More

    ಕೋವಿಡ್ ಮರೆತ ‘ಬುದ್ಧಿವಂತ ಜನ’, ಪೊಲೀಸರು ಬಂದಾಗ ಮಾತ್ರ ಮಾಸ್ಕ್

    ಮಂಗಳೂರು: ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಕಠಿಣ ಮಾರ್ಗಸೂಚಿ ಜಾರಿಗೊಳಿಸಿ ಮತ್ತು ನಿಯಮ ಉಲ್ಲಂಘಿಸುವವರಿಂದ ದಂಡ ವಸೂಲಿ ಮಾಡುತ್ತಿದ್ದರೂ, ಆದೇಶ ಪಾಲನೆಯಾಗುತ್ತಿರುವುದು ಅಷ್ಟಕ್ಕಷ್ಟೇ. ಹಬ್ಬ ಸಹಿತ ಇತರ ಕಾರ್ಯಕ್ರಮಗಳಿಗೆ ಷರತ್ತಿಗೊಳಪಟ್ಟು ಅನುಮತಿ ನೀಡಿದ್ದನ್ನೇ ಜನರು ಕರೊನಾ ದೂರವಾಗಿದೆ ಎಂದು ಭಾವಿಸಿ ಬಿಂದಾಸ್ ಆಗಿದ್ದಾರೆ.

    ಸನ್ನಿವೇಶ 1: ವಲಸೆ ಕಾರ್ಮಿಕರು ನಿತ್ಯ ಬೆಳಗ್ಗೆ ಕೂಲಿ ಕೆಲಸಕ್ಕೆ ತೆರಳುವ ಮತ್ತು ಸಾಯಂಕಾಲ ಬಸ್‌ನಿಂದ ಬಂದಿಳಿಯುವ ನಗರದ ವಿವಿಧ ತಾಣಗಳ ಪೈಕಿ ಕಾವೂರು ಜಂಕ್ಷನ್ ಕೂಡ ಒಂದು. ಕೆಲವರು ತಮಗೆ ಬೇಕಾಗುವಷ್ಟು ಕೂಲಿಯಾಳುಗಳನ್ನು ಇಲ್ಲೇ ಕೂಲಿ ಗೊತ್ತು ಮಾಡಿ ಕರೆದೊಯ್ಯುತ್ತಾರೆ. ಇಂತಹ ಪ್ರದೇಶದಲ್ಲಿ ಸ್ವಲ್ಪವೂ ದೈಹಿಕ ಅಂತರ ಇಲ್ಲದೆ ಮತ್ತು ಸರಿಯಾಗಿ ಮಾಸ್ಕ್ ಧರಿಸದೆ ಕಾರ್ಮಿಕರು ಗುಂಪುಗೂಡಿದ್ದರು.

    ಸನ್ನಿವೇಶ 2: ಉಳ್ಳಾಲ ಭಾಗದಲ್ಲಿ ಮಾಸ್ಕ್ ನೆಪಮಾತ್ರಕ್ಕಿದೆ. ಪರಸ್ಪರ ಅಂತರ ನೆನಪೇ ಇಲ್ಲ. ಅಧಿಕಾರಿಗಳದ್ದೂ ಆರಂಭಶೂರತ್ವಕ್ಕೆ ಸೀಮಿತ. ನಗರಸಭೆ ಸೂಚನೆಯಂತೆ ಅಂಗಡಿಗಳಲ್ಲಿ ಇಟ್ಟಿರುವ ಸ್ಯಾನಿಟೈಸರ್ ಇನ್ನೂ ಮುಗಿದಿಲ್ಲ ಎನ್ನುವುದು ಜನರು ಬಳಸುತ್ತಿಲ್ಲ ಎಂಬುದಕ್ಕೆ ಸಾಕ್ಷಿ. ಆಟೋ, ಬಸ್‌ಗಳಲ್ಲೂ ನಿಯಮ ಪಾಲನೆ ಮಾಯವಾಗಿದೆ.

    ಸನ್ನಿವೇಶ 3: ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಈ ಹಿಂದೆ ಕರೊನಾ ಕುರಿತು ಹೆಚ್ಚಿನ ಜಾಗ್ರತೆ ಇರಲಿಲ್ಲ. ಆದರೆ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲು ಆರಂಭಿಸಿದ ನಂತರ ಜನರು ಜಾಗೃತರಾಗಿ ಮಾಸ್ಕ್ ಧರಿಸುತ್ತಿದ್ದಾರೆ. ಆದರೆ ಕ್ಷೇತ್ರಕ್ಕೆ ಬರುವ ಯಾತ್ರಿಕರಲ್ಲಿ ಕೆಲವರು ಮಾಸ್ಕ್ ಬಗ್ಗೆ ಕಾಳಜಿ ಮರೆತಂತೆ ಕಾಣುತ್ತಿದೆ. ಅವರಿಗೆ ಪೊಲೀಸರು ದಂಡ ವಿಧಿಸುತ್ತಿದ್ದಾರೆ.

    ಸನ್ನಿವೇಶ 4: ಬೆಳ್ತಂಗಡಿ ತೀರಾ ಇಕ್ಕಟ್ಟಾದ ಪಟ್ಟಣ. ಸೋಮವಾರ ಸಂತೆ ಸಹಿತ ಪ್ರತಿದಿನ ಪಟ್ಟಣದಲ್ಲಿ ಜನ ಗಿಜಿಗುಡುತ್ತಿರುತ್ತಾರೆ. ಆದರೆ ಇಲ್ಲಿ ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಪಾಲನೆಯಾಗುತ್ತಿಲ್ಲ. ಅಂಥವರ ವಿರುದ್ಧ ಆರಂಭದಲ್ಲಿ ಕ್ರಮ ಕೈಗೊಳ್ಳುತ್ತಿದ್ದ ಪೊಲೀಸ್ ಇಲಾಖೆ, ಪಟ್ಟಣ ಪಂಚಾಯಿತಿ ಈಗ ಸುಮ್ಮನಾಗಿದೆ.

    ಇದು ‘ವಿಜಯವಾಣಿ’ ಪರಿಶೀಲಿಸಿದಾಗ ಬುದ್ಧಿವಂತರ ಜಿಲ್ಲೆಯಲ್ಲಿ ಕಂಡುಬಂದ ಸನ್ನಿವೇಶಗಳು. ಜಿಲ್ಲೆಯ ಹೆಚ್ಚಿನ ಕಡೆ, ತಾಲೂಕು ಕೇಂದ್ರಗಳಲ್ಲಿ, ಗ್ರಾಮಾಂತರ ಭಾಗಗಳಲ್ಲಿ ಇಂಥದ್ದೇ ಪರಿಸ್ಥಿತಿ ಇದೆ. ಆರಂಭದಲ್ಲಿ ಜನರಲ್ಲಿ ಇದ್ದ ಮುನ್ನೆಚ್ಚರಿಕೆ-ಮುಂಜಾಗ್ರತೆ ಈಗ ಕಾಣುತ್ತಿಲ್ಲ. ಜಿಲ್ಲೆ ಪೂರ್ಣ ಪ್ರಮಾಣದಲ್ಲಿ ಸಹಜಸ್ಥಿತಿಗೆ ಮರಳಲು ತೀರ ಸನಿಹ ಇದ್ದಂತೆ ಗೋಚರಿಸುತ್ತಿದೆ.

    ಮದುವೆ, ಜಾತ್ರೆ ಸಹಿತ ವಿವಿಧ ಸಭೆ ಸಮಾರಂಭಗಳಲ್ಲಿ ನೂರಾರು ಜನರು ಸೇರುವುದು ಸಾಮಾನ್ಯವಾಗುತ್ತಿದೆ. ಕೆಲವು ಮಾರ್ಗದ ಬಸ್‌ಗಳಲ್ಲಿ ಬೆಳಗ್ಗೆ ಮತ್ತು ಸಾಯಂಕಾಲ ಮೆಟ್ಟಿಲುಗಳಲ್ಲಿ ನಿಂತು ಪ್ರಯಾಣಿಸುವಷ್ಟು ಜನದಟ್ಟಣೆ ಗೋಚರಿಸುತ್ತಿದೆ. ಬಹುತೇಕ ಮಾರುಕಟ್ಟೆಗಳು, ಅಂಗಡಿಗಳು ಹಿಂದಿನ ಸ್ಥಿತಿಗೆ ಮರಳುವ ಹಾದಿಯಲ್ಲಿವೆ. ಮಾಲ್‌ಗಳಲ್ಲಿ ಮಾತ್ರ ಪ್ರವೇಶ ದ್ವಾರದಲ್ಲೇ ಗ್ರಾಹಕರ ದೇಹದ ತಾಪಮಾನ ಪರೀಕ್ಷೆ ನಡೆಯುತ್ತಿದೆ. ನಿಷೇಧವಿದ್ದರೂ ಹೆಚ್ಚಿನ ಕಡೆ ಹಸುಗೂಸುಗಳು, ಎಳೆಯ ಮಕ್ಕಳು, ಹಿರಿಯರು ಓಡಾಡುವ ದೃಶ್ಯಗಳು ತೀರಾ ಸಹಜವೆನ್ನುವಂತೆ ಕಾಣಸಿಗುತ್ತಿವೆ.

    ಹೆಚ್ಚಿನವರು ದಂಡ ತಪ್ಪಿಸುವ ಉದ್ದೇಶದಿಂದ ಹೆಸರಿಗಷ್ಟೇ ಮಾಸ್ಕ್ ಧರಿಸುತ್ತಿದ್ದಾರೆ. ಸಾಮಾನ್ಯವಾಗಿ ಹೆಚ್ಚಿನವರ ಮಾಸ್ಕ್‌ಗಳು ಗಲ್ಲದ ಮೇಲಷ್ಟೇ ಇರುತ್ತದೆ. ಅಧಿಕಾರಿಗಳು, ಪೊಲೀಸರು ಬಂದಾಗಲಷ್ಟೇ ಮಾಸ್ಕ್ ಮೂಗಿನ ಮೇಲೇರುತ್ತದೆ. ಟ್ರಾಫಿಕ್ ಸ್ಥಳಗಳಲ್ಲಿ ನಿಲ್ಲುವ ಪೊಲೀಸರು ಪರಿಶೀಲಿಸಿ ದಂಡ ಹಾಕುತ್ತಿದ್ದಾರೆ. ಕಾರಿನಲ್ಲಿ ಕುಟುಂಬ ಸಮೇತರಾಗಿ ತೆರಳುವವರನ್ನು ಗಮನಿಸಿ ದಂಡ ಹಾಕುತ್ತಿರುವುದು ಹಲವೆಡೆ ಮಾತಿನ ಚಕಮಕಿಗೆ ಕಾರಣವಾಗುತ್ತಿದೆ.
    ಇನ್ನು ದೈಹಿಕ ಅಂತರ ಪಾಲನೆ ನಿಯಮ ಆದೇಶಕ್ಕೆ ಸೀಮಿತ. ಸರ್ಕಾರಿ ಕಚೇರಿಗಳಲ್ಲೇ ಇದು ಪಾಲನೆಯಾಗುತ್ತಿಲ್ಲ. ದಂಡ ಹಾಕುವ ಪೊಲೀಸ್ ಅಧಿಕಾರಿಗಳೇ ಇದನ್ನು ಪಾಲಿಸುತ್ತಿಲ್ಲ. ಸಭೆ ಸಮಾರಂಭಗಳಲ್ಲಿ ಭಾಗವಹಿಸುವ ಅಧಿಕಾರಿಗಳಿಂದಲೇ ಉಲ್ಲಂಘನೆ ನಡೆಯುತ್ತಿದೆ.

    ಇರುವ ವ್ಯವಸ್ಥೆಯಲ್ಲಿ ಹೆಚ್ಚಿನ ದೇವಸ್ಥಾನ, ಪ್ರಾರ್ಥನಾ ಮಂದಿರಗಳಲ್ಲಿ ನಿಯಮ ಪಾಲನೆ ಗರಿಷ್ಠ ಪ್ರಮಾಣದಲ್ಲಿ ಪಾಲನೆಯಾಗುತ್ತಿದೆ. ನಿಯಮ ಪಾಲಿಸದಿದ್ದರೆ ಆಡಳಿತ ಮಂಡಳಿಗಳ ವಿರುದ್ಧವೇ ಕ್ರಮ ಕೈಗೊಳ್ಳಲಾಗುವುದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದರಿಂದ ಸ್ವಯಂಸೇವಕರನ್ನು ನಿಯೋಜಿಸಿ ಮುನ್ನೆಚ್ಚರಿಕೆ ಕ್ರಮ ಪಾಲಿಸಲಾಗುತ್ತಿದೆ.

    ಹಬ್ಬ ಬಳಿಕ ಕೋವಿಡ್ ಸಂಖ್ಯೆ ಏರಿಕೆ?: ಪ್ರಸಕ್ತ ಕರೊನಾ ದೈನಂದಿನ ಸೋಂಕಿತರು ಮತ್ತು ಸಾವುಗಳ ಸಂಖ್ಯೆ ಗಣನೀಯ ಇಳಿಮುಖವಾಗಿದೆ. ಆದರೆ ಜಿಲ್ಲೆಯಲ್ಲಿ ಸರ್ಕಾರ ಹಾಗೂ ಆರೋಗ್ಯ ಇಲಾಖೆ ನಿರ್ದೇಶನಗಳ ಸಾರಾಸಗಟು ಉಲ್ಲಂಘನೆ ಮತ್ತು ಸಾಲುಸಾಲಾಗಿ ಎದುರಾಗಿರುವ ಹಬ್ಬಗಳಲ್ಲಿ ಜನರು ಮುಕ್ತವಾಗಿ ಭಾಗವಹಿಸುವ ರೀತಿ ಗಮನಿಸಿದರೆ ಮುಂದಿನ ದಿನಗಳಲ್ಲಿ ಇಲ್ಲಿ ಕಠಿಣ ಪರಿಸ್ಥಿತಿ ಮತ್ತೆ ಮರುಕಳಿಸಬಹುದೇನೋ ಎನ್ನುವ ಆತಂಕವಿದೆ.

    ಸರ್ಕಾರದ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಒಂದು ರೀತಿ ಹೆಲ್ಮೆಟ್ ಇಲ್ಲದೆ ಮೋಟರ್ ಸೈಕಲ್ ಓಡಿಸಿದ ಹಾಗೆ. ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಸವಾರಿ ಸಂದರ್ಭ ಅಪಘಾತ ಸಂಭವಿಸಿದರೆ ಹೆಚ್ಚಿನ ಅಪಾಯ ಎಂದು ಎಲ್ಲರಿಗೂ ಗೊತ್ತಿದ್ದರೂ ಅನೇಕ ಜನರು ನಿಯಮ ಪಾಲಿಸುತ್ತಿಲ್ಲ. ಹಬ್ಬದ ಸಂದರ್ಭ ನಿಯಮ ಪಾಲನೆ ಬಗ್ಗೆ ಮೈಮರೆತರೆ ಪರಿಸ್ಥಿತಿ ಮತ್ತೆ ಅಪಾಯಕ್ಕೆ ತಿರುಗಬಹುದು ಎನ್ನುವುದನ್ನು ಜನ ನೆನಪಿನಲ್ಲಿ ಇಟ್ಟುಕೊಳ್ಳಬೇಕು.
    – ಡಾ.ರಾಮಚಂದ್ರ ಬಾಯರಿ, ಜಿಲಾ ಆರೋಗ್ಯಾಧಿಕಾರಿ, ದ.ಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts