More

    ಕ್ಷೇತ್ರದ ಅಭಿವೃದ್ಧಿಗೆ ಯೋಗೇಶ್ವರ್ ಪಣ

    ಚನ್ನಪಟ್ಟಣ : ನನ್ನ ಮೇಲೆ ತಾಲೂಕಿನ ಜನ ಇಟ್ಟಿರುವ ಪ್ರೀತಿ, ವಿಶ್ವಾಸದಿಂದಲೇ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ನಿಮ್ಮೆಲ್ಲರ ಋಣ ತೀರಿಸಲು ಸಾಧ್ಯವಿಲ್ಲ. ಪಕ್ಷ ನೀಡಿರುವ ಸಚಿವ ಸ್ಥಾನ ಬಳಸಿಕೊಂಡು ತಾಲೂಕನ್ನು ಇನ್ನಷ್ಟು ಅಭಿವೃದ್ಧಿಪಡಿಸುವೆ ಎಂದು ನೂತನ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದರು.
    ಸಚಿವರಾದ ಬಳಿಕ ಮೊದಲ ಬಾರಿಗೆ ಸೋಮವಾರ ಸ್ವಕ್ಷೇತ್ರಕ್ಕೆ ಆಗಮಿಸಿದ ಯೋಗೇಶ್ವರ್‌ಗೆ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅದ್ದೂರಿ ಸ್ವಾಗತ ಕೋರಿದರು. ಈ ವೇಳೆ ನಡೆದ ಮೆರವಣಿಗೆ ಮುಕ್ತಾಯ ನಂತರ ಅಭಿಮಾನಿಗಳು, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
    ಇದಕ್ಕೂ ಮುನ್ನ ಕೆಂಗಲ್ ಆಂಜನೇಯ ದೇವಾಲಯದಲ್ಲಿ ಪತ್ನಿ, ಮಕ್ಕಳೊಂದಿಗೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯೋಗೇಶ್ವರ್, ತಾಲೂಕಿಗೆ ಖಾತೆ ರಹಿತ ಸಚಿವನಾಗಿ ಬಂದಿದ್ದೇನೆ. ಖಾತೆ ಹಂಚಿಕೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು. ಅವರು ಯಾವುದೇ ಖಾತೆ ಕೊಟ್ಟರೂ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದರು. ಮುಂದಿನ ದಿನಗಳಲ್ಲಿ ಬೇರೆ ವಿಚಾರಗಳ ಬಗ್ಗೆ ನಿಮ್ಮೊಂದಿಗೆ ಮಾತನಾಡಲಿದ್ದೇನೆ ಎನ್ನುವ ಮೂಲಕ ಪತ್ರಕರ್ತರ ಇತರ ಪ್ರಶ್ನೆಗಳಿಗೆ ನಾಜೂಕಾಗಿ ಉತ್ತರಿಸಿ ಜಾರಿಕೊಂಡರು.
    ನಂತರ ಯೋಗೇಶ್ವರ್ ಅವರನ್ನು ದೇವಾಲಯದ ಆವರಣದಿಂದ ಚನ್ನಪಟ್ಟಣಕ್ಕೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು. ವಾಹನದ ಹಿಂದೆ ಸಾವಿರಾರು ಕಾರ್ಯಕರ್ತರು ಬೈಕ್‌ಗಳ ಮೂಲಕ ಸಾಗಿ ಬಂದರು.
    ಪಕ್ಷದ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ತಾಲೂಕು ಅಧ್ಯಕ್ಷ ಕೆ.ಟಿ.ಜಯರಾಂ, ನಗರಾಧ್ಯಕ್ಷ ಆರ್.ಶಿವಕುಮಾರ್, ತಾಪಂ ಅಧ್ಯಕ್ಷ ಹರೂರು ರಾಜಣ್ಣ, ಮುಖಂಡರಾದ ಎಂ.ಎನ್ ಅನಂದಸ್ವಾಮಿ, ರಾಂಪುರ ಮಲವೇಗೌಡ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಾಗೂ ಹಲವು ಮುಖಂಡರು ಈ ವೇಳೆ ಉಪಸ್ಥಿತರಿದ್ದರು.

    ಸ್ವಾಗತ ಕಾರ್ಯಕ್ರಮದ ಮೂಲಕ ತಾಲೂಕಿನ ಕಮಲ ಪಾಳಯ ತಮ್ಮ ನಾಯಕನ ಶಕ್ತಿ ಪ್ರದರ್ಶನ ಮಾಡುವಲ್ಲಿ ಯಶಸ್ವಿಯಾಯಿತು. ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಕಾರ್ಯಕರ್ತರು, ದಾರಿಯುದ್ದಕ್ಕೂ ಸಾಗಿ ಯೋಗೇಶ್ವರ್ ಹಿಂದಿರುವ ಜನಶಕ್ತಿಯ ಪ್ರದರ್ಶನ ನಡೆಸಿದರು. ಕೆಂಗಲ್ ದೇವಸ್ಥಾನ, ವಂದಾರಗುಪ್ಪೆ, ಬಸ್‌ನಿಲ್ದಾಣ, ಮಂಗಳವಾರಪೇಟೆ ಬಳಿ ಯೋಗೇಶ್ವರ್ ಅವರನ್ನು ಹೆಗಲು ಮೇಲೆ ಹೊತ್ತು ಕುಣಿದು ಕುಪ್ಪಳಿಸಿದರು. ದಾರಿಯುದ್ದಕ್ಕೂ ಬ್ಯಾನರ್, ಬಾವುಟಗಳು ರಾರಾಜಿಸುತ್ತಿದ್ದವು. ಸ್ವಾಗತ ಕಾರ್ಯಕ್ರಮ ನಗರವನ್ನು ಕೇಸರಿಮಯಗೊಳಿಸಿತ್ತು.
    ಮುಗಿಲು ಮುಟ್ಟಿದ ಸಂಭ್ರಮ
    ಸಚಿವಗಾದಿಗೇರಿದ ನಂತರ ಮೊದಲ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ ಯೋಗೇಶ್ವರ್ ಸ್ವಾಗತಿಸುವ ವೇಳೆ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿತ್ತು. ದೇವಾಲಯದಿಂದ ಹೊರಗಡೆ ಬರುತ್ತಲೇ ತೆರೆದ ವಾಹನ ಹತ್ತಿದ್ದ ಯೋಗೇಶ್ವರ್, ಪ್ರತಿಯೊಬ್ಬ ಕಾರ್ಯಕರ್ತನಿಗೂ ಕೈಬೀಸುತ್ತ ಮೆರವಣಿಗೆಯಲ್ಲಿ ಸಾಗಿದರು. ದಾರಿಯುದ್ಧಕ್ಕೂ ನೆಚ್ಚಿನ ನಾಯಕನಿಗೆ ಜೈಕಾರ ಕೂಗಿದರು. ಜನಪದ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.
    ನಗರದ ಶೇರುವಾ ಸರ್ಕಲ್, ಸಾತನೂರು ವೃತ್ತ, ಬಸ್ ನಿಲ್ದಾಣ ಸೇರಿ ಪ್ರಮುಖ ವೃತ್ತಗಳಲ್ಲಿ ಸಾರ್ವಜನಿಕರೂ ಸಿಪಿವೈಗೆ ಸ್ವಾಗತ ಕೋರಿದರು. ನಗರದ ಹಲವು ಕಡೆ ಜೆಸಿಬಿ ವಾಹನಗಳ ಮೂಲಕ ನೆಚ್ಚಿನ ನಾಯಕನಿಗೆ ಹೂವಿನ ಸುರಿಮಳೆ ಸುರಿಸಿ ಅಭಿಮಾನ ಮೆರೆಯಲಾಯಿತು. ನಗರದ ಬಸ್ ನಿಲ್ದಾಣದ ಬಳಿ 500 ಕೆ.ಜಿ.ತೂಕದ ಸೇಬಿನ ಬೃಹತ್ ಹಾರ ಹಾಕಲಾಯಿತು.
    500 ಕೆ.ಜಿ.ಸೇಬಿನ ಹಾರ

    ಚನ್ನಪಟ್ಟಣ: ನೂತನ ಸಚಿವ ಸಿಪಿವೈಗೆ ಅಭಿಮಾನಿಗಳು ಬೃಹತ್ ಸೇಬಿನ ಹಾರ ಹಾಕುವ ಮೂಲಕ ಅಭಿಮಾನ ಮೆರೆದದ್ದು ವಿಶೇಷವಾಗಿತ್ತು. ನಗರದ ಬಸ್ ನಿಲ್ದಾಣದ ಬಳಿ ಕ್ರೇನ್ ಮೂಲಕ ಹಾಕಿ 500 ಕೆ.ಜಿ. ತೂಕದ ಸೇಬಿನ ಹಾರ ಹಾಕಿ ಸಚಿವರಿಗೆ ಸ್ವಾಗತ ಕೋರಲಾಯಿತು. ಸ್ವಾಗತ ಸ್ವೀಕರಿಸಿ ಯೋಗೇಶ್ವರ್ ಮುಂದಕ್ಕೆ ಹೊರಟ ಕೂಡಲೇ ಹಾರದಲ್ಲಿನ ಸೇಬಿನ ಹಣ್ಣುಗಳಿಗೆ ಕೆಲವರು ಮುಗಿಬಿದ್ದದ್ದು ಕಂಡುಬಂತು. ಕ್ರೇನ್‌ನಲ್ಲಿ ನೇತಾಡುತ್ತಿದ್ದ ಹಣ್ಣು ಕೀಳಲು ಹರಸಾಹಸ ನಡೆಸಿದರು. ಇನ್ನೊಂದೆಡೆ ಕೆಂಗಲ್‌ನಿಂದ ನಗರದವರೆಗೆ ಬೃಹತ್ ರ‌್ಯಾಲಿ ನಡೆದ ಕಾರಣ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಏಕಮುಖ ಸಂಚಾರದ ಮೂಲಕ ಸಂಚಾರ ವ್ಯವಸ್ಥೆಗೆ ಅನುಕೂಲ ಕಲ್ಪಿಸಲಾಗಿತ್ತು. ಈ ವೇಳೆ ಆಂಬುಲೆನ್ಸ್ ಒಂದು ಸಂಚಾರ ದಟ್ಟನೆಯಲ್ಲಿ ಸಿಕ್ಕಿಹಾಕಿಕೊಂಡಿತ್ತು.

    ಶ್ರೀಗಳ ಪುತ್ಥಳಿಗೆ ಸಿಪಿವೈ ಪೂಜೆ

    ಬಿಡದಿ :  ಸಚಿವರಾದ ನಂತರ ಪ್ರಥಮ ಬಾರಿಗೆ ತವರಿಗೆ ಆಗಮಿಸಿದ ಸಿ.ಪಿ. ಯೋಗೇಶ್ವರ್‌ಗೆ ಬಿಡದಿಯಲ್ಲಿ ಬಿಜೆಪಿ ಮುಖಂಡರು ಮತ್ತು ಅಭಿಮಾನಿಗಳು ಸೋಮವಾರ ಭವ್ಯ ಸ್ವಾಗತ ಕೋರಿ ಅಭಿನಂದಿಸಿದರು.
    ಪಟ್ಟಣದಲ್ಲಿ ಬಿಜಿಎಸ್ ಸೇವಾ ಸಮಿತಿಯಿಂದ ಆಯೋಜಿಸಿದ್ದ ಶ್ರೀ ಆದಿಚುಂಚನಗಿರಿ ಸಂಸ್ಥಾನ ಮಠದ ಜಗದ್ಗುರು ಬೈರವೈಕ್ಯ ಡಾ. ಬಾಲಂಗಾಧರನಾಥ ಸ್ವಾಮೀಜಿ ಅವರ 8ನೇ ಸಂಸ್ಮರಣಾ ಮಹೋತ್ಸವ ಹಾಗೂ 76ನೇ ಜಯಂತ್ಯುತ್ಸವದಲ್ಲಿ ಶ್ರೀಗಳ ಪುತ್ಥಳಿಗೆ ಪೂಜೆ ಸಲ್ಲಿಸಿದ ಸಿಪಿವೈ, ಅನ್ನದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಚನ್ನಪಟ್ಟಣಕ್ಕೆ ತೆರಳಿದರು.
    ಇದಕ್ಕೂ ಮುನ್ನ ಬಿಜೆಪಿ ಅಭಿಮಾನಿಗಳು ಹೆದ್ದಾರಿಯಲ್ಲಿ ಬಿಜಿಎಸ್ ವೃತ್ತದವರೆಗೆ ವಿವಿಧ ಜನಪದ ಕಲಾತಂಡಗಳೊಂದಿಗೆ ತೆರದ ವಾಹನದಲ್ಲಿ ಯೋಗೇಶ್ವರ್ ಅವರನ್ನು ಮೆರವಣಿಗೆ ನಡೆಸಿದರು. ಅಲ್ಲದೆ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಿಪಿವೈಗೆ ಅಭಿನಂದಿಸುವ ಕಟೌಟ್‌ಗಳನ್ನು ಹಾಕಲಾಗಿತ್ತು. ಹೆಜ್ಜಾಲ, ಶೇಷಗಿರಿಹಳ್ಳಿ ಮತ್ತು ಬೈರಮಂಗಲ ವೃತ್ತ ಸೇರಿದಂತೆ ದಾರಿಯುದ್ದಕ್ಕೂ ಅಭಿಮಾನಿಗಳು ಕಿಕ್ಕಿರಿದು ಸೇರಿ ಹಾರತುರಾಯಿ ತೊಡಿಸಿ ನೂತನ ಸಚಿವರನ್ನು ಅಭಿನಂದಿಸಿದರು.
    ಬಿಜಿಎಸ್ ಸೇವಾ ಸಮಿತಿ ಅಧ್ಯಕ್ಷ ಸಿ.ಉಮೇಶ್, ಸಮಾಜಸೇವಕ ಚಿಕ್ಕಣ್ಣಯ್ಯ, ಪುರಸಭೆ ಸದಸ್ಯ ಬಿ.ಎಂ. ರಮೇಶ್‌ಕುಮಾರ್, ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ನಾರಾಯಣರೆಡ್ಡಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಸಿ. ಕುಮಾರ್, ರೈತ ಮೋರ್ಚಾ ತಾಲೂಕು ಉಪಾಧ್ಯಕ್ಷ ಗೋಪಳ್ಳಿರಾಮಲಿಂಗಯ್ಯ, ಬಿಜೆಪಿ ಹಿಂದುಳಿದ ವರ್ಗದ ತಾಲೂಕು ಅಧ್ಯಕ್ಷ ಬಾಳೆಮಂಡಿ ಶಿವಣ್ಣ, ಮಾಗಡಿ ತಾಲೂಕು ಪ್ರಧಾನ ಕಾರ್ಯದರ್ಶಿ ಸಿ.ಎಂ.ಸಂಜೀವರೆಡ್ಡಿ ಬಿಜೆಪಿ ಮುಖಂಡರಾದ ರವಿ ಸೇರಿದಂತೆ ಬಿಜಿಎಸ್ ಪದಾಧಿಕಾರಿಗಳು, ಸಿಪಿವೈ ಅಭಿಮಾನಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts