More

    ವೆನ್ಲಾಕ್ ಇನ್ನು ಕರೊನಾ ಆಸ್ಪತ್ರೆ

    ಮಂಗಳೂರು: ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯನ್ನು ಸಂಪೂರ್ಣ ಕರೊನಾ ಚಿಕಿತ್ಸಾ ಕೇಂದ್ರವಾಗಿ ಪರಿವರ್ತನೆ ಮಾಡಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಈಗಾಗಲೇ ಆಸ್ಪತ್ರೆಯಲ್ಲಿ ಬೇರೆ ಬೇರೆ ಕಾಯಿಲೆ ಹಿನ್ನೆಲೆಯಲ್ಲಿ ಒಳರೋಗಿಗಳಾಗಿ ದಾಖಲಾಗಿರುವ 218 ರೋಗಿಗಳನ್ನು ಹಂತ ಹಂತವಾಗಿ ಸಮೀಪದ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿಗೆ ಮೂರು ದಿನಗಳೊಳಗೆ ವರ್ಗಾಯಿಸಲಾಗುವುದು ಎಂದರು.

    ವೆನ್ಲಾಕ್ ಆಸ್ಪತ್ರೆಯ 20 ಹಾಸಿಗೆಗಳ ಆಯುಷ್ ಕಟ್ಟಡದಲ್ಲಿ ಸಂಶಯಿತ ಕರೊನಾ ರೋಗಿಗಳನ್ನು ದಾಖಲಿಸಲಾಗುವುದು ಮತ್ತು ಈ ಪ್ರಕರಣಗಳಲ್ಲಿ ಯಾವುದಾದರೂ ಪಾಸಿಟಿವ್ ಕಂಡುಬಂದಲ್ಲಿ ಅವರನ್ನು ಸೂಪರ್ ಸ್ಪೆಷಾಲಿಟಿ ಕಟ್ಟಡದ ಪ್ರತ್ಯೇಕ ವಾರ್ಡ್‌ಗೆ ವರ್ಗಾಯಿಸಲಾಗುವುದು. 705 ಹಾಸಿಗೆಗಳ ವೆನ್ಲಾಕ್ ಆಸ್ಪತ್ರೆ ಹಳೆಯ ಕಟ್ಟಡದ ವಾರ್ಡ್‌ಗಳನ್ನು ಕರೊನಾ ಪ್ರಕರಣ ದಾಖಲಿಸಲು ಹಂತಹಂತವಾಗಿ ಬಳಸಿಕೊಳ್ಳಲಾಗುವುದು ಎಂದರು.
    ರೋಗಿಗಳ ವರ್ಗಾವಣೆ ಮತ್ತು ವೈದ್ಯಕೀಯ ಕಾಲೇಜು ಆಸ್ಪತ್ರೆಗಳ ವ್ಯವಸ್ಥೆಗಾಗಿ ಸಮನ್ವಯ ಸಮಿತಿ ರಚಿಸಲಾಗಿದ್ದು, ಇಲಾಖೆಯ ವೈದ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ಅಗತ್ಯವಿದ್ದರೆ ಇತರ ತಾಲೂಕುಗಳಲ್ಲೂ ತಾಲೂಕು ಆಸ್ಪತ್ರೆ ಹಾಗೂ ಸ್ಥಳೀಯ ಖಾಸಗಿ ಆಸ್ಪತ್ರೆಗಳೊಂದಿಗೆ ಮುಂದೆ ಸಮನ್ವಯ ಸಾಧಿಸಲಾಗುವುದು ಎಂದು ತಿಳಿಸಿದರು.
    ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಡಾ.ಭರತ್ ಶೆಟ್ಟಿ, ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್, ಅಪರ ಜಿಲ್ಲಾಧಿಕಾರಿ ರೂಪಾ ಸುದ್ದಿಗೋಷ್ಠಿಯಲ್ಲಿದ್ದರು.

    ಪೊನ್ನುರಾಜ್ ವಿಶೇಷ ನೋಡಲ್ ಅಧಿಕಾರಿ: ಜಿಲ್ಲೆಯಲ್ಲಿ ಕರೊನಾ ನಿಯಂತ್ರಣಕ್ಕೆ ಸಂಬಂಧಿಸಿ ವಿಶೇಷ ನೋಡಲ್ ಅಧಿಕಾರಿಯಾಗಿ ಜಿಲ್ಲೆಯ ವಿಶೇಷ ಕಾರ್ಯದರ್ಶಿಯಾಗಿರುವ ಐಎಎಸ್ ಅಧಿಕಾರಿ ವಿ.ಪೊನ್ನುರಾಜ್ ಅವರನ್ನು ನೇಮಕ ಮಾಡಲಾಗುತ್ತಿದೆ. ಸಿಎಂ ಬಿ.ಎಸ್. ಯಡಿಯೂರಪ್ಪ ಸಮ್ಮತಿಸಿದ್ದಾರೆ ಎಂದು ಸಚಿವ ಕೋಟ ತಿಳಿಸಿದರು.

    ಬೇರೆ ರೋಗಿಗಳು ಏನು ಮಾಡಬೇಕು?: ಕರೊನಾ ಹೊರತುಪಡಿಸಿ ವೆನ್ಲಾಕ್‌ಗೆ ಬರುವಂಥ ರೋಗಿಗಳಿಗೆ ಹತ್ತಿರದ ಖಾಸಗಿ ವೈದ್ಯಕೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವ ಕೋಟ ಹೇಳಿದರು. ಈ ಬಗ್ಗೆ ಈಗಾಗಲೇ ಎಲ್ಲ ಖಾಸಗಿ ಆಸ್ಪತ್ರೆ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ್ದು, ಅವರು ಸಹಕಾರ ನೀಡಲಿದ್ದಾರೆ. ವೆನ್ಲಾಕ್‌ನ ದರಪಟ್ಟಿಯಂತೆ ಬಿಪಿಎಲ್, ಆಯುಷ್ಮಾನ್ ಕಾರ್ಡ್‌ಗಳ ರೋಗಿಗಳಿಗೆ ಅಲ್ಲಿ ಚಿಕಿತ್ಸೆ ನೀಡಲಾಗುವುದು. ಇದಕ್ಕೆ ಬೇಕಾದ ಮಾರ್ಗದರ್ಶನವನ್ನು ಆಸ್ಪತ್ರೆ ಹೆಲ್ಪ್‌ಡೆಸ್ಕ್‌ನಲ್ಲಿ ನೀಡಲಾಗುವುದು. ವೆನ್ಲಾಕ್ ಬಳಿಯ ಆರ್‌ಎಪಿಸಿಸಿ ಮಕ್ಕಳ ಆಸ್ಪತ್ರೆಯಲ್ಲಿ ದಾಖಲಾಗಿರುವ 140 ಮಕ್ಕಳನ್ನೂ ಸಮೀಪದ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ವೆನ್ಲಾಕ್ ದರಪಟ್ಟಿಯಂತೆ ಚಿಕಿತ್ಸೆ ನೀಡಲಾಗುವುದು ಎಂದರು.

    100 ವೆಂಟಿಲೇಟರ್ ಶೀಘ್ರ: ವೆನ್ಲಾಕ್ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ನರ್ಸ್‌ಗಳಿಗೆ ಕೊರತೆಯಾದರೆ ಖಾಸಗಿ ಆಸ್ಪತ್ರೆಗಳ ನರ್ಸ್‌ಗಳಿಗೆ ತರಬೇತಿ ನೀಡಲು ವೈದ್ಯಕೀಯ ಕಾಲೇಜುಗಳ ಸಹಕಾರ ಪಡೆಯಲಾಗುವುದು. ವೆನ್ಲಾಕ್‌ನಲ್ಲಿ 32 ವೆಂಟಿಲೇಟರ್‌ಗಳಿದ್ದು, ಹೊಸ ಕಟ್ಟಡದಲ್ಲಿ ಇನ್ನೊಂದು ವಾರದಲ್ಲಿ 100 ವೆಂಟಿಲೇಟರ್‌ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಟ್ರಯಾಗ್ ರೂಂ(ತುರ್ತು ಚಿಕಿತ್ಸಾ ರೂಂ)ಗಳನ್ನು ಸ್ಥಾಪಿಸಿ, ಅಲ್ಲಿ ಸಂಶಯಿತ ಪ್ರಕರಣ ಕಂಡು ಬಂದರೆ ಅಂಥ ರೋಗಿಗಳನ್ನು 108 ಆಂಬುಲೆನ್ಸ್ ಮೂಲಕ ವೆನ್ಲಾಕ್ ಆಸ್ಪತ್ರೆಗೆ ಕರೆತಂದು ಮುಂದಿನ ತಪಾಸಣೆ ನಡೆಸಲಾಗುವುದು ಎಂದರು.

    ವೆನ್ಲಾಕ್ ಡಿಎಂಒ ಡಾ.ರಾಜೇಶ್ವರಿ ದೇವಿ ವರ್ಗಾವಣೆ: ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಡಿಎಂಒ ಡಾ.ರಾಜೇಶ್ವರಿ ದೇವಿ ಎಚ್.ಆರ್. ಅವರನ್ನು ಸರ್ಕಾರ ಕೊನೆಗೂ ವರ್ಗಾಯಿಸಿ ಗುರುವಾರ ಆದೇಶ ಹೊರಡಿಸಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ. ಅವರ ಜಾಗಕ್ಕೆ ಬಂಟ್ವಾಳ ತಾಲೂಕು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಸದಾಶಿವ ಅವರನ್ನು ನೇಮಿಸಲಾಗಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಸದಾಶಿವ ಅವರು ಡಿಎಂಒ ಅಧಿಕಾರ ವಹಿಸಿಕೊಳ್ಳಲು ನಿರ್ದೇಶಿಸಲಾಗಿದೆ. ಕರೊನಾ ಸೋಂಕು ಪ್ರಕರಣಗಳನ್ನು ನಿಭಾಯಿಸುವಲ್ಲಿ ರಾಜೇಶ್ವರಿ ದೇವಿ ಅವರ ಕಾರ್ಯಕ್ಷಮತೆ ಬಗ್ಗೆ ಅನೇಕರಿಂದ ಟೀಕೆ ವ್ಯಕ್ತವಾಗಿತ್ತು. ವರ್ಗಾಯಿಸುವ ಪ್ರಸ್ತಾಪ ಇದೆ ಎಂದು ಗುರುವಾರ ಬೆಳಗ್ಗೆ ಸಚಿವ ಕೋಟ ಸುಳಿವು ನೀಡಿದ್ದರು

    ಪಿಪಿಇ ಸ್ಥಳೀಯ ಉತ್ಪಾದನೆ
    ಪರ್ಸನಲ್ ಪ್ರೊಟೆಕ್ಷನ್ ಇಕ್ವಿಪ್‌ಮೆಂಟ್ಸ್(ಪಿಪಿಇ) ಕಿಟ್‌ಗಳು ಕೊರತೆಯಾಗದಂತೆ ಸ್ಥಳೀಯವಾಗಿ ಉತ್ಪಾದಿಸುವ ಕಾರ್ಖಾನೆಗಳಿಂದ ಪಡೆದುಕೊಳ್ಳಲು ನಿರ್ಧರಿಸಲಾಗಿದೆ, ಸದ್ಯಕ್ಕೆ ಬೆಂಗಳೂರು ಆರೋಗ್ಯ ಇಲಾಖೆಗೆ ಕೋರಿಕೆಪಟ್ಟಿ ಸಲ್ಲಿಸಿ ಪಡೆದುಕೊಳ್ಳಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

    ಮುಂದಿನ ಪರಿಸ್ಥಿತಿ ಅವಲೋಕಿಸಿಕೊಂಡು ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ 20 ಹಾಸಿಗೆಗಳ ಐಸೊಲೇಷನ್ ವಾರ್ಡ್‌ಗಳನ್ನು ತೆರೆಯಲಾಗುವುದು. ಇದೇ ರೀತಿ ತಾಲೂಕುಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಮುಂದಕ್ಕೆ ತಾಲೂಕು ಆಸ್ಪತ್ರೆ ಮತ್ತು ಸ್ಥಳೀಯ ಖಾಸಗಿ ಆಸ್ಪತ್ರೆಗಳೊಂದಿಗೆ ಸಮನ್ವಯ ಮಾಡಿಕೊಳ್ಳಲಾಗುವುದು.
    – ಕೋಟ ಶ್ರೀನಿವಾಸ ಪೂಜಾರಿ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts