More

    ಹೋಟೆಲ್, ಶಾಮಿಯಾನ ಉದ್ಯಮಕ್ಕೆ ಪೆಟ್ಟು

    ಅವಿನ್ ಶೆಟ್ಟಿ ಉಡುಪಿ

    ಕರೊನಾ ವೈರಸ್ ಹಲವು ಉದ್ಯಮಗಳಿಗೆ ಹೊಡೆತ ನೀಡಿದೆ. ಪ್ರಮುಖವಾಗಿ ಈ ಸೀಸನ್‌ನಲ್ಲಿ ಹೆಚ್ಚು ವಹಿವಾಟು ನಡೆಸುವ ಹೋಟೆಲ್, ಶಾಮಿಯಾನ, ಮುದ್ರಣ ವಲಯ ವ್ಯಾಪಾರವಿಲ್ಲದೆ ತತ್ತರಿಸಿವೆ.

    ಕರೊನಾ ಪರಿಣಾಮ ಎಲ್ಲ ಕಾರ್ಯಕ್ರಮಗಳೂ ರದ್ದಾಗಿರುವುದರಿಂದ ನೇರ ಹೊಡೆತ ಬಿದ್ದಿರುವುದು ಶಾಮಿಯಾನ ಉದ್ಯಮಕ್ಕೆ. ಪ್ರತಿವರ್ಷ ಈ ಸಮಯದಲ್ಲಿ ಕೋಲ, ಮದುವೆ, ಸಭೆ, ಸಮಾರಂಭ ಸಣ್ಣಪುಟ್ಟ ಕಾರ್ಯಕ್ರಮಗಳು ಎಂದು ಒಳ್ಳೆಯ ವಹಿವಾಟು ಇರುತ್ತದೆ. ಕರೊನಾ ಎಫೆಕ್ಟ್‌ನಿಂದ ಪ್ರಸಕ್ತ ಬಂದ ಆರ್ಡರ್‌ಗಳೆಲ್ಲ ರದ್ದಾಗಿ ಲಕ್ಷಾಂತರ ರೂ. ನಷ್ಟ ಅನುಭವಿಸುವಂತಾಗಿದೆ. ಕೆಲಸ ಇರಲಿ, ಇಲ್ಲದಿರಲಿ ಕಾರ್ಮಿಕರಿಗೆ ವೇತನ ಕೊಡಲೇಬೇಕು ಎನ್ನುತ್ತಾರೆ ಹಲವು ವರ್ಷಗಳಿಂದ ಶಾಮಿಯಾನ ಉದ್ಯಮ ನಡೆಸುತ್ತಿರುವ ಜಗದೀಶ್. ಶಾಮಿಯಾನಕ್ಕೆ ಪೂರಕವಾಗಿರುವ ಸಣ್ಣಪುಟ್ಟ ಕ್ಯಾಟರಿಂಗ್ ಉದ್ಯಮಕ್ಕೂ ಹೊಡೆತ ಬಿದ್ದಿದೆ.

    ಮುದ್ರಣ ರಂಗ ಸ್ಥಗಿತ: ಮುದ್ರಣಕ್ಕೆ ಸಂಬಂಧಿಸಿ ಎಲ್ಲ ವಹಿವಾಟುಗಳು ಹಿನ್ನೆಡೆ ಕಂಡಿದೆ. ಸರ್ಕಾರಿ ಸಭೆ, ಸಮಾರಂಭ, ಮದುವೆ, ದೇವಸ್ಥಾನ, ಭಜನೆ ಇನ್ನಿತರ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಹಾಗಾಗಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ, ಕರಪತ್ರ ಮುದ್ರಣಗೊಳ್ಳದೆ ಬಹುತೇಕ ಮುದ್ರಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜಿಲ್ಲೆಯಲ್ಲಿ 180 ಪ್ರಿಂಟಿಂಗ್ ಪ್ರೆಸ್‌ಗಳಿವೆ. ಎರಡು ವಾರದಿಂದ ಶೇ.60ರಷ್ಟು ವ್ಯವಹಾರ ಕಡಿಮೆಯಾಗಿದೆ. ಸಾಮಾನ್ಯವಾಗಿ ಮುದ್ರಕರು ಆಮಂತ್ರಣ ಪತ್ರಿಕೆ ಮುದ್ರಣದ ವೆಚ್ಚ ಮುಂಗಡ ಭರಿಸಿ ಮುದ್ರಿಸಿದ ಬಳಿಕ ಮೊತ್ತ ಸ್ವೀಕರಿಸುವುದು ಕ್ರಮ. ಸದ್ಯ ಹೆಚ್ಚಿನ ಕಾರ್ಯಕ್ರಮಗಳು ಮುಂದೂಡಿರುವ ಕಾರಣ, ಈಗಾಗಲೇ ಮುದ್ರಣಗೊಂಡಿರುವ ಆಮಂತ್ರಣ ಪತ್ರಗಳು ಮುದ್ರಕರ ಬಳಿಯಲ್ಲೇ ಉಳಿದಿವೆ.

    ಲಾಡ್ಜ್‌ಗಳೂ ಖಾಲಿ ಖಾಲಿ: ಉಡುಪಿ-ಮಣಿಪಾಲ-ಮಲ್ಪೆಯಲ್ಲಿ 800ರಿಂದ 1000ಕ್ಕೂ ಸಣ್ಣ ಮತ್ತು ದೊಡ್ಡ ಹೋಟೆಲ್‌ಗಳು ಇವೆ. ಕರೊನಾದಿಂದ ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದದೆ. ಇದಕ್ಕೆ ಪೂರಕ ಉದ್ಯಮಗಳಾದ 200ರಿಂದ 300 ಲಾಡ್ಜ್‌ಗಳೂ ನಷ್ಟದಲ್ಲಿವೆ. ಲಕ್ಷಾಂತರ ಬಂಡವಾಳ ಹೂಡಿಕೆ ಮಾಡಿ ಹೋಟೆಲ್, ಲಾಡ್ಜ್ ನಡೆಸುತ್ತಿರುವ ಮಾಲೀಕರು ಕಂಗಾಲಾಗಿದ್ದಾರೆ. ವಿದ್ಯುತ್ ಬಿಲ್, ಬಾಡಿಗೆ, ನಿರ್ವಹಣೆ ವೆಚ್ಚ, ನೌಕರರಿಗೆ ವೇತನಕ್ಕೆ ಆದಾಯ ಇಲ್ಲದೆ ಲಕ್ಷಾಂತರ ರೂ. ವೆಚ್ಚ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ ಹೋಟೆಲ್ ಮಾಲೀಕರು.

    ಕರೊನಾ ವೈರಸ್ ಪರಿಣಾಮ ಹೋಟೆಲ್, ಲಾಡ್ಜಿಂಗ್ ಉದ್ಯಮ ನಷ್ಟದಲ್ಲಿದೆ. ದೊಡ್ಡ ಪ್ರಮಾಣದ ಹೋಟೆಲ್ ಉದ್ಯಮವೇ ಶಟ್‌ಡೌನ್ ಆಗಿರುವುದರಿಂದ ಆದಾಯ ಇಲ್ಲ. ನೌಕರರಿಗೆ ವೇತನ, ವಿದ್ಯುತ್ ಬಿಲ್, ನಿರ್ವಹಣೆ ವೆಚ್ಚ, ಬಾಡಿಗೆ ಸೇರಿದಂತೆ ಲಕ್ಷಾಂತರ ರೂ. ವ್ಯಯಿಸಬೇಕಿದೆ.

    ತಲ್ಲೂರು ಶಿವರಾಮ ಶೆಟ್ಟಿ

    ಅಧ್ಯಕ್ಷ, ಉಡುಪಿ ಜಿಲ್ಲಾ ಹೋಟೆಲ್ ಮಾಲೀಕರ ಸಂಘ

    ಈ ಸೀಸನ್ ಅವಧಿಯಲ್ಲಿ ಹಲವಾರು ಕಾರ್ಯಕ್ರಮಗಳ ಆರ್ಡರ್ ಬರುತ್ತದೆ. ಕರೊನಾ ಪರಿಣಾಮ ಈಗ ಎಲ್ಲವೂ ರದ್ದಾಗಿದ್ದು, ಸಾಕಷ್ಟು ನಷ್ಟ ಉಂಟಾಗಿದೆ. ಎಲ್ಲ ಶಾಮಿಯಾನದವರಿಗೂ ಇದರಿಂದ ಸಮಸ್ಯೆಯಾಗಿದೆ. ವ್ಯವಹಾರ ಇಲ್ಲದೆ ಶಾಮಿಯಾನ ಉದ್ಯಮ ತತ್ತರಿಸಿದೆ.

    ಇಮ್ತಿಯಾಝ್

    ಶಾಮಿಯಾನ ವ್ಯವಹಾರಸ್ಥ, ಬಜ್ಪೆ.

    ಸಾಲ ಮಾಡಿ ಮುದ್ರಣಕ್ಕೆ ಸಾಮಗ್ರಿ ಖರೀದಿಸಲಾಗಿದೆ. ಕಾರ್ಯಕ್ರಮಗಳು ನಡೆಯುತ್ತಿಲ್ಲ. ಪ್ರಿಂಟಿಂಗ್ ಆರ್ಡರ್‌ಗಳು ಬರುತ್ತಿಲ್ಲ. ಜಿಎಸ್‌ಟಿ ಕಟ್ಟಲು ಸಾಧ್ಯವಾಗುತ್ತಿಲ್ಲ. ಮಾರ್ಚ್ ಅಂತ್ಯವಾದ್ದರಿಂದ ಬ್ಯಾಂಕ್‌ಗಳಿಂದ ಸಾಲ ಮರುಪಾವತಿ ಒತ್ತಡ ಬರುತ್ತಿದೆ.

    ಎಂ.ಮಹೇಶ್ ಕುಮಾರ್

    ಅಧ್ಯಕ್ಷ, ಉಡುಪಿ ಜಿಲ್ಲಾ ಮುದ್ರಕರ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts