More

    ಜಿಲ್ಲೆಯ ಮೂವರಲ್ಲಿ ಕರೊನಾ ಪತ್ತೆ

    ಹಾಸನ: ಜಿಲ್ಲೆಯಲ್ಲಿ ಶುಕ್ರವಾರ ಮಹಿಳೆ ಸೇರಿ ಮೂವರಲ್ಲಿ ಕರೊನಾ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 315ಕ್ಕೆ ಏರಿಕೆಯಾಗಿದೆ.

    ಈವರೆಗೆ 237 ಸೋಂಕಿತರು ಚೇತರಿಕೆಯಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಸದ್ಯ 77 ಸಕ್ರಿಯ ಸೋಂಕಿತರು ನಗರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ ಕರೊನಾ ಸೋಂಕು ದೃಢಪಟ್ಟ ಮೂವರು ಆಲೂರು, ಬೇಲೂರು, ಚನ್ನರಾಯಪಟ್ಟಣ ತಾಲೂಕಿನವರಾಗಿದ್ದಾರೆ.

    ಬೇಲೂರು ತಾಲೂಕಿನ ಚೀಲನಾಯಕನಹಳ್ಳಿ ಮೂಲದ ವ್ಯಕ್ತಿ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ. ಅಲ್ಲಿ ಉಸಿರಾಟದ ತೊಂದರೆ, ಕೆಮ್ಮು, ಜ್ವರ ಆರಂಭವಾದ್ದರಿಂದ ಹೆದರಿಕೆಯಿಂದ ತವರಿಗೆ ವಾಪಸಾಗಿದ್ದರು. ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಅವರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಿ ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಆರಂಭಿಸಲಾಗಿದೆ.

    ಚನ್ನರಾಯಪಟ್ಟಣ ತಾಲೂಕಿನ ಗ್ರಾಮವೊಂದರ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದ್ದು, ಅವರ ಕುಟುಂಬದವರು ಪ್ರಯಾಣ, ಸಂಪರ್ಕಿತರ ಮಾಹಿತಿ ನೀಡಲು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸ್ಪಂದಿಸುತ್ತಿಲ್ಲ. ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ಆರೋಗ್ಯಾಧಿಕಾರಿ ಪತ್ರ ಬರೆದಿದ್ದು, ಮಹಿಳೆಯನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ. ಆಕೆಯ ಪ್ರಾಥಮಿಕ ಸಂಪರ್ಕಿತರು ಹಾಗೂ ದ್ವಿತೀಯ ಸಂಪರ್ಕಿರನ್ನು ಗುರುತಿಸಿ ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

    ಆಲೂರು ತಾಲೂಕಿನ ಗ್ರಾಮದ ವ್ಯಕ್ತಿ ಬುಧವಾರ ಸಂಜೆ ಬೆಂಗಳೂರಿನಿಂದ ಬಂದಿದ್ದು, ಆತನಲ್ಲಿ ಜ್ವರ, ಉಸಿರಾಟದ ತೊಂದರೆ ಕಾಣಿಸಿದ್ದರಿಂದ ಪರೀಕ್ಷೆಗೆ ಒಳಪಡಿಸಲಾಗಿತ್ತು. ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸೀಲ್‌ಡೌನ್: ಕರೊನಾ ಸೋಂಕಿತ ವ್ಯಕ್ತಿ ವಾಸವಿದ್ದ ಹಳೇಬೀಡು ಸಮೀಪದ ಚೀಲನಾಯ್ಕನಹಳ್ಳಿ ಗ್ರಾಮದ ಕೆಲ ಪ್ರದೇಶವನ್ನು ಶುಕ್ರವಾರ ಸೀಲ್‌ಡೌನ್ ಮಾಡಲಾಗಿದೆ.

    ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಗ್ರಾಮದ ವ್ಯಕ್ತಿಯನ್ನು ವಾರದ ಹಿಂದೆ ಹಾಸನದ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಒಳಪಡಿಸಿ ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿತ್ತು. ಶುಕ್ರವಾರ ಕರೊನಾ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಆತನನ್ನು ಕೋವಿಡ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈತ ವಾಸವಿದ್ದ ಸುತ್ತಮುತ್ತಲಿನ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ.

    ಈತ ಹೋಂ ಕ್ವಾರಂಟೈನ್ ಅವಧಿಯಲ್ಲಿ ಹಳೇಬೀಡು ಸೇರಿ ಹೋಬಳಿಯ ವಿವಿಧೆಡೆ ಸಂಚರಿಸಿದ್ದು, ಕೆಲ ಜನರ ಸಂಪರ್ಕ ಬೆಳೆಸಿದ್ದಾನೆ. ಜತೆಗೆ ಗುರುವಾರ ಸಂಜೆ ಗೆಳೆಯರ ಜತೆ ಮೋಜು ಮಸ್ತಿ ನಡೆಸಿದ್ದ ಎನ್ನಲಾಗಿದೆ. ಈತನ ಪಾಲಕರನ್ನು ಕೋವಿಡ್ ಪರೀಕ್ಷೆಗೆ ಕಳುಹಿಸಲಾಗಿದೆ. ಈತನ ಪ್ರಾಥಮಿಕ ಸಂಪರ್ಕ ಬೆಳೆಸಿರುವ ವ್ಯಕ್ತಿಗಳ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.

    ಗ್ರಾಮದಲ್ಲೀಗ ಭಯದ ವಾತಾವರಣ: ಸದಾ ಕೃಷಿ ಚಟುವಟಿಕೆಯಲ್ಲಿ ನಿರತರಾಗಿರುತ್ತಿದ್ದ ಚೀಲನಾಯ್ಕನಹಳ್ಳಿ ಗ್ರಾಮದ ಜನರಲ್ಲಿ ಈಗ ಭಯದ ವಾತಾವರಣ ಮನೆಮಾಡಿದೆ.

    ಊರಿನ ಕೆಲ ಯುವಕರು ಬೆಂಗಳೂರು ಹಾಗೂ ಮಹಾರಾಷ್ಟ್ರದ ಕೆಲ ಭಾಗದಲ್ಲಿ ಸ್ವಯಂ ಉದ್ಯೋಗ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಲಾಕ್‌ಡೌನ್ ಹಿನ್ನೆಲೆಯಲ್ಲಿ ಅನೇಕರು ಗ್ರಾಮಕ್ಕೆ ಹಿಂದಿರುಗಿದ್ದರು. ಕ್ವಾರಂಟೈನ್ ನಿಯಮ ಪಾಲಿಸಿ ಕೆಲವರು ತಮ್ಮ ಕೆಲಸದಲ್ಲಿ ನಿರತರಾಗಿದ್ದಾರೆ.
    ಆದರೆ, ಈಗ ಸೋಂಕು ದೃಢವಾಗಿರುವುದರಿಂದ ಇಡೀ ಗ್ರಾಮವೇ ಭಯದ ವಾತಾವರಣದಲ್ಲಿ ಇರುವಂತಾಗಿದೆ. ಸರ್ಕಾರ ಹಾಗೂ ಆರೋಗ್ಯ ಇಲಾಖೆಯು ನಿಯಮ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಪದೇ ಪದೆ ಘೋಷಿಸುತ್ತಿದ್ದರೂ ಕೆಲವರು ಈ ರೀತಿ ನಡೆದುಕೊಳ್ಳುವುದರಿಂದ ಎಲ್ಲರ ಜೀವನಕ್ಕೂ ತೊಂದರೆಯಾಗುತ್ತದೆ. ನೆಮ್ಮದಿಯಾಗಿದ್ದ ನಮ್ಮ ಊರಿನಲ್ಲಿ ಈಗ ಆತಂಕ ಮನೆಮಾಡಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts