More

    ಸಿಪಿಐ ವರ್ತನೆ ಖಂಡಿಸಿ ವಕೀಲರ ಪ್ರತಿಭಟನೆ

    ಬೆಳಗಾವಿ: ಇಲ್ಲಿನ ಮಾಳಮಾರುತಿ ಪೊಲೀಸ್ ಠಾಣೆಗೆ ದೂರು ನೀಡಲು ಕಕ್ಷಿದಾರರ ಜತೆಗೆ ಆಗಮಿಸಿದ ವಕೀಲರೊಂದಿಗೆ ಸಿಪಿಐ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಜಿಲ್ಲಾ ವಕೀಲರ ಸಂಘದ ನೇತೃತ್ವದಲ್ಲಿ ನೂರಾರು ವಕೀಲರು ನ್ಯಾಯಾಲಯ ಕಲಾಪದಿಂದ ದೂರ ಉಳಿದು ಶುಕ್ರವಾರ ಬೆಳಗ್ಗೆ ಪ್ರತಿಭಟಿಸಿದರು.

    ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಜಮಾಯಿಸಿದ ವಕೀಲರು, ರಸ್ತೆಯಲ್ಲಿ ವಾಹನ ಸಂಚಾರ ತಡೆದರಲ್ಲದೆ ಪೊಲೀಸ್ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಇದರಿಂದ ನ್ಯಾಯಾಲಯ ಆವರಣ ಸಮೀಪದ ಎಲ್ಲ ರಸ್ತೆಗಳಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿ ಜನರು ತೊಂದರೆ ಅನುಭವಿಸುವಂತಾಯಿತು.

    ಕ್ಷಮೆ ಯಾಚಿಸಲು ಪಟ್ಟು: ವಕೀಲರ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ವಿಕ್ರಮ ಆಮ್ಟೆ, ವಕೀಲರ ಮನವೊಲಿಕೆಗೆ ಪ್ರಯತ್ನಿಸಿದರು. ಆದರೆ, ಮಾಳಮಾರುತಿ ಠಾಣೆ ಸಿಪಿಐ ಸುನೀಲ ಪಾಟೀಲ ಅವರೇ ಸ್ಥಳಕ್ಕಾಗಮಿಸಿ ಕ್ಷಮೆ ಯಾಚಿಸುವಂತೆ ವಕೀಲರು ಪಟ್ಟುಹಿಡಿದರು.

    ಸ್ಥಳಕ್ಕಾಗಮಿಸಿದ ಡಿಸಿ: ಮೂರು ಗಂಟೆಗೂ ಅಧಿಕ ಕಾಲ ಪ್ರತಿಭಟನೆ ನಡೆಸಿದ ವಕೀಲರ ಮನವೊಲಿಕೆಗೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರೇ ಆಗಮಿಸಿ ಯತ್ನಿಸಿದರೂ ವಕೀಲರು ಪ್ರತಿಭಟನೆ ಕೈ ಬಿಡಲಿಲ್ಲ. ಬಳಿಕ ಸಿಪಿಐ ಸುನೀಲ ಪಾಟೀಲ ಅವರನ್ನೇ ಸ್ಥಳಕ್ಕೆ ಕರೆಯಿಸಲಾಯಿತು. ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಸಿಪಿಐ ಸುನೀಲ ಮಾತನಾಡಿ, ನಾನು ಅಶ್ಲೀಲ ಪದ ಬಳಸಿಲ್ಲ. ಆದರೂ, ವಕೀಲರ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ಮನವಿ ಮಾಡಿದರು. ಬಳಿಕ ಪ್ರತಿಭಟನೆ ಹಿಂಪಡೆದ ವಕೀಲರು ಮಧ್ಯಾಹ್ನದ ನಂತರ ಕಲಾಪಗಳಿಗೆ ಹಾಜರಾದರು.

    ಪ್ರತಿಭಟನೆಯಲ್ಲಿ ಬೆಳಗಾವಿ ಬಾರ್ ಅಸೋಸಿಯೇಷನ್ ಉಪಾಧ್ಯಕ್ಷ ಸಿ.ಟಿ. ಮಜ್ಜಗಿ, ಬಸವರಾಜ ಓಸಿ, ಮಾಜಿ ಅಧ್ಯಕ್ಷ ಎಸ್.ಎಸ್. ಕಿವಡಸಣ್ಣವರ, ಚೇತನ ಈರಣ್ಣವರ, ಎಂ.ಎಚ್. ನಂದಗಾಂವ, ಬಸವರಾಜ ಝಿರಲಿ, ಶ್ರೀಧರ ಮುತಗೇಕರ್ ಸೇರಿದಂತೆ ನೂರಾರು ವಕೀಲರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts