More

    ಗ್ರಾಮಗಳಲ್ಲಿ ತಗ್ಗಿದ ಕರೊನಾತಂಕ

    ವೇಣುವಿನೋದ್ ಕೆ.ಎಸ್.ಮಂಗಳೂರು
    ದ.ಕ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಇಳಿಕೆಯತ್ತ ಸಾಗುತ್ತಿದೆ. ಮುಖ್ಯವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳು ಇಳಿಕೆ ಹಾದಿಯಲ್ಲಿದೆ. ಕೆಲ ದಿನಗಳ ಹಿಂದೆ ಸೀಲ್‌ಡೌನ್ ಮಾಡಿದ್ದ ಎಲ್ಲ ಗ್ರಾಮಗಳಲ್ಲಿಯೂ ಈಗ ಲಾಕ್ ತೆರೆವು ಮಾಡಲಾಗಿದೆ.
    ಮೊದಲ ಹಾಗೂ ಎರಡನೇ ಅಲೆಯ ಪ್ರಾರಂಭಿಕ ಹಂತದಲ್ಲಿ ಮಂಗಳೂರು ನಗರ, ಬಂಟ್ವಾಳಕ್ಕಷ್ಟೇ ಸೀಮಿತವಾಗಿದ್ದ ಕೋವಿಡ್ ಪ್ರಕರಣಗಳು ಸುಳ್ಯ ಹಾಗೂ ಬೆಳ್ತಂಗಡಿಯ ಗ್ರಾಮಾಂತರ ಪ್ರದೇಶಗಳಲ್ಲಿ ಹರಡಲಾರಂಭಿಸಿದ್ದು ಜಿಲ್ಲಾಡಳಿತಕ್ಕೆ ಸವಾಲಾಗಿತ್ತು. ಒಂದೊಂದು ಗ್ರಾಮದಲ್ಲೂ 50ಕ್ಕೂ ಹೆಚ್ಚಿನ ಕೋವಿಡ್ ಪಾಸಿಟಿವ್ ಪ್ರಕರಣಗಳು ಬರಲಾರಂಭಿಸಿದಾಗ ಸೀಲ್‌ಡೌನ್ ಮಾಡಲು ನಿರ್ಧರಿಸಲಾಗಿತ್ತು. ಅದರಂತೆ 50ಕ್ಕೂ ಹೆಚ್ಚು ಸಕ್ರಿಯ ಪಾಸಿಟಿವ್ ಪ್ರಕರಣವಿದ್ದ 17 ಗ್ರಾಮಗಳನ್ನು ಜೂ.14ರಂದು ಸೀಲ್‌ಡೌನ್ ಮಾಡಿ ಆದೇಶ ಹೊರಡಿಸಲಾಗಿತ್ತು.

    ಕಳೆದ ವರ್ಷ ಹಲವು ಪ್ರದೇಶಗಳನ್ನೇ ಸೀಲ್‌ಡೌನ್ ಮಾಡಿದ ಅನುಭವವಿತ್ತು. ಆದರೆ ಆ ಬಳಿಕ ಅನುಭವ ವಿಸ್ತರಣೆಯಾದಂತೆ ಮನೆ ಅಥವಾ ಒಂದೆರಡು ಮನೆಗಳಿರುವ ಜಾಗವನ್ನು ಮಾತ್ರವೇ ಸೀಲ್‌ಡೌನ್ ಮಾಡಲಾಯಿತು. ಈ ಬಾರಿ ಮತ್ತೆ ಗ್ರಾಮಗಳನ್ನು ಸೀಲ್ ಮಾಡಲಾಯಿತು. ಬೆಳ್ತಂಗಡಿಯ ಕೊಯ್ಯೂರು, ಚಾರ್ಮಾಡಿ, ಉಜಿರೆ, ನಾರಾವಿ, ನೆರಿಯ, ಮಾಲಾಡಿ, ಲಾಯ್ಲ, ಮಿತ್ತಬಾಗಿಲು, ಕಡಬದ ಸವಣೂರು, ಸುಬ್ರಹ್ಮಣ್ಯ, ಮಂಗಳೂರಿನ ಕೊಣಾಜೆ, ನೀರುಮಾರ್ಗ, ಸುಳ್ಯದ ಕೊಲ್ಲಮೊಗರು, ಗುತ್ತಿಗಾರು, ಆರಂತೋಡು, ಅಮರಮುಡ್ನೂರು, ಐವರ್ನಾಡು ಗ್ರಾಮಗಳನ್ನು ಈ ಮೊದಲು ಸೀಲ್‌ಡೌನ್ ಮಾಡಲಾಗಿತ್ತು.
    ಕೊಯ್ಯೂರಿನಲ್ಲಿ ಜೂನ್ 14ರಂದು 42 ಪ್ರಕರಣಗಳಿದ್ದರೆ ಈಗ 11ಕ್ಕೆ ಇಳಿಕೆಯಾಗಿದೆ. ಚಾರ್ಮಾಡಿ 75ರಿಂದ57ಕ್ಕೆ, ಉಜಿರೆ 100ರಿಂದ 90ಕ್ಕೆ, ನಾರಾವಿ 53ರಿಂದ 49ಕ್ಕೆ ಇಳಿಕೆಯಾದರೆ ನೆರಿಯ 46 ಇದ್ದುದು 47ಕ್ಕೇರಿದೆ. ಮಾಲಾಡಿ 52ರಿಂದ 31, ಲಾಯ್ಲ 60ರಿಂದ 44ಕ್ಕೆ, ಮಿತ್ತಬಾಗಿಲು 57ರಿಂದ 37, ಕಡಬ 90ರಿಂದ 25, ಸುಬ್ರಹ್ಮಣ್ಯ 53ರಿಂದ 37, ಕೊಣಾಜೆ 79ರಿಂದ 62, ನೀರುಮಾರ್ಗ 56ರಿಂದ 9, ಕೊಲ್ಲಮೊಗ್ರ 75ರಿಂದ 37, ಗುತ್ತಿಗಾರು 70ರಿಂದ 52, ಆರಂತೋಡು 85ರಿಂದ 32, ಅಮರ ಮುಡ್ನೂರು 54ರಿಂದ 36 ಹಾಗೂ ಐವರ್ನಾಡು 50ರಿಂದ 15ಕ್ಕೆ ಇಳಿಕೆಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕುಮಾರ ತಿಳಿಸಿದ್ದಾರೆ.

    ರಾಜ್ಯದ ಟಾಪ್ 20ರಲ್ಲಿದ್ದ ಸ್ಥಳಗಳೂ ಕೇಸ್ ಕಡಿಮೆ: ಕಳೆದ ವಾರ ಕೋವಿಡ್‌ನಿಂದ ಗರಿಷ್ಠ ಮಟ್ಟದಲ್ಲಿ ತೊಂದರೆಗಳಾದ 10 ಗ್ರಾಮಗಳನ್ನು ಜಿಲ್ಲೆಯಲ್ಲಿ ಗುರುತಿಸಲಾಗಿತ್ತು. ಈ ಬಾರಿ ಅದರ ಸಂಖ್ಯೆ ಕೇವಲ ಒಂದು, ಕರಿಯಂಗಳ ಗ್ರಾಮ ಮಾತ್ರವೇ ಈ ಪಟ್ಟಿಯಲ್ಲಿದೆ. ಕಳೆದ ನಾಲ್ಕು ವಾರಗಳಲ್ಲಿ 12 ಪಾಸಿಟಿವ್ ಪ್ರಕರಣ ಇಲ್ಲಿ ವರದಿಯಾಗಿತ್ತು. ಅದೇ ರೀತಿ ಕಳೆದ ವಾರ ರಾಜ್ಯದ ಪಟ್ಟಣ ಪ್ರದೇಶಗಳಲ್ಲಿ ಅತಿ ಹೆಚ್ಚು ತೊಂದರೆಗೊಳಗಾದ 6 ಸ್ಥಳಗಳು ಜಿಲ್ಲೆಯವೇ ಆಗಿದ್ದವು. ಅದರಲ್ಲೂ ಈ ಬಾರಿ ಜಿಲ್ಲೆ ಬಚಾವ್ ಆಗಿದೆ. ವಿಟ್ಲ ಮಾತ್ರ ನಾಲ್ಕು ವಾರದಲ್ಲಿ 69 ಪ್ರಕರಣ ವರದಿಯಾಗಿರುವ ಸ್ಥಳ.

    ಕಠಿಣ ನಿಯಮದಿಂದ ಜನರಲ್ಲಿ ಕೋವಿಡ್ ಪ್ರಸರಣ ಕಡಿಮೆಯಾಗಿದೆ. ಸೀಲ್‌ಡೌನ್ ಮಾಡಿದ್ದ ಗ್ರಾಮಗಳಲ್ಲಿ ಈಗ ಪ್ರಕರಣಗಳ ಸಂಖ್ಯೆ ಇಳಿದಿದೆ. ಹಾಗಾಗಿ ಸೀಲ್‌ಡೌನ್ ತೆರವು ಮಾಡಲಾಗಿದೆ. ಉಳಿದ ಭಾಗಗಳಲ್ಲೂ ಕೇಸ್ ಇಳಿಯುತ್ತಿರುವ ಕಾರಣ ಸದ್ಯಕ್ಕೆ ಜಿಲ್ಲೆ ಹೆಚ್ಚು ಸುರಕ್ಷಿತವಾಗಿದೆ.
    ಡಾ.ಕಿಶೋರ್ ಕುಮಾರ್ ಜಿಲ್ಲಾ ಆರೋಗ್ಯಾಧಿಕಾರಿ, ದ.ಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts