More

    ಜಿಲ್ಲೆಯಲ್ಲಿ ಕರೊನಾಗೆ ಎರಡನೇ ಬಲಿ

    ಹಾಸನ: ಹಾಸನ ಮೂಲದ 65 ವರ್ಷದ ವೃದ್ಧೆ ಕರೊನಾ ಸೋಂಕಿನಿಂದ ಭಾನುವಾರ ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಈವರೆಗೆ ಒಟ್ಟು ಇಬ್ಬರು ಕರೊನಾಗೆ ಬಲಿಯಾಗಿದ್ದಾರೆ.
    ಈಕೆ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಜೂ.12ರಂದು 60 ವರ್ಷದ ವೃದ್ಧ ಸಾವಿಗೀಡಾಗಿದ್ದರು. ಇದರಿಂದ ಜಿಲ್ಲೆಯಲ್ಲಿ ಇಬ್ಬರು ಕರೊನಾ ಸೋಂಕಿಗೆ ಮೃತಪಟ್ಟದಂತಾಗಿದೆ.

    31 ಜನರಿಗೆ ಸೋಂಕು: ಜಿಲ್ಲೆಯಲ್ಲಿ ಭಾನುವಾರ ಅತ್ಯಧಿಕ ಸಂಖ್ಯೆಯಲ್ಲಿ ಕರೊನಾ ಪತ್ತೆಯಾಗಿದ್ದು, ಮೂವರು ಮಕ್ಕಳು ಸೇರಿ 31 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

    ಇದರಿಂದ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 360ಕ್ಕೆ ಏರಿಕೆಯಾಗಿದ್ದು, ಇಲ್ಲಿಯವರೆಗೆ 238 ಜನ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, 120 ಸಕ್ರಿಯ ಪ್ರಕರಣಗಳಿವೆ.

    ಹೊಳೆನರಸೀಪುರ ತಾಲೂಕಿನಲ್ಲಿ 13, ಅರಸೀಕೆರೆ 11, ಹಾಸನ ಮತ್ತು ಅರಕಲಗೂಡು ತಾಲೂಕಿನ ತಲಾ ಇಬ್ಬರು, ಆಲೂರಿನಲ್ಲಿ ಒಬ್ಬರಿಗೆ ಹಾಗೂ ಹೊರ ಜಿಲ್ಲೆಗಳ ಇಬ್ಬರಿಗೆ ಸೋಂಕು ತಗುಲಿದೆ. ಇವರಲ್ಲಿ 5 ಪೌರಕಾರ್ಮಿಕರು, ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ನಾಲ್ವರು ಮತ್ತು ಹೊರ ರಾಜ್ಯದಿಂದ ಬಂದಿದ್ದ ಮೂವರಿಗೆ ಸೋಂಕು ತಗುಲಿದೆ.
    ರ‌್ಯಾಂಡಮ್ ಟೆಸ್ಟ್ ವೇಳೆ 8 ಜನರಿಗೆ ಪಾಸಿಟಿವ್ ಇರುವುದು ಪತ್ತೆಯಾಗಿದ್ದು, ಬೆಂಗಳೂರು ಪ್ರವಾಸ ಮತ್ತು ಐಎಲ್‌ಐ ಲಕ್ಷಣ ಇರುವ ಮೂವರಿಗೆ ಸೋಂಕು ತಗುಲಿದೆ. ಎಲ್ಲರಿಗೂ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಡಿಎಚ್‌ಒ ಡಾ.ಸತೀಶ್ ತಿಳಿಸಿದ್ದಾರೆ.


    ಹಳೇ ತಾಲೂಕು ಕಚೇರಿ ರಸ್ತೆ ಸೀಲ್‌ಡೌನ್ನ: ಗರದ ಅರಳೇಪೇಟೆ ಬಡಾವಣೆಯ ಹಳೇ ತಾಲೂಕು ಕಚೇರಿ ರಸ್ತೆಯ ಮಹಿಳೆಯಲ್ಲಿ ಕರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಸ್ತೆಯನ್ನು ಸೀಲ್‌ಡೌನ್ ಮಾಡಿ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ.

    ಅನಾರೋಗ್ಯವೆಂದು ಜನಪ್ರಿಯ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯಲ್ಲಿ ಕರೊನಾ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಆಕೆಯನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಯಿತು. ಪರದಿ ಬಂದ ತಕ್ಷಣ ಪೊಲೀಸರು ಸೀಲ್‌ಡೌನ್ ಮಾಡಿ ಸೋಂಕಿತಳ ಮನೆಗೂ ಬೀಗ ಜಡಿದಿದ್ದಾರೆ.

    ಹೆಚ್ಚುವರಿ ಪರೀಕ್ಷೆ ನಡೆಸಲು ನಿರ್ಧಾರ: ಇಲ್ಲಿಯವರೆಗೆ ಹೊರಗಿನಿಂದ ಬಂದವರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಕರೊನಾ ಮಾರಿ ಈಗ ಸ್ಥಳೀಯರು ಮತ್ತು ಸೋಂಕಿತರ ಸಂಪರ್ಕದಲ್ಲಿದ್ದವರಲ್ಲೂ ಹರಡುತ್ತಿರುವುದು ಜಿಲ್ಲೆಯ ಜನರ ದುಗುಡಕ್ಕೆ ಕಾರಣವಾಗಿದೆ.

    ಭಾನುವಾರ 31 ಜನರಲ್ಲಿ ಸೋಂಕು ದೃಢಪಟ್ಟಿರುವುದರಿಂದ ಮತ್ತಷ್ಟು ಆತಂಕ ಇಮ್ಮಡಿಗೊಳಿಸಿದೆ. ಕರೊನಾ ಸಮುದಾಯಕ್ಕೆ ಕಾಲಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ದಿನೇ ದಿನೆ ಕರೊನಾ ಕೇಸ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಸ್ವ್ಯಾಬ್ ಟೆಸ್ಟ್ ನಡೆಸಲು ತೀರ್ಮಾನಿಸಲಾಗಿದೆ.

    ಪೊಲೀಸರು, ಮಕ್ಕಳು, ಬಸ್ ಚಾಲಕ, ನಿರ್ವಾಹಕರು ಸೇರಿ ಎಲ್ಲ ವರ್ಗದಲ್ಲೂ ಹರಡುತ್ತಿರುವುದರಿಂದ ಆರೋಗ್ಯ ಇಲಾಖೆ ಹೆಚ್ಚುವರಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts