More

    ಕರೊನಾ ಭಯ ಬಿಡಿ, ಮಕ್ಕಳ ಜತೆ ಬೆರೆಯಿರಿ

    ಕರೊನಾ ಸೋಂಕು ಕಳೆದೆಂಟು ತಿಂಗಳಿಂದ ಜಗತ್ತಿನಾದ್ಯಂತ ಎಲ್ಲರಲ್ಲೂ ಆತಂಕ, ಅಭದ್ರತೆ ಸೃಷ್ಟಿಸಿದೆ. ಶಾಲಾ-ಕಾಲೇಜುಗಳು ಬಂದ್ ಆಗಿ ಮಕ್ಕಳನ್ನು ಮನೆಯಲ್ಲೇ ಬಂಧಿಯಾಗಿಸಿದ್ದು, ಆನ್​ಲೈನ್ ಕ್ಲಾಸ್​ನಿಂದ ದೃಷ್ಟಿನಷ್ಟವೆಂಬ ಬೆಂಕಿಯ ಬಲೆಗೆ ದೂಡಿದೆ. ಮಕ್ಕಳ ಮಾನಸಿಕ ಆರೋಗ್ಯಕ್ಕಿದು ಮಾರಕ, ಖಿನ್ನತೆಗೆ ಪ್ರೇರಕ ಎಂಬ ವಾದಗಳು ಕೇಳಿಬರುತ್ತಿವೆ. ಜತೆಗೆ ಕರೊನಾ ಎರಡನೇ ಅಲೆ ಭೀತಿಯೂ ಎದುರಾಗಿದೆ. ಹಾಗಾದರೆ, ಮುಂದೇನು? ಈ ಕುರಿತು ‘ವಿಜಯವಾಣಿ’ ‘ಕರೊನಾ ಕಾಲದಲ್ಲಿ ಮಕ್ಕಳ ಆರೋಗ್ಯ’ ಫೋನ್-ಇನ್ ಹಾಗೂ ಸಂವಾದ ಆಯೋಜಿಸಿತ್ತು. ತಜ್ಞ ವೈದ್ಯರು ನೀಡಿದ ಸಲಹೆ-ಸೂಚನೆಗಳು ಇಲ್ಲಿವೆ.

    ವಿಜಯವಾಣಿ ಫೋನ್-ಇನ್​ನಲ್ಲಿ ವೈದ್ಯರ ಅಭಿಪ್ರಾಯ | ಮಕ್ಕಳ ಮಾನಸಿಕ ಆರೋಗ್ಯ ವೃದ್ಧಿಗೆ ತಜ್ಞರಿಂದ ಸಲಹೆ

    ಪಾಲಕರು ಕರೊನಾ ಸೋಂಕಿನ ಭೀತಿ ಹಾಗೂ ಭ್ರಮೆಯಿಂದ ಹೊರಬಂದು, ಸುರಕ್ಷತಾ ಕ್ರಮಗಳೊಂದಿಗೆ ಮಕ್ಕಳ ಚಟುವಟಿಕೆಯ ಭಾಗವಾಗಿ ಅವರಲ್ಲಿ ಉಂಟಾಗುವ ಖಿನ್ನತೆ ಸೇರಿ ಮನೋವ್ಯಾಧಿಗೆ ಪರಿಹಾರ ನೀಡಬಹುದು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.  ‘ಕರೊನಾ ಕಾಲದಲ್ಲಿ ಮಕ್ಕಳ ಆರೋಗ್ಯ’ ಕುರಿತಂತೆ ‘ವಿಜಯವಾಣಿ’ ಆಯೋಜಿಸಿದ್ದ ಫೋನ್- ಇನ್ ಹಾಗೂ ಸಂವಾದದಲ್ಲಿ ಇಂದಿರಾಗಾಂಧಿ ಆಸ್ಪತ್ರೆ ಮಕ್ಕಳ ತಜ್ಞ ಡಾ.ನಿಜಗುಣ, ಮನೋವೈದ್ಯ ಡಾ.ಎ.ಶ್ರೀಧರ್ ಮತ್ತು ಪೀಪಲ್ ಟ್ರೀ ಮಾರ್ಗ ಆಸ್ಪತ್ರೆ ಕನ್ಸಲ್ಟಂಟ್ ಸೈಕಿಯಾಟ್ರಿಸ್ಟ್ ಡಾ.ದಿವ್ಯಾ ಗಣೇಶ್ ನೆಲ್ಲೂರು ಮಕ್ಕಳ ಮಾನಸಿಕ ಆರೋಗ್ಯವೃದ್ಧಿ ಬಗ್ಗೆ ವಿವರಿಸಿದರು. ಪ್ರಸ್ತುತ ಮಕ್ಕಳು ಮತ್ತು ಪಾಲಕರ ನಡುವಿನ ಸಂಬಂಧ, ಕರೊನಾ ಕಾರಣದಿಂದ ಮಕ್ಕಳ ಮೇಲಾಗುತ್ತಿರುವ ಪರಿಣಾಮಗಳು, ಅದಕ್ಕೆ ಪರಿಹಾರ ಹೀಗೆ ಹಲವು ವಿಷಯಗಳ ಕುರಿತೂ ಅಭಿಪ್ರಾಯ ಮತ್ತು ಸಲಹೆಗಳನ್ನು ನೀಡಿದರು.

    ಕರೊನಾ ಬಗ್ಗೆ ಈವರೆಗೆ ಸಮರ್ಪಕ ಮಾಹಿತಿಗಳು ಹೊರಬರುತ್ತಿಲ್ಲ. ಭಯ ಹುಟ್ಟಿಸುವಂತಹ ಸಂಗತಿಗಳತ್ತ ಗಮನಹರಿಸಬಾರದು. ಪಾಲಕರ ಭಯ ಮಕ್ಕಳ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಮೊದಲು ಪಾಲಕರು ಭಯದಿಂದ ಹೊರಬರಬೇಕು ಎಂದು ವೈದ್ಯರು ಸಲಹೆ ನೀಡಿದರು. ಮಕ್ಕಳ ಮನಸ್ಥಿತಿ ಸಧೃಡವಾಗಬೇಕಾದರೆ ಪಾಲಕರು ತಮ್ಮ ಅಭ್ಯಾಸಗಳನ್ನು ಬದಲಿಸಿಕೊಳ್ಳಬೇಕು. ಲಾಕ್​ಡೌನ್ ಮತ್ತು ಕರೊನಾ ಸೋಂಕಿನ ಕಾರಣದಿಂದಾಗಿ ಮಕ್ಕಳು ಮನೆಯಿಂದ ಹೊರಹೋಗದಂತಾಗಿದೆ. ಅದನ್ನೇ ತಮ್ಮ ಲಾಭಕ್ಕೆ ಪಾಲಕರು ಬಳಸಿಕೊಳ್ಳಬೇಕು. ಮಕ್ಕಳು ಮನೆಯಲ್ಲಿದ್ದಾಗ ಪಾಲಕರು ಮೊಬೈಲ್, ಟಿವಿ ನೋಡುವ ಬದಲು ಮಕ್ಕಳ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು. ಅವರಿಗೆ ಪ್ರೋತ್ಸಾಹ ನೀಡುತ್ತಾ, ಹೊಸ ಕಾರ್ಯಗಳನ್ನು ಮಾಡಲು ಉತ್ತೇಜಿಸಬೇಕು. ಮನೆಯಲ್ಲಿನ ಚಿಕ್ಕಪುಟ್ಟ ಕೆಲಸಗಳನ್ನು ಮಕ್ಕಳ ಮೂಲಕ ಮಾಡಿಸಿ ಅವರಿಗೂ ಜವಾಬ್ದಾರಿ ಬರುವಂತೆ ಮಾಡಬೇಕು ಎಂದು ತಿಳಿಸಿದರು.

    ಜೀವನ ಕೌಶಲ ಕಲಿಸಿ

    ಕರೊನಾ ಭಯ ಬಿಡಿ, ಮಕ್ಕಳ ಜತೆ ಬೆರೆಯಿರಿಹದಿಹರೆಯದ ಮತ್ತು ವಯಸ್ಕ ಮಕ್ಕಳಿಗೆ ಶಾಲಾ ವಾತಾವರಣ ಅಗತ್ಯವಾಗಿದೆ. ಅವರು ಸ್ನೇಹಿತರೊಂದಿಗೆ ಇದ್ದಾಗಿನ ಆರಾಮದಾಯಕ ವಾತಾವರಣ ಎಲ್ಲಿಯೂ ಸೃಷ್ಟಿಸಲು ಸಾಧ್ಯವಿಲ್ಲ. ಹೀಗಾಗಿ, ಸೋಂಕಿನ ಬಗ್ಗೆ ಎಲ್ಲರಿಗೂ ಅಗತ್ಯ ಜಾಗೃತಿ ಮೂಡಿಸಿ ಶಾಲೆ ಆರಂಭಿಸಬೇಕು. ಕರೊನಾ ಯಾವಾಗ ಅಂತ್ಯವಾಗುತ್ತದೆ ಎಂಬ ಖಚಿತ ಮಾಹಿತಿ ಈವರೆಗೂ ಲಭ್ಯವಾಗಿಲ್ಲ. ಕರೊನಾ ಬಿಟ್ಟು ಜೀವನ ನಡೆಸುವುದು ಸಾಧ್ಯ ಇಲ್ಲದಂತಾಗಿದೆ. ಶಾಲೆ ಆರಂಭದವರೆಗೂ ಮಕ್ಕಳಿಗೆ ಜೀವನ ಕೌಶಲಗಳನ್ನು ರೂಪಿಸಬೇಕು. ಮನೆ ಕೆಲಸ, ವ್ಯಾಯಾಮ, ಬಟ್ಟೆ ತೊಳೆಯುವುದು, ಇಸ್ತ್ರಿ ಮಾಡುವುದು, ಸಣ್ಣ ಪುಟ್ಟ ಹೊಲಗೆ ಕೆಲಸ, ಸ್ವಚ್ಛತೆ ಕಾಪಾಡುವುದು, ಯೋಗ-ವ್ಯಾಯಾಮ ಸೇರಿ ಜೀವನ ಕೌಶಲಗಳನ್ನು ಕಲಿಸಬೇಕು. ಜತೆಗೆ, ಸೋಂಕನ್ನು ತಡೆಗಟ್ಟಲು ನಮ್ಮ ಪೂರ್ವಜನರು ಅನುಸರಿಸುತ್ತಿದ್ದ ಮಾರ್ಗಗಳನ್ನು ಪುನಃ ಅನುಸರಿಸಬೇಕಿದೆ. ಹೊರಗಿಂದ ಬಂದಾಗ ಕೈ-ಕಾಲು ತೊಳೆಯುವುದು, ನಿತ್ಯ ಸ್ನಾನ, ಕೊಳೆ ಬಟ್ಟೆಗಳ ಬದಲಾವಣೆ, ಆಗಾಗ ಕೈ ಶುಚಿಕೊಳಿಸುವ ಕಾರ್ಯ ಮಾಡಬೇಕು.

    | ಡಾ.ದಿವ್ಯಾ ಗಣೇಶ್ ನಲ್ಲೂರು

    ಕಾಲಘಟ್ಟಕ್ಕೆ ತಕ್ಕಂತೆ ಹೊಂದಿಕೊಳ್ಳಿ

    ಮನುಷ್ಯ ತನ್ನ ಜೀವನ ಹಾಗೂ ಸಂತಾನಕ್ಕಾಗಿ ಹಲವು ಸವಾಲುಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾನೆ. ಹೀಗಾಗಿ, ಕರೊನಾ ವೇಳೆ ಕೆಲವು ಮಾರ್ಪಾಡುಗಳೊಂದಿಗೆ ಜೀವನ ಮಾಡಬೇಕು. ಒಂದು ಮಗುವಿನ ಬೆಳವಣಿಗೆಯಲ್ಲಿ ಶಾಲೆಯ ಭೌತಿಕ ಪರಿಸರ, ಶಾಲೆ ಒಡನಾಡಿಗಳೊಂದಿಗೆ ಆಗುವ ಬದಲಾವಣೆ ಹೆಚ್ಚು ಪ್ರಭಾವ ಬೀರುತ್ತದೆ. ಮಕ್ಕಳ ಶೈಕ್ಷಣಿಕ ಕಲಿಕೆಯ 40 ನಿಮಿಷದ ಅವಧಿಯಲ್ಲಿ ಕೇವಲ 5ರಿಂದ 10 ನಿಮಿಷ ಮಾತ್ರ ಕಲಿಕೆ ಕಡೆಗೆ ಮನಸ್ಸು ಕೇಂದ್ರೀಕರಿಸುತ್ತಾರೆ. ಮಕ್ಕಳನ್ನು ಆನ್​ಲೈನ್ ಪಾಠಕ್ಕಾಗಿ ಒಂದು ಕೋಣೆಯಲ್ಲಿ ಕೂಡಿ ಹಾಕುವುದು ಅವರ ಮೇಲೆ ತೀವ್ರ ಅಡ್ಡ ಪರಿಣಾಮ ಬೀರುತ್ತದೆ. ಬುದ್ಧಿಶಕ್ತಿ ಹೊಂದಿರುವ ಮಗುವಿಗೆ ಚಿಕ್ಕ ಕೋಣೆಯಲ್ಲಿ ಬಿಟ್ಟು ಪಾಲಕರು ತಮ್ಮ ಕಾರ್ಯದಲ್ಲಿ ತೊಡಗಿಕೊಂಡರೆ ‘ಮೃಗಾಲಯ ಮಾನಸಿಕತೆ’ (ಝುೂ ಫಿನೋಮಿನಾ) ಉಂಟಾಗುತ್ತದೆ. ಇದರಿಂದ ಸಮಾಜಕ್ಕೆ ಪೂರಕವಾದ ಬುದ್ಧಿಮತ್ತೆ ಬೆಳವಣಿಗೆ ಆಗದೆ ಮಕ್ಕಳು ಜೀವನಪೂರ್ತಿ ಸಮಸ್ಯೆಯಿಂದ ಬಳಲುವ ವಾತಾವರಣ ಸೃಷ್ಟಿಯಾಗಲಿದೆ. ಹೀಗಾಗಿ, ಮಕ್ಕಳನ್ನು ಬಂಧನಕ್ಕೆ ತಳ್ಳಬೇಡಿ.

    | ಡಾ.ಎ. ಶ್ರೀಧರ

    ಐದು ವರ್ಷದೊಳಗಿನ ಬುದ್ಧಿಯೇ ಶಾಶ್ವತ

    ಖ್ಯಾತ ಮನೋವಿಜ್ಞಾನಿ ಎರಿಕ್ಸನ್ ತತ್ವದ ಪ್ರಕಾರ, ಮಕ್ಕಳಿಗೆ 1 ವರ್ಷದಿಂದ 5 ವರ್ಷದೊಳಗೆ ಮಿದುಳಿನಲ್ಲಿ ಸಂಗ್ರಹವಾಗುವ ಎಲ್ಲ ವಿಚಾರಗಳು, ಬುದ್ಧಿಗಳು ಜೀವನದಲ್ಲಿ ಶಾಶ್ವತವಾಗಿರುತ್ತದೆ. ಹೀಗಾಗಿ 1 ವರ್ಷದೊಳಗಿನ ಮಕ್ಕಳಿಗೆ ಹಾಲುಣಿಸುವ ಮತ್ತು ಪ್ರೀತಿ ಕೊಡಬೇಕು. 1ರಿಂದ 3 ವರ್ಷದವರೆಗೆ ಸ್ವೇಚ್ಛಾಚಾರ ಕೊಡಬೇಕು, ಮಕ್ಕಳ ಚಟುವಟಿಕೆಗೆಗೆ ಪೂರಕ ವಾತಾವರಣ ಕಲ್ಪಿಸಿ, ಅಗತ್ಯ ತಿದ್ದುಪಡಿ ಮತ್ತು ಸಲಹೆಗಳನ್ನು ಮಾತ್ರ ನೀಡಬೇಕು. ಆದರೆ, ಮಕ್ಕಳ ಪ್ರಯತ್ನಕ್ಕೆ ಅಡ್ಡಿ ಮಾಡಬಾರದು. 4 ವರ್ಷದ ನಂತರ ಶಾಲೆಗೆ ಕಳಿಸಿದಾಗ ಅಲ್ಲಿ ಸ್ನೇಹಿತರ ಚಟುವಟಿಕೆ ನೋಡಿಕೊಂಡು, ಮನೆಯಲ್ಲಿ ತಿಳಿಸಿದ ಸಲಹೆ ಆಧರಿಸಿ ಗುಣಗಳನ್ನು ತಿದ್ದುಪಡಿ ಮಾಡಿಕೊಳ್ಳುತ್ತಾರೆ.

    | ಡಾ. ನಿಜಗುಣ

    ಶಾಲೆ ಆರಂಭಿಸುವುದು ಒಳಿತು

    ಶಾಲೆ ಆರಂಭದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಿನ್ನ ಅಭಿಪ್ರಾಯ ವ್ಯಕ್ತವಾಗುತ್ತಿವೆ. ಅದರೆ ಫೋನ್- ಇನ್​ನಲ್ಲಿ ಪಾಲ್ಗೊಂಡ ತಜ್ಞರು ಶಾಲೆ ಆರಂಭದಿಂದ ಮಕ್ಕಳ ಮೇಲಾಗುತ್ತಿರುವ ಒಂಟಿತನ, ಖಿನ್ನತೆ, ಕಲಿಕೆಯಲ್ಲಿ ಹಿಂದುಳಿಯುವ ಭೀತಿಗಳಿಗೆ ಪರಿಹಾರ ದೊರೆಯಲಿದೆ ಎಂದು ವಿವರಿಸಿದರು. ‘ಶಾಲೆ ಆರಂಭಿಸುವುದು ಸರ್ಕಾರಕ್ಕೆ ಬಿಟ್ಟ ನಿರ್ಧಾರ. ಮಕ್ಕಳ ಕಲಿಕೆ ಮತ್ತು ಮಾನಸಿಕ ಆರೋಗ್ಯದ ದೃಷ್ಟಿಯಿಂದ ಶಾಲೆ ಆರಂಭಿಸುವುದು ಒಳಿತು. ಅದರಿಂದ ಮಕ್ಕಳಿಗೆ ಕಾಡುವ ಒಂಟಿತನ ಕಳೆಯಲಿದೆ. ಒಂದು ಮಗು ಇನ್ನೊಂದು ಮಗುವನ್ನು ನೋಡಿ ಕಲಿಕೆಯನ್ನು ಹೆಚ್ಚಿಸಿಕೊಳ್ಳಲಿದೆ’ ಎಂದು ಮನೋವೈದ್ಯ ಡಾ.ಎ.ಶ್ರೀಧರ್ ಹೇಳಿದರು. ಇದಕ್ಕೆ ಉಳಿದಿಬ್ಬರೂ ಧ್ವನಿಗೂಡಿಸಿದರಾದರೂ, ‘ಶಾಲೆ ಆರಂಭಕ್ಕೆ ಕೆಲವೊಂದು ಮಾರ್ಗಸೂಚಿ ಪ್ರಕಟಿಸಬೇಕು. ಮಕ್ಕಳ ಕಲಿಕೆಗಿಂತ ಆರೋಗ್ಯ ಮುಖ್ಯ. ಹೀಗಾಗಿ ಸೂಕ್ಷ್ಮ ವಿಚಾರದ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಡಾ.ನಿಜಗುಣ ಹೇಳಿದರು.

    ಮಕ್ಕಳ ಮೇಲೆ ನಿಗಾ ವಹಿಸಿ

    ಆನ್​ಲೈನ್ ಶಾಲೆ ಬಗ್ಗೆಯೂ ಮಾತನಾಡಿದ ವೈದ್ಯರು, ಶಿಕ್ಷಣ ಎನ್ನುವುದು ಪಾಲಕರಿಗೆ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಹೀಗಾಗಿ ಚಿಕ್ಕ ಮಕ್ಕಳನ್ನೂ ಆನ್​ಲೈನ್ ಕ್ಲಾಸ್​ಗೆ ಸೇರಿಸಲಾಗುತ್ತಿದೆ. ಹೀಗೆ ಆನ್​ಲೈನ್ ಕ್ಲಾಸ್​ಗೆ ಸೇರುವ ಮಕ್ಕಳ ಮೇಲೆ ಪಾಲಕರು ನಿಗಾ ವಹಿಸಬೇಕು. ಅವರು ಮೊಬೈಲ್, ಲ್ಯಾಪ್​ಟಾಪ್​ಗಳನ್ನು ಬೇರೆ ಚಟುವಟಿಕೆಗೆ ಬಳಸದಂತೆ ನೋಡಿಕೊಳ್ಳಬೇಕು. ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಸಂಗ್ರಹ ಶಕ್ತಿ ಹೆಚ್ಚಿರುತ್ತದೆ. ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡರೆ, ಅದು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಮುಂದೆ ಅದೇ ಮನಸ್ಸಿನಲ್ಲಿ ಉಳಿಯುತ್ತದೆ. ಹೀಗಾಗಿ ಮಕ್ಕಳ ಚಟುವಟಿಕೆಗಳ ಮೇಲೆ ಹೆಚ್ಚಿನ ನಿಗಾ ವಹಿಸಿ, ಅವರನ್ನು ಸರಿದಾರಿಗೆ ತರಬೇಕಾಗಿದೆ ಎಂದರು.

    ಸೃಜನಶೀಲತೆ ಬೆಳೆಸಿ

    ಕರೊನಾ ಎಲ್ಲರಿಗೂ ಜೀವನ ಶೈಲಿಯಲ್ಲಿ ಬದಲಾವಣೆ ತಂದುಕೊಳ್ಳಲು ಉತ್ತಮ ಅವಕಾಶ ನೀಡಿದೆ ಎಂದು ಹೇಳಿದ ಡಾ. ನಿಜಗುಣ, ಮಕ್ಕಳು ಮನೆಯಿಂದ ಹೊರಹೋಗದ ಕಾರಣ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದನ್ನು ನಿವಾರಿಸಲು ಮಕ್ಕಳಲ್ಲಿನ ಸೃಜನಶೀಲತೆ ಹೆಚ್ಚಿಸಬೇಕು. ಚಿತ್ರಕಲೆ, ಗಾಯನ, ನೃತ್ಯ ಹೀಗೆ ಹಲವು ಪಠ್ಯೇತರ ಚಟುವಟಿಕೆಗಳ ಮೇಲೆ ಆಸಕ್ತಿ ಬರುವಂತೆ ಮಾಡಬೇಕು. ಮಕ್ಕಳ ಪ್ರದರ್ಶನ ಹೇಗಿದ್ದರೂ ಅದಕ್ಕೆ ಪ್ರೋತ್ಸಾಹದ ಮಾತನ್ನಾಡಿದರೆ, ಅವರ ಕಲಿಕೆ ಇನ್ನಷ್ಟು ಹೆಚ್ಚಲಿದೆ ಎಂದು ಸಲಹೆ ನೀಡಿದರು.

    ಹದಿಹರೆಯದಲ್ಲಿ ಎಚ್ಚರವಹಿಸಿ

    12ರಿಂದ 16 ವರ್ಷದ ವರೆಗಿನ ಅವಧಿ ಮಕ್ಕಳು ಹೊಸ ಹೊಸ ವಿಷಯಗಳ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುತ್ತಾರೆ. ಅದರಲ್ಲೂ ದುಶ್ಚಟಗಳ ಬಗ್ಗೆ ಈ ವಯಸ್ಸಿನಲ್ಲೇ ಹೆಚ್ಚಾಗಿ ಆಕರ್ಷಿತರಾಗುತ್ತಾರೆ. ಹೀಗಾಗಿ ಹದಿಹರೆಯದ ವಯಸ್ಸಿನಲ್ಲಿ ಮಕ್ಕಳ ಚಟುವಟಿಕೆ, ಅಭ್ಯಾಸಗಳ ಬಗ್ಗೆ ಪಾಲಕರು ಹೆಚ್ಚಿನ ಗಮನ ಹರಿಸಬೇಕು ಎಂದು ಡಾ. ನಿಜಗುಣ ಹೇಳಿದರು.

    ಶೇ.60 ಮಕ್ಕಳಿಗೆ ಬೊಜ್ಜು ಸಮಸ್ಯೆ

    ಮೊದಲು ತೆಳ್ಳಗಿದ್ದವರಲ್ಲಿ ಮಾತ್ರ ಪೌಷ್ಟಿಕಾಂಶ ಕೊರತೆಯಿದೆ ಎಂದು ವ್ಯಾಖ್ಯಾನಿಸಲಾಗುತ್ತಿತ್ತು. ಈಗ ತೆಳ್ಳಗೆ ಮತ್ತು ತೀವ್ರ ದಪ್ಪ ಇರುವವರೂ ಪೌಷ್ಟಿಕಾಂಶ ಕೊರತೆ ಉಳ್ಳವರು ಎಂದು ಗುರುತಿಸಲಾಗುತ್ತಿದೆ. ಖಾಸಗಿ ಶಾಲೆಯಲ್ಲಿ ನಾವು ನಡೆಸಿದ ಸಮೀಕ್ಷೆ ಪ್ರಕಾರ, ಶೇ.3 ಮಕ್ಕಳು ತೆಳ್ಳಗಿದ್ದರೆ ಶೇ.60 ಮಕ್ಕಳು ಅಗತ್ಯಕ್ಕಿಂತ ದಪ್ಪಗಿದ್ದಾರೆ. ಶೇ.6 ಮಕ್ಕಳು ಮಿತಿಮೀರಿದ ದಪ್ಪವಿದ್ದು, ಉಳಿದ ಶೇ.30 ಮಕ್ಕಳು ಮಾತ್ರ ಆರೋಗ್ಯವಾಗಿರುವುದು ಪತ್ತೆಯಾಗಿದೆ. ಮಕ್ಕಳ ಸರ್ವತೋಮುಖ ಬೆಳವಣಿಗೆ ದೃಷ್ಟಿಕೋನದಿಂದ ಪಾಲಕರು ತಮ್ಮ ದಿನಚರಿ ಬದಲಾಯಿಸಿಕೊಳ್ಳಬೇಕು. ಬೆಳಗ್ಗೆ ವಿಹಾರ, ಉದ್ಯಾನದಲ್ಲಿ ಸುತ್ತಾಟ, ಯೋಗ-ವ್ಯಾಯಾಮ, ದೈಹಿಕ ಕಸರತ್ತುಗಳನ್ನು ಮಾಡಿಸಬೇಕು. ಇದರಿಂದ ಮಕ್ಕಳಲ್ಲಿ ಬೊಜ್ಜು ಬೆಳೆಯುವುದನ್ನು ತಪ್ಪಿಸಬಹುದು ಎಂದು ಡಾ.ನಿಜಗುಣ ತಿಳಿಸಿದರು. ಲಾಕ್​ಡೌನ್ ನಂತರ ಮಧ್ಯಮ, ಶ್ರೀಮಂತ ಕುಟುಂಬಗಳಲ್ಲಿ ದಿನದ 18 ಗಂಟೆಗಳ ಕಾಲ ಅಡುಗೆ ಮನೆ ಕಾರ್ಯ ನಿರ್ವಹಿಸುತ್ತಿದೆ. ಮೊದಲು 3 ಹೊತ್ತು ಇದ್ದ ಊಟ ಈಗ 5 ಬಾರಿಗೆ ಏರಿಕೆಯಾಗಿದೆ. ಬೆಳಗ್ಗೆ 9 ಗಂಟೆ, ಮಧ್ಯಾಹ್ನ 2 ಹಾಗೂ ರಾತ್ರಿ 9 ಗಂಟೆ ವೇಳೆ ತಲಾ ಒಂದು ಅವಧಿಗೆ ಮಾತ್ರ ಅಡುಗೆ ಕಾರ್ಯ ಸೀಮಿತವಾಗಬೇಕು. ಹೆಚ್ಚಿನ ಅವಧಿ ಅಡುಗೆ ಮನೆಯಲ್ಲಿ ತಿಂಡಿಗಳನ್ನು ಮಾಡಿಕೊಂಡು ತಿನ್ನುವುದರಿಂದ ವಯಸ್ಕರಿಗೆ ಬೊಜ್ಜು ಬರುವ ಜತೆಗೆ ಮುಂದಿನ ದಿನಗಳಲ್ಲಿ ಹೆಚ್ಚು ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

    ಸ್ವಂತ ಉದಾಹರಣೆ ನೀಡಿದ ವೈದ್ಯರು

    ನನ್ನ ಮಗನಿಗೆ ಸಗಣಿ ಎಂಬುದು ನೇರವಾಗಿ ನೋಡಿದರೆ ತಿಳಿಯುವುದಿಲ್ಲ. ಅದೇನು ಎಂದು ಪ್ರಶ್ನಿಸುತ್ತಾನೆ. ಅದೇ ಟಿವಿ ಅಥವಾ ಕಂಪ್ಯೂಟರ್​ನಲ್ಲಿ ತೋರಿಸಿದರೆ ಸಗಣಿ ಎಂದು ಗುರುತು ಹಿಡಿಯುತ್ತಾನೆ. ಅಲ್ಲದೆ, ಲಾಕ್​ಡೌನ್ ಅವಧಿಯಲ್ಲಿ ಮಗ ಖಿನ್ನತೆಗೊಳಗಾಗಿದ್ದ ಎಂಬ ಭಾವನೆ ಮೂಡಿತು. ಅದಕ್ಕಾಗಿ ಸಂಜೆ ವೇಳೆ ಹೆಚ್ಚಾಗಿ ಆತನೊಂದಿಗೆ ಕಾಲ ಕಳೆಯಲು ಶುರು ಮಾಡಿದ್ದೇನೆ. ಅದರಿಂದ ಮಗನ ಮಾನಸಿಕ ಆರೋಗ್ಯದಲ್ಲಿ ಬದಲಾವಣೆಯಾಗಿದೆ ಎಂದು ಡಾ.ನಿಜಗುಣ ವಿವರಿಸಿದರು. ‘ನನ್ನ ಮಗ ಫುಟ್​ಬಾಲ್ ಆಟಗಾರ. ಕರೊನಾದಿಂದಾಗಿ ಕೆಲ ತಿಂಗಳಿನಿಂದ ತರಬೇತಿಗೆ ಹೋಗಲಾಗಿಲ್ಲ. ಮನೆಯಲ್ಲಿಯೇ ಆಟವಾಡುತ್ತಿದ್ದಾನೆ. ಆದರೆ, ಅದು ಹೊರಗೆ ಆಡುವಷ್ಟು ಸರಿಯಾಗುತ್ತಿಲ್ಲ. ಇದು ಎಲ್ಲ ಮಕ್ಕಳಿಗೂ ಎದುರಾಗಿರುವ ಪರಿಸ್ಥಿತಿ’ ಎಂದು ಡಾ.ದಿವ್ಯಾ ಗಣೇಶ್ ತಿಳಿಸಿದರು.

    ಯುವಕರನ್ನು ಸಮಾಜ ಸೇವೆಗೆ ಪ್ರೇರೇಪಿಸಿ

    ಲಾಕ್​ಡೌನ್ ಮತ್ತು ಕರೊನಾ ಸಂದರ್ಭದಲ್ಲಿ ಯುವಜನತೆ ಮನೆಯಲ್ಲಿರಿ ಎಂದರೂ ರಸ್ತೆಗೆ ಬರುತ್ತಿದ್ದರು. ಅಂತಹ ಸಂದರ್ಭದಲ್ಲಿ ಬಡಾವಣೆಗಳಲ್ಲಿನ ಯುವಕರನ್ನು ಒಗ್ಗೂಡಿಸಿ ಸಮಾಜ ಸೇವೆಯತ್ತ ಮುಖ ಮಾಡುವಂತೆ ಮಾಡಬೇಕಿತ್ತು. ಕರೊನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಸೇರಿ ಇನ್ನಿತರ ಕೆಲಸಗಳಿಗೆ ಬಳಸಿಕೊಳ್ಳಬಹುದು. ಈಗಲೂ ಅದನ್ನು ಮಾಡಬಹುದಾಗಿದ್ದು, ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿ ಅಥವಾ ಬಡಾವಣೆಯ ಹಿರಿಯರು ಗಮನಹರಿಸಬೇಕು ಎಂದು ಡಾ. ದಿವ್ಯಾ ಗಣೇಶ್ ಸಲಹೆ ನೀಡಿದರು.

    ಪ್ರಶ್ನೋತ್ತರ

    * 2 ವರ್ಷದ ಮಗ ಮೊಬೈಲ್, ಟಿವಿ ತೋರಿಸದಿದ್ದರೆ ಅಳುತ್ತಾನೆ. ಊಟ ಕೂಡ ತಿನ್ನುವುದಿಲ್ಲ. ಇದಕ್ಕೆ ಪರಿಹಾರವೇನು?

    | ನವೀನ್ ಶಿವಮೊಗ್ಗ

    ಯಾವುದೇ ಕಾರಣಕ್ಕೂ ಮೊಬೈಲ್ ಹಾಗೂ ಟಿವಿ ತೋರಿಸಿ ಮಕ್ಕಳಿಗೆ ಊಟ ಮಾಡಿಸುವ ಅಭ್ಯಾಸ ಮಾಡಕೂಡದು. ಒತ್ತಾಯ ಮಾಡಿ ಊಟ ಮಾಡಿಸಿದರೆ ಮುಂದಿನ ಜೀವನದಲ್ಲಿಯೂ ಇದೇ ರೀತಿ ಅಭ್ಯಾಸ ಆಗುತ್ತದೆ. ಹೊಟ್ಟೆ ಹಸಿದ ಮೇಲೆ ಮಗು ತಿನ್ನುತ್ತದೆ. ಒಂದು ಅಥವಾ ಎರಡು ದಿನ ನೋಡಿ ಊಟ ಮಾಡದಿದ್ದರೆ, ವೈದ್ಯರಿಗೆ ತೋರಿಸಿ.

    * ಶಾಲೆ ಬಂದ್ ಮಾಡಿದ್ದರಿಂದ 7-8 ತಿಂಗಳಿಂದ ಮಗು ಶಾಲೆಗೆ ಹೋಗಿಲ್ಲ. ಇದೀಗ ಮೊಬೈಲ್ ಕೊಡುವುದಕ್ಕೆ ಭಯ ಆಗುತ್ತಿದೆ?

    | ರಮೇಶ್ ಯಾದಗಿರಿ

    ಆನ್​ಲೈನ್ ಕ್ಲಾಸ್​ಗಳ ನೆಪದಲ್ಲಿ ಮಕ್ಕಳು ಮೊಬೈಲ್ ಚಟಕ್ಕೆ ಅಂಟಿಕೊಂಡಿರುವ ಬಗ್ಗೆ ಸಾಕಷ್ಟು ದೂರುಗಳಿವೆ. ಆನ್​ಲೈನ್ ಕ್ಲಾಸ್ ನಡೆಯುವ ಸಂದರ್ಭ ಕಡ್ಡಾಯವಾಗಿ ಮಕ್ಕಳ ಜತೆ ಪಾಲಕರು ಇರತಕ್ಕದು. ಬಳಿಕ ಮೊಬೈಲ್ ಪಡೆದುಕೊಳ್ಳಬೇಕು. ಹಳೆಯ ವಿಧಾನಗಳ ಮೂಲಕ ಮಕ್ಕಳಿಗೆ ಕಲಿಸುವುದು ಉತ್ತಮ.

    * ಒಂದೂವರೆ ತಿಂಗಳಿಂದ ಊರಿನ ಅಜ್ಜಿ ಮನೆಯಲ್ಲಿದ್ದ 3 ವರ್ಷದ ಮಗುವನ್ನು ಬೆಂಗಳೂರಿಗೆ ಕರೆದುಕೊಂಡ ಬಂದ್ಮೇಲೆ ಊಟ ತಿನ್ನುತ್ತಿಲ್ಲ?

    | ಶ್ರುತಿ ಬೆಂಗಳೂರು

    ಈಗಿನ ಪರಿಸ್ಥಿತಿಯಲ್ಲಿ ಮಕ್ಕಳನ್ನು ಬೆಳೆಸುವ ಜಾಣತನ ಕಲಿಯಬೇಕು. ಸಾಕಷ್ಟು ಗ್ರಾಮೀಣ ಆಟಗಳಿವೆ. ಅವುಗಳನ್ನು ಕಲಿಸಿ. ಮಕ್ಕಳ ಮನಸ್ಸಿಗೆ ಬೇಕಾಗಿರುವ ಮಾಹಿತಿಗಳನ್ನು ಒದಗಿಸಿ. ಕರೊನಾ ಮಾರ್ಗಸೂಚಿ ಪಾಲಿಸಿ ನಿಮ್ಮ ಮಕ್ಕಳನ್ನು ಅರ್ಧಗಂಟೆ ಪಾರ್ಕ್​ಗೆ ಕರೆದುಕೊಂಡು ಹೋಗಿ.

    * ಲಾಕ್​ಡೌನ್ ಬಳಿಕ 14 ವರ್ಷದ ಮೊಮ್ಮಗಳು ತಾಯಿಯನ್ನು ತುಂಬಾ ಹಚ್ಚಿಕೊಂಡಿದ್ದಾಳೆ. ನನ್ನ ಬಳಿಯೇ ಇರಬೇಕು ಎನ್ನುತ್ತಾಳೆ?

    | ಉಷಾ ಪ್ರಕಾಶ್ ಮೈಸೂರು

    14ನೇ ವಯಸ್ಸಿನ ಮಕ್ಕಳಲ್ಲಿ ನಾನಾ ರೀತಿಯ ವ್ಯಕ್ತಿತ್ವ ಬೆಳೆವಣಿಗೆಗಳು ಆರಂಭವಾಗಿರುತ್ತದೆ. ಖಂಡಿತವಾಗಿಯೂ ಮಕ್ಕಳಿಗೆ ತನ್ನ ಅಮ್ಮನ ಮೇಲೆ ಪ್ರೀತಿ ಹೆಚ್ಚಿರುತ್ತದೆ. ಮತ್ತಷ್ಟು ಪ್ರೀತಿ ಹಾಗೂ ವ್ಯಾತ್ಸಲ್ಯ ತೋರಿಸಿ.

    * ನನ್ನ ಮೊಮ್ಮಗಳು 7ನೇ ಕ್ಲಾಸ್ ಓದುತ್ತಿದ್ದಾಳೆ. ಆಟ ಆಡುವುದಕ್ಕೂ ಹೋಗುತ್ತಿಲ್ಲ. ಬರೀ ಆನ್​ಲೈನ್​ನಲ್ಲಿ ಇರುತ್ತಾಳೆ?

    | ಮಲ್ಲಿಕಾರ್ಜುನ ಹುಬ್ಬಳ್ಳಿ

    ಪ್ರತಿನಿತ್ಯ ಬೆಳಗ್ಗೆ ವ್ಯಾಯಾಮ ಮಾಡಿಸಿ. ಎದ್ದ ತಕ್ಷಣ ವಾಕಿಂಗ್​ಗೆ ಕರೆದುಕೊಂಡು ಹೋಗಬೇಕು. ಲವಲವಿಕೆಯಿಂದ ಇರಲು ಒಳ್ಳೆಯ ಅಭ್ಯಾಸಗಳನ್ನು ಕಲಿಸಿ. ಕರೊನಾ ಬಂದ ಬಳಿಕ ಮಕ್ಕಳಿಗೆ ಸ್ವಲ್ಪ ಬುದ್ದಿ ಮಂಕಾಗಿರುತ್ತದೆ. ಆದ್ದರಿಂದ ಪೋಷಕಾಂಶ ಆಹಾರಗಳನ್ನು ತಿನ್ನಿಸಿ. ಇದೊಂದು ಸಾಮಾಜಿಕ ಸಮಸ್ಯೆ ಅಷ್ಟೇ. ಔಷಧದಿಂದ ಪರಿಹಾರ ಆಗುವುದಿಲ್ಲ. ಪಾಲಕರೇ ಒಳ್ಳೆಯ ಅಂಶಗಳನ್ನು ಕಲಿಸಬೇಕು.

    * ಶಾಲೆ ಆರಂಭವಾದರೆ ಕರೊನಾ ತಡೆಯಲು ಏನೇನು ಕ್ರಮಕೈಗೊಳ್ಳಬೇಕು?

    | ಅನಿಲ್ ಸವದತ್ತಿ

    ವ್ಯಕ್ತಿಗತ ಅಂತರ, ಮಾಸ್ಕ್ ಸೇರಿ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. 1 ವರ್ಷ ಹಾಳಾದರೆ ಏನು ಸಮಸ್ಯೆ ಆಗುವುದಿಲ್ಲ. ಈಗ ಕಲಿಯದಿದ್ದರೆ ಮುಂದೆ ಕಲಿಯುವುದಕ್ಕೆ ಅವಕಾಶವಿದೆ. ಮನುಷ್ಯನ ಮಿದುಳಿಗೆ ನಿರಂತರ ಕಲಿಕೆಯ ಸಾಮರ್ಥ್ಯ ಇರುತ್ತದೆ. ಕೃತಕ ದೃಷ್ಟಿಯಿಂದ ಮಕ್ಕಳನ್ನು ಬೆಳೆಸಿದರೆ ಮುಂದೆ ವ್ಯತ್ತಿರಿಕ್ತ ಪರಿಣಾಮ ಬೀರುತ್ತದೆ. ಆದ್ದರಿಂದ ಮನೆಯಲ್ಲಿಯೇ ಹೊಸ ವಿಧಾನಗಳ ಮೂಲಕ ಮಕ್ಕಳಿಗೆ ಕಲಿಸಿ.

    * ಮಗುವಿಗೆ 6 ವರ್ಷವಾಗಿದೆ. 1ನೇ ತರಗತಿಗೆ ಸೇರಿಸಬೇಕು. ಆನ್​ಲೈನ್​ಕ್ಲಾಸ್ ಇಷ್ಟುಪಡುತ್ತಿಲ್ಲ. ಟಿವಿಯಲ್ಲಿ ಪ್ರಸಾರವಾಗುವ ಧಾರಾವಾಹಿ ನೋಡುವ ಅಭ್ಯಾಸ ಬೆಳೆಸಿಕೊಂಡಿದ್ದಾಳೆ. ಜತೆಗೆ ನಿರಂತರವಾಗಿ ಮೊಬೈಲ್ ಉಪಯೋಗಿಸುತ್ತಿದ್ದಾಳೆ?

    | ಬಳ್ಳಾರಿ ಮಹೇಶ್​ಗೌಡ

    ಮೊದಲು ಕೇಬಲ್ ಕಡಿತಗೊಳಿಸಿ. ಮನೆಯಲ್ಲೇ ಒಳ್ಳೆಯ ಹವ್ಯಾಸಗಳನ್ನು ಕಲಿಸಿಕೊಡಿ. ಸಂಗೀತ ಹಾಗೂ ಚಿತ್ರ ಬಿಡಿಸುವುದು ಸೇರಿ ಇನ್ನಿತರ ಚಟುವಟಿಕೆಗಳನ್ನು ಕಲಿಸಿ. ರಾಮಾಯಣ, ಮಹಾಭಾರತ ಕಥೆಗಳನ್ನು ಹೇಳಿ. ಈಗಿಂದಲ್ಲೇ ಒಳ್ಳೆಯ ವಿಚಾರಗಳನ್ನು ಕಲಿಸಬೇಕು.

    * 8ನೇ ತರಗತಿ ಓದುತ್ತಿದ್ದೇನೆ. ನಿರಂತರವಾಗಿ ಆನ್​ಲೈನ್ ತರಗತಿ ನೋಡುತ್ತಿರುವುದರಿಂದ ಕಣ್ಣು ನೋಯುತ್ತಿದೆ. ಇದಕ್ಕೆ ಪರಿಹಾರವೇನು?

    | ಭೂಮಿಕಾ ವಿಜಯಪುರ

    ಕತ್ತಳೆ ಕೊಠಡಿಗಳಲ್ಲಿ ಕುಳಿತುಕೊಳ್ಳಬಾರದು. ಮುಖದ ಮೇಲೆ ಬೆಳಕು ಬೀಳುವಂತೆ ನೋಡಿಕೊಳ್ಳಬೇಕು. ತುಂಬಾ ಹತ್ತಿರದಿಂದ ಕೂರದೆ ಒಂದೂವರೆ ಅಡಿ ದೂರದಿಂದ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳಬೇಕು. ಕತ್ತು ಮತ್ತು ದೇಹ ನೇರವಾಗಿರಬೇಕು. ಅಗಾಗ್ಗೆ ಕಣ್ಣುಗಳನ್ನು ಮಿಟುಕಿಸುತ್ತಿರಬೇಕು.

    ಐಯುಎಂಎಲ್ ಶಾಸಕ​ ಶಾಜಿ ವಿರುದ್ಧ ತನಿಖೆಗೆ ಆದೇಶ ನೀಡಿದ ವಿಜಿಲೆನ್ಸ್ ಕೋರ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts