More

    ಭತ್ತ ಕಟಾವಿಗೆ ಸಮಸ್ಯೆ

    |ಅವಿನ್ ಶೆಟ್ಟಿ ಉಡುಪಿ

    ಕರಾವಳಿಯಲ್ಲಿ ಭತ್ತ ಎರಡನೇ ಬೆಳೆಯ ಕಟಾವು ಕಾರ್ಯ ಹಲವು ದಿನಗಳಿಂದ ಅಲ್ಲಲ್ಲಿ ಆರಂಭವಾಗಿ ಹಲವು ಕಡೆಗಳಲ್ಲಿ ಪೂರ್ಣಗೊಂಡಿದೆ. ಇನ್ನೂ ಕೆಲವೆಡೆ ಕಟಾವು ಕಾರ್ಯ ಬಾಕಿ ಇದ್ದು ಯಂತ್ರ ಮತ್ತು ಕಾರ್ಮಿಕರ ಕೊರತೆ ಭತ್ತ ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.

    ಕುಂದಾಪುರ, ಬ್ರಹ್ಮಾವರ, ಕಾರ್ಕಳ ಕೆಲವು ಭಾಗದಲ್ಲಿ ತೀರ ಗ್ರಾಮೀಣ ಭಾಗದ ಪರಿಸರದಲ್ಲಿ ಕಟಾವು ಕಾರ್ಯ ಉಳಿದಿದೆ. ದಕ್ಷಿಣ ಕನ್ನಡದ ಕೆಲ ಭಾಗಗಳಲ್ಲೂ ಕಟಾವು ಬಾಕಿ ಇದೆ.

    ಜಿಲ್ಲೆಗೆ ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಭತ್ತ ಕಟಾವು ಯಂತ್ರಗಳು ಬರುತ್ತವೆ. ದಾವಣಗೆರೆ, ರಾಯಚೂರು, ತಮಿಳುನಾಡು ಭಾಗದಿಂದ ಹೆಚ್ಚು ಬರುತ್ತವೆ. ಲಾಕ್‌ಡೌನ್ ಆರಂಭದ ಸಮಯದಲ್ಲಿ ಆಚೀಚೆ ಓಡಾಟ ಮಾಡಲು ಕೆಲವು ಯಂತ್ರಗಳಿಗೆ ಸಾಧ್ಯವಾಗಿಲ್ಲ. ಬಳಿಕ ಅವಕಾಶ ಮಾಡಿಕೊಟ್ಟರೂ ಒಮ್ಮೆಲೆ ಕಟಾವು ಯಂತ್ರಗಳಿಗೆ ಬೇಡಿಕೆ ಕುದುರಿವೆೆ. ಉಭಯ ಜಿಲ್ಲೆಗಳಲ್ಲಿ ಭತ್ತ ಬೆಳೆಗಾರರೇ ಹೇಳುವ ಪ್ರಕಾರ ಇನ್ನೂ ಶೇ.25 ರಷ್ಟು ಕಟಾವಿಗೆ ಬಾಕಿ ಇದೆ . ಆದರೆ ಅಧಿಕಾರಿಗಳು ಮಾತ್ರ ಶೇ.90 ರಷ್ಟು ಕಟಾವು ಮುಗಿದಿದ್ದು, ಉಳಿದ ಶೇ 10ರಷ್ಟು ಕಾರ್ಯವೂ ಯಾವುದೇ ಸಮಸ್ಯೆಯಿಲ್ಲದೆ ಪೂರ್ಣಗೊಳ್ಳಲಿದೆ ಎನ್ನುತ್ತಾರೆ.

    ಯಂತ್ರಗಳ , ಕಾರ್ಮಿಕರ ಕೊರತೆ ?: ಜಿಲ್ಲೆಯ ಭತ್ತ ಬೆಳೆಯುವ ಪ್ರದೇಶಗಳಲ್ಲಿ ಹೆಕ್ಟೇರ್ ವಿಸ್ತೀರ್ಣ ಬೆಳೆಯ ಅಂದಾಜು ಪ್ರಕಾರ ಹೋಬಳಿ ಒಂದಕ್ಕೆ 40 ರಿಂದ 50 ಭತ್ತ ಕಟಾವು ಯಂತ್ರಗಳು ಬೇಕು. ಆದರೆ ಹೋಬಳಿಯಲ್ಲಿ ಲಭ್ಯವಾಗುತ್ತಿರುವ ಯಂತ್ರಗಳು 2ರಿಂದ 3ಅಷ್ಟೆ. ಈ ನಡುವೆ ಮದ್ಯವರ್ತಿಗಳು ರೈತರಿಗೆ ತಲೆ ನೋವಾಗಿ ಪರಿಣಮಿಸುತ್ತಿದ್ದಾರೆ. ಕರಾವಳಿ ಜಿಲ್ಲೆಗಳಲ್ಲಿ ಯಂತ್ರಗಳ ಕೊರತೆ ಸಾಮಾನ್ಯವಾಗಿರುತ್ತದೆ, ಸ್ಥಳೀಯ ಕಾರ್ಮಿಕರಿಂದ ಈ ಕೊರತೆ ನೀಗಿಸಲಾಗುತ್ತದೆ. ಸದ್ಯಕ್ಕೆ ಕಾರ್ಮಿಕರು ಪೈರು ಕಟಾವಿಗೆ ಬರಲು ಒಪ್ಪುತ್ತಿಲ್ಲ. ಕರೊನಾ ಪರಿಣಾಮ ಕಾರ್ಮಿಕರು ಮನೆಯಿಂದ ಹೊರ ಬರುತ್ತಿಲ್ಲ. ಅದರಲ್ಲೂ ಕೃಷಿಕರ ಮನೆಯಲ್ಲಿ ಬೆಂಗಳೂರು, ಮುಂಬೈ, ದುಬೈನಿಂದ ಬಂದವರು ಯಾರಾದರೂ ಇರಬಹುದು ಎನ್ನುವ ಭಯ. ಕಾರ್ಮಿಕರು ಕೆಲಸಕ್ಕೆ ಬಂದರೂ ಒಂದು, ಎರಡು, ಮೂರು ಎಕರೆ ಭತ್ತವನ್ನು ಕಟಾವು ಮಾಡಲು ಸಾಮಾನ್ಯವಾಗಿ ಹತ್ತು, ಹದಿನೈದು, ಇಪ್ಪತ್ತು ಮಂದಿ ಕಾರ್ಮಿಕರ ಅಗತ್ಯ ಇರುತ್ತದೆ. ಇಲ್ಲಿ ಐದು ಜನರಿಗಿಂತ ಹೆಚ್ಚು ಗುಂಪು ಸೇರುವಂತಿಲ್ಲ. ಸ್ಥಳೀಯಾಡಳಿತ ಅನುಮತಿ, ಪ್ರಕ್ರಿಯೆಗಳು ಬೆಳೆಗಾರರಿಗೆ ಸಮಸ್ಯೆಯಾಗಿದೆ.

    ಮಳೆಗೆ ಪೈರು ಹಾನಿ: ಹಾಲಾಡಿ, ಕೋಟೇಶ್ವರ, ಸಾಬ್ರಕಟ್ಟೆ, ಕೊಕ್ಕರ್ಣೆ, ಹೆಬ್ರಿ, ಕಾರ್ಕಳ ಭಾಗದಲ್ಲಿ ಬಹುತೇಕ ರೈತರು ಬಿಸಿಲು ನೋಡಿಕೊಂಡು ಪೈರನ್ನು ಕಟಾವು ಮಾಡಿ ಗದ್ದೆಯಲ್ಲೆ ಇಟ್ಟಿದ್ದರು. ಮಂಗಳವಾರ ಏಕಾಏಕಿ ಸುರಿದ ಮಳೆಯಿಂದಾಗಿ ಹಲವು ಕಡೆಗಳಲ್ಲಿ ಕಟಾವು ಮಾಡಿಟ್ಟಿದ್ದ ಭತ್ತ ಪೈರಿಗೆ ಹಾನಿಯಾಗಿದೆ. ಉಡುಪಿ ಜಿಲ್ಲೆಯಲ್ಲಿ 665 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಶೇ.91ರಷ್ಟು ಗುರಿ ಸಾಧಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2468 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು, ಶೇ.39.48ರಷ್ಟು ಮಾತ್ರ ಗುರಿ ಸಾಧಿಸಲಾಗಿದೆ.

    ಭತ್ತ ಕಟಾವು ಪ್ರಕ್ರಿಯೆಗೆ ಲಾಕ್‌ಡೌನ್ ಆರಂಭಿಕ ಹಂತದಲ್ಲಿ ಸ್ವಲ್ಪ ದಿನ ಸಮಸ್ಯೆ ಇತ್ತು. ಪ್ರಸಕ್ತ ಕೃಷಿಯಂತ್ರ ಸಾಗಾಟ ವಾಹನ ಓಡಾಟಕ್ಕೆ ಅನುಮತಿ ಇದೆ. ಭತ್ತ ಕಟಾವಿಗೆ ಯಾವುದೇ ಸಮಸ್ಯೆಯಾಗಿಲ್ಲ. 5ಕ್ಕಿಂತ ಹೆಚ್ಚು ಮಂದಿ ಕಾರ್ಮಿಕರಿದ್ದರೆ ಗ್ರಾಪಂ ಪಿಡಿಒ ಅವರಿಗೆ ಮಾಹಿತಿ ನೀಡಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
    | ಡಾ.ಕೆಂಪೇಗೌಡ ಕೃಷಿ ಇಲಾಖೆ ಜಂಟಿ ನಿರ್ದೇಶಕ, ಉಡುಪಿ


    ಜಿಲ್ಲೆಯಲ್ಲಿ ಭತ್ತ ಕಟಾವಿಗೆ ಯಾವುದೆ ಸಮಸ್ಯೆಯಾಗಿಲ್ಲ,ಯಂತ್ರಗಳ ಕೊರತೆಯೂ ಎದುರಾಗಿಲ್ಲ. ಇಲಾಖೆ ವತಿಯಿಂದ, ಖಾಸಗಿಯಾಗಿ ಕಟಾವು ಯಂತ್ರಗಳನ್ನು ರೈತರಿಗೆ ಒದಗಿಸಲಾಗಿದೆ. ಬಹುತೇಕ ಕಟಾವು ಕಾರ್ಯ ಮುಗಿಯುತ್ತಿದೆ.
    | ಡಾ.ಸೀತಾ, ಜಂಟಿ ನಿರ್ದೇಶಕಿ, ಕೃಷಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ.

    ಒಂದು ಎಕರೆ ಭತ್ತ ಬೆಳೆ ಇದ್ದು ಕಟಾವಿಗೆ ಜನರು ಸಿಕ್ಕಿಲ್ಲ, ಯಂತ್ರವೂ ಇಲ್ಲ. ಇನ್ನೊಂದೆಡೆ ಆಕಾಲಿಕ ಮಳೆಯಿಂದಾಗಿ ಪೈರಿಗೆ ಹಾನಿಯಾಗುವ ಆತಂಕವಿದೆ.
    |ವಿಶ್ವನಾಥ್ ಮಡಿವಾಳ, ನೈಲಾಡಿ ಭತ್ತ ಕೃಷಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts