More

    ಇಂದು ಎಚ್ಚರಿಕೆ ಅಭಿಯಾನ

    ಮಂಗಳೂರು: ದ.ಕ ಜಿಲ್ಲೆಯಲ್ಲೂ ಕೋವಿಡ್ ಎರಡನೇ ಅಲೆ ಸಾಧ್ಯತೆ ಇರುವುದರಿಂದ ಜನರಲ್ಲಿ ಕೋವಿಡ್ ಎಚ್ಚರಿಕೆಯ ವರ್ತನೆ ಮತ್ತು ಲಸಿಕೆಯ ಜಾಗೃತಿ ಮೂಡಿಸಲು ಮಾ.23ರಂದು ಬೆಳಗ್ಗೆ 10ರಿಂದ 11ರವರೆಗೆ ಜಿಲ್ಲೆಯ ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್‌ವಾರು ವ್ಯಾಪ್ತಿ ಗಳಲ್ಲಿ ಆರೋಗ್ಯ ಕಾರ್ಯಕರ್ತರು, ಸರ್ಕಾರಿ ಸಿಬ್ಬಂದಿ ಅಭಿಯಾನ ನಡೆಸಲಿದ್ದಾರೆ ಎಂದು ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.

    ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಒಟ್ಟು 279 ಸ್ಥಳೀಯಾಡಳಿತ ಸಂಸ್ಥೆ ವಾರ್ಡ್‌ಗಳು ಹಾಗೂ ಎಲ್ಲ 228 ಗ್ರಾಪಂ ವ್ಯಾಪ್ತಿಯಲ್ಲಿ ಏಕಕಾಲದಲ್ಲಿ ಈ ಅಭಿಯಾನ ನಡೆಯಲಿದೆ. ಬಳಿಕ ಪ್ರತಿ ದಿನವೂ ತಂಡ ರಚಿಸಿ ಅಭಿಯಾನ ಮುಂದುವರಿಸಲಾಗುವುದು ಎಂದರು.
    ತಾನು ಕೂಡ ಈ ಅಭಿಯಾನದಲ್ಲಿ ಭಾಗವಹಿಸುತ್ತೇನೆ ಎಂದ ಜಿಲ್ಲಾಧಿಕಾರಿ, ಜನರ ಆರ್ಥಿಕ ಚಟುವಟಿಕೆಗೆ ತೊಂದರೆಯಾಗಬಾರದು ನಿಜ, ಆದರೆ ಆರೋಗ್ಯವೂ ಮುಖ್ಯ. ಮಾಸ್ಕ್ ಬಳಕೆ, ದೈಹಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು.

    45ರಿಂದ 59 ವರ್ಷವರೆಗಿನ ಆರೋಗ್ಯ ಸಮಸ್ಯೆ ಇರುವವರು, ಹಾಗೂ 60 ಮೇಲ್ಪಟ್ಟವರೆಲ್ಲರೂ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ಸದ್ಯ 527 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಇದರಲ್ಲಿ 411 ಮಂದಿ ಮನೆಯಲ್ಲೇ ಐಸೋಲೇಶನ್‌ನಲ್ಲಿದ್ದರೆ ಇಬ್ಬರು ಮಾತ್ರವೇ ವೆಂಟಿಲೇಟರ್‌ನಲ್ಲಿದ್ದಾರೆ. ಒಂದು ವೇಳೆ ಕೋವಿಡ್ ಪಾಸಿಟಿವ್ ಪ್ರಕರಣ ಹೆಚ್ಚಿದರೂ ಚಿಂತೆಯಿಲ್ಲ, ಲಸಿಕೆ ತೆಗೆದುಕೊಂಡರೆ ಸಾವನ್ನಪ್ಪುವ ಪ್ರಕರಣಗಳಲ್ಲಿ ಇಳಿಕೆಯಾಗಲಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳು, ಆಹಾರ ವಸ್ತು ಪೂರೈಕೆದಾರ ಕಂಪನಿ ಪ್ರತಿನಿಧಿಗಳು, ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಇನ್ನೊಂದು ಹಂತದಲ್ಲಿ ಕೋವಿಡ್ ಟೆಸ್ಟಿಂಗ್ ಮಾಡಿಸುವ ಚಿಂತನೆ ಇದೆ ಎಂದರು.
    ಅನೇಕ ಖಾಸಗಿ ಆಸ್ಪತ್ರೆಗಳು ಹಿಂದಿನಂತೆ ಐಎಲ್‌ಐ(ಇನ್‌ಫ್ಲುಯೆಂಜಾ ಮಾದರಿ ಕಾಯಿಲೆ) ಮತ್ತು ಎಸ್‌ಎಆರ್‌ಐ(ತೀವ್ರ ಉಸಿರಾಟ ತೊಂದರೆ) ಇರುವವರ ವರದಿಯನ್ನು ಕಳುಹಿಸದೆ ನಿರ್ಲಕ್ಷ್ಯ ವಹಿಸುತ್ತಿರುವುದು ಗಮನಕ್ಕೆ ಬಂದಿದೆ, ಅಂತಹ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಮಾತನಾಡುತ್ತೇನೆ. ಸಹಕಾರ ನೀಡದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದೂ ಎಚ್ಚರಿಕೆ ನೀಡಿದರು.
    ಅಪರ ಜಿಲ್ಲಾಧಿಕಾರಿ ರೂಪಾ ಎಂ.ಜೆ, ದ.ಕ.ಜಿಪಂ ಸಿಇಒ ಡಾ.ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ಹಾಜರಿದ್ದರು.

    ಬಸ್, ಆಟೊ ಮೇಲೆ ಕಣ್ಣು: ಬಹುತೇಕ ಬಸ್ ಹಾಗೂ ಆಟೊ ರಿಕ್ಷಾಗಳಲ್ಲಿ ಚಾಲಕರು, ಸಿಬ್ಬಂದಿ ಮಾಸ್ಕ್ ಧರಿಸುತ್ತಿಲ್ಲ. ಅಂಥವರ ಮೇಲೆ ನಿಗಾ ಇರಿಸಿ ಎಚ್ಚರಿಕೆ ನೀಡಬೇಕು ಅಥವಾ ದಂಡ ವಿಧಿಸಬೇಕು ಎಂದು ಪ್ರಾದೇಶೀಕ ಸಾರಿಗೆ ಅಧಿಕಾರಿಗೆ ಸೂಚನೆ ನೀಡಿದ್ದೇನೆ. ಪದೇಪದೆ ಕೋವಿಡ್ ನಿಯಮ ಉಲ್ಲಂಘನೆ ಮಾಡುತ್ತಿರುವವರ ಪರವಾನಗಿ ರದ್ದು ಮಾಡಲು ಸೂಚನೆ ನೀಡಲಾಗಿದೆ ಎಂದು ಡಿಸಿ ತಿಳಿಸಿದರು.

    ಸಭಾಂಗಣ, ಮದುವೆ ಹಾಲ್: ಶುಭ ಕಾರ್ಯಕ್ರಮಗಳಿಗೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಇದರ ಜವಾಬ್ದಾರಿ ಹಾಲ್‌ನ ಮಾಲೀಕರು, ಮೇಲ್ವಿಚಾರಕರದು. ಅವರಿಗೆ ಮಾಹಿತಿ ನೀಡುತ್ತೇವೆ, ನಿಯಮ ಉಲ್ಲಂಘನೆಯಾದರೆ ಅವರಿಗೆ ದಂಡ ವಿಧಿಸಬೇಕಾಗುತ್ತದೆ ಎಂದರು.

    ಎಸ್‌ಡಿಆರ್‌ಎಫ್ ನಿಯೋಜನೆಗೆ ಪತ್ರ: ದ.ಕ ಜಿಲ್ಲೆಯಲ್ಲಿ ಕೋವಿಡ್ ನಿಯಮ ಪಾಲನೆ ನಿಗಾ ಇರಿಸಲು ರಾಜ್ಯ ವಿಪತ್ತು ನಿರ್ವಹಣಾ ಪಡೆ(ಎಸ್‌ಡಿಆರ್‌ಎಫ್) ನಿಯೋಜಿಸುವ ಚಿಂತನೆ ಇದೆ ಎಂದು ಜಿಲ್ಲಾಧಿಕಾರಿ ಹೇಳಿದರು. ಈ ಬಗ್ಗೆ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆ ಮಹಾನಿರ್ದೇಶಕರಿಗೆ ಪತ್ರ ಬರೆಯಲಾಗಿದೆ. ಅನುಮತಿ ಸಿಕ್ಕಿದರೆ ಎಸ್‌ಡಿಆರ್‌ಎಫ್‌ನ್ನು ನಿಯೋಜಿಸಲಾಗುವುದು. ತಲಪಾಡಿ ಸೇರಿದಂತೆ ಗಡಿಭಾಗಗಳಲ್ಲಿ ಆದಷ್ಟೂ ಕಡ್ಡಾಯ ತಪಾಸಣೆ ನಡೆಸಲಾಗುತ್ತಿದೆ. ಎಲ್ಲರ ಪರೀಕ್ಷೆ ಅಸಾಧ್ಯ, ಇದನ್ನು ಸರ್ಕಾರದ ಗಮನಕ್ಕೆ ತರಲಾಗಿದೆ ಎಂದರು.

    ಧಾರ್ಮಿಕ ಸಭೆ, ಸಮಾರಂಭಗಳಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದರೂ ಮಾಸ್ಕ್ ಧರಿಸುತ್ತಿಲ್ಲ. ಪಾಸಿಟಿವ್ ಸಂಖ್ಯೆ ಏರಿಕೆಯ ಭೀತಿ ಇದೆ. ಮಾರ್ಚ್ ಅಂತ್ಯದವರೆಗೆ ಸಮಾರಂಭಗಳಿಗೆ ಅನುಮತಿ ನೀಡಲಾಗಿದೆ. ಆದರೆ ಏಪ್ರಿಲ್‌ನಿಂದ 2 ತಿಂಗಳ ಕಾಲ ಅನುಮತಿ ನೀಡುವಾಗ ನಿಯಂತ್ರಣ ಹೇರುವ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.
     ಡಾ.ರಾಜೇಂದ್ರ ಜಿಲ್ಲಾಧಿಕಾರಿ, ದ.ಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts