More

    ಕೇವಲ 1.5 ಕಿಮೀ ರಸ್ತೆಗೆ 6 ಕೋಟಿಗೂ ಅಧಿಕ ವೆಚ್ಚ, ಅಂದಾಜು ಮೊತ್ತ ಹೆಚ್ಚಿಸಿ ಭ್ರಷ್ಟಾಚಾರ?

    ಪರಶುರಾಮ ಭಾಸಗಿ ವಿಜಯಪುರ

    ಕೇವಲ 1.5 ಕಿಮೀ ರಸ್ತೆ ನಿರ್ಮಾಣಕ್ಕೆ 6.50 ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿ ಕೈಗೊಂಡಿರುವುದು ಒಂದೆಡೆಯಾದರೆ ಇನ್ನೊಂದೆಡೆ 5 ಕೋಟಿ ರೂ.ವೆಚ್ಚದಲ್ಲಿ ಕೈಗೊಂಡಿರುವ ರಸ್ತೆ ಕಾಮಗಾರಿಯೂ ಕಳಪೆಯಾಗಿದ್ದು ಹಣ ದುರುಪಯೋಗದ ಆರೋಪ ಕೇಳಿ ಬಂದಿದೆ.

    ಮುದ್ದೇಬಿಹಾಳ ಪಟ್ಟಣದ ಇಂದಿರಾ ವೃತ್ತದಿಂದ ನಾಲತವಾಡ ರಸ್ತೆವರೆಗಿನ ಕೇವಲ ಕೇವಲ 1.5 ಕಿಮೀ ರಸ್ತೆ ನಿರ್ಮಾಣಕ್ಕೆ 6.50 ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಇದರಲ್ಲಿ ಹಣ ದುರುಪಯೋಗವಾಗಿದೆ ಮತ್ತು ಕಾಮಗಾರಿಯೂ ಕಳಪೆಯಾಗಿದೆ ಎಂಬ ಆರೋಪವಿದ್ದು, ಈ ಬಗ್ಗೆ ಶಾಸಕ ಸಿ.ಎಸ್. ನಾಡಗೌಡರು ಸದನದಲ್ಲಿ ಲೋಕೋಪಯೋಗಿ ಸಚಿವರ ಗಮನ ಸೆಳೆದಿದ್ದಾರೆ.

    ಅಲ್ಲದೇ, ಬಸವೇಶ್ವರ ವೃತ್ತ ಮತ್ತು ಇಂದಿರಾ ವೃತ್ತ ಬಜಾರ ಮುಖ್ಯ ರಸ್ತೆಗೆ ಇಲಾಖೆಯ ಪ್ಲಾನಿಂಗ್ ಆಂಡ್ ರೋಡ್ ಅಸೆಟ್ ಮ್ಯಾನೇಜ್‌ಮೆಂಟ್ ಸೆಂಟರ್ (ಪಿಆರ್‌ಎಎಂಸಿ) ಅನುದಾನದಲ್ಲಿ 5 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ಮಾಡಲಾಗಿದ್ದು, ಈ ಕಾಮಗಾರಿ ಕಳಪೆಯಾಗಿದೆ. ಹಣ ದುರುಪಯೋಗವಾಗಿದೆ ಎಂದು ನಾಡಗೌಡರು ತಿಳಿಸಿದ್ದಾರೆ.

    ಇಂದಿರಾ ವೃತ್ತ-ನಾಲತವಾಡ ರಸ್ತೆ ವಿವರ

    ಮುದ್ದೇಬಿಹಾಳ ತಾಲೂಕಿನ ಶಿರಾಡೋಣ ಲಿಂಗಸೂರ ರಾಷ್ಟ್ರೀಯ ಹೆದ್ದಾರಿ -41 ರಸ್ತೆಯ ಕಿಮೀ 147.60ರಿಂದ 148.50ರವರೆಗೆ (ಇಂದಿರಾ ವೃತ್ತ-ನಾಲತವಾಡ ರಸ್ತೆ ) ರಸ್ತೆ ಸುಧಾರಣೆ ಕಾಮಗಾರಿಯ ಅಂದಾಜು ಮೊತ್ತ 650.00 ಲಕ್ಷ ಇದ್ದು, ಗುತ್ತಿಗೆದಾರ ಆರ್.ಬಿ. ಪಾಟೀಲ ಎಂಬುವವರಿಗೆ 538.27 ಲಕ್ಷಕ್ಕೆ ಟೆಂಡರ್ ಆಗಿದೆ. 2022 ಆ.29ರಂದು ಕಾಮಗಾರಿ ಆರಂಭಿಸಲಾಗಿದ್ದು, 9 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಅಂದರೆ, 2023 ಮೇ 28ಕ್ಕೆ ಮುಗಿಯಬೇಕಿದ್ದ ಕಾಮಗಾರಿ ಈವರೆಗೂ ಮುಕ್ತಾಯಗೊಂಡಿಲ್ಲ.

    ಚತುಷ್ಪಥ ರಸ್ತೆ ನಿರ್ಮಿಸಿ ಎರಡೂ ಬದಿಗೆ ಆರ್‌ಸಿಸಿ ಚರಂಡಿ ನಿರ್ಮಾಣ, ಜೊತೆಗೆ ಅಲಂಕಾರಿಕ ಬೀದಿ ದೀಪ ಅಳವಡಿಸುವುದು ಸೇರಿದಂತೆ ವೆಟ್‌ಮಿಕ್ಸ್‌ವರೆಗೆ ಕಾಮಗಾರಿ ಮುಗಿದಿದೆ. ಇನ್ನೂ ಕಾಮಗಾರಿ ಪ್ರಗತಿಯಲ್ಲಿದ್ದು, 2023 ಸೆಪ್ಟಂಬರ್‌ವೊಳಗೆ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಬಜಾರ ಮುಖ್ಯರಸ್ತೆ

    ಬಸವೇಶ್ವರ ವೃತ್ತ ಮತ್ತು ಇಂದಿರಾ ವೃತ್ತ ಬಜಾರ ಮುಖ್ಯ ರಸ್ತೆ ಸುಧಾರಣೆ ಕಾಮಗಾರಿ ಈಗಾಗಲೇ ಮುಕ್ತಾಯಗೊಂಡಿದೆಯಾದರೂ ಕಳಪೆ ಮತ್ತು ಹಣ ದುರುಪಯೋಗದ ಆರೋಪ ಕೇಳಿ ಬಂದಿದೆ. ಅಂದಾಜು 500.00 ಲಕ್ಷ ರೂ.ಮೊತ್ತದ ಈ ಯೋಜನೆ 433.10 ಲಕ್ಷ ರೂ.ಗಳಿಗೆ ಬಸವರಾಜ ಬಿರಾದಾರ ಎಂಬುವರಿಗೆ ಟೆಂಡರ್ ಆಗಿದೆ. 2022 ಫೆ.17ರಂದು ಆರಂಭಗೊಂಡ ಈ ಕಾಮಗಾರಿ 2022 ನ. 17 ಕ್ಕೆ ಮುಕ್ತಾಯಗೊಂಡಿದೆ. 12 ಮೀಟರ್ ಅಗಲದ ಡಾಂಬರೀಕರಣ ಕಾಮಗಾರಿ ಕೈಗೊಳ್ಳಲಾಗಿದೆ. ವಿವಿಧ ವೃತ್ತಗಳು, ಸೂಚನಾ ಫಲಕಗಳು, ಬೀದಿ ದೀಪ ಹೀಗೆ ವಿವಿಧ ಕಾಮಗಾರಿಗಳೊಂದಿಗೆ ಯೋಜನೆ ಪೂರ್ಣಗೊಂಡಿದೆ. ಆದರೆ, ಪ್ರಕರಣದಲ್ಲಿ ಅಂದಾಜು ಮೊತ್ತ ಹೆಚ್ಚಿಸಿ ಶೇ.40 ಕಮೀಷನ್ ಹೊಡೆದರಾ? ಎಂಬ ಪ್ರಶ್ನೆ ಎದುರಾಗಿದ್ದು ಈ ಬಗ್ಗೆ ತನಿಖೆಗೆ ಒತ್ತಾಯ ಕೇಳಿ ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts