More

    ಎಚ್‌ಐವಿ ಬಾಧಿತರಿಗೆ ಮನೆ ಬಾಗಿಲಿಗೆ ಔಷಧ

    ಹೀರಾನಾಯ್ಕ ಟಿ. ವಿಜಯಪುರ

    ಕಿಲ್ಲರ್ ಕರೊನಾದ ನಡುವೆಯೂ ಎಚ್‌ಐವಿ ಬಾಧಿತರಿಗೆ ಮನೆ ಬಾಗಿಲಿಗೆ ಔಷಧ ರವಾನಿಸಲು ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ವಿಜಯಪುರ ಜಿಲ್ಲೆಯಲ್ಲಿ ಒಟ್ಟು 9,103 ಏಡ್ಸ್ ರೋಗಿಗಳಿದ್ದು, ಪ್ರತಿದಿನ ಔಷದೋಪಚಾರ ತಗೆದುಕೊಳ್ಳಬೇಕಿದ್ದು, ಅವರಿಗೆ ಮನೆ ಬಾಗಿಲಿಗೆ ಮಾತ್ರೆ, ಔಷಧಗಳನ್ನು ತಲುಪಿಸಲಾಗುತ್ತಿದೆ.

    ಔಷಧ ತಲುಪಿಸುತ್ತಿರುವ ಸಿಬ್ಬಂದಿ

    ಎಚ್‌ಐವಿ ಬಾಧಿತರು ಪ್ರತಿದಿನ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲವೆ ಜಿಲ್ಲಾಸ್ಪತ್ರೆಗೆ ಆಗಮಿಸಿ ಔಷಧಗಳನ್ನು ಪಡೆದುಕೊಂಡು ಹೋಗಬೇಕು. ಆದರೆ ಕರೊನಾ ಮಹಾಮಾರಿ ಒಕ್ಕರಿಸಿರುವ ಹಿನ್ನೆಲೆ ಏಡ್ಸ್ ಬಾಧಿತರಿಗೆ ಕರೊನಾ ಸೋಂಕು ಅತಿ ಬೇಗನೆ ತಗಲುವ ಸಾಧ್ಯತೆ ಹೆಚ್ಚಾಗಿರುವುದರಿಂದ ಆರೋಗ್ಯ ಇಲಾಖೆ ಸಿಬ್ಬಂದಿ ರೋಗಿಗಳ ಮನೆಗೆ ಔಷಧ ತಲುಪಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 9,103 ಏಡ್ಸ್ ರೋಗಿಗಳಿದ್ದು, ಎಲ್ಲರಿಗೆ ಈಗಾಗಲೇ ಮಾತ್ರೆಗಳನ್ನು ರವಾನಿಸಲಾಗಿದೆ ಎಂದು ಹಿರಿಯ ಆಪ್ತಸಮಾಲೋಚಕ ರವಿ ಕಿತ್ತೂರ ತಿಳಿಸುತ್ತಾರೆ.

    ವಿಜಯಪುರದಲ್ಲಿ ಅತಿಹೆಚ್ಚು ಸಾವು

    ಕಳೆದ 2004ರಿಂದ ಈ ವರೆಗೆ ಜಿಲ್ಲೆಯಲ್ಲಿ ಒಟ್ಟು 4,863 ಜನ ಏಡ್ಸ್‌ಗೆ ಬಲಿಯಾಗಿದ್ದು, ಅದರಲ್ಲಿ 2,852 ಪುರುಷರು, 1,820 ಮಹಿಳೆಯರು, 94 ಬಾಲಕರು, 92 ಬಾಲಕಿಯರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಮಾಹಿತಿಯಿಂದ ತಿಳಿದು ಬಂದಿದೆ. ಅದರಲ್ಲಿ ವಿಜಯಪುರ ತಾಲೂಕಿನಲ್ಲೇ ಅತಿಹೆಚ್ಚು (3320) ಜನರು ಬಲಿಯಾಗಿದ್ದಾರೆ. ಸಿಂದಗಿ 635, ಇಂಡಿ 417 ಹಾಗೂ ಮುದ್ದೇಬಿಹಾಳ 491 ಜನರು ಇಹಲೋಕ ತ್ಯಜಿಸಿದ್ದಾರೆ ಎನ್ನುವ ಮಾಹಿತಿ ಆರೋಗ್ಯ ಇಲಾಖೆ ಅಂಕಿ-ಅಂಶದಿಂದ ಬೆಳಕಿಗೆ ಬಂದಿದೆ.

    ಶೇ.33 ರಿಂದ 1.24ಗೆ ಇಳಿಕೆ

    ಜಿಲ್ಲೆಯಲ್ಲಿ ಕಳೆದ 2006ರಲ್ಲಿ ಎಚ್‌ಐವಿ ಸೋಂಕಿತರ ಪ್ರಮಾಣ ಶೇ.33.32ವಿದ್ದು, ಪ್ರಸಕ್ತ ಶೇ.1.24ಕ್ಕೆ ಇಳಿಕೆ ಕಂಡಿದೆ. ಕಳೆದ 15 ವರ್ಷಗಳಲ್ಲಿ ಒಟ್ಟು 5.69 ಲಕ್ಷ ಜನರಿಗೆ ಎಚ್‌ಐವಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ 25,890 ಜನರಲ್ಲಿ ಎಚ್‌ಐವಿ ಇರುವುದು ಕಂಡು ಬಂದಿದೆ. 2006ರ ನಂತರ ಸತತ 13 ವರ್ಷಗಳಲ್ಲಿ ಸೋಂಕಿತರ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ. ಕಳೆದ 2018-19ರಲ್ಲಿ ಶೇ.1.24 ರಷ್ಟು ಇತ್ತು. ಪ್ರಸ್ತುತ ಅನುಪಾತ ಶೇ.1.24 ಗೆ ಇಳಿಕೆ ಆಗಿದೆ. ಇನ್ನೂ ಗರ್ಭಿಣಿಯರಲ್ಲೂ ಎಚ್‌ಐವಿ ಸೋಂಕು ಕಂಡು ಬಂದಿದ್ದು, ಪ್ರಸ್ತುತ ಶೇ.0.05 ರಷ್ಟು 40 ಗರ್ಭಿಣಿಯರು ಎಚ್‌ಐವಿಯಿಂದ ಬಳಲುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ತಿಳಿಸಿದೆ.

    ಚಿಣ್ಣರ ಜೀವ ಹಿಂಡುತ್ತಿದೆ ಎಚ್‌ಐವಿ

    ಎಚ್‌ಐವಿ ಚಿಣ್ಣರ ಜೀವ ಹಿಂಡುತ್ತಿದೆ. ಜಿಲ್ಲೆಯಲ್ಲಿ 726 ಮಕ್ಕಳು ಎಚ್‌ಐವಿಯಿಂದ ಬಳಲುತ್ತಿದ್ದಾರೆ. ಅದರಲ್ಲಿ ವಿಜಯಪುರ 314, ಸಿಂದಗಿ 79, ಇಂಡಿ 97, ಮುದ್ದೇಬಿಹಾಳ 106, ಬಸವನ ಬಾಗೇವಾಡಿ 130 ಮಕ್ಕಳು ಎಚ್‌ಐವಿಗೆ ತುತ್ತಾಗಿದ್ದಾರೆ. ಮಕ್ಕಳ ಪಾಲನೆಗೆ ಸರ್ಕಾರದಿಂದ ಪ್ರತಿ ತಿಂಗಳು ಸಾವಿರ ರೂ. ಪ್ರೋತ್ಸಾಹಧನವನ್ನು ಸಂಘ-ಸಂಸ್ಥೆಗಳಿಗೆ ನೀಡುತ್ತಿದೆ. ಶಿಕ್ಷಣ ಹಕ್ಕು ಕಾಯ್ದೆಯಡಿ ಮೂವರು ಮಕ್ಕಳಿಗೆ ಉಚಿತ ಶಿಕ್ಷಣ ಸೌಲಭ್ಯ ಕೊಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿತ್ತಾರೆ.

    ಕರೊನಾದಿಂದಾಗಿ ಪರೀಕ್ಷೆ ವಿಳಂಬ

    ಪ್ರತಿ ವರ್ಷವೂ ಎಚ್‌ಐವಿ ಪರೀಕ್ಷೆ ನಿಗದಿತ ಗುರಿಯಂತೆ ನಡೆಯುತ್ತಿದ್ದವು. ಆದರೆ, ಈ ವರ್ಷದಲ್ಲಿ ಕರೊನಾ ಮಹಾಮಾರಿ ಆವರಿಸಿದ್ದರಿಂದಾಗಿ ಪರೀಕ್ಷೆ ವಿಳಂಬಗೊಂಡಿದೆ. 2020-21ನೇ ಸಾಲಿನಲ್ಲಿ 96,432 ಜನರನ್ನು ಪರೀಕ್ಷೆಗೆ ಒಳಪಡಿಸುವ ಗುರಿ ಹೊಂದಲಾಗಿತ್ತು. ಆದರೆ, ಈ ವರೆಗೆ 19,200 ಜನರಿಗೆ ಪರೀಕ್ಷೆಗೆ ಒಳಪಡಿಸಲಾಗಿದೆ. ಶೇ.19.9 ರಷ್ಟು ಮಾತ್ರ ಪ್ರಗತಿ ಸಾಧಿಸಲು ಸಾಧ್ಯವಾಗಿದ್ದು, ಇನ್ನೂ ಮುಂದಿನ ದಿನಗಳಲ್ಲಿ ಪರೀಕ್ಷೆಯನ್ನು ತೀವ್ರಗೊಳಿಸಲಾಗುವುದು ಎಂದು ಡಿಎಚ್‌ಒ ಡಾ. ಮಹೇಂದ್ರ ಕಾಪ್ಸೆ ತಿಳಿಸುತ್ತಾರೆ.

    ಏಡ್ಸ್ ರೋಗಿಗಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವ ಹಿನ್ನೆಲೆಯಲ್ಲಿ ಅವರಿಗೆ ಮನೆಯಲ್ಲಿಯೇ ಮಾತ್ರೆಗಳನ್ನು ಪೂರೈಸುವ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಶೇ.100 ರಷ್ಟು ರೋಗಿಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿ ಮೂಲಕ ಔಷಧಗಳನ್ನು ನೀಡಲಾಗಿದೆ. ಕರೊನಾ ಹಿನ್ನೆಲೆಯಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್, ಸ್ಯಾನಿಟೈಸರ್ ಬಳಕೆ ಕುರಿತು ಜಾಗೃತಿ ಮೂಡಿಸಲಾಗಿದೆ.
    ಡಾ.ಈರಣ್ಣ ಧಾರವಾಡಕರ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts