More

    ಹಾವೇರಿ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಇಳಿಮುಖ

    ವಿಜಯವಾಣಿ ವಿಶೇಷ ಹಾವೇರಿ

    ದೇಶದಲ್ಲಿ ಕರೊನಾ ಮಹಾಮಾರಿಯ ಎರಡನೇ ಅಲೆಯ ಆತಂಕ ಹೆಚ್ಚುತ್ತಿರುವ ನಡುವೆಯೂ ಜಿಲ್ಲೆಯಲ್ಲಿ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೆ ಇಳಿಮುಖವಾಗುತ್ತಿದೆ.

    ಜಿಲ್ಲೆಯ ಕೆಲ ತಾಲೂಕಿನಲ್ಲಿ ವೈರಸ್ ಪ್ರಕರಣಗಳ ಸಂಖ್ಯೆ ಶೂನ್ಯಕ್ಕೆ ತಲುಪಿದೆ. ಶೀಘ್ರದಲ್ಲಿಯೇ ಜಿಲ್ಲೆಯಲ್ಲಿ ಕರೊನಾ ವೈರಸ್ ಪ್ರಕರಣಗಳು ಶೂನ್ಯವಾಗಲಿವೆ ಎಂಬ ವಿಶ್ವಾಸ ವೈದ್ಯರಲ್ಲಿದೆ. ಜಿಲ್ಲೆಯಲ್ಲಿ ಲಾಕ್​ಡೌನ್ ಜಾರಿಯಲ್ಲಿದ್ದಾಗ ಕಾಣಿಸಿಕೊಳ್ಳದ ಕರೊನಾ ಪ್ರಕರಣಗಳು ಲಾಕ್​ಡೌನ್ ಸಡಿಲಗೊಳ್ಳುತ್ತಿದ್ದಂತೆ ಒಂದೊಂದಾಗಿ ಕಾಣಿಸಿಕೊಳ್ಳಲು ಆರಂಭಿಸಿದವು. ಜಿಲ್ಲೆಯಲ್ಲಿ ಕಳೆದ ಮೇ 3ರಂದು ಕರೊನಾ ಮೊದಲ ಪ್ರಕರಣ ಪತ್ತೆಯಾಗಿತ್ತು. ಆಗಸ್ಟ್ ಅಂತ್ಯದ ವೇಳೆಗೆ ಈ ಸಂಖ್ಯೆ 5 ಸಾವಿರ ಗಡಿ ತಲುಪಿತ್ತು. ಆಗಸ್ಟ್ ತಿಂಗಳೊಂದರಲ್ಲಿಯೇ 89ಜನರು ಸೋಂಕಿನಿಂದ ಮೃತಪಡುವ ಮೂಲಕ ಸಾಕಷ್ಟು ಭೀತಿ ಉಂಟು ಮಾಡಿತ್ತು. ಇದರಿಂದ ಸಣ್ಣ ಕೆಮ್ಮು, ನೆಗಡಿ, ಜ್ವರಕ್ಕೂ ಆತಂಕ ಪಡುವ ಪರಿಸ್ಥಿತಿ ನಿರ್ವಣಗೊಂಡಿತ್ತು. ಜಿಲ್ಲಾಡಳಿತ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದರೂ ವೈರಸ್ ಹಾವಳಿ ನಿಯಂತ್ರಣಕ್ಕೆ ಬಂದಿರಲಿಲ್ಲ. ಆದರೆ, ಕಳೆದ ಮೂರ್ನಾಲ್ಕು ತಿಂಗಳನಿಂದ ಪ್ರಕರಣಗಳು ಕಡಿಮೆಯಾಗುತ್ತಿವೆ. ಡಿ. 14ರ ನಂತರ ಯಾವುದೇ ಸಾವು ಸಂಭವಿಸಿಲ್ಲ. ಜಿಲ್ಲೆಯಲ್ಲಿ ಈವರೆಗೆ ಅಂದಾಜು 2ಲಕ್ಷ ಜನರಿಗೆ ಕರೊನಾ ಸಂಬಂಧ ಆರೋಗ್ಯ ತಪಾಸಣೆ ಮಾಡಲಾಗಿದೆ.

    ಜಿಲ್ಲೆಯಲ್ಲಿ ಈವರೆಗೆ 11,288 ಪಾಸಿಟಿವ್ ಪ್ರಕರಣ ದೃಢಪಟ್ಟಿವೆ. 11,090 ಜನ ಗುಣವಾಗಿ ಬಿಡುಗಡೆ ಹೊಂದಿದ್ದಾರೆ. 195 ಜನ ಮೃತಪಟ್ಟಿದ್ದಾರೆ . ಈಗಲೂ ನಿತ್ಯ ನೂರಾರು ಜನರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಸದ್ಯ 3 ಪ್ರಕರಣಗಳು ಸಕ್ರಿಯವಾಗಿವೆ. ಹಾವೇರಿ, ಹಿರೇಕೆರೂರ ತಾಲೂಕಿನಲ್ಲಿ ತಲಾ ಒಬ್ಬರು ಹಾಗೂ ಇತರ ಒಂದು ಪ್ರಕರಣ ಸಕ್ರಿಯವಾಗಿವೆ. ರಾಣೆಬೆನ್ನೂರ, ಬ್ಯಾಡಗಿ, ಸವಣೂರ, ಶಿಗ್ಗಾಂವಿ, ಹಾನಗಲ್ಲ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಶೂನ್ಯಕ್ಕೆ ಇಳಿದಿದೆ. ಕಳೆದ 2ತಿಂಗಳಿನಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗುವವರ ಸಂಖ್ಯೆಯೂ ಸ್ಥಗಿತಗೊಂಡಿದ್ದು, ಸೋಂಕು ತಗುಲಿದವರು ಆರೋಗ್ಯವಾಗಿದ್ದು, ಮನೆಯಲ್ಲಿಯೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

    ನಿಮಯ ಪಾಲನೆ ಅವಶ್ಯ: ಕರೊನಾ ಎರಡನೇ ಅಲೆ ಎದುರಿಸಲು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ. ಕರೊನಾ ವೈರಸ್ ಬಗ್ಗೆ ನಿರ್ಲಕ್ಷ್ಯ ಬೇಡ, ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಪರಸ್ಪರ ಅಂತರ ಕಾಪಾಡಿಕೊಳ್ಳಬೇಕು ಹಾಗೂ ಕಡ್ಡಾಯವಾಗಿ ಲಸಿಕೆ ಪಡೆಯುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಬಹುತೇಕ ಜನ ಮಾಸ್ಕ್ ಧರಿಸುತ್ತಿಲ್ಲ. ಪರಸ್ಪರ ಅಂತರವನ್ನು ನಿರ್ಲಕ್ಷಿಸುತ್ತಿರುವುದು ಕಂಡುಬರುತ್ತಿದೆ. ಜನ ಎಚ್ಚರಿಕೆ ವಹಿಸುವುದು ಅವಶ್ಯ ಎಂಬ ಕಳಕಳಿ ಆರೋಗ್ಯ ಇಲಾಖೆಯದ್ದಾಗಿದೆ.

    ಮಾಸ್ಕ್ ಧರಿಸದಿದ್ದರೆ ದಂಡ: ಕರೊನಾ ಎರಡನೇ ಅಲೆ ದೇಶಾದ್ಯಂತ ಆರಂಭವಾಗಿರುವ ಹಿನ್ನೆಲೆಯಲ್ಲಿ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾಸ್ಕ್ ಧರಿಸದೆ ಓಡಾಡುವವರಿಗೆ ಈ ಹಿಂದಿನಂತೆ 100 ರೂಪಾಯಿ ದಂಡ ವಿಧಿಸಲು ಸರ್ಕಾರ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ರಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಜನರು ಸಂಚರಿಸುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಕೋವಿಡ್ ಮಾರ್ಗಸೂಚಿ ಪಾಲಿಸಬೇಕು ಎಂದು ಪಪಂ ಆಡಳಿತಾಧಿಕಾರಿ ಕೆ. ಗುರುಬಸವರಾಜ, ಪಪಂ ಮುಖ್ಯಾಧಿಕಾರಿ ಉಮೇಶ ಗುಡ್ಡದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ಕರೊನಾ ಸಂಪೂರ್ಣ ಇಳಿಮುಖವಾಗುತ್ತಿದೆ. ಆದರೂ ಸುರಕ್ಷತೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ. ದೇಶದಲ್ಲಿ ಕರೊನಾ ಎರಡನೇ ಅಲೆ ಕಂಡು ಬರುತ್ತಿದೆ ಎನ್ನಲಾಗುತ್ತಿದ್ದು, ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಕೋವಿಶೀಲ್ಡ್ ಲಸಿಕಾಕರಣ ಆರಂಭಗೊಂಡಿದೆ. ಜನರು ಭೀತಿಗೆ ಒಳಗಾಗಬಾರದು. ಆದರೆ, ಕರೊನಾ ಮಾರ್ಗಸೂಚಿ ಪಾಲನೆಯನ್ನು ಮಾತ್ರ ಕೈಬಿಡಬಾರದು.

    | ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ, ಡಿಎಚ್​ಒ, ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts