More

    ಸಾಲ ತೀರಿಸಲು ಕಿಡ್ನಿ ಮಾರಲು ಮುಂದಾದ ದಂಪತಿ! ಮುಂದಾಗಿದ್ದೆಲ್ಲ ರೋಚಕ ಕಥೆ..

    ಹೈದರಾಬಾದ್: ಕರೊನಾ ಅನೇಕರ ಬದುಕಲ್ಲಿ ಕಷ್ಟಗಳ ಮೂಟೆಯನ್ನೇ ತಂದಿಟ್ಟಿದೆ. ಅನೇಕ ವ್ಯಾಪಾರಿಗಳು ವ್ಯಾಪಾರವಿಲ್ಲದೆ ಬೀದಿಗೆ ಬಂದಿದ್ದಾರೆ. ಅದೇ ರೀತಿ ವ್ಯಾಪಾರವನ್ನೇ ನಂಬಿ ಬದುಕುತ್ತಿದ್ದ ದಂಪತಿಯೊಬ್ಬರು ಸಾಲ ಹೆಚ್ಚಿಸಿಕೊಂಡಿದ್ದು, ಕಿಡ್ನಿ ಮಾರಿ ಸಾಲ ತೀರಿಸಲು ಮುಂದಾಗಿದ್ದಾರೆ.

    ಹೈದರಾಬಾದ್​ನ ವೆಂಕಟೇಶ್ ಮತ್ತು ಲಾವಣ್ಯ ದಂಪತಿ ಸ್ಟೇಷನರಿ ಅಂಗಡಿ ಹಾಗೂ ಬಳೆಗಳ ಅಂಗಡಿ ನಡೆಸುತ್ತಿದ್ದಾರೆ. ಕರೊನಾ ಬರುವುದಕ್ಕೂ ಮೊದಲು ಅವರು ಸಾಲ ಪಡೆದು, ನಾಲ್ಕು ಅಂತಸ್ತಿನ ಬಿಲ್ಡಿಂಗ್ ನಿರ್ಮಿಸಿ ಅದರಲ್ಲಿ ಅಂಗಡಿಗಳನ್ನು ತೆರೆಯಲು ಯೋಜನೆ ಹಾಕಿದ್ದರು. ಅದರಂತೆ ಸಾಲ ಪಡೆದು ಅಂಗಡಿಗಳನ್ನು ನಿರ್ಮಿಸಿದ್ದರು ಕೂಡ. ಆದರೆ ಕರೊನಾ ಬಂದ ಕಾರಣದಿಂದಾಗಿ ಅವರಿಗೆ ಹೆಚ್ಚು ನಷ್ಟವಾಗಿದೆ. ಸುಮಾರು 1.5 ಕೋಟಿ ರೂಪಾಯಿ ಸಾಲವನ್ನು ತೀರಿಸಲಾಗದೆ ಒದ್ದಾಡುವಂತಾಗಿದೆ.

    ಸಾಲ ತೀರಿಸುವುದಕ್ಕಾಗಿ ದಂಪತಿ ಮತ್ತೊಂದು ಪ್ಲಾನ್ ಮಾಡಿದ್ದಾರೆ. ತಮ್ಮ ಕಿಡ್ನಿ ಮಾರಾಟ ಮಾಡಲು ಮುಂದಾಗಿದ್ದಾರೆ. ಅದಕ್ಕಾಗಿ ಫೇಸ್​ಬುಕ್​ನಲ್ಲಿ ಕಿಡ್ನಿ ಕೊಳ್ಳುವವರಿಗಾಗಿ ಹುಡುಕಾಡಿದ್ದಾರೆ. ಆಗ ಬ್ರಿಟನ್​ನ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬರ ಪರಿಚಯವಾಗಿದೆ. ಆತ 5 ಕೋಟಿ ರೂಪಾಯಿಗೆ ಕಿಡ್ನಿ ಕೊಳ್ಳುವುದಾಗಿ ಹೇಳಿದ್ದಾನೆ. ಅದಕ್ಕೆಂದು ಕೆಲ ಪ್ರೊಸೆಸ್ ಮಾಡಬೇಕು ಎಂದು ತಿಳಿಸಿದ್ದಾನೆ. ಮೊದಲಿಗೆ ನೀವು ರಿಜಿಸ್ಟ್ರೇಶನ್ ಶುಲ್ಕ ಎಂದು 10 ಲಕ್ಷ ರೂಪಾಯಿ ಕಟ್ಟಬೇಕೆಂದು ಹೇಳಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಅದಾದ ನಂತರ ಮತ್ತೊಮ್ಮೆ ಬೇರಾವುದೋ ಶುಲ್ಕವೆಂದು ಹೇಳಿ 12 ಲಕ್ಷ ರೂಪಾಯಿ ಕಟ್ಟಿಸಿಕೊಂಡಿದ್ದಾನೆ.

    ಕಿಡ್ನಿ ತೆಗೆದುಕೊಳ್ಳುವ ಮೊದಲು ಅರ್ಧ ಹಣ ಅಂದರೆ 2.50 ಕೋಟಿ ರೂಪಾಯಿಯನ್ನು ನಿಮಗೆ ಅಡ್ವಾನ್ಸ್​ ಆಗಿ ಕೊಡಲಾಗುವುದು ಎಂದು ಹೇಳಲಾಗಿದೆ. ಆ ಹಣವನ್ನು ಬೆಂಗಳೂರಿನ ರೆಸಾರ್ಟ್ ಒಂದರಲ್ಲಿ ನಮ್ಮ ವ್ಯಕ್ತಿ ನಿಮಗೆ ನೀಡುತ್ತಾನೆ ಎಂದು ದಂಪತಿಯನ್ನು ಬೆಂಗಳೂರಿಗೆ ಕರೆಸಿಕೊಳ್ಳಲಾಗಿದೆ.

    ಬೆಂಗಳೂರಿನಲ್ಲಿ ದಂಪತಿಯನ್ನು ಭೇಟಿಯಾದ ವ್ಯಕ್ತಿ ಒಂದಿಷ್ಟು ಕಪ್ಪು ಪೇಪರ್​ ಅನ್ನು ನೀಡಿದ್ದಾನೆ. ಅದೇನೆಂದು ಕೇಳಿದಾಗ ಯಾವುದೋ ಕೆಮಿಕಲ್​ ಅನ್ನು ಅದಕ್ಕೆ ಹಾಕಿದ್ದಾನೆ. ಆಗ ಅದು 2 ಸಾವಿರ ರೂಪಾಯಿ ನೋಟಾಗಿ ಬದಲಾಗಿದೆ. ಸುರಕ್ಷತೆಯ ದೃಷ್ಟಿಯಲ್ಲಿ ಹೀಗೆ ಮಾಡಲಾಗಿದೆ ಎಂದು ಆತ ತಿಳಿಸಿದ್ದಾನೆ. ಸೂಟ್​ಕೇಸ್​ ತುಂಬ ಕಪ್ಪು ಪೇಪರ್ ಮತ್ತು ಒಂದಿಷ್ಟು ಕೆಮಿಕಲ್ ಅನ್ನು ಆತ ದಂಪತಿಗೆ ಹಸ್ತಾಂತರಿಸಿದ್ದಾನೆ. 48 ಗಂಟೆಗಳ ನಂತರ ಕೆಮಿಕಲ್ ಸಿಂಪಡಿಸಿ, ನೋಟು ಮಾಡಿಕೊಳ್ಳಿ ಎಂದು ತಿಳಿಸಿದ್ದಾನೆ.

    48 ಗಂಟೆಗಳ ನಂತರ ಕೆಮಿಕಲ್ ಸಿಂಪಡಿಸಿದಾಗ ಪೇಪರ್​ ನೋಟಾಗಿ ಬದಲಾಗಿಲ್ಲ. ಗಾಬರಿಗೊಂಡ ದಂಪತಿ, ಆ ಮೊದಲು ಹಣ ಹಾಕಿದ್ದ ವ್ಯಕ್ತಿಗೆ ಕರೆ ಮಾಡಿದ್ದಾರೆ. ಆದರೆ ಆತನ ನಂಬರಿಗೆ ಕರೆ ಹೋಗಿಲ್ಲ. ತಾವು ಮೋಸ ಹೋದ ವಿಚಾರ ತಿಳಿದ ನಂತರ ಅವರು ಪೊಲೀಸರ ಮೊರೆ ಹೋಗಿದ್ದಾರೆ. (ಏಜೆನ್ಸೀಸ್)

    ಕಾಂಗ್ರೆಸ್ ಪಕ್ಷದ ಮುಂದಿನ ಅಧ್ಯಕ್ಷ ಕಮಲ್​ನಾಥ್? ಕುತೂಹಲ ಮೂಡಿಸಿದ ಭೇಟಿ

    ಈ ನೋಟು ನಿಮ್ಮ ಬಳಿ ಇದ್ದರೆ ನಿಮಗೂ ಸಿಗಬಹುದು 3 ಲಕ್ಷ ರೂಪಾಯಿ!

    ವೇದಿಕೆಯಲ್ಲಿ ವಧು ಪಕ್ಕವಿರುವಾಗಲೇ ನಿದ್ರೆಗೆ ಜಾರಿದ ವರ! ಈ ವಿಡಿಯೋ ನೋಡಿದರೆ ನೀವೂ ನಗುತ್ತೀರ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts