More

    ಕರ್ಫ್ಯೂ ರದ್ದಾದರೂ ನಂದಿಬೆಟ್ಟಕ್ಕಿಲ್ಲ ಪ್ರವೇಶ ; ಪ್ರವಾಸಿ ತಾಣದ ವ್ಯಾಪಾರಸ್ಥರಿಗೆ ಆರ್ಥಿಕ ನಷ್ಟ

    ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ರದ್ದಾದರೂ ನಂದಿ ಗಿರಿಧಾಮದಲ್ಲಿ ನಿರ್ಬಂಧದ ನಿಯಮವನ್ನು ಜಿಲ್ಲಾಡಳಿತ ಮುಂದುವರಿಸಿದೆ. ಇದು ಪ್ರವಾಸಿ ತಾಣದಲ್ಲಿ ವಹಿವಾಟು ನೆಚ್ಚಿಕೊಂಡಿರುವ ವ್ಯಾಪಾರಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

    ಕರೊನಾ ಸೋಂಕಿನ ನಿಯಂತ್ರಣ, ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ತಾಣದಲ್ಲಿ ಆನ್‌ಲೈನ್ ಸಿಸ್ಟಂ ಸುಧಾರಣೆಯ ಲೆಕ್ಕಾಚಾರದಲ್ಲಿ ಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧ ಮುಂದುವರಿಸಲಾಗಿದೆ. ಇದರಿಂದ ಸ್ಥಳೀಯವಾಗಿ ರೆಸಾರ್ಟ್, ಹೋಟೆಲ್, ವಿಲ್ಲಾ, ತಿಂಡಿ ತಿನಿಸು ಅಂಗಡಿ ಮಾಲೀಕರು ವಹಿವಾಟು ಇಲ್ಲದೆ ನಷ್ಟ ಅನುಭವಿಸುವಂತಾಗಿದೆ. ಇದರ ಬಗ್ಗೆ ಅರಿವಿದ್ದರೂ ನಿರ್ಬಂಧ ತೆರವುಗೊಳಿಸದ ಜಿಲ್ಲಾಡಳಿತದ ಧೋರಣೆಗೆ ಸಹಜವಾಗಿ ಅಸಮಾಧಾನ ವ್ಯಕ್ತವಾಗಿದೆ. ಸಾಮಾನ್ಯ ದಿನಗಳಲ್ಲಿ 6 ರಿಂದ 7 ಸಾವಿರ ಮಂದಿ, ಹಬ್ಬ, ರಜೆ ಮತ್ತು ವಾರಾಂತ್ಯ ದಿನ ಸೇರಿ ವಿಶೇಷ ದಿನ 12 ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸುತ್ತಾರೆ.

    ಹಲವು ತಿಂಗಳಿಂದ ಅಪಾರ ನಷ್ಟ:ಗಿರಿಧಾಮದ ತಪ್ಪಲು, ಬೆಟ್ಟಕ್ಕೆ ತಲುಪುವ ದೇವನಹಳ್ಳಿ, ಕಾರಹಳ್ಳಿ ಕ್ರಾಸ್, ನಂದಿ ರಸ್ತೆ ಸೇರಿ ಹಲವೆಡೆ ಹೋಟೆಲ್, ವಿಲ್ಲಾ, ರೆಸಾರ್ಟ್‌ಗಳು ತಲೆ ಎತ್ತಿವೆ. ಇಲ್ಲಿ ಪ್ರತಿನಿತ್ಯ ತುಂಬಿ ತುಳುಕಾಡುವ ಪ್ರವಾಸಿಗರಿಂದ ಹೆಚ್ಚಿನ ಆದಾಯ ಸಂಪಾದನೆಯಾಗುತ್ತಿತ್ತು. ಆದರೆ, ಕರೊನಾ ಪ್ರಾರಂಭದಿಂದ ಹಿಡಿದು ಇಲ್ಲಿಯವರೆಗೂ ಗಿರಿಧಾಮದ ಬಾಗಿಲು ಮುಚ್ಚಿದೆ. ಕರೊನಾ ಮೊದಲ, ಎರಡನೇ ಮತ್ತು ಮೂರನೇ ಅಲೆಯ ಲಾಕ್‌ಡೌನ್, ಬೆಟ್ಟದ ರಸ್ತೆಯ ಮಾರ್ಗದಲ್ಲಿ ಭೂ ಕುಸಿತ ಸೇರಿ ನಾನಾ ಕಾರಣಗಳ ಹಿನ್ನೆಲೆಯಲ್ಲಿ ಕಳೆದ 2 ವರ್ಷದಲ್ಲಿ ಕೇವಲ 1 ತಿಂಗಳು ಮಾತ್ರ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಸಿಕ್ಕಿದ್ದು, ಇದೀಗ ಪ್ರವೇಶ ನಿರ್ಬಂಧ ಮುಂದುವರಿದಿದೆ. ಬೆಟ್ಟದ ತಪ್ಪಲಿನಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಿ, ಯಾರಿಗೂ ಒಳಗೆ ಹೋಗಲು ಅವಕಾಶ ನೀಡುತ್ತಿಲ್ಲ. ಇದರ ನಡುವೆ ಬೆರಳೆಣಿಕೆಯಲ್ಲಿ ಜನ ಬಂದು ಬೇಸರದಲ್ಲಿಯೇ ವಾಪಸ್ ಹೋಗುತ್ತಿದ್ದಾರೆ.

    ಜಿಲ್ಲಾಡಳಿತಕ್ಕೆ ಮಾಲೀಕರ ಮನವಿ: ಈಗಾಗಲೇ ನಿರ್ಬಂಧ ತೆರವಿಗೆ ಆಗ್ರಹಿಸಿ ಜಿಲ್ಲಾಧಿಕಾರಿ ಆರ್.ಲತಾ ಅವರಿಗೆ ಮಾಲೀಕರು ಮನವಿ ಸಲ್ಲಿಸಿದ್ದಾರೆ. ಇದಕ್ಕೆ ತ್ವರಿತವಾಗಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ಸಿಕ್ಕಿದೆ. ಪ್ರವಾಸೋದ್ಯಮ ಇಲಾಖೆಯಿಂದ ಆನ್‌ಲೈನ್ ಸಿಸ್ಟಂ ಅನುಷ್ಠಾನದ ಬಳಿಕ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

    ಕಾರ್ಮಿಕರಿಗೆ ಕೆಲಸವಿಲ್ಲ: ಪ್ರವೇಶ ನಿರ್ಬಂಧದ ಹಿನ್ನೆಲೆಯಲ್ಲಿ ಅಡುಗೆ ಭಟ್ಟರು, ಮಾಣಿ, ವ್ಯವಸ್ಥಾಪಕರು, ಸ್ವಚ್ಛತೆ ನಿರ್ವಾಹಕರು, ಗೈಡುಗಳು ಸೇರಿ ಅನೇಕ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ವಹಿವಾಟು ನಡೆಯದ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಎಲ್ಲರಿಗೂ ವೇತನ ನೀಡಲು ಕಾರ್ಮಿಕರಿಗೆ ಸಾಧ್ಯವಾಗುತ್ತಿಲ್ಲ. ಇದಕ್ಕೆ ಈಗಾಗಲೇ ಹಲವರು ಕೆಲಸ ಬಿಟ್ಟು ಬೇರೆಡೆ ತೆರಳಿದ್ದಾರೆ. ಮಾಲೀಕರು ಅಲ್ಪ ಸಿಬ್ಬಂದಿಯೊಂದಿಗೆ ಹೋಟೆಲ್, ಅಂಗಡಿ ತೆರೆದು ಕೂರುವಂತಾಗಿದೆ.

    ಲಕ್ಷಾಂತರ ರೂಪಾಯಿ ಸಾಲ ಮಾಡಿ ನಂದಿ ಬೆಟ್ಟದ ತಪ್ಪಲಿನಲ್ಲಿ ಹೋಟೆಲ್ ನಡೆಸಲಾಗುತ್ತಿದೆ. ಆದರೆ, ತಿಂಗಳಾನುಗಟ್ಟಲೆ ಪ್ರವಾಸಿತಾಣ ಪ್ರವೇಶಕ್ಕೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಜನರು ಬರುತ್ತಿಲ್ಲ. ಇದರಿಂದ ವಹಿವಾಟಿಲ್ಲದೆ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ.
    ರಾಜೀವ್, ಹೋಟೆಲ್ ಮಾಲೀಕ

    ಈಗಾಗಲೇ ಕೆಲಸ, ವೇತನವಿಲ್ಲದೆ ಬಹಳಷ್ಟು ಕಾರ್ಮಿಕರು ಊರಿಗೆ ವಾಪಸ್ ಹೋಗಿದ್ದಾರೆ. ಪ್ರತಿನಿತ್ಯ ಬಾಗಿಲು ತೆಗೆದು ಕೂರುವಂತಾಗಿದೆ. ಪ್ರವಾಸಿಗರಿಲ್ಲದ ಹಿನ್ನೆಲೆಯಲ್ಲಿ ಸಂಪಾದನೆ ಇಲ್ಲ.
    ಶಿವಕುಮಾರ್, ರೆಸಾರ್ಟ್ ವ್ಯವಸ್ಥಾಪಕ

    ಕರೊನಾ ಹಿನ್ನೆಲೆಯಲ್ಲಿ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಇದರ ತೆರವಿಗೆ ಜಿಲ್ಲಾಡಳಿತ ಅನುಮತಿ ನೀಡಬೇಕು.
    ಗೋಪಾಲ್, ನಂದಿ ಗಿರಿಧಾಮ ವಿಶೇಷಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts