More

    ಸಮಾಜಸೇವೆಯಿಂದ ದೇಶ ಸದೃಢ

    ಬಾಳೆಹೊನ್ನೂರು: ಸಂಘ-ಸಂಸ್ಥೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಿ ಸೇವೆ ಸಲ್ಲಿಸಬೇಕು ಎಂದು ರೋಟರಿ ಜಿಲ್ಲಾ ಗವರ್ನರ್ ಬಿ.ಸಿ.ಗೀತಾ ಹೇಳಿದರು.
    ಪಟ್ಟಣದ ರೋಟರಿ ಕ್ಲಬ್ ಬುಧವಾರ ಆಯೋಜಿಸಿದ್ದ ಜಿಲ್ಲಾ ಗವರ್ನರ್ ಅವರ ಅಧಿಕೃತ ಭೇಟಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಂಘಗಳು ಸಾಮಾನ್ಯವರ್ಗದವರನ್ನು ಗಮನದಲ್ಲಿರಿಸಿಕೊಂಡು ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸಬೇಕಿದೆ. ಎಲ್ಲರೂ ಒಗ್ಗಟ್ಟಿನ ಮೂಲಕ ಸಂಸ್ಥೆಯನ್ನು ನಡೆಸಿದರೆ ಯಶಸ್ವಿಯಾಗಲು ಸಾಧ್ಯ ಎಂದರು.
    ಬಾಳೆಹೊನ್ನೂರು ರೋಟರಿ ಸಂಸ್ಥೆ ಪ್ರಸ್ತುತ ವರ್ಷ 54 ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ್ದು ಜಿಲ್ಲಾ ಯೋಜನೆಗಳಾದ ಮೌಲ್ಯಾಧಾರಿತ ಶಿಕ್ಷಣ, ರಸ್ತೆ ಸುರಕ್ಷತೆ ಕಾರ್ಯಾಗಾರ, ಮಣ್ಣು ಸಂರಕ್ಷಣೆ ಕುರಿತ ಕಾರ್ಯಕ್ರಮಗಳನ್ನು ಜನರಿಗೆ ತಲುಪುವಂತೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದೆ. ಮುಂದಿನ ದಿನಗಳಲ್ಲೂ ಈ ಯೋಜನೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸಬೇಕು ಎಂದು ತಿಳಿಸಿದರು.
    ಸನ್ಮಾನ ಸ್ವೀಕರಿಸಿ ಮಾತನಾಡಿದ ಆದಿಚುಂಚನಗಿರಿ ವಿವಿ ಕುಲಸಚಿವ ಡಾ. ಸಿ.ಕೆ.ಸುಬ್ಬರಾಯ, ರೋಟರಿ ಸಂಸ್ಥೆ ಪೋಲಿಯೋ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಪಟ್ಟಣದಲ್ಲಿ ಡಯಾಲಿಸಿಸ್ ಕೇಂದ್ರದ ಮೂಲಕ ಉತ್ತಮ ಸೇವೆ ನೀಡಿದೆ. ತಂತ್ರಜ್ಞಾನ ಇಂದು ಎಲ್ಲ ಕ್ಷೇತ್ರದಲ್ಲೂ ಹಾಸುಹೊಕ್ಕಾಗಿದ್ದು ತಂತ್ರಜ್ಞಾನದಿಂದ ಕೆಲಸ ಕಡಿಮೆಯಾಗಿಲ್ಲ. ಆದರೆ ಕೆಲಸದ ಸ್ವರೂಪ ಬದಲಾವಣೆಯಾಗಿದೆ. ಮುಂದಿನ ದಿನಗಳಲ್ಲಿ ಯಂತ್ರೋಪಕರಣ ಇಲ್ಲದೆ ಕೆಲಸವೇ ಇಲ್ಲ ಎಂಬಂತಾಗಿದೆ. ಭಗವಂತ ನಮ್ಮನ್ನು ಸೃಷ್ಟಿ ಮಾಡಿರುವುದು ಕೆಟ್ಟ ಕೆಲಸ ಮಾಡಿ ಎಂದಲ್ಲ. ಒಳ್ಳೆಯ ಕೆಲಸ ಮಾಡಲು ನಮ್ಮ ಜೀವ ಸೃಷ್ಟಿಯಾಗಿದೆ. ಮುಂದಿನ ಪೀಳಿಗೆಯ ಬಗ್ಗೆ ಚಿಂತನೆ ಮಾಡಿದರೆ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
    ಮಕ್ಕಳ ತಜ್ಞ ಡಾ. ಎಂ.ಬಿ.ರಮೇಶ್ ಸಂಪಾದಕತ್ವದಲ್ಲಿ ಮೂಡಿಬಂದ ತಾಯಿ ಮಕ್ಕಳ ಆರೋಗ್ಯದ ಕುರಿತ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ರೋಟರಿ ಕ್ಲಬ್ ಅಧ್ಯಕ್ಷ ಎ.ಆರ್.ಸುರೇಂದ್ರ, ಅಸಿಸ್ಟೆಂಟ್ ಗವರ್ನರ್ ಜೆ.ಎಂ.ಶ್ರೀಹರ್ಷ, ವಲಯ ಸೇನಾನಿ ಕಿರಣ್ ಶೆಟ್ಟಿ, ಕಾರ್ಯದರ್ಶಿ ಯಶವಂತ, ಸದಸ್ಯರಾದ ಗೋವಿಂದೇಗೌಡ, ಸತೀಶ್ ಅರಳೀಕೊಪ್ಪ, ಸಿ.ವಿ.ಸುನೀಲ್, ಸಿ.ಪಿ.ರಮೇಶ್, ವೆಂಕಟೇಶ್ ಭಟ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts