More

    ಈ ಬಾರಿ ಹೊರಗಿಲ್ಲ ಎನ್ನೆಸ್ಸೆಸ್ ಕ್ಯಾಂಪ್, ಕಾಲೇಜಿಗೆ ಸೀಮಿತವಾಗಿ ಚಟುವಟಿಕೆ

    – ಭರತ್ ಶೆಟ್ಟಿಗಾರ್ ಮಂಗಳೂರು
    ಕಾಲೇಜು ಆರಂಭಕ್ಕೆ ದಿನಾಂಕ ನಿಗದಿಯಾದ ಬೆನ್ನಿಗೆ ವಿದ್ಯಾರ್ಥಿಗಳ ಪಠ್ಯೇತರ ಮತ್ತು ಫಲಿತಾಂಶದಲ್ಲೂ ಪ್ರಮುಖವಾಗಿರುವ ರಾಷ್ಟ್ರೀಯ ಸೇವಾ ಯೋಜನೆ(ಎನ್ನೆಸ್ಸೆಸ್) ಚಟುವಟಿಕೆಗಳನ್ನೂ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.

    ಕೇಂದ್ರ ಸರ್ಕಾರ ಅನುಮತಿ ನೀಡಿದರೆ 50 ಮಂದಿ ಮೀರದಂತೆ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ ಈ ಬಾರಿ ಕಾಲೇಜು ಮಟ್ಟದಲ್ಲಿ ಮಾತ್ರ ಕಾರ್ಯಕ್ರಮ ಹಾಗೂ ಶಿಬಿರ ಆಯೋಜನೆಗೊಳ್ಳಲಿದೆ. ದತ್ತು ಗ್ರಾಮದಲ್ಲಿ ಚಟುವಟಿಕೆ ಸರ್ಕಾರದ ಆದೇಶವನ್ನು ಅನುಸರಿಸಿ ನಿರ್ಧಾರವಾಗಬಹುದು. ಕಾಲೇಜಿನ ಎನ್ನೆಸ್ಸೆಸ್ ಘಟಕಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಅರ್ಧದಷ್ಟು ಕಡಿಮೆಗೊಳಿಸಲು ನಿರ್ಧರಿಸಲಾಗಿದ್ದು, ಒಂದು ಘಟಕದಲ್ಲಿ 25 ಮಂದಿಗೆ ಮಾತ್ರ ಅವಕಾಶ ಸಿಗಲಿದೆ.

    ಕಾಲೇಜಿನಲ್ಲಿ ಎರಡು ಯುನಿಟ್ ಇದ್ದರೆ ಈ ಮೊದಲು 100 ವಿದ್ಯಾರ್ಥಿಗಳಿಗೆ ಅವಕಾಶವಿತ್ತು. ಪಠ್ಯಕ್ಕೆ ಯಾವುದೇ ಸಮಸ್ಯೆಯಾಗದಂತೆ ಡಿಸೆಂಬರ್‌ನಿಂದಲೇ ಚಟುವಟಿಕೆ ಆರಂಭಿಸಲಾಗುವುದು ಎಂದು ರಾಜ್ಯ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಮತ್ತು ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ ಡಾ.ಗಣನಾಥ ಶೆಟ್ಟಿ ಎಕ್ಕಾರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಉತ್ತಮ ಕೆಲಸ: ರಾಜ್ಯದಲ್ಲಿ 68 ವಿಶ್ವವಿದ್ಯಾಲಯ, ಪದವಿಪೂರ್ವ ಶಿಕ್ಷಣ ಇಲಾಖೆ, ಪಾಲಿಟೆಕ್ನಿಕ್, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ನಿರ್ದೇಶನಾಲಯಗಳು ಸೇರಿ 4-5 ಲಕ್ಷದಷ್ಟು ಎನ್ನೆಸ್ಸೆಸ್ ವಿದ್ಯಾರ್ಥಿಗಳಿದ್ದು, ಕೋವಿಡ್ ಅವಧಿಯ ಕಾರ್ಯನಿರ್ವಹಣೆ ಸರ್ಕಾರದ ಮೆಚ್ಚುಗೆ ಗಳಿಸಿದೆ. ವಿವಿಧ ವಿಶ್ವವಿದ್ಯಾಲಯಗಳೊಂದಿಗೆ ಸಹಯೋಗದಲ್ಲಿ ಮತ್ತು ಎನ್ನೆಸ್ಸೆಸ್ ಮೂಲಕವೇ 200ರಷ್ಟು ಆನ್‌ಲೈನ್ ತರಬೇತಿ ಕಾರ್ಯಕ್ರಮ ನಡೆದಿದೆ. ವಿದ್ಯಾರ್ಥಿಗಳಿಗೆ ಒತ್ತಡ ನಿರ್ವಹಣೆ, ಕೌಶಲಾಭಿವೃದ್ಧಿ ಮತ್ತು ಕೋವಿಡ್ ಜಾಗೃತಿ ಅಂಶಗಳು ಪ್ರಮುಖವಾಗಿತ್ತು.

    ಯುನಿಸೆಫ್ ಸಹಯೋಗದಲ್ಲಿ ಎನ್ನೆಸ್ಸೆಸ್ ಸ್ವಯಂಸೇವಕರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಸ್ಲಮ್, ಕಾರ್ಮಿಕರು, ನಿರ್ವಸಿತರ ಶೆಡ್‌ಗಳಿಗೆ ಭೇಟಿ ನೀಡಿ ಕೋವಿಡ್ ಜಾಗೃತಿ ಮೂಡಿಸಿದ್ದಾರೆ. 70 ಸಾವಿರ ಮಾಸ್ಕ್ ವಿತರಿಸಲಾಗಿದೆ. ಜಿಲ್ಲಾಡಳಿತಗಳು, ಆರೋಗ್ಯ ಸಹಿತ ಇತರ ಇಲಾಖೆಗಳೊಂದಿಗೆ ಸ್ವಯಂ ಸೇವಕರು ಕೆಲಸ ಮಾಡಿದ್ದಾರೆ.

    ಈ ಬಾರಿ ಆರೋಗ್ಯಕ್ಕೆ ಒತ್ತು: ಎನ್ನೆಸ್ಸೆಸ್ ಈ ಬಾರಿ ಆರೋಗ್ಯ ವಿಚಾರ ಅದರಲ್ಲೂ ‘ಕೋವಿಡ್-19’ ಕುರಿತಂತೆ ಹೆಚ್ಚಿನ ಗಮನ ನೀಡಲಿದೆ. ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ವತಿಯಿಂದ ಕಳೆದ ವರ್ಷ ಚಿಕ್ಕಬಳ್ಳಾಪುರದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದಿರುವ ‘ಶಾಲೆ ದತ್ತು ಸ್ವೀಕಾರ, ಮಕ್ಕಳ ಆರೋಗ್ಯ ತಪಾಸಣೆ ಮತ್ತು ನೈರ್ಮಲ್ಯ ಮಾಹಿತಿ’ ಕಾರ್ಯಕ್ರಮ ಈ ಬಾರಿ ರಾಜ್ಯಮಟ್ಟಕ್ಕೆ ವಿಸ್ತರಣೆಯಾಗಲಿದೆ. ವಿವಿ ಅಧೀನದಲ್ಲಿ ಬರುವ ವೈದ್ಯಕೀಯ ಕಾಲೇಜುಗಳು ಶಾಲೆ ದತ್ತು ಸ್ವೀಕರಿಸಿ ಆರೋಗ್ಯ ಕಾರ್ಯಕ್ರಮ ಆಯೋಜಿಸಬೇಕಿದೆ.

    ರಾಜ್ಯದಲ್ಲಿ ಎನ್ನೆಸ್ಸೆಸ್‌ನಿಂದ ವಿದ್ಯಾರ್ಥಿಗಳಿಗಾಗಿ 200ಕ್ಕೂ ಅಧಿಕ ಆನ್‌ಲೈನ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸುಮಾರು 1.5 ಲಕ್ಷ ಮಂದಿ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದಾರೆ. ನವೆಂಬರ್‌ನಿಂದ ಕಾಲೇಜು ಆರಂಭವಾದರೂ, ಪಠ್ಯದ ಒತ್ತಡ ಸಾಕಷ್ಟಿರುತ್ತದೆ. ಕೇಂದ್ರ ಸರ್ಕಾರದ ಅನುಮತಿಯ ಮೇರೆಗೆ ಕಾಲೇಜಿಗೆ ಸೀಮಿತವಾಗಿ ಎನ್ನೆಸ್ಸೆಸ್ ಚಟುವಟಿಕೆ ನಡೆಸಲಾಗುವುದು.
    – ಡಾ.ಗಣನಾಥ ಶೆಟ್ಟಿ ಎಕ್ಕಾರು, ರಾಜ್ಯ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ, ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts