More

    ಒಬ್ಬ ಕರೊನಾ ಸೋಂಕಿತ ಮಹಿಳೆ ಮೃತಪಟ್ಟಿದ್ದಕ್ಕೆ 68 ವೈದ್ಯರು, ನರ್ಸ್‌ಗಳಿಗೆ ಕ್ವಾರಂಟೈನ್!

    ನವದೆಹಲಿ: ಇಲ್ಲಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕರೊನಾ ಶಂಕಿತ ಮಹಿಳೆಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಆ ಆಸ್ಪತ್ರೆಯ ವೈದ್ಯರು, ನರ್ಸ್‌ಗಳು ಸೇರಿ 68 ಸಿಬ್ಬಂದಿಯನ್ನು ಹೋಮ್ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

    ಗರ್ಭಿಣಿ ಮಹಿಳೆ ತಾನು ವಿದೇಶದಿಂದ ಮರಳಿದ್ದ ಹಾಗೂ ಹೋಮ್ ಕ್ವಾರಂಟೈನ್‌ಗೆ ಒಳಪಡಬೇಕು ಎಂಬ ನಿಯಮ ಉಲ್ಲಂಸಿರುವ ಬಗ್ಗೆ ಮಾಹಿತಿ ನೀಡದೇ ಈಶಾನ್ಯ ದೆಹಲಿಯ ಈ ಆಸ್ಪತ್ರೆಗೆ ದಾಖಲಾಗಿದ್ದಳು. ಬುಧವಾರ ಆಕೆಯ ಸ್ಥಿತಿ ಚಿಂತಾಜನಕವಾಗಿ, ವೆಂಟಿಲೇಟರ್‌ನಲ್ಲಿಡಲಾಗಿತ್ತು. ಕೊನೆಗೂ ಆಕೆ ಮೃತಪಟ್ಟಿದ್ದು, ಆಕೆಗೆ ಚಿಕಿತ್ಸೆ ನೀಡಿದ್ದ ಎಲ್ಲರೂ ಕ್ವಾರಂಟೈನ್‌ಗೆ ಒಳಪಡಬೇಕಾದ ಸ್ಥಿತಿ ಬಂದಿದೆ.

    ಭಾರತದಲ್ಲಿ 13 ಸಾವಿರ ಸೋಂಕು:
    ಈ ಮಧ್ಯೆ ದೇಶದಲ್ಲಿ ಕರೊನಾ ಮಹಾಮಾರಿಗೆ ಒಳಗಾಗುತ್ತಿರುವವರ ಸಂಖ್ಯೆ ದಿನೇದಿನೆ ಏರಿಕೆ ಕಾಣುತ್ತಿದ್ದು, ಸೋಂಕಿತರ ಸಂಖ್ಯೆ 13 ಸಾವಿರದ ಗಡಿ ಸಮೀಪಿಸುತ್ತಿದೆ. ಕಳೆದ 24 ತಾಸಿನಲ್ಲಿ 665 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಸೋಂಕಿತರ ಸಂಖ್ಯೆ 12,986ಕ್ಕೆ ಏರಿದೆ. ಜತೆಗೆ ಹೊಸದಾಗಿ 9 ಜನರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 429ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಮಾಹಿತಿ ನೀಡಿದ್ದಾರೆ.

    ಸದ್ಯ ದೇಶದಲ್ಲಿ 325 ಜಿಲ್ಲೆಗಳಲ್ಲಿ ಈವರೆಗೆ ಒಂದೂ ಕರೊನಾ ಪ್ರಕರಣ ವರದಿಯಾಗಿಲ್ಲ. ಒಟ್ಟು 10,909 ಸಕ್ರೀಯ ಪ್ರಕರಣಗಳಿದ್ದು, ಈವರೆಗೆ 1,648 ಜನರು ಗುಣಮುಖರಾಗಿದ್ದಾರೆ ಎಂದು ತಿಳಿಸಿದ್ದಾರೆ.

    ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈವರೆಗೆ ಬೆಳಕಿಗೆ ಬಂದಿರುವ ಕರೊನಾ ಪ್ರಕರಣಗಳಲ್ಲಿ ಶೇ. 68 ತಬ್ಲಿ ಜಮಾತ್ ನಡೆಸಿದ್ದ ಸಭೆಯ ಜತೆ ನಂಟು ಹೊಂದಿವೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಿಳಿಸಿದ್ದಾರೆ. ಸದ್ಯ ದೆಹಲಿಯಲ್ಲಿ 1578 ಪ್ರಕರಣಗಳಿದ್ದು, ಇದರಲ್ಲಿ 1080 ಜನರು ತಬ್ಲಿ ಜಮಾತ್‌ನ ಸಭೆಯಲ್ಲಿ ಭಾಗಿಯಾಗಿದ್ದಾರೆ. ಸದ್ಯ 867 ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 29 ಜನರ ಸ್ಥಿತಿ ಗಂಭೀರವಾಗಿದ್ದು, ಐವರು ವೆಂಟಿಲೇಟರ್ ಸಹಾಯದಲ್ಲಿ ಉಸಿರಾಡುತ್ತಿದ್ದಾರೆ.

    ದೆಹಲಿಯಲ್ಲಿ ಮತ್ತಿಬ್ಬರು ಪೊಲೀಸರಿಗೆ ಕರೊನಾ ಪಾಸಿಟಿವ್ ತೋರಿಸಿದ್ದು, ಇದರಲ್ಲಿ ಓರ್ವ ಅಧಿಕಾರಿಯ ಕುಟುಂಬಸ್ಥರಿಗೂ ಕರೊನಾ ಹಬ್ಬಿರುವ ಬಗ್ಗೆ ವರದಿಯಾಗಿದೆ. ಇವರ ಪತ್ನಿ ಆಸ್ಪತ್ರೆಯಲ್ಲಿ ನರ್ಸ್ ಕೆಲಸ ಮಾಡುತ್ತಿದ್ದರಿಂದ ಮೊದಲು ಅವರಿಗೆ ಕರೊನಾ ಸೋಂಕು ತಗುಲಿದೆ. ಬಳಿಕ ಅವರ ಪತಿ ಹಾಗೂ ಮಗಳಿಗೂ ಕರೊನಾ ಹಬ್ಬಿದೆ ಎಂದು ತಿಳಿದುಬಂದಿದೆ.

    ಮಧ್ಯಪ್ರದೇಶದ ಇಂದೋರ್‌ನಲ್ಲಿ ಕರೊನಾ ತೀವ್ರತೆ ಹೆಚ್ಚಾಗಿದ್ದು, ಕಳೆದ 24 ತಾಸಿನಲ್ಲಿ 110 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಸೋಂಕಿತರ ಸಂಖ್ಯೆ 696ಕ್ಕೆ ಏರಿದ್ದು, ಮಧ್ಯಪ್ರದೇಶದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 1090ಕ್ಕೆ ಏರಿಕೆಯಾಗಿದೆ. ಕರೊನಾದಿಂದಾಗಿ ಮಧ್ಯಪ್ರದೇಶದಲ್ಲಿ ಈವರೆಗೆ 55 ಜನರು ಸಾವನ್ನಪ್ಪಿದ್ದು, ಇದರಲ್ಲಿ 39 ಪ್ರಕರಣಗಳು ಇಂದೋರ್‌ನಿಂದಲೇ ವರದಿಯಾಗಿವೆ.

    ವಿಶ್ವಾದ್ಯಂತ 2500 ಜನರ ಸಾವು:
    ಜಾಗತಿಕವಾಗಿ ಕರೊನಾಗೆ ಕಳೆದ 24 ತಾಸಿನಲ್ಲಿ 2,500 ಜನರು ಅಸುನೀಗಿದ್ದು, ಮೃತರ ಸಂಖ್ಯೆ 1,36,990ಕ್ಕೆ ಏರಿಕೆಯಾಗಿದೆ. ಜತೆಗೆ ಹೊಸದಾಗಿ 25 ಸಾವಿರ ಸೋಂಕು ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 21, 07,450ಕ್ಕೇರಿದೆ.

    ಅಮೆರಿಕವೊಂದರಲ್ಲೇ 6.44 ಲಕ್ಷ ಸೋಂಕಿತರಿದ್ದು, ಈವರೆಗೆ 28 ಸಾವಿರ ಜನರು ಸಾವನ್ನಪ್ಪಿದ್ದಾರೆ. ಬ್ರಿಟನ್‌ನಲ್ಲಿ ಗುರುವಾರ 861 ಜನರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 13,729ಕ್ಕೆ ಏರಿದೆ.

    ಚೀನಾ ಗುಟ್ಟಾಗಿ ನಡೆಸಿತೇ ಭೂಗತ ಅಣ್ವಸ್ತ್ರ ಪರೀಕ್ಷೆ? ಅಮೆರಿಕದ ಆರೋಪಕ್ಕೆ ಏನು ಉತ್ತರ ನೀಡುತ್ತಿದೆ ಚೀನಾ…

    108 ರಾಷ್ಟ್ರಗಳಿಗೆ ಸುಮಾರು 60 ಕೋಟಿಯಷ್ಟು ಮಾತ್ರೆಗಳನ್ನು ಪೂರೈಸಿ ದೊಡ್ಡಣ್ಣ ಎನ್ನಿಸಿಕೊಂಡ ಭಾರತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts