More

    ಭೂಮಿ ಪೂಜೆ ಹೆಸರಲ್ಲೇ ಭ್ರಷ್ಟಾಚಾರ ಶುರು ; ಲಂಚಾವತಾರಕ್ಕೆ ಗುತ್ತಿಗೆದಾರರು ಹೈರಾಣ

    ತುಮಕೂರು : ಜಿಲ್ಲೆಯಲ್ಲಿ ವಿವಿಧ ಇಲಾಖೆ ವತಿಯಿಂದ ನಡೆಯುತ್ತಿರುವ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಳಪೆ ಕಾಮಗಾರಿಗಳು ಅಭಿವೃದ್ಧಿಗೆ ಕಂಟಕವಾಗುತ್ತಿವೆ ಎಂಬ ದೂರು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿದೆ.

    ಸಣ್ಣ ನೀರಾವರಿ, ಲೋಕೋಪಯೋಗಿ, ಜಿಪಂ, ಹೇಮಾವತಿ, ಎತ್ತಿನಹೊಳೆ, ಭದ್ರಾ ಮೇಲ್ದಂಡೆ, ರಾಷ್ಟ್ರೀಯ ಹೆದ್ದಾರಿ ಸೇರಿ ಎಲ್ಲ ಪ್ರಮುಖ ಇಲಾಖೆಯಲ್ಲಿ ಕೆಲಸ ಮಾಡಲು ಸಣ್ಣ-ಪುಟ್ಟ ಗುತ್ತಿಗೆದಾರರು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಟೆಂಡರ್ ಪಡೆಯುವಾಗಲೇ ಆರಂಭವಾಗುವ ಲಂಚಾವತಾರ, ಬಿಲ್ ಪಡೆದು, ಡಿರೆನ್ಸ್ ನಿಧಿ ಪಡೆಯುವರೆಗೂ ನೀಡಬೇಕಾಗಿರುವುದು ಭಯದ ವಾತಾವರಣ ಹೆಚ್ಚಿಸಿದೆ.

    ಭೂಮಿ ಪೂಜೆ ಹೆಸರಿನಲ್ಲಿ ಸಾವಿರಾರು ರೂ. ವೆಚ್ಚದಲ್ಲಿ ಕಾರ್ಯಕ್ರಮ ಮಾಡಲಾಗುತ್ತಿದ್ದು ಇಲ್ಲಿಂದಲೇ ಭ್ರಷ್ಟಾಚಾರ ಆರಂಭವಾಗುತ್ತಿದೆ ಎನ್ನಲಾಗಿದೆ, ಹಣ ನೀಡದ ಗುತ್ತಿಗೆದಾರರಿಗೆ ಕೆಲಸ ಆರಂಭಿಸಲು ಅವಕಾಶವನ್ನೇ ನೀಡದ ಆಯಾ ಇಲಾಖೆ ಇಂಜಿನಿಯರ್‌ಗಳು ಜನಪ್ರತಿನಿಧಿಗಳನ್ನು ಒಲಿಸಿಕೊಳ್ಳಲು ಲಂಚದ ವ್ಯವಹಾರದಲ್ಲಿ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಾರೆ ಎಂಬ ದೂರಿದೆ.

    ಸಾಲ ಮಾಡಿ ವಾಹನಗಳು, ಕಾರ್ಮಿಕರನ್ನು ಹೊಂದಿರುವ ಗುತ್ತಿಗೆದಾರರು ಕೆಲಸದ ಅನಿವಾರ್ಯತೆಯಿಂದಾಗಿ ಅಂದಾಜು ಪಟ್ಟಿಗಿಂತ ಕಡಿಮೆ ದರಕ್ಕೆ ಟೆಂಡರ್‌ನಲ್ಲಿ ಭಾಗವಹಿಸಿ ಕೆಲಸ ಪಡೆದು ಅಗ್ರಿಮೆಂಟ್ ಮಾಡಿಸುವಾಗಲೇ ಲಂಚದ ವ್ಯವಹಾರ ಆರಂಭಿಸುತ್ತಾರೆ, ಜಿಲ್ಲೆಯಲ್ಲಿ ಲಂಚಾವತಾರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟ ಕುಸಿದಿದೆ ಎಂಬ ದೂರಿದೆ.

    ತುಮಕೂರು ಸಣ್ಣ ನೀರಾವರಿ ವಿಭಾಗದಲ್ಲಿ ಕೆಲಸ ಮಾಡುವ ಗುತ್ತಿಗೆದಾರರೊಬ್ಬರ ಪ್ರಕಾರ, ಒಂದು ಕಾಮಗಾರಿ ಗುತ್ತಿಗೆ ಪಡೆದು ಅದರ ಅಗ್ರಿಮೆಂಟ್‌ಗೆ ಶೇ.1, ಕಾಮಗಾರಿ ಪೂರ್ಣಗೊಂಡರೆ ಸೈಟ್ ಇಂಜಿನಿಯರ್‌ಗೆ ಶೇ.5, ಎಇಇಗೆ ಶೇ.3, ಕಾರ್ಯನಿರ್ವಾಹಕ ಇಂಜಿನಿಯರ್‌ಗೆ ಶೇ.5, ಅಕೌಂಟ್ಸ್‌ನಲ್ಲಿ ಶೇ.1, ಕ್ವಾಲಿಟಿ ಇಂಜಿನಿಯರ್ ಶೇ.1 ಹಾಗೂ ಇತ್ತೀಚೆಗೆ ಸೀನಿಯಾರಿಟಿ ಉಲ್ಲಂಸಿ ಕೂಡಲೇ ಬಿಲ್ ಮಾಡಿಸಿಕೊಳ್ಳಲು ಎಲ್‌ಒಸಿಗೆ ಬರೋಬ್ಬರಿ ಶೇ.12 ಹೀಗೆ.. ಒಟ್ಟು ಶೇ.25ಕ್ಕೂ ಹೆಚ್ಚು ಹಣ ಲಂಚವಾಗಿಯೇ ನೀಡುವ ಅನಿವಾರ್ಯತೆಯನ್ನು ಅಧಿಕಾರಿಗಳು ಸೃಷ್ಟಿಸಿದ್ದು ಗುತ್ತಿಗೆದಾರರು ಹೈರಾಣರಾಗಿದ್ದಾರೆ.

    ಜಿಲ್ಲಾಡಳಿತ ಪಾರದರ್ಶಕವಾಗಿದೆಯಾ..? : ಸಿವಿಲ್ ಕಾಮಗಾರಿ ನಡೆಸುವ ಎಲ್ಲ ಇಲಾಖೆಗಳಲ್ಲಿಯೂ ಭ್ರಷ್ಟಾಚಾರ ಹೆಚ್ಚಾಗಿದೆ, ಟೆಂಡರ್ ಹಾಕಿಯೇ ಕೆಲಸ ಪಡೆಯುತ್ತಿದ್ದಾರೆಯಾದರೂ ಕೆಲವೇ ಕೆಲವು ಜನರು ಕಾಮಗಾರಿ ಅಂದಾಜು ಮೊತ್ತಕ್ಕಿಂತ ಹೆಚ್ಚಿನ ದರಕ್ಕೆ ಬೆರಳೆಣಿಕೆಯಷ್ಟು ಗುತ್ತಿಗೆದಾರರು ಕೆಲಸಗಳನ್ನು ಪಡೆಯುತ್ತಿರುವುದು ಅಚ್ಚರಿ ಮೂಡಿಸಿದೆ. ರಾಜ್ಯ ಪಾರದರ್ಶಕ ಕಾಯ್ದೆ ಒಪ್ಪಿಕೊಂಡಿದ್ದರೂ ಅಧಿಕಾರಿಗಳು ಬೇಕಾದಂತೆ ಅದನ್ನು ಬದಲಾಯಿಸುತ್ತಿದ್ದರೂ ಕೇಳುವವರಿಲ್ಲದಂತಾಗಿದೆ. ಈ ಬಗ್ಗೆ ವಿರೋಧ ಪಕ್ಷದಲ್ಲಿದ್ದಾಗ ವಿಧಾನಸಭೆಯಲ್ಲಿ ಮಾತನಾಡಿ ಗಮನ ಸೆಳೆದಿದ್ದ ಜೆ.ಸಿ.ಮಾಧುಸ್ವಾಮಿ ಅವರೇ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಈಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ ಇಲಾಖೆಗಳಲ್ಲಿ ಭ್ರಷ್ಟಾಚಾರ ಕಡಿಮೆಯಾಗದಿರುವುದು ಆತಂಕ ಮೂಡಿಸಿದೆ.

    ಕಾಮಗಾರಿ ಕಳಪೆಗೆ ಹಣ ವಸೂಲಿಯೇ ಕಾರಣ : ಟೆಂಡರ್‌ನಲ್ಲಿ ಭಾಗವಹಿಸಿ ಪಡೆದ ಸರ್ಕಾರದ ಕಾಮಗಾರಿ ಆರಂಭಿಸಲು ಸ್ಥಳೀಯ ಶಾಸಕರನ್ನು ಭೇಟಿ ಮಾಡಿ ಭೂಮಿ ಪೂಜೆ ಮಾಡಲೇಬೇಕು ಎಂಬ ಹೊಸ ಶಿಷ್ಟಾಚಾರ ಜಿಲ್ಲೆಯಲ್ಲಿ ಆರಂಭವಾಗಿದೆ. ಈ ಗುದ್ದಲಿಪೂಜೆ ಮಾಡುವವರೆಗೂ ಕೆಲಸ ಆರಂಭಿಸಲು ಇಂಜಿನಿಯರ್‌ಗಳು ಒಪ್ಪುವುದಿಲ್ಲ, ಈ ಭೂಮಿ ಪೂಜೆ ಹೆಸರಿನಲ್ಲಿ ಜನಪ್ರತಿನಿಧಿಗಳ ಹೆಸರಿನಲ್ಲಿ ಅಧಿಕಾರಿಗಳು ಹಣ ವಸೂಲಿ ಮಾಡುತ್ತಿರುವುದು ಕಾಮಗಾರಿ ಕಳಪೆಗೆ ಒಂದು ಕಾರಣವಾಗಿದೆ. ಕಾಮಗಾರಿ ಆರಂಭಿಸಲು ಸ್ಥಳೀಯ ಜನಪ್ರತಿನಿಧಿಗೆ ಗುತ್ತಿಗೆದಾರರಿಂದ ಲಂಚ ಪಡೆಯಲಾಗುತ್ತಿದೆ ಎಂಬ ದೂರಿದ್ದು ಇದರ ಪ್ರಮಾಣ ಕ್ಷೇತ್ರದಿಂದ ಕ್ಷೇತ್ರಕ್ಕೆ ವ್ಯತ್ಯಾಸವಿದೆ. ಕೆಲವು ಕ್ಷೇತ್ರದಲ್ಲಿ ಶೇ.2 ಇದೆ, ಇನ್ನೂ ಕೆಲವು ಕ್ಷೇತ್ರದಲ್ಲಿ ಶೇ.7 ಹಣ ಕೇಳಿ ಪಡೆಯುತ್ತಿರುವುದು ಗುತ್ತಿಗೆದಾರರಿಗೆ ನುಂಗಲಾರದ ತುತ್ತಾಗಿದೆ. ಕೆಲವು ಜನಪ್ರತಿನಿಧಿಗಳು 50 ಲಕ್ಷ ರೂ. ಒಳಗಿನ ಕಾಮಗಾರಿಗಳಿಗೆ ಹಣ ಪಡೆಯದಿದ್ದರೂ ಬಹುತೇಕರು 5 ಲಕ್ಷದ ಕಾಮಗಾರಿಗೂ ಹಿಂಸೆ ಮಾಡಿ ಹಣ ಪಡೆಯುತ್ತಿರುವುದು ಜಿಲ್ಲೆಯಲ್ಲಿ ಇತ್ತೀಚೆಗೆ ಹೆಚ್ಚಾಗಿದೆ ಎಂಬ ದೂರು ಗುತ್ತಿಗೆದಾರರ ವಲಯದಲ್ಲಿದೆ.

    ಕಾನೂನು ಪ್ರಕಾರವೇ ಗುತ್ತಿಗೆ ಪಡೆದರೂ ಅದನ್ನು ಆರಂಭಿಸಲು ನೂರೆಂಟು ಅಡ್ಡಿ, ಆತಂಕ. ಗುತ್ತಿಗೆ ಒಪ್ಪಂದದಿಂದ ಆರಂಭವಾಗುವ ಅಧಿಕಾರಿಗಳ ಹಣ ದಾಹ, ಕೆಲಸ ಮುಗಿಸಿ, ಬಿಲ್ ತೆಗೆದುಕೊಳ್ಳುವವರೆಗೂ ಸಾಗುತ್ತದೆ, ಇತ್ತೀಚೆಗೆ ಭೂಮಿ ಪೂಜೆ ಎಂಬ ಹೊಸ ಶಿಷ್ಟಾಚಾರ ಎಲ್ಲ ತಾಲೂಕುಗಳಲ್ಲಿಯೂ ಆರಂಭಿಸಿದ್ದು ಜನಪ್ರತಿನಿಧಿಗಳ ಹೆಸರಿನಲ್ಲಿ ಕನಿಷ್ಠ ಶೇ.5 ಹಣ ವಸೂಲಿ ಮಾಡುತ್ತಾರೆ, ಕಾರ್ಯಕ್ರಮಕ್ಕೂ ಹಣ ಖರ್ಚು ಮಾಡಿಸುತ್ತಾರೆ, ಗುತ್ತಿಗೆದಾರರನ್ನು ಇಂಜಿನಿಯರ್‌ಗಳು ಜಿಗಣೆಗಳಂತೆ ಹೀರುತ್ತಿದ್ದಾರೆ.
    ಹೆಸರು ಹೇಳಲು ಇಚ್ಛಿಸದ ಗುತ್ತಿಗೆದಾರ ತುಮಕೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts