More

    ಆಟೋ ಚಾಲಕರಿಗೆ ಕರೊನಾ ಕಾಟ

    ಶಿಗ್ಗಾಂವಿ: ಜನತಾ ಕರ್ಫ್ಯೂನಿಂದಾಗಿ ಆಟೋ ಚಾಲಕರು ಪರದಾಡುತ್ತಿದ್ದಾರೆ. ಕಳೆದ ತಿಂಗಳು ಸಾರಿಗೆ ಸಂಸ್ಥೆ ಸಿಬ್ಬಂದಿ ಮುಷ್ಕರದಿಂದ ಬಸ್​ಗಳ ಸಂಚಾರ ಸ್ಥಗಿತವಾಗಿ ಜನರ ಓಡಾಟವಿರಲಿಲ್ಲ. ಈಗ ಜನತಾ ಕರ್ಫ್ಯೂ ಜಾರಿಯಾಗಿದ್ದರಿಂದ ಜನ ಮತ್ತಷ್ಟು ತಲ್ಲಣಗೊಂಡಿದ್ದು, ಹೊರಬಾರದಂತಾಗಿದೆ. ಇದರಿಂದಾಗಿ ಆಟೋ ಚಾಲಕರಿಗೆ ಕೆಲಸ ಇಲ್ಲದಂತಾಗಿದೆ.
    ಪಟ್ಟಣದಲ್ಲಿ 150 ಆಟೋಗಳಿವೆ. ಜೀವನ ನಿರ್ವಹಣೆಗೆ ಆಟೋ ಅವಲಂಬಿತ ನೂರಾರು ಕುಟುಂಬಗಳಿವೆ. ಆದರೀಗ ಕರೊನಾ ಮಹಾಮಾರಿ ಆಟೋ ಚಾಲಕರ ಜೀವನವನ್ನು ಸಂಕಷ್ಟಕ್ಕೆ ದೂಡಿದೆ. ಮಧ್ಯಾಹ್ನ 12 ಗಂಟೆ ಬಳಿಕ ವ್ಯಾಪಾರ-ವಹಿವಾಟು ಸ್ಥಗಿತಗೊಳ್ಳುತ್ತಿದೆ. ವಾಣಿಜ್ಯ ಚಟುವಟಿಕೆ ಸಂಪೂರ್ಣ ಬಂದ್ ಆಗಿದ್ದರಿಂದ ಗ್ರಾಮೀಣ ಭಾಗದ ಜನರು ಪಟ್ಟಣಕ್ಕೆ ಬರುತ್ತಿಲ್ಲ. ಹೀಗಾಗಿ ಪ್ರಯಾಣಿಕರಿಲ್ಲದೆ ಬಾಡಿಗೆ ಸಿಗುವುದು ಕಷ್ಟವಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಜೀವನ ನಿರ್ವಹಣೆ, ಮಕ್ಕಳ ಶಿಕ್ಷಣ ಹೇಗೆಂಬ ಚಿಂತೆ ಆಟೋ ಚಾಲಕರನ್ನು ಕಾಡುತ್ತಿದೆ. ಕಳೆದ ವರ್ಷ ಲಾಕ್​ಡೌನ್ ಅವಧಿಯಲ್ಲಿ ಸರ್ಕಾರವು ಆಟೋ ಚಾಲಕರಿಗೆ ತಲಾ 5 ಸಾವಿರ ರೂಪಾಯಿ ನೆರವು ಘೊಷಿಸಿತ್ತು. ಅದರಿಂದ ಸ್ವಲ್ಪಮಟ್ಟಿಗೆ ಸಹಾಯವಾಗಲಿದೆ ಎನ್ನುವಷ್ಟರಲ್ಲಿ ಆ ಹಣ ಪಟ್ಟಣದ 150 ಆಟೋ ಚಾಲಕರ ಪೈಕಿ ಒಬ್ಬರಿಗೆ ಮಾತ್ರ ಸಿಕ್ಕಿದೆ ಎಂಬುದು ಆಟೋ ಚಾಲಕರ ಆರೋಪ.
    ‘ಸರ್ಕಾರ ಘೊಷಿಸಿದ 5000 ರೂಪಾಯಿ ಸಹಾಯಧನ ಇನ್ನೂ ಕೈಸೇರಿಲ್ಲ. ಈಗ ಜನತಾ ಕರ್ಫ್ಯೂ ಘೊಷಿಸಲಾಗಿದೆ. ಪ್ರಯಾಣಿಕರಿಲ್ಲದೆ ಜೀವನ ನಡೆಸುವುದು ಹೇಗೆ? ಸಚಿವ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಅವರೊಂದಿಗೆ ಮಾತನಾಡಿ ಕೂಡಲೆ ಸಹಾಯಧನ ಬಿಡುಗಡೆ ಮಾಡಿಸಬೇಕು’ ಎಂದು ಪಟ್ಟಣದ ಶಂಕರನಾಗ ಆಟೋ ಚಾಲಕರ ಸಂಘದ ಗೌರವಾಧ್ಯಕ್ಷ ಗುರುನಗೌಡ್ರ ದುಂಡಿಗೌಡ್ರ ಮನವಿ ಮಾಡಿದರು.

    ‘ಕಳೆದ ಸಲ ಲಾಕ್​ಡೌನ್ ಸಂದರ್ಭದಲ್ಲಿ ಬೊಮ್ಮಾಯಿ ಟ್ರಸ್ಟ್​ನಿಂದ ಆಹಾರ ಧಾನ್ಯದ ಕಿಟ್ ನೀಡಲಾಗಿತ್ತು. ಈಗ ಜೀವನ ನಡೆಸುವುದೇ ಕಷ್ಟವಾಗಿದ್ದರಿಂದ ಸರ್ಕಾರದ ಸಹಾಯದ ನಿರೀಕ್ಷೆಯಲ್ಲಿದ್ದೇವೆ. ಅಂದಂದಿನ ದುಡಿಮೆಯಲ್ಲೇ ಕುಟುಂಬ ನಿರ್ವಹಿಸುವ 50-60 ಆಟೋ ಚಾಲಕರಿದ್ದಾರೆ. ಬ್ಯಾಂಕ್​ಗಳಲ್ಲಿ ಸಾಲ ಮಾಡಿ ಆಟೋ ಖರೀದಿಸಿದವರಿಗೆ ಸಾಲ ಮರುಪಾವತಿಸುವುದು ಕಷ್ಟವಾಗಿದೆ’
    | ಗೌಸ್​ವೊಹದ್ದೀನ್ ದುಂಡಸಿ, ಶಂಕರನಾಗ ಆಟೋ ನಿಲ್ದಾಣ ಸಂಘದ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts