆ ಪತ್ತೆ ಆಗಿಲ್ಲ. ಈ ಪ್ರಕರಣ ಸಂಬಂಧಿಸಿದಂತೆ 3 ರಿಂದ 4 ಸಾವಿರ ಮೊಬೈಲ್ ಕರೆಗಳನ್ನು ಸಿಇಎನ್ ಪೊಲೀಸರು ಪರಿಶೀಲಿಸಿದ್ದು ಸಣ್ಣ ಸುಳಿವೂ ಸಿಕ್ಕಿಲ್ಲ. ತನಿಖೆಗೆ 7 ತಂಡಗಳನ್ನು ರಚಿಸಲಾಗಿದೆ. 5 ಸಿಪಿಐ, 5 ಪಿಎಸ್‌ಐ ಹಾಗೂ 20ಕ್ಕೂ ಹೆಚ್ಚು ನುರಿತ ಎಎಸ್‌ಐ ಹಾಗೂ ಸಿಬಂದಿ ನೇಮಿಸಲಾಗಿದ್ದು ಈವರೆಗೆ 150 ಜನ ಅನುಮಾನಸ್ಪದ ವ್ಯಕ್ತಿಗಳನ್ನು ವಿಚಾರಣೆ ನಡೆಸಲಾಗಿದೆ. ಆದರೆ, ಪ್ರಕರಣ ಭೇದಿಸಲಾಗಿಲ್ಲ.

    ವರ್ಗಾವಣೆ ಶಿಕ್ಷೆ ಮಾಫಿ ? : ಬ್ಲಾಕ್‌ಮೇಲ್ ಪತ್ರಕರ್ತನ ಜತೆ ಸಂಪರ್ಕ ಹೊಂದಿದ್ದ ಕೆಲವು ಪೇದೆಗಳನ್ನು ಜಿಲ್ಲಾ ಕೇಂದ್ರದಿಂದ ಎತ್ತಂಗಡಿ ಮಾಡಿ ದೂರದ ಠಾಣೆಗಳಿಗೆ ಹಾಕಿದ್ದ ಎಸ್ಪಿ ರಾಹುಲ್ ಕುಮಾರ್ ಶಹಾಪೂರವಾಡ್ ಇಲಾಖೆ ಶುದ್ಧಿಗೊಳಿಸುವ ಕಾರ್ಯಕ್ಕೆ ಕೈಯಿಟ್ಟಿದ್ದರು. ಆದರೆ, ಇಲಾಖೆಯಲ್ಲಿ ರಹಸ್ಯವಾಗಿ ನಡೆಯುತ್ತಿರುವ ಸಿಬ್ಬಂದಿ ‘ಅಸಹಕಾರ’ ಅವರಿಗೆ ತಲೆಬಿಸಿ ಉಂಟುಮಾಡಿದ್ದು ಎತ್ತಂಗಡಿ ಮಾಡಿದ್ದ 9 ಪೇದೆಗಳನ್ನು ಮತ್ತೆ ಅದೇ ಠಾಣೆಗೆ ವರ್ಗ ಮಾಡಿರುವುದು ಎಸ್ಪಿ ಅಸಹಾಯಕತೆಗೆ ಸಾಕ್ಷಿ ಎನಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts