More

    ಬೆಳೆಗಾರನಿಗೆ ಹುಳಿಯಾದ ದ್ರಾಕ್ಷಿ!

    ಕೊಕಟನೂರ: ಉತ್ತರ ಕರ್ನಾಟಕದಲ್ಲಿ ಅತೀ ಹೆಚ್ಚು ದ್ರಾಕ್ಷಿ ಬೆಳೆಯುವ ಜಿಲ್ಲೆಗಳ ಪೈಕಿ ಬೆಳಗಾವಿಯೂ ಒಂದು. ಪ್ರತಿವರ್ಷ ನೂರಾರು ಟನ್ ದ್ರಾಕ್ಷಿ ಬೆಳೆಯುವ ಅಥಣಿ ತಾಲೂಕಿನಲ್ಲಿ ಕರೊನಾ ವೈರಸ್ ಭೀತಿಗೆ ದ್ರಾಕ್ಷಿ ಬೆಳೆಗಾರರು ಕಂಗಾಲಾಗಿದ್ದಾರೆ.

    ಅಥಣಿ ತಾಲೂಕಿನ ತೆಲಸಂಗ, ಅನಂತಪುರ ಹಾಗೂ ಅಥಣಿ ಗ್ರಾಮೀಣ ಹೋಬಳಿಗಳಲ್ಲಿ ಹೆಚ್ಚಿನ ರೈತರು ದ್ರಾಕ್ಷಿ ಬೆಳೆಯನ್ನೇ ಅವಲಂಬಿಸಿದ್ದಾರೆ. ತಾಲೂಕಿನಾದ್ಯಂತ ಸುಮಾರು 5 ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯುತ್ತಾರೆ. ಈಗಾಗಲೇ ಅತಿವೃಷ್ಟಿ ಹಾಗೂ ಪ್ರವಾಹದ ಪರಿಣಾಮ ಹೂವಿನ ಹಂತ (ಹೋವರಿಂಗ್)ದಲ್ಲಿಯೇ ಅರ್ಧಕ್ಕಿಂತ ಹೆಚ್ಚಿನ ದ್ರಾಕ್ಷಿ ಬೆಳೆ ನಾಶವಾಗಿವೆ. ಅಳಿದುಳಿದ ದ್ರಾಕ್ಷಿ ಬೆಳೆಯನ್ನು ಉಳಿಸಿಕೊಂಡು ಕಟಾವಿಗೆ ಬಂದ ಸಂದರ್ಭದಲ್ಲೇ ದ್ರಾಕ್ಷಿ ಬೆಳೆಗೂ ಕರೊನಾ ಕಂಟಕದಂತೆ ಕಾಡುತ್ತಿದೆ.

    ತುಂಡಾಯ್ತು ಮಾರುಕಟ್ಟೆ ಸರಪಳಿ: ಕೇರಳ, ಮಂಗಳೂರು, ಬೆಂಗಳೂರು ಮತ್ತಿತರ ನಗರಗಳಿಗೆ ಇಲ್ಲಿನ ದ್ರಾಕ್ಷಿ ರವಾನಿಸಲಾಗುತ್ತಿತ್ತು. ಲಾಕ್‌ಡೌನ್‌ನಿಂದ ಮಾರುಕಟ್ಟೆ ಸ್ಥಗಿತಗೊಂಡಿದ್ದು, ವ್ಯವಸ್ಥೆಯ ಸರಪಳಿ ತುಂಡಾದಂತಾಗಿದೆ. ಸರ್ಕಾರವೇನೋ ಹೊಸ ನಿಯಮದಡಿ ರಾಜ್ಯ ಹಾಗೂ ಹೊರ ರಾಜ್ಯಗಳಿಗೆ ತೋಟಗಾರಿಕೆ ಬೆಳೆಗಳನ್ನು ಯಾವುದೇ ನಿರ್ಬಂಧವಿಲ್ಲದೆ ಮುಕ್ತವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದೆ. ಆದರೂ ಕರೊನಾ ವೈರಸ್ ಪರಿಣಾಮ ಖರೀದಿ ಮಾಡುವವರಿಲ್ಲದೆ ದ್ರಾಕ್ಷಿ ದರ ನೆಲಕಚ್ಚಿದೆ.

    ದಲ್ಲಾಳಿಗಳ ಕರಾಮತ್ತು: ದರ ಕುಸಿತದ ಪರಿಸ್ಥಿತಿಯನ್ನು ಬಂಡವಾಳವಾಗಿಸಿಕೊಂಡ ದಲ್ಲಾಳಿಗಳು ಕೆಜಿ ದ್ರಾಕ್ಷಿಗೆ ಕೇವಲ 18 ರಿಂದ 20 ರೂ. ದರ ನಿಗದಿ ಮಾಡುತ್ತಿದ್ದು, ರೈತರ ಬದುಕಿಗೆ ಕೊಳ್ಳಿ ಇಟ್ಟಂತಾಗಿದೆ. ಏಕೆಂದರೆ, ಒಣ ಹಾಕಲು ಶೆಡ್ ಕೂಡ ಖಾಲಿ ಇಲ್ಲ. ಸದ್ಯ ದ್ರಾಕ್ಷಿ ಬೆಳೆಗಾರನ ಬದುಕು ತ್ರಿಶಂಕು ಸ್ಥಿತಿಯಲ್ಲಿದೆ. ದಲ್ಲಾಳಿಗಳ ಕರಾಮತ್ತಿನಿಂದ ಬೆಳೆಗಾರ ಮಮ್ಮಲ ಮರುಗುವಂತಾಗಿದೆ.

    ಕೆಜಿಗೆ ಕನಿಷ್ಠ 40 ರೂ. ಆದರೂ ದಕ್ಕಲಿ: ಕಳೆ, ಗೊಬ್ಬರ, ಮಳೆಗಾಲ ಚಾಟಣಿ, ಔಷಧ ಹಾಗೂ ಆಳು ಸೇರಿ ಪ್ರತಿ ಕೆಜಿಗೆ ಕನಿಷ್ಠ 30 ರಿಂದ 35 ರೂ. ದರದಲ್ಲಿ ದ್ರಾಕ್ಷಿ ಮಾರಾಟವಾಗಬೇಕು. ಸ್ವಲ್ಪ ಲಾಭ ಪಡೆಯಬೇಕಾದರೆ 40 ರೂ. ದಕ್ಕಬೇಕು. ಆದರೆ, 18 ರಿಂದ 20 ರೂ.ದರದಲ್ಲಿ ಮಾರಾಟವಾದರೆ ರೈತನಿಗೆ ಕನಿಷ್ಠ 45 ರಿಂದ 50 ಸಾವಿರ ರೂ. ನಷ್ಟವಾಗುತ್ತದೆ. ಪರಿಣಾಮ ಜೀವನ ನಿರ್ವಹಣೆಯ ಚಿಂತೆ ರೈತರನ್ನು ಆವರಿಸಿದೆ. ಸರ್ಕಾರ ದಲ್ಲಾಳಿಗಳಿಗೆ ಮೂಗುದಾರ ತೊಡಿಸಿ ಕೆಜಿಗೆ ಕನಿಷ್ಠ 40 ರೂ. ನಿಗದಿ ಮಾಡುವತ್ತ ಕ್ರಮ ಕೈಗೊಳ್ಳಬೇಕು ಎಂಬುದು ದ್ರಾಕ್ಷಿ ಬೆಳೆಗಾರರ ಒತ್ತಾಯ.

    ಅಕ್ಟೋಬರ್‌ನಲ್ಲಿ ಮಳೆ ಬಂದು ಅರ್ಧ ದ್ರಾಕ್ಷಿ ಬೆಳೆ ಹಾಳಾಗಿ ಹೋಗಿದೆ. ಉಳಿದ ಬೆಳೆ ಉಳಿಸಿಕೊಳ್ಳಲು ಔಷಧಕ್ಕೆ ಹೆಚ್ಚಿನ ಖರ್ಚಾಗಿದೆ. ಈಗ ಕರೊನಾ ಭೀತಿ ಆವರಿಸಿ ನಾವು ಬೆಳೆದ ದ್ರಾಕ್ಷಿ ಕೇಳುವವರಿಲ್ಲ. ದಲ್ಲಾಳಿಗಳ ಕಾಟದಿಂದ ಮುಕ್ತಗೊಳಿಸಿ ದ್ರಾಕ್ಷಿಗೆ ಯೋಗ್ಯ ದರ ಕೊಡಿಸಬೇಕು.
    |ಮಹಾದೇವ ಧರಿಗೌಡ ದ್ರಾಕ್ಷಿ ಬೆಳೆಗಾರ, ಸಂಕೋನಟ್ಟಿ

    ದ್ರಾಕ್ಷಿ ಹಣ್ಣು ದಪ್ಪ ಆಗಿವೆ. ಅವು ಬೇದಾನಿ (ಒಣ ದ್ರಾಕ್ಷಿ) ಆಗುವುದಿಲ್ಲ ಎಂದು ಧೈರ್ಯಗೆಡಬೇಕಾದ ಅಗತ್ಯವಿಲ್ಲ. ದಪ್ಪ ಇರುವ ದ್ರಾಕ್ಷಿ ಕೂಡ ಬೇದಾನಿ ಆಗುತ್ತವೆ. ಹಾಗಾಗಿ ಅಥಣಿ ತಾಲೂಕಿನ ಕೆಲವೆಡೆ ಶೆಡ್ ಖಾಲಿ ಇದ್ದು, ಅವುಗಳಲ್ಲಿ ಹಾಕಿ ಬೇದಾನಿ ತಯಾರಿಸಿ ಸ್ಟೋರೇಜ್‌ನಲ್ಲಿಟ್ಟು ದರ ಹೆಚ್ಚಾದಾಗ ಮಾರಾಟ ಮಾಡಬೇಕು.
    |ಶಿವಲಿಂಗ ಕುಡ್ಡಣ್ಣವರ
    ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ, ಅಥಣಿ

    |ಮೋಹನ ಪಾಟಣಕರ ಕೊಕಟನೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts