More

    15 ದಿನ ಬಳಿಕ ಬಿಕ್ಕಟ್ಟು ಎದುರಾಗುವ ಸಾಧ್ಯತೆ!

    ಮಂಗಳೂರು: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಏರುಗತಿಯಲ್ಲಿದ್ದರೂ, ಈಗಿನ ಪರಿಸ್ಥಿತಿಯಲ್ಲಿ ಮುಂದಿನ 15 ದಿನಗಳವರೆಗೆ ಎಲ್ಲವನ್ನೂ ಸಮರ್ಪಕವಾಗಿ ಎದುರಿಸಲು ಜಿಲ್ಲಾಡಳಿತ ಸಿದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದರು.

    ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪಾಸಿಟಿವ್ ಪ್ರಕರಣಗಳು ಈಗಿನ ಪರಿಸ್ಥಿತಿಯಲ್ಲಿ ಮುಂದುವರಿದರೆ 15 ದಿನ ನಂತರ ಜಿಲ್ಲೆಯ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಸೇರಿದಂತೆ ಬಿಕ್ಕಟ್ಟು ಎದುರಾಗಬಹುದು. ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ನಗರದ ಎಂಸಿಎಫ್, ಎನ್‌ಐಟಿಕೆಯಲ್ಲಿಯೂ ಹಾಸಿಗೆ ಮೀಸಲಿಡಲು, ಪ್ರತಿ ತಾಲೂಕಿನಲ್ಲೂ ಪ್ರತ್ಯೇಕ ಕೋವಿಡ್ ಕೇರ್ ಕೇಂದ್ರಗಳನ್ನು ತೆರೆಯಲು ಜಾಗ ಗುರುತಿಸುವಂತೆ ತಹಸೀಲ್ದಾರ್‌ಗೆ ಸೂಚಿಸಲಾಗಿದೆ ಎಂದರು.

    ಕೋವಿಡ್ ಚಿಕಿತ್ಸೆಗೆ 31 ಆಸ್ಪತ್ರೆಗಳ ಜತೆಗೆ ಜಿಲ್ಲೆಯಲ್ಲಿ 124 ನರ್ಸಿಂಗ್ ಹೋಂಗಳು ಲಭ್ಯವಿವೆ. ಇದರಲ್ಲಿ 74 ಮಂಗಳೂರಿನಲ್ಲೇ ಇವೆ. ಜಿಲ್ಲೆಯಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ಒಟ್ಟು 5000 ಬೆಡ್‌ಗಳು ಲಭ್ಯವಿದೆ. ಅದರಲ್ಲಿ 3800 ಜನರಲ್ ಬೆಡ್‌ಗಳು, 300 ಐಸಿಯು, ವೆನ್‌ಲಾಕ್ ಆಸ್ಪತ್ರೆಯಲ್ಲಿ 274 ಆಕ್ಸಿಜನ್ ಬೆಡ್‌ಗಳು, 70 ವೆಂಟಿಲೇಟರ್‌ಗಳು ಲಭ್ಯ. ಜಿಲ್ಲೆಗೆ ಆರೋಗ್ಯ ಸಮಸ್ಯೆಗಾಗಿ ನೆರೆಯ ಜಿಲ್ಲೆಗಳಿಂದಲೂ ರೋಗಿಗಳು ಬರುವುದರಿಂದ ಮುಂದೆ ಬೆಡ್‌ಗಳ ಕೊರತೆ ಕಾಣಿಸಿಕೊಳ್ಳಬಹುದು. ಆರೋಗ್ಯ ಸೇವೆಯನ್ನು ಇತರ ಜಿಲ್ಲೆಯವರಿಗೆ ನಿರಾಕರಿಸಲು ಸಾಧ್ಯವಿಲ್ಲ. ಹಾಗಿದ್ದರೂ ದ.ಕ.ಕ್ಕೆ ಆದ್ಯತೆ ಎಂದರು.

    ಈ ನಡುವೆ ಹೋಟೆಲ್ ಹಾಗೂ ಆಸ್ಪತ್ರೆ ಅಸೋಸಿಯೇಶನ್ ಜತೆ ಮಾತುಕತೆ ನಡೆಸಲಾಗುವುದು. ಅವರು ಹೊಂದಾಣಿಕೆ ಮಾಡಿಕೊಂಡು ಬಿಕ್ಕಟ್ಟಿನ ಸಂದರ್ಭ ಬೆಡ್, ಆಕ್ಸಿಜನ್ ವ್ಯವಸ್ಥೆಗೆ ಕ್ರಮ ವಹಿಸಲಾಗುವುದು. ವೆನ್‌ಲಾಕ್ ಮೆಡಿಕಲ್ ಬ್ಲಾಕ್ ಸಂಪೂರ್ಣ ಕೋವಿಡ್‌ಗೆ ಮೀಸಲು ಎಂದು ಜಿಲ್ಲಾಧಿಕಾರಿ ವಿವರಿಸಿದರು.
    ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಡಿಸಿಪಿಗಳಾದ ಹರಿರಾಂ, ವಿನಯ್ ಗಾಂವ್ಕರ್ ಉಪಸ್ಥಿತರಿದ್ದರು.

    ಜನರು ಹೆದರಬೇಕಿಲ್ಲ: ಜನರು ಗಾಬರಿಗೊಳ್ಳುವ ಅಗತ್ಯವಿಲ್ಲ ಎಂದ ಜಿಲ್ಲಾಧಿಕಾರಿ, ಕೋವಿಡ್ ಸಂಬಂಧಿ ಲಕ್ಷಣ ಕಂಡುಬಂದಾಗಲೇ ಪರೀಕ್ಷೆ ಮಾಡಿಸಿ. ಇದರಿಂದ ಅನಾಹುತ ತಪ್ಪಿಸಲು ಸಾಧ್ಯ. ನಿಯಂತ್ರಣದಲ್ಲಿ ಸಾಮುದಾಯಿಕ ಪಾಲ್ಗೊಳ್ಳುವಿಕೆ ಮುಖ್ಯ. ಅತ್ಯಂತ ವೇಗವಾಗಿ ರೋಗ ಹರಡುತ್ತಿರುವ ಕಾರಣ, ದೈಹಿಕ ಅಂತರ, ಮಾಸ್ಕ್ ಧರಿಸುವುದು ಕಡ್ಡಾಯ ಎಂದರು.

    ವೆನ್‌ಲಾಕ್ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ರೆಮ್‌ಡಿಸಿವಿರ್ ಲಭ್ಯವಿದೆ. ಖಾಸಗಿ ಆಸ್ಪತ್ರೆಯಲ್ಲಿ ಕೊರತೆಯಿರುವ ಮಾಹಿತಿ ಇದೆ. ಅವರಿಗೆ ಪೂರೈಸಲು ಸೂಚಿಸಲಾಗಿದೆ. ಆಸ್ಪತ್ರೆಯಲ್ಲೇ ಇದ್ದು ಚಿಕಿತ್ಸೆ ಪಡೆಯುವಷ್ಟು ರೋಗ ಲಕ್ಷಣವಿಲ್ಲದ ಹಾಗೂ ಮನೆಯಲ್ಲಿ ವ್ಯವಸ್ಥೆ ಇಲ್ಲದ ರೋಗಿಗಳಿಗೆ ಕೋವಿಡ್ ಸೆಂಟರ್‌ಗಳ ಮೂಲಕ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು.
    ಡಾ.ರಾಜೇಂದ್ರ ಕೆ.ವಿ. ದ.ಕ.ಜಿಲ್ಲಾಧಿಕಾರಿ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts