More

    ಶಕ್ತಿಸೌಧದಲ್ಲೇ ತುಂಡುಗುತ್ತಿಗೆ!; ರಾಜಭವನ ವಿದ್ಯುತ್ ಕಾಮಗಾರಿಯಲ್ಲೂ ಅಧಿಕಾರಿಗಳ ಕೈಚಳಕ..

    | ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

    ನಿಯಮ-ನಿಬಂಧನೆಗಳಿರುವುದು ಜನಸಾಮಾನ್ಯರಿಗೆ ಮಾತ್ರವೇ ಹೊರತು, ಶಕ್ತಿಕೇಂದ್ರದ ಪ್ರಭಾವಿಗಳಿಗಲ್ಲ ಎಂಬ ಮಾತಿಗೆ ಮತ್ತೊಂದು ನಿದರ್ಶನ ಇಲ್ಲಿದೆ. ತುಂಡುಗುತ್ತಿಗೆ ನಡೆಸಬಾರದೆಂದು ಸರ್ಕಾರದ ಆದೇಶವೇ ಇದ್ದರೂ, ರಾಜಭವನ, ವಿಧಾನಸೌಧ, ವಿಕಾಸ ಸೌಧ, ವಿಶ್ವೇಶ್ವರಯ್ಯ ಗೋಪುರ ಹಾಗೂ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಸಲಾಗಿರುವ ವಿದ್ಯುತ್ ಕಾಮಗಾರಿಗಳಲ್ಲಿ ಸರ್ಕಾರದ ನಿಯಮ ಬದಿಗೊತ್ತಿ ತುಂಡುಗುತ್ತಿಗೆ ನೀಡಿರುವುದು ಬೆಳಕಿಗೆ ಬಂದಿದೆ.

    ಆಡಳಿತ ಶಕ್ತಿ ಕೇಂದ್ರವಾಗಿರುವ ಈ ಪ್ರಮುಖ ಕಟ್ಟಡಗಳಲ್ಲಿ 2021-22ನೇ ಸಾಲಿನಲ್ಲಿ ವಿವಿಧ ಎಲೆಕ್ಟ್ರಿಕಲ್ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆ ಮಾಡಿಸಿದೆ. ಹೀಗೆ ಜವಾಬ್ದಾರಿ ತೆಗೆದುಕೊಂಡ ಇಲಾಖೆ ಸರ್ಕಾರವೇ ಹಾಕಿದ ನಿಯಮಗಳನ್ನೇ ಪಾಲಿಸದಿರುವುದು ಸ್ಪಷ್ಟವಾಗಿದೆ.

    ಅನುದಾನ ಬಿಡುಗಡೆ ಸಂದರ್ಭ ದಲ್ಲಿ ‘ಅನುಮೋದನೆ ಗೊಂಡ ಕಾಮಗಾರಿ ಗಳು ಒಂದೇ ಕಟ್ಟಡ ಅಥವಾ ಕಟ್ಟಡದ ಸಂಕೀರ್ಣದಲ್ಲಿದ್ದರೆ ಅಂತಹ ಕಾಮಗಾರಿಗಳನ್ನು ಕ್ರೋಡೀಕರಿಸಿ ಕೆಟಿಟಿಪಿ ನಿಯಮಗಳನ್ವಯ ಗುತ್ತಿಗೆ ಕರೆದು ಕ್ರಮವಹಿಸುವುದು’ ಎಂದು ಷರತ್ತು ವಿಧಿಸಲಾಗಿದೆ. ಆದರೆ, ವಿಜಯವಾಣಿಗೆ ಲಭ್ಯವಾದ ದಾಖಲೆಗಳ ಪ್ರಕಾರ ರಾಜಭವನ, ವಿಧಾನಸೌಧ, ವಿಕಾಸ ಸೌಧ, ವಿಶ್ವೇಶ್ವರಯ್ಯ ಗೋಪುರ, ಬೆಳಗಾವಿಯ ಸುವರ್ಣಸೌಧದ ವಿವಿಧ ಕೆಲಸಗಳನ್ನು ಪ್ರತ್ಯೇಕವಾಗಿಸಿ ಟೆಂಡರ್ ಮೊತ್ತ ಐದು ಲಕ್ಷ ರೂ. ಒಳಗೆ ಬರುವಂತೆ ಮಾಡಿ ಕೆಲಸ ಮಾಡಿಸಲಾಗಿದೆ.

    5 ಲಕ್ಷ ರೂ.ಗೂ ಹೆಚ್ಚಿನ ಕಾಮಗಾರಿಯಾದರೆ ಇ-ಪ್ರಕ್ಯೂರ್​ವೆುಂಟ್​ನಡಿ ನಿರ್ವಹಿಸಬೇಕಾಗುತ್ತದೆ. ಅದೇ ಕಾರಣಕ್ಕೆ ಒಂದೇ ಕಟ್ಟಡದ ವಿವಿಧ ಕಾಮಗಾರಿಗಳನ್ನು ವಿಭಜಿಸಿ, ಯಾವ ಕಾಮಗಾರಿಯೂ ಐದು ಲಕ್ಷ ರೂ.ಗಳಿಗೆ ಮೀರದಂತೆ ನೋಡಿಕೊಂಡು ಒಟ್ಟು 19 ಕೋಟಿ ರೂ. ಮೊತ್ತದ ಕೆಲಸ ಮಾಡಿಸಲಾಗಿದೆ.

    ಮ್ಯಾನ್ಯುಯಲ್ ಟೆಂಡರ್ ಕರೆದು ತಮಗಿಷ್ಟ ಬಂದ ಗುತ್ತಿಗೆದಾರರಿಗೆ ಹಂಚಿಕೆ ಮಾಡಿರುವ ಶಂಕೆ ವ್ಯಕ್ತವಾದ ಹಿನ್ನೆಲೆ ಈ ರೀತಿ ಟೆಂಡರ್ ಕರೆಯದೇ ಪ್ಯಾಕೇಜ್ ಟೆಂಡರ್ ಮಾಡಬೇಕೆಂದು ಒತ್ತಾಯ ಸಹಿತ ದೂರು ಆರಂಭದಲ್ಲೇ ಲೋಕೋಪಯೋಗಿ ಇಲಾಖೆಗೆ ಸಲ್ಲಿಕೆಯಾಗಿತ್ತು. ಇನ್ನು ಕೆಲವು ಕಾಮಗಾರಿಗಳನ್ನು ವಿಭಜಿಸಿ ಪ್ರತ್ಯೇಕ ಕಾಮಗಾರಿ ಮಾಡಿಸಿಕೊಂಡಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

    ಕಾಮಗಾರಿ ಪಟ್ಟಿಯಲ್ಲಿಯೇ ಒಂದೇ ಕೆಲಸ ಪುನರಾವರ್ತನೆ ಆಗಿದ್ದಲ್ಲಿ ಮತ್ತು ಕಳೆದ ಮೂರು ಸಾಲಿನಲ್ಲಿ ಕಾಮಗಾರಿ ಮಾಡಿದ್ದು ಈ ವರ್ಷದಲ್ಲಿ ಪುನರಾವರ್ತನೆಯಾಗಿದ್ದಲ್ಲಿ ಈ ಸಾಲಿನಲ್ಲಿ ಕೈಬಿಡುವುದು, ತಪ್ಪಿದಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಹೊಣೆ ಎಂದು ಷರತ್ತು ಹಾಕಲಾಗಿದೆ. ಈ ಷರತ್ತೂ ಸಹ ಉಲ್ಲಂಘನೆಯಾಗಿದೆ.

    ಸರ್ಕಾರದ ಆದೇಶವೇನಿದೆ?: ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪಾರದರ್ಶಕ ಅಧಿನಿಯಮ ಮತ್ತು ನಿಯಮಗಳ ಅನ್ವಯ ಹಾಗೂ ಸರ್ಕಾರದ ಅಧಿಸೂಚನೆ, ಆ ಪ್ರಕಾರ ಹೊರಡಿಸಲಾದ ಮಾರ್ಗಸೂಚಿಯಲ್ಲಿ ತುಂಡುಗುತ್ತಿಗೆ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಕಾಮಗಾರಿಗಳನ್ನು ವಿಭಜಿಸಿ ತುಂಡುಗುತ್ತಿಗೆ ಮೂಲಕ ನಿರ್ವಹಣೆ ಅವಕಾಶವನ್ನು ನೀಡದಂತೆ ದುರಸ್ತಿ ಕಾಮಗಾರಿಗಳನ್ನು ನಿರ್ವಹಿಸಬೇಕು. ತುಂಡುಗುತ್ತಿಗೆ ಆಧಾರದಲ್ಲಿ ನಿರ್ವಹಿಸಿದಲ್ಲಿ ಸಂಬಂಧಿಸಿದ ಅಧಿಕಾರಿ ಅಥವಾ ಇಂಜಿನಿಯರ್​ಗಳನ್ನೇ ಹೊಣೆಗಾರರನ್ನಾಗಿಸಲಾಗುತ್ತದೆ ಎಂದು 2016 ಜೂ.25ರ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

    ಅನುಮಾನಾಸ್ಪದ ಕೆಲಸ: ಮೊತ್ತ ಐದು ಲಕ್ಷಕ್ಕಿಂತ ಹೆಚ್ಚಾದರೆ ಇ-ಪ್ರಕ್ಯೂರ್​ವೆುಂಟ್​ನಲ್ಲಿ ಟೆಂಡರ್ ಕರೆಯಬೇಕಾಗುತ್ತದೆ. ಹೀಗಾಗಿ ಸಾಕಷ್ಟು ಕಾಮಗಾರಿಗಳನ್ನು ಐದು ಲಕ್ಷದೊಳಗೆ ಬರುವಂತೆ ಮಾಡಲಾಗಿದೆ ಎಂಬುದಕ್ಕೆ ಈ ಸರಣಿಯಲ್ಲಿ ಹತ್ತಾರು ಕಾಮಗಾರಿಯ ಮೊತ್ತ 4.90-4.99 ಲಕ್ಷ ರೂ. ಒಳಗಿದೆ. ಯುಪಿಎಸ್ ದುರಸ್ತಿ 4.98 ಲಕ್ಷ ರೂ., ಅಸೆಂಬ್ಲಿಗೆ ರೆಸ್ಟ್​ರೂಂ ಎಲೆಕ್ಟ್ರಿಕ್ ರಿಪೇರಿ 4.98 ಲಕ್ಷ ರೂ., ಪ್ರತಿಪಕ್ಷ ಸಾಲು, ಮಾಧ್ಯಮ ಪ್ರೆಸ್ ಗ್ಯಾಲರಿಯಲ್ಲಿ ರೀ ವೈರಿಂಗ್ 4.98 ಲಕ್ಷ ರೂ…., ಇದೇ ರೀತಿ ಹಲವು ಉದಾಹರಣೆಗಳು ದೊರೆಯುತ್ತವೆ.

    ತುಂಡು ಗುತ್ತಿಗೆ ನಡೆಸಬಾರದೆಂದು ಸರ್ಕಾರವೇ ನಿಯಮ ಮಾಡಿದೆ. ಆ ಷರತ್ತು ಉಲ್ಲಂಘನೆಯಾಗಿದ್ದು, ಸೂಕ್ತ ತನಿಖೆ ನಡೆದರೆ ಅಕ್ರಮ ಬಯಲಾಗುವುದು ಖಚಿತ.

    | ಮರಿಲಿಂಗಗೌಡ ಮಾಲೀ ಪಾಟೀಲ್ ಆರ್​ಟಿಐ ಕಾರ್ಯಕರ್ತ

    ಪ್ರಧಾನಿ ಸ್ಯೂಟ್​ಗೆ 50 ಲಕ್ಷ ರೂ.!: ಐದು ವರ್ಷದಲ್ಲಿ ಒಂದೋ ಎರಡೋ ಬಾರಿ ಪ್ರಧಾನ ಮಂತ್ರಿಗಳು ರಾಜಭವನಕ್ಕೆ ಬಂದು ವಾಸ್ತವ್ಯ ಹೂಡುತ್ತಾರೆ. ಇವರಿಗಾಗಿಯೇ ಮೀಸಲಾದ ಒಂದು ವಿಶೇಷ ಕೊಠಡಿ ಇಲ್ಲಿದೆ. ಅದನ್ನು ನವೀಕರಿಸಲಾಗಿದ್ದು, ಅಲ್ಲಿಗೆ ಏರ್​ಕಂಡೀಷನ್ ಹಾಗೂ ಎಲೆಕ್ಟ್ರಿಕ್ ಇಂಪ್ರೂವ್​ವೆುಂಟ್ ಎಂದು ಸರ್ಕಾರ 50 ಲಕ್ಷ ರೂ. ವೆಚ್ಚ ಮಾಡಿದೆ. ಇದನ್ನು ಮಾತ್ರ ತುಂಡು ಗುತ್ತಿಗೆ ಮಾಡಿಲ್ಲ. ಆದರೆ, ಇಷ್ಟೊಂದು ವೆಚ್ಚದ ಅಗತ್ಯವಿದೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ.

    ರಾಜಭವನದಲ್ಲಿ ಎಲ್ಲವೂ 4.90 ಲಕ್ಷದ ಕಾಮಗಾರಿ!: ತುಂಡುಗುತ್ತಿಗೆ ಉದ್ದೇಶದಿಂದಲೇ ಕಾಮಗಾರಿಯನ್ನು ವಿಭಜಿಸಿರುವ ಅಧಿಕಾರಿಗಳು ರಾಜಭವನದಲ್ಲೂ ಕೈಚಳಕ ಮೆರೆದಿದ್ದಾರೆ. ಮೊದಲ ಮಹಡಿಯಲ್ಲಿ ಎಲೆಕ್ಟ್ರಿಕಲ್ ಫಿಟಿಂಗ್ಸ್ ಅಳವಡಿಕೆ- 4.96 ಲಕ್ಷ ರೂ., ರಾಜ್ಯಪಾಲರ ಆಪ್ತ ಸಹಾಯಕ ಅಧಿಕಾರಿಯ ಕ್ವಾರ್ಟರ್ಸ್ ಎಸಿ ಮತ್ತು ಎಲ್​ಟಿ ಪ್ಯಾನಲ್ ಬೋರ್ಡ್- 4.95 ಲಕ್ಷ ರೂ., ಇದಲ್ಲದೇ ಸಿಎಂ ರೇಸ್ ಕೋರ್ಸ್ ರಸ್ತೆಯ ನಿವಾಸದ ಬಳಿ ಹೆಚ್ಚುವರಿ ಬೀದಿ ದೀಪ ಅಳವಡಿಕೆಗೆ 4.99 ಲಕ್ಷ ರೂ., ವಸಂತನಗರ ವಸತಿಗೃಹದಲ್ಲಿ 4.98 ಮತ್ತು 4.98 ಲಕ್ಷ ರೂ.ಗಳ ಎರಡು ಪ್ರತ್ಯೇಕ ಕಾಮಗಾರಿ ನಿರ್ವಹಿಸಲಾಗಿದೆ.

    ಎಲ್ಲಿ, ಯಾವ ಕೆಲಸ?

    • ವಿಶ್ವೇಶ್ವರಯ್ಯ ಟವರ್ ಮುಖ್ಯ ಗೋಪುರ, ಚಿಕ್ಕ ಗೋಪುರ, ಪೋಡಿಯಂ ಬ್ಲಾಕ್​ನಲ್ಲಿ ಸುಟ್ಟುಹೋಗಿರುವ ಸೀಲಿಂಗ್ ಫ್ಯಾನ್, ರೆಗ್ಯುಲೇಟರ್ ಬದಲಾಯಿಸುವುದು.
    • ವಿಕಾಸ ಸೌಧದ ಸಿಸಿಟಿವಿ ನಿಯಂತ್ರಣ ಕೊಠಡಿಗೆ ನೆಟ್​ವರ್ಕ್ ಸ್ವಿಚ್ ಅಳವಡಿಕೆ, ಟಿವಿ ಮತ್ತು ಸ್ಟಾಂಡ್ ಹಾಗೂ ವೈರಿಂಗ್ ಕಾಮಗಾರಿ
    • ಮಂತ್ರಿಗಳ ಮನೆಗಳಲ್ಲಿ ಫ್ಯಾನ್ ಅಳವಡಿಕೆ, ವೈರಿಂಗ್ ಬದಲಾವಣೆಗೆಂದು ಖರ್ಚು ಮಾಡಿದ್ದು 36 ಲಕ್ಷ ರೂ.
    • ಬಹುಮಹಡಿ ಕಟ್ಟಡದ 5ನೇ ಹಂತದ ಪಕ್ಕದಲ್ಲಿ ನೂತನವಾಗಿ ನಿರ್ವಿುಸಿರುವ ಉದ್ಯಾನವನಕ್ಕೆ ಅಲಂಕೃತ ದೀಪಗಳಿಗೆ ನಿಯಂತ್ರಣ ಪ್ಯಾನಲ್ ಅಳವಡಿಕೆ.
    • ಸಚಿವಾಲಯ ತರಬೇತಿ ಕೇಂದ್ರದ ಹಳೇ ವೈರಿಂಗ್ ಬದಲಾಯಿಸಿ ಹೊಸ ವೈರಿಂಗ್ ಮಾಡುವುದು.
    • ಮಂತ್ರಿಗಳ ಕೊಠಡಿಗೆ, ಮುಖ್ಯಮಂತ್ರಿಗಳ ಸಲಹೆಗಾರರ ಕೊಠಡಿಗೆ ಎಲ್​ಇಡಿ ಅಳವಡಿಕೆ.
    • ಮುಖ್ಯಮಂತ್ರಿ ಕಚೇರಿ, ಮುಖ್ಯಕಾರ್ಯದರ್ಶಿ ಕಚೇರಿ, ಕ್ಯಾಬಿನೆಟ್ ಹಾಲ್​ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಪ್ಯಾನಲ್ ಅಳವಡಿಕೆ
    • ವಿಧಾನಸಭೆ, ವಿಧಾನ ಪರಿಷತ್ ಸಭಾಂಗಣದಲ್ಲಿ ಅಳವಡಿಸಿರುವ ಯುಪಿಎಸ್ ದುರಸ್ತಿ.
    • ಸಚಿವಾಲಯದ ವಿವಿಧ ಕೊಠಡಿಗಳ ದುರಸ್ತಿ ಕಾಮಗಾರಿ
    • ಸುವರ್ಣಸೌಧಕ್ಕೆ ಕಲರ್ ಬದಲಿಸುವ ಎಲ್​ಇಡಿ ಲೈಟ್ ಅಳವಡಿಕೆ, ಯುಪಿಎಸ್ ಬ್ಯಾಕಪ್ ಅಳವಡಿಕೆ
    • ವಿಧಾನಸಭೆಯ ಸಭಾಂಗಣದ ಪ್ರತಿಪಕ್ಷದ ಕಡೆ ಮೊದಲು ಎರಡು ಸಾಲು ಹಾಗೂ ಪ್ರೆಸ್ ಗ್ಯಾಲರಿಯ ರೀ ವೈರಿಂಗ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts