76 ದಿನಗಳ ಲಾಕ್​ಡೌನ್ ಮುಕ್ತಾಯ- ಕರೊನಾ ವೈರಸ್​ ಉಗಮ ಸ್ಥಾನ ವುಹಾನ್​ನಲ್ಲೇನು ನಡೆಯುತ್ತಿದೆ?

Heroic City Wuhan Lockdown ends 8 APR 20
Published on

ವುಹಾನ್​: ಇಡೀ ಜಗತ್ತನ್ನೆ ತಲ್ಲಣಗೊಳಿಸಿರುವ ಕರೊನಾ COVID19 ವೈರಸ್​ ಸೋಂಕು ಉಗಮವಾಗಿದ್ದ ಚೀನಾದ ವುಹಾನ್​ ಮತ್ತೆ ಸಹಜ ಜೀವನದತ್ತ ಸಾಗಿದೆ. 76 ದಿನಗಳ ಲಾಕ್​ಡೌನ್ ಅವಧಿ ಪೂರೈಸಿರುವ ಅಲ್ಲಿ ಈಗ ಜನಜೀವನ ಸಹಜ ಸ್ಥಿತಿಗೆ ಬಂದಿದೆ. ಹನ್ನೊಂದು ವಾರಗಳ ಬಳಿಕ ಇದೇ ಮೊದಲ ಬಾರಿಗೆ ಅಲ್ಲಿಂದ ರೈಲೊಂದು ಬುಧವಾರ ಬೆಳಗ್ಗೆ ಪ್ರಯಾಣ ಆರಂಭಿಸಿದೆ.

ಹಿಂದೆಂದೂ ಕಂಡಿರದಂತಹ ಲಾಕ್​ಡೌನ್​ಗೆ ಮಾದರಿಯಾಗಿ ಈ ವೈರಸ್​ನ ಉಗಮ ಸ್ಥಾನ ವುಹಾನ್ ಗೋಚರಿಸಿದ್ದು, ಸೋಂಕುಪೀಡಿತ ರಾಷ್ಟ್ರಗಳೆಲ್ಲವೂ ವುಹಾನ್​ ಮಾದರಿಯ ಲಾಕ್​ಡೌನ್​ ನಡೆಸುತ್ತಿವೆ. ಈಗ ವುಹಾನ್​ ನಲ್ಲಿ ಬಹುತೇಕ ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಹುಬೈನ ಪ್ರಾಂತೀಯ ರಾಜಧಾನಿಯಲ್ಲೀಗ ಮತ್ತೊಂದು ಪ್ರಯೋಗ ಆರಂಭವಾಗಿದ್ದು, ವಾಣಿಜ್ಯ ಚಟುವಟಿಕೆ ಮತ್ತೆ ಎಂದಿನಂತೆ ಶುರುವಾಗಿದೆ. ಹೊಸ ಸೋಂಕಿನ ಪ್ರಕರಣಗಳು ಕಡಿಮೆಯಾದ ಕಾರಣ ಇಲ್ಲಿ ಈಗ ಈ ಸಾಹಸಕ್ಕೆ ಸರ್ಕಾರ ಮುಂದಾಗಿದೆ.

ಬುಧವಾರ ನಸುಕಿನಿಂದ ಜನರ ಓಡಾಟಕ್ಕೆ ಅನುವುಮಾಡಿಕೊಡಲಾಗಿದೆ. ಎಲ್ಲರ ಸ್ಮಾರ್ಟ್​ಫೋನ್​ನಲ್ಲಿ ಸರ್ಕಾರ ಕಡ್ಡಾಯವಾಗಿ ಆ್ಯಪ್ ಅಳವಡಸಿದ್ದು ಅದರ ಮೂಲಕವೇ ಎಲ್ಲರ ಮೇಲೂ ಅದು ನಿಗಾವಹಿಸಿದೆ. ಇದು ಡೇಟಾ ಟ್ರ್ಯಾಕಿಂಗ್ ಅಷ್ಟೇ ಅಲ್ಲ, ಸರ್ಕಾರದ ಸೂಚನೆಗಳನ್ನೂ ಜನರಿಗೆ ನೇರವಾಗಿ ತಲುಪಿಸುತ್ತಿದೆ.

ಅಲ್ಲಿನ ಯಾಂಗ್​ಟ್ಜೆ ನದಿ ತಟದಲ್ಲಿ ದೀಪ ಬೆಳಗುವ ಮೂಲಕ ಮತ್ತು ಗಗನಚುಂಬಿ ಕಟ್ಟಡಗಳು, ಸೇತುವೆಗಳ ಮೇಲೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿಯ ಆ್ಯನಿಮೇಟೆಡ್​ ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಲಾಕ್​ಡೌನ್ ನಿರ್ಬಂಧ ಸಡಿಲಿಕೆಯನ್ನು ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ವುಹಾನ್​ನ ಪ್ರೆಸಿಡೆಂಟ್ ಹೀರೋಯಿಕ್ ಸಿಟಿ ಎಂಬ ಶೀರ್ಷಿಕೆಯನ್ನು ಕೊಟ್ಟಿದ್ದು, ಚೀನಾ ಮುಖ್ಯಸ್ಥ ಕ್ಸಿ ಜಿನ್​ಪಿಂಗ್ ಕೂಡ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲಿ ನೆರೆದ ಜನರು ಧ್ವಜವನ್ನು ಹಾರಾಡಿಸುತ್ತ ವುಹಾನ್ ಲೆಟ್​ ಅಸ್ ಗೋ ಎಂದು ಘೋಷಣೆ ಕೂಗಿ ಚೀನಾದ ರಾಷ್ಟ್ರಗೀತೆಯನ್ನು ಹಾಡಿದರು.

ಬಹುತೇಕ ಎಲ್ಲರೂ 76 ದಿನಗಳ ಬಳಿಕ ಹೊರ ಜಗತ್ತು ನೋಡುತ್ತಿರುವ ಕಾರಣ, ಕುತೂಹಲಭರಿತರಾಗಿದ್ದಾರೆ. ಏನೇನು ಬದಲಾವಣೆಗಳಾಗಿವೆ ಎಂಬ ಕುತೂಹಲ ಒಂದೆಡೆ, ಏನೇನೋ ಮಾಡಬೇಕೆಂಬ ತವಕ, ಹೀಗೆ ಒಬ್ಬಬ್ಬರದ್ದೂ ಒಂದೊಂದು ಪ್ರತಿಕ್ರಿಯೆ. ಹೊಸ ಬದುಕು ಕಾಣಲು ಅವರೆಲ್ಲ ಸಜ್ಜಾಗಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net