More

    ಹೋಳಿ ಸಂಭ್ರಮಕ್ಕೆ ಕರೊನಾ ಅಡ್ಡಿ

    ಧಾರವಾಡ: ಜಿಲ್ಲೆಯಲ್ಲಿ ಕರೊನಾ ಹಾವಳಿ ದಿನೇದಿನೆ ಹೆಚ್ಚುತ್ತಲೇ ಇದೆ. ಹೀಗಾಗಿ ಈ ಬಾರಿಯ ಹೋಳಿ ಸಂಭ್ರಮಕ್ಕೆ ಬ್ರೇಕ್ ಬೀಳಲಿದ್ದು, ಕೇವಲ ಸಾಂಪ್ರದಾಯಿಕ ಹಾಗೂ ಸಂಕ್ಷಿಪ್ತ ಆಚರಣೆಗೆ ಸೀಮಿತವಾಗಲಿದೆ.

    ಕಳೆದ ವರ್ಷ ಹೋಳಿ ಸಂದರ್ಭದಲ್ಲೇ ಕರೊನಾ ಹಾವಳಿ ಇದ್ದರೂ ಹೆಚ್ಚಿನ ಪರಿಣಾಮ ಬೀರಲಿಲ್ಲ. ಈ ವರ್ಷ ಕರೊನಾ 2ನೇ ಅಲೆ ಅಬ್ಬರದ ಮುನ್ಸೂಚನೆ ಕಾರಣಕ್ಕೆ ಸರ್ಕಾರದ ಆದೇಶದಂತೆ, ಸಾರ್ವಜನಿಕ ಹಾಗೂ ಗುಂಪು ಆಚರಣೆ ನಿಷೇಧಿಸಿ ಜಿಲ್ಲಾಡಳಿತ ಆದೇಶಿದೆ. ಈಗಾಗಲೇ ಸಮಿತಿಗಳ ಸಭೆ ನಡೆಸಿ ಸೂಚನೆಗಳನ್ನು ನೀಡಿದ್ದು, ಸಂಕ್ಷಿಪ್ತ ಆಚರಣೆಗೆ ಸಮಿತಿ ಪದಾಧಿಕಾರಿಗಳೂ ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ಹೋಳಿ ಸಂಭ್ರಮಕ್ಕೆ ಬ್ರೇಕ್ ಬೀಳಲಿದೆ.

    ಜಿಲ್ಲಾಡಳಿತದ ಸೂಚನೆಗಿಂತ ಜನರೇ ಸಾಕಷ್ಟು ಎಚ್ಚರ ವಹಿಸಿದ್ದಾರೆ. ಈಗಾಗಲೇ ಒಂದು ವರ್ಷ ಕರೊನಾ ಕಾಟ ಅನುಭವಿಸಿದ್ದಾಗಿದೆ. ಇನ್ನು ಅದರ ಸಹವಾಸವೇ ಬೇಡ ಎಂದು ಬಹುತೇಕರು ಮನೆಗಳ ಬಳಿಯೇ ಹೋಳಿ ಆಚರಣೆಗೆ ನಿರ್ಧರಿಸಿದಂತಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಬಣ್ಣದ ವ್ಯಾಪಾರ ಮಂಕಾಗಿದೆ. ಪಿಚಕಾರಿ, ಮುಖವಾಡ, ತುತ್ತೂರಿ ಖರೀದಿ ತುಸು ಹೆಚ್ಚಿದೆ.

    ನಗರದಲ್ಲಿ ಹಲಗೆ ಹಬ್ಬ, ರತಿ-ಕಾಮಣ್ಣ ಮೆರವಣಿಗೆ ಹಾಗೂ ಗಡಿಗೆ ಒಡೆಯುವ ಸ್ಪರ್ಧೆಗಳನ್ನೂ ರದ್ದು ಮಾಡಲಾಗಿದೆ. ಕಳೆದ ಬಾರಿ ಕರೊನಾ ಹಾವಳಿ ಹೆಚ್ಚಾಗಬಹುದು ಎಂಬ ಕಾರಣಕ್ಕೆ ಗಡಿಗೆ ಒಡೆಯುವ ಸ್ಪರ್ಧೆ ನಡೆದಿರಲಿಲ್ಲ. ಇದರಿಂದ ಸತತ 2 ವರ್ಷಗಳಿಂದ ಜನರಲ್ಲಿ ಕೊಂಚ ನಿರಾಸೆ ಮೂಡಿದಂತಾಗಿದೆ. ನಗರದ ವಿವಿಧ ಕಡೆಗಳಲ್ಲಿ ಕಾಮಣ್ಣನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿದ್ದು, ಯಾವುದೇ ಮೆರವಣಿಗೆ ಇಲ್ಲದೆ ಕೆಲ ಜನರು ಮಾತ್ರ ಸೇರಿ ದಹನ ಮಾಡಲು ತೀರ್ವನಿಸಿದ್ದಾರೆ.

    ಮೆರವಣಿಗೆ ರದ್ದು

    ಹುಬ್ಬಳ್ಳಿ: ಕರೊನಾ 2ನೇ ಅಲೆಯ ಆತಂಕದ ಹಿನ್ನೆಲೆಯಲ್ಲಿ ಈ ವರ್ಷ ಹೋಳಿ ಹಬ್ಬದ ಮೆರವಣಿಗೆಯನ್ನು ರದ್ದುಪಡಿಸಲಾಗಿದೆ ಎಂದು ಎಸ್​ಎಸ್​ಕೆ ಕಮರಿಪೇಟ ಪಂಚ ಕಮಿಟಿ ತಿಳಿಸಿದೆ. ರತಿ-ಮನ್ಮಥರ ಮೂರ್ತಿ ಪ್ರತಿಷ್ಠಾಪನೆ ಮಾಡಿರುವ ಸ್ಥಳದಲ್ಲಿಯೇ ಏಪ್ರಿಲ್ 1ರಂದು ಬೆಳಗ್ಗೆ 8ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಕೇವಲ ಉಡಿ ತುಂಬಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.

    ಮದ್ಯ ನಿಷೇಧ

    ಹುಬ್ಬಳ್ಳಿ: ಹೋಳಿ ಹಬ್ಬದ ಪ್ರಯುಕ್ತ ಧಾರವಾಡ ನಗರದಲ್ಲಿ ಭಾನುವಾರ ಸಂಜೆ 6ರಿಂದ ಮದ್ಯ ಮಾರಾಟ, ಸಾಗಾಟ, ಮದ್ಯಪಾನ ನಿಷೇಧಿಸಿ ಪೊಲೀಸ್ ಆಯುಕ್ತ ಲಾಭೂರಾಮ ಅವರು ಆದೇಶ ಹೊರಡಿಸಿದ್ದಾರೆ. ಮಾ. 30ರ ಬೆಳಗ್ಗೆ 6ರವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ. ಹುಬ್ಬಳ್ಳಿ ನಗರದಲ್ಲಿ ಏ. 1ರಂದು ಬೆಳಗ್ಗೆ 6ರಿಂದ ಏ. 2ರ ಬೆಳಗ್ಗೆ 6ರವರೆಗೆ ಮದ್ಯ ನಿಷೇಧಿಸಿ ಆದೇಶ ಮಾಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

    ಎಲ್ಲೆಲ್ಲಿ ರತಿ-ಮನ್ಮಥರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ, ಸಭೆ ಸಮಾರಂಭ ಏರ್ಪಡಿಸಲಾಗುತ್ತಿದೆ, ಕೋವಿಡ್ ನಿಯಮ ಉಲ್ಲಂಘಿಸ ಲಾಗುತ್ತಿದೆ ಎಂಬ ಕುರಿತು ಠಾಣಾಧಿ ಕಾರಿಗಳಿಂದ ಮಾಹಿತಿ ತರಿಸಿಕೊಂಡು ಪರಿಶೀಲಿಸಲಾಗುವುದು.

    | ಲಾಭೂರಾಮ

    ಹು-ಧಾ ಪೊಲೀಸ್ ಆಯುಕ್ತರು



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts