More

    ಮಾವು ಬೆಳೆಗಾರರಿಗೆ ಕರೊನಾ ಕಾಟ

    ಶಶಿಧರ ಕುಲಕರ್ಣಿ ಮುಂಡಗೋಡ
    ಹಣ್ಣುಗಳ ರಾಜ ಮಾರುಕಟ್ಟೆಗೆ ಬಂದಾಗಿದೆ. ಆದರೆ, ಪ್ರತಿ ವರ್ಷಕ್ಕಿಂತ ಈ ವರ್ಷ ಗಣನೀಯ ಪ್ರಮಾಣದಲ್ಲಿ ಇಳುವರಿ ಕಡಿಮೆಯಾಗಿದ್ದು ಒಂದೆಡೆಯಾದರೆ, ಮತ್ತೊಂದೆಡೆ ಹೊರ ರಾಜ್ಯಗಳಲ್ಲಿ ಕರೊನಾ ಹಾವಳಿ ಪರಿಣಾಮ ಮಾವಿನ ಬೇಡಿಕೆಯಲ್ಲೂ ಕುಸಿತ ಕಂಡಿದೆ. ಹೀಗಾಗಿ ರೈತರು ಹಾಗೂ ಮಾವಿನಹಣ್ಣಿನ ವರ್ತಕರಲ್ಲಿ ನಿರಾಸೆಯ ಕಾಮೋಡ ಮೂಡಿದೆ.
    ಮಾರಕವಾದ ಹವಾಮಾನ ವೈಪರೀತ್ಯ: ಪಾಳಾ, ಕಲಕೊಪ್ಪ, ಕೋಡಂಬಿ, ಭದ್ರಾಪುರ ಭಾಗಗಳಲ್ಲಿ ಮಣ್ಣಿನ ಗುಣ ಮತ್ತು ಹವಾಮಾನದ ಪೂರಕ ವಾತಾವರಣದಿಂದ ಅತಿ ಹೆಚ್ಚು ಮಾವು ಬೆಳೆಯಲಾಗುತ್ತದೆ. ಆದರೆ, ಪ್ರಸಕ್ತ ಸಾಲಿನ ಹವಾಮಾನ ವೈಪರಿತ್ಯದಿಂದ ಮಾವು ಇಳುವರಿ ಕಡಿಯಾಗಿದೆ. ಹೂ ಬಿಡುವ ಹಂತದಲ್ಲಿದ್ದಾಗ ಅಕಾಲಿಕ ಮಳೆ, ಮೋಡ ಮುಸುಕಿದ ವಾತಾವರಣದಿಂದ, ಕಾಯಿ ಹಿಡಿದ ನಂತರ ಆಲಿಕಲ್ಲು ಮಳೆಯಿಂದ ಹಾಳಾಗಿ ಮತ್ತು ಇಬ್ಬನಿಯ ವಾತಾವರಣದಿಂದ ಕಾಯಿಗಳು ಉದುರಿ ಮಾವು ಬೆಳೆಗೆ ಹವಾಮಾನ ವೈಪರಿತ್ಯ ಮಾರಕವಾಯಿತು.
    ವಿವಿಧ ತಳಿಯ ಮಾವಿನಹಣ್ಣುಗಳು: ಈಗಾಗಲೆ ನಾನಾ ತಳಿಯ ಮಾವಿನಹಣ್ಣುಗಳು ಮಾರುಕಟ್ಟೆಗೆ ಬಂದಿವೆ. ಕೆಲವೊಂದು ಇನ್ನೂ ಬರಬೇಕಿದೆ. ಅವುಗಳಲ್ಲಿ ಆಪೂಸ್, ಪೈರಿ, ಸಿಂಧೂಲಾ, ಮಲ್ಲಿಕಾ ತಳಿಯ ಮಾವಿನಹಣ್ಣುಗಳು ಮಾರುಕಟ್ಟೆಗೆ ಬಂದಿವೆ. ಇನ್ನು ಬಿನಶಾ, ಕೇಸರ, ರತ್ನಾ ತಳಿಯ ಮಾವಿನಹಣ್ಣುಗಳು ಮಾರುಕಟ್ಟೆಗೆ ಬರಬೇಕಿದೆ.
    ಮಾವಿನಹಣ್ಣುಗಳ ದರ: ಹೆಚ್ಚಾಗಿ ಮಾರಾಟವಾಗುವ ಆಪೂಸ್ ತಳಿಯ ಹಣ್ಣು ಪ್ರತಿ ಕೆ.ಜಿ.ಗೆ 140 ರೂ. ಮತ್ತು ಪೈರಿ 130 ರೂ., ಸಿಂಧೂಲಾ 100 ರೂ., ರತ್ನಾ 130 ರೂ., ಕೇಸರ 150 ರೂ., ಬೇನಿಶಾ 80 ರೂ. ಮಲ್ಲಿಕಾ ಪ್ರತಿ ಕೆ.ಜಿ.ಗೆ 160 ರೂ. ನಂತೆ ಮಾರಾಟವಾಗುತ್ತಿವೆ.


    ಸುಮಾರು ಹತ್ತು ವರ್ಷಗಳಿಂದ ಮಾವಿನ ಹಣ್ಣಿನ ವ್ಯಾಪಾರ ಮಾಡುತ್ತಿದ್ದೇನೆ. ಈ ಸಲದ ವ್ಯಾಪಾರ ಆರಂಭಿಸಿ ಸುಮಾರು 8-10 ದಿನಗಳಾದವು. ಹುಬ್ಬಳ್ಳಿ-ಶಿರಸಿ ಮುಖ್ಯ ರಸ್ತೆ ಆಗಿರುವುದರಿಂದ ಪ್ರಯಾಣಿಕರು ವಾಹನಗಳನ್ನು ನಿಲ್ಲಿಸಿ ಮಾವಿನ ಹಣ್ಣುಗಳನ್ನು ಖರೀದಿಸುತ್ತಾರೆ. ಇದೇ ಮೊದಲ ಭಾರಿ ಪಾಳಾ ಭಾಗದ ಸುತ್ತಮುತ್ತ ಇಳುವರಿ ಕಡಿಮೆಯಾಗಿದೆ. ಪಾಳಾ ಭಾಗದ ಸುತ್ತಮುತ್ತಲಿನ ಮಾವಿನ ತೋಟಗಳನ್ನು ಗುತ್ತಿಗೆ ಹಿಡಿದು ಮಾವಿನ ಕಾಯಿಗಳನ್ನು ಕಟಾವು ಮಾಡಿ ಹಣ್ಣು ಮಾಡಿ ಮಾರಾಟ ಮಾಡುತ್ತೇವೆ. ಹೆಚ್ಚಾಗಿ ಹುಬ್ಬಳ್ಳಿ ಮಾರುಕಟ್ಟೆಗೆ ಮಾವಿನ ಹಣ್ಣುಗಳನ್ನು ಕಳುಹಿಸುತ್ತೇವೆ. ಸಾಮಾನ್ಯವಾಗಿ ಪ್ರತಿ ವರ್ಷ ವಿಶೇಷವಾಗಿ ಇಲ್ಲಿಂದ ಮಹಾರಾಷ್ಟ್ರಕ್ಕೆ ಮಾವಿನಹಣ್ಣುಗಳು ರಫ್ತಾಗುತ್ತಿದ್ದವು. ಆದರೆ, ಕರೊನಾ ಕಾಟದಿಂದ ಅಲ್ಲಿಗೆ ಮಾವಿನಹಣ್ಣುಗಳನ್ನು ಕಳಿಸಲು ಆಗುತ್ತಿಲ್ಲ. ಕಳೆದ ಬಾರಿಯಂತೆ ಈ ಬಾರಿಯೂ ಲಾಕ್​ಡೌನ್ ಆದರೆ ನಷ್ಟ ಅನುಭವಿಸಬೇಕಾಗುತ್ತದೆ.
    | ಅಬೀದ್​ಅಲಿ ಪಾಟೀಲ ಕಲಕೊಪ್ಪ ಗ್ರಾಮದ ಮಾವಿನ ಹಣ್ಣಿನ ವರ್ತಕ

    ಈ ಬಾರಿ ಪಾಳಾ ಭಾಗದ ಸುತ್ತಮುತ್ತ ಮಾವಿನ ಇಳುವರಿ ಕಡಿಮೆಯಾಗಿದೆ. ಆದರೆ, ಇಳುವರಿ ಕಡಿಮೆಯಾಗಲು ಹವಾಮಾನ ವೈಪರಿತ್ಯ ಮುಖ್ಯ ಕಾರಣವಲ್ಲ. ಏಕೆಂದರೆ ಬಿಸಿಲು ಅತಿಯಾಗಿದ್ದು, ಬಿರುಗಾಳಿ ಅಥವಾ ಇಬ್ಬನಿಯಿಂದಾಗಿ ಕಾಯಿ ಕಟ್ಟುವುದಿಲ್ಲ. ನನಗೆ ತಿಳಿದಂತೆ ಜಿಗಿ ಹುಳು ಹೆಚ್ಚಾಗಿ ಬೂದು ರೋಗ ಬಂದು, ಕೀಟ ನಾಶಕ ಬಳಸದಿರುವುದೇ ಕಾಯಿ ಕಟ್ಟುವ ಪ್ರಮಾಣ ಕಡಿಮೆಯಾಗಿರಬಹುದು. ಒಂದು ಮಾವಿನ ಮರದಿಂದ ಕನಿಷ್ಠ 1000-1500 ಕಾಯಿಗಳು ಬರಬೇಕು. ಆದರೆ ಈಗ ಸುಮಾರು 300-400 ಕಾಯಿಗಳು ಮಾತ್ರ ಬಿಟ್ಟಿವೆ.
    | ಅಣ್ಣಪ್ಪ ನಾಯ್ಕ ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts