More

    ದ.ಕ ಮತ್ತೊಂದು ಪಾಸಿಟಿವ್, ಬಂಟ್ವಾಳದ ಮೃತ ಮಹಿಳೆ ನೆರೆಮನೆ ವೃದ್ಧೆಗೂ ಸೋಂಕು

    ಮಂಗಳೂರು/ಬಂಟ್ವಾಳ: ದಕ್ಷಿಣ ಕನ್ನಡದ ಕರೊನಾ ಸೋಂಕಿತರ ಪಟ್ಟಿಗೆ ಮತ್ತೊಂದು ಪಾಸಿಟಿವ್ ಪ್ರಕರಣ ಸೇರ್ಪಡೆಗೊಂಡಿದೆ.

    ಏ.19ರಂದು ಮೃತರಾಗಿದ್ದ ಬಂಟ್ವಾಳ ಕಸ್ಬಾದ ನಿವಾಸಿ 45 ವರ್ಷದ ಮಹಿಳೆಯ ನೆರೆಮನೆಯ 67 ವರ್ಷ ವಯಸ್ಸಿನ ವೃದ್ಧೆಗೂ ಕರೊನಾ ಸೋಂಕು ಇರುವುದನ್ನು ಲ್ಯಾಬ್ ವರದಿ ದೃಢಪಡಿಸಿದೆ.
    ಮೃತಪಟ್ಟ ಮಹಿಳೆ ಆಸ್ಪತ್ರೆಗೆ ದಾಖಲಾದ ಏ.18ರಂದೇ ವೃದ್ಧೆ ಕೆಮ್ಮು, ಜ್ವರ, ಉಸಿರಾಟದ ತೊಂದರೆಯೊಂದಿಗೆ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಅಸ್ತಮಾ ಹಾಗೂ ಮಧುಮೇಹವೂ ಇದ್ದು, ಪ್ರಸ್ತುತ ನ್ಯುಮೋನಿಯಾ ಇದೆ. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈಕೆ ಮೃತರಾದ ಮಹಿಳೆಯ ಪತಿಯ ದೂರದ ಸಂಬಂಧಿಯೂ ಹೌದು.
    ಈ ಮೂಲಕ ಜಿಲ್ಲೆಯ ಒಟ್ಟು ಕರೊನಾ ಪ್ರಕರಣಗಳು 16ಕ್ಕೆ ಏರಿಕೆಯಾಗಿವೆ. ಈಗಾಗಲೇ 12 ಮಂದಿ ಬಿಡುಗಡೆಯಾಗಿದ್ದು, ಉಪ್ಪಿನಂಗಡಿಯ ದಂಪತಿ ಸಹಿತ ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ.

    ಮಂಗಳವಾರ ಒಟ್ಟು 64 ಮಂದಿಯನ್ನು ತಪಾಸಣೆಗೊಳಪಡಿಸಲಾಗಿದ್ದು, ಎನ್‌ಐಟಿಕೆ ಸುರತ್ಕಲ್‌ನಲ್ಲಿ 39, ಮನೆಯಲ್ಲಿ 31, ಇಎಸ್‌ಐ ಆಸ್ಪತ್ರೆಯಲ್ಲಿ 10 ಮಂದಿ ನಿಗಾವಣೆಯಲ್ಲಿದ್ದಾರೆ. 6042 ಮಂದಿ 28 ದಿನದ ನಿಗಾವಣೆ ಪೂರ್ತಿಗೊಳಿಸಿದ್ದಾರೆ. ಮಂಗಳವಾರ ಒಟ್ಟು 83 ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿದ್ದು 48 ಸ್ವೀಕೃತಗೊಂಡಿದೆ, ಅದರಲ್ಲಿ ಒಂದು ಪಾಸಿಟಿವ್ ಹಾಗೂ 47 ನೆಗೆಟಿವ್ ಆಗಿರುತ್ತದೆ, ಇನ್ನೂ 429ರ ವರದಿ ಬರಬೇಕಿದೆ. ಫೀವರ್ ಕ್ಲಿನಿಕ್‌ಗಳಲ್ಲಿ 813 ಮಂದಿಗೆ ಚಿಕಿತ್ಸೆ ನೀಡಲಾಗಿದೆ.

    35 ಮಂದಿಯ ಮಾದರಿ ಸಂಗ್ರಹ: ಬಂಟ್ವಾಳದ ಮೃತಪಟ್ಟ ಮಹಿಳೆಯ ಜೊತೆ ಸಂಪರ್ಕಕ್ಕೆ ಬಂದಿರುವ ಒಟ್ಟು 35 ಮಂದಿಯ ಸ್ಯಾಂಪಲ್‌ಗಳನ್ನು ಮಂಗಳವಾರ ಪಡೆದು ಪರೀಕ್ಷೆಗೆ ಕಳುಹಿಸಲಾಗಿದ್ದು, ಏ.22ರಂದು ಅದರ ವರದಿ ಸಿಗಲಿದೆ.

    1,82,161 ಮನೆ ಸಮೀಕ್ಷೆ: ಆಶಾ ಮತ್ತು ಎಂಪಿಡಬ್ಲೂೃ ಕಾರ್ಯಕರ್ತೆಯರು ಇದುವರೆಗೆ ಬಂಟ್ವಾಳ 22,442, ಬೆಳ್ತಂಗಡಿ 19,311, ಮಂಗಳೂರು 66,025, ಪುತ್ತೂರು 38,217, ಸುಳ್ಯ 36,166 ಮನೆಗಳಲ್ಲಿ ಐಎಲ್‌ಐ (ಉಸಿರಾಟ ಸಮಸ್ಯೆ) ಸಮೀಕ್ಷೆ ಪೂರ್ಣಗೊಳಿಸಿದ್ದು ಉಪಯುಕ್ತ ಮಾಹಿತಿ ನೀಡಿದ್ದಾರೆ.

    ವೃದ್ಧೆ ಮನೆಯವರಿಗೆ ಕ್ವಾರಂಟೈನ್: ಕರೊನಾ ದೃಢಪಟ್ಟ ಬಂಟ್ವಾಳದ ವೃದ್ಧೆಯ ಮನೆಯಲ್ಲಿ ಒಟ್ಟು ಐದು ಮಂದಿ ವಾಸವಾಗಿದ್ದಾರೆ. ವೃದ್ಧೆಯ ಪತಿ, ಇಬ್ಬರು ಮಕ್ಕಳು ಹಾಗೂ ಮಗಳ ಮಗು. ಭಾನುವಾರವೇ ಇವರೆಲ್ಲರನ್ನೂ ಹೋಮ್ ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದು, ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

    ಬಂಟ್ವಾಳ ಒಟ್ಟು 4 ಪ್ರಕರಣ: ಬಂಟ್ವಾಳ ತಾಲೂಕಿನಲ್ಲಿ ಸಜಿಪನಡುವಿನ ಮಗು, ತುಂಬೆಯ ವಯಸ್ಕ ಸಹಿತ ಇದುವರೆಗೆ ಒಟ್ಟು 4 ಕರೊನಾ ಪ್ರಕರಣಗಳು ದೃಢವಾಗಿದೆ. ಜಿಲ್ಲೆಯಲ್ಲೇ ಅತಿ ಹೆಚ್ಚು ಪ್ರಕರಣಗಳನ್ನು ದಾಖಲಿಸಿರುವ ತಾಲೂಕು ಇದು. 4 ಪ್ರಕರಣಗಳ ಪೈಕಿ ಒಬ್ಬರು ಮೃತಪಟ್ಟಿದ್ದಾರೆ. ಇಬ್ಬರು ಗುಣಮುಖರಾಗಿ ಬಿಡುಗಡೆಗೊಂಡಿದ್ದು, ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. 34 ಮಂದಿ ಹೋಂ ಕ್ವಾರೈಂಟೈನ್‌ನಲ್ಲಿದ್ದಾರೆ.

    ತಾಲೂಕಿನಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಎದುರಿಸಲು ತಾಲೂಕು ಆಡಳಿತ ತಯಾರಾಗುತ್ತಿದೆ. ಭಾನುವಾರ ಮಹಿಳೆ ಮೃತಪಟ್ಟ ಬಳಿಕ ಅವರ ಮನೆಯ 100 ಮೀ. ವ್ಯಾಪ್ತಿಯನ್ನು ಕಂಟೈನ್ಮೆಂಟ್ ವಲಯ ಎಂದು ಗುರುತಿಸಿ ಸೀಲ್‌ಡೌನ್ ಮಾಡಲಾಗಿತ್ತು. ಸೋಮವಾರ ಇದು ಜಾರಿಗೆ ಬಂದಿದ್ದು, 28 ದಿನ ನಿರ್ಬಂಧ ಮಾಡುವುದಾಗಿ ತಿಳಿಸಲಾಗಿತ್ತು. ಮಂಗಳವಾರ ಮತ್ತೊಂದು ಪ್ರಕರಣ ದೃಢಪಟ್ಟ ಹಿನ್ನೆಲೆಯಲ್ಲಿ ಇದು ವಿಸ್ತರಣೆಯಾಗಲಿದೆ ಎಂದು ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್. ತಿಳಿಸಿದ್ದಾರೆ. ಈ ಕುರಿತು ಮಂಗಳವಾರ ಸಭೆ ನಡೆಸಲಾಗಿದ್ದು, ಪುರಸಭೆ, ಪೊಲೀಸ್, ಆರೋಗ್ಯ ಇಲಾಖೆಗಳ ಸಹಿತ ತಂಡ ರೂಪಿಸಲಾಗಿದೆ.

    ಸೀಲ್‌ಡೌನ್ ಆಗಿರುವ ಬಂಟ್ವಾಳ ಪೇಟೆ ಪ್ರದೇಶಕ್ಕೆ ಮಂಗಳವಾರ ಸಹಾಯಕ ಆಯುಕ್ತ ಮದನ್‌ಮೋಹನ್ ಭೇಟಿ ನೀಡಿದರು. ಪರಿಸ್ಥಿತಿ ಹಾಗೂ ಕೈಗೊಂಡಿರುವ ಕ್ರಮಗಳ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಮಾಹಿತಿ ನೀಡಿದರು. ಪುರಸಭೆ ಕಂಟ್ರೋಲ್ ರೂಂ ತೆರೆದಿದ್ದು, 24 ಸೇವೆ ನೀಡಲಾಗುತ್ತಿದೆ. ಕಂಟೈನ್ಮೆಂಟ್ ವಲಯದ 180 ಮನೆಗಳಿಗೆ ಅಗತ್ಯ ವಸ್ತುಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಲೀನಾ ಬ್ರಿಟ್ಟೊ ತಿಳಿಸಿದ್ದಾರೆ.

    ಉಡುಪಿ 76 ಮಾದರಿ ಸಂಗ್ರಹ
    ಉಡುಪಿ: ಜಿಲ್ಲಾಡಳಿತ ಮಂಗಳವಾರ ಸ್ವೀಕರಿಸಿದ 2 ಶಂಕಿತ ಕರೊನಾ ಪ್ರಕರಣಗಳ ವರದಿ ನೆಗೆಟಿವ್ ಬಂದಿದೆ. ಉಸಿರಾಟದ ತೊಂದರೆ 8, ಇಲ್‌ನೆಸ್‌ಗೆ ಸಂಬಂಧಿಸಿ 5, ಕೊವಿಡ್-19 ಸೋಂಕಿತರ ಸಂಪರ್ಕಕ್ಕೆ ಒಳಗಾದ 61 ಮಂದಿ, ಬೇರೆ ಹಾಟ್‌ಸ್ಪಾಟ್‌ನಿಂದ ಬಂದವರು ಇಬ್ಬರು ಸೇರಿದಂತೆ ಒಟ್ಟು 76 ಮಂದಿಯ ಮಾದರಿಯನ್ನು ಮಂಗಳವಾರ ಸಂಗ್ರಹಿಸಲಾಗಿದೆ. 16 ಮಂದಿ ಐಸೊಲೇಶನ್ ವಾರ್ಡ್‌ಗೆ ದಾಖಲಾಗಿದ್ದಾರೆ. ಇನ್ನೂ 98 ಮಂದಿಯ ವರದಿ ಬರಲು ಬಾಕಿ ಇದೆ. ಮಂಗಳವಾರ 22 ಮಂದಿ 28 ದಿನದ ಕ್ವಾರಂಟೈನ್ ಪೂರೈಸಿದ್ದಾರೆ. ಐಸೊಲೇಶನ್ ವಾರ್ಡ್‌ನಿಂದ 4 ಮಂದಿ, ಆಸ್ಪತ್ರೆ ಕ್ವಾರಂಟೈನ್‌ನಿಂದ ಐದು ಮಂದಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಉಡುಪಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಟ್ಕಳ ಮೂಲದ ಗರ್ಭಿಣಿಯ ದ್ವಿತೀಯ ವರದಿ ಮಂಗಳವಾರ ಬಂದಿಲ್ಲ, ತಡರಾತ್ರಿ ಅಥವ ಬುಧವಾರ ವರದಿ ಸಿಗುವ ನಿರೀಕ್ಷೆ ಇದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಕಾಸರಗೋಡಲ್ಲಿ ಮೂವರಲ್ಲಿ ಸೋಂಕು
    ಕಾಸರಗೋಡು: ಕೇರಳದಲ್ಲಿ ಮಂಗಳವಾರ ಮತ್ತೆ 19 ಮಂದಿಯಲ್ಲಿ ವೈರಸ್ ಪತ್ತೆಯಾಗುವುದರೊಂದಿಗೆ ರಾಜ್ಯವನ್ನು ಬೆಚ್ಚಿಬೀಳಿಸಿದೆ.  ಕಣ್ಣೂರು ಜಿಲ್ಲೆಯಲ್ಲಿ 10, ಪಾಲಕ್ಕಾಡ್ ನಾಲ್ಕು, ಕಾಸರಗೋಡು ಮೂರು, ಮಲಪ್ಪುರಂ ಹಾಗೂ ಕೊಲ್ಲಂನಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ. ಕಾಸರಗೋಡಿನ ನಂತರ ಕಣ್ಣೂರು ಜಿಲ್ಲೆ ಕರೊನಾ ಕೇಂದ್ರಸ್ಥಾನವಾಗಿ ಬದಲಾಗುತ್ತಿದೆ. ಕೇರಳದಲ್ಲಿ ಇದುವರೆಗೆ ಒಟ್ಟು 426 ಮಂದಿಗೆ ಕರೊನಾ ಬಾಧಿಸಿದ್ದು, ಇವರಲ್ಲಿ 117 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಣ್ಣೂರು 7, ಕಾಸರಗೋಡು ಹಾಗೂ ಕೋಯಿಕ್ಕೋಡ್ ತಲಾ 4, ತಿರುವನಂತಪುರದಲ್ಲಿ ಒಬ್ಬರು ಸೇರಿ ಕೇರಳದಲ್ಲಿ ಮಂಗಳವಾರ 16 ಮಂದಿ ಗುಣಮುಖರಾಗಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ 4619 ಮಂದಿ ನಿಗಾದಲ್ಲಿದ್ದು, ಇವರಲ್ಲಿ 4567 ಮಂದಿ ಮನೆಗಳಲ್ಲಿ ಹಾಗೂ 52 ಮಂದಿ ಆಸ್ಪತ್ರೆಗಳಲ್ಲೂ ನಿಗಾದಲ್ಲಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಮೇ 3ರವರೆಗೆ ಲಾಕ್‌ಡೌನ್ ಮುಂದುವರಿಯಲಿದೆ. ಮಂಜೇಶ್ವರ, ಕೋಡೋಂ ಬೇಳೂರು ಗ್ರಾಮ ಪಂಚಾಯಿತಿಗಳನ್ನು ಹಾಟ್‌ಸ್ಪಾಟ್ ಪಟ್ಟಿಗೆ ಸೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts