More

    ಕೃಷಿ ಮೇಲೆ ಕರೊನಾ ಕರಿನೆರಳು, ತೋಟದಲ್ಲೇ ಕೊಳೆಯುತ್ತಿದೆ ತರಕಾರಿ

    ಎ.ಅಪ್ಪಾಜಿಗೌಡ, ಮುಳಬಾಗಿಲು
    ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕರೊನಾ ನಿಯಂತ್ರಣಕ್ಕೆ ಸರ್ಕಾರ ಲಾಕ್‌ಡೌನ್ ಅಸ ಪ್ರಯೋಗಿಸಿದ್ದರಿಂದ ವಿವಿಧ ಕ್ಷೇತ್ರಗಳ ಮೇಲೆ ಗಂಭೀರ ಪರಿಣಾಮ ಭೀರಿದ್ದು, ಇದೀಗ ಕೃಷಿ ಕ್ಷೇತ್ರದ ಮೇಲೂ ಕರಿನೆರಳು ಬೀಸಿದೆ.
    ಬೇಸಿಗೆಯಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಹಣ್ಣು, ತರಕಾರಿ ಬೆಳೆದ ರೈತರು ಈಗ ಫಸಲಿಗೆ ಬೆಲೆ ಹಾಗೂ ಮಾರುಕಟ್ಟೆ ಸಿಗದೆ ತೋಟದಲ್ಲೇ ಫಸಲು ಕೊಳೆಯುತ್ತಿದೆ.

    ಒಂದೆಡೆ ಹಾಕಿದ ಬಂಡವಾಳವೂ ಬರಲಿಲ್ಲ, ಬೆಳೆಗೆ ಮಾಡಿದ ಸಾಲವೂ ತೀರಲಿಲ್ಲ. ತೋಟದಲ್ಲಿ ಕೊಳೆಯುತ್ತಿರುವ ಫಸಲನ್ನು ಹೊರ ತೆಗೆಯುವ ಕೂಲಿಯಾಳುಗಳಿಗೆ ಹಣ ನೀಡಲು ಸಾಧ್ಯವಾಗದೆ ರೈತ ಕೈಚೆಲ್ಲಿದ್ದಾನೆ. ಕೆಲ ರೈತರು ಧೈರ್ಯ ಮಾಡಿ ಬೆಳೆ ತೆಗೆದು ಮತ್ತೆ ಬೆಳೆ ಬೆಳೆಯಲು ಭೂಮಿ ಹದ ಮಾಡುವತ್ತ ಗಮನಹರಿಸಿದ್ದಾರೆ.

    ಬೆಲೆಯಿಲ್ಲದೆ ಸಂಕಷ್ಟ: ಮುಳಬಾಗಿಲು ತಾಲೂಕಿನಲ್ಲಿ 7703 ಎಕರೆ ಪ್ರದೇಶಗಳಲ್ಲಿ ತರಕಾರಿ, 12476 ಎಕರೆ ಪ್ರದೇಶಗಳಲ್ಲಿ ಹಣ್ಣಿನ ಬೆಳೆ, 588 ಎಕರೆ ಪ್ರದೇಶದಲ್ಲಿ ಸಾಂಬಾರ್ ಪದಾರ್ಥ, 366 ಎಕರೆಯಲ್ಲಿ ತೋಟದ ಬೆಳೆ, 567 ಎಕರೆಯಲ್ಲಿ ಹೂವಿನ ಬೆಳೆ, 16 ಎಕರೆಯಲ್ಲಿ ಔಷಧ ಸಸ್ಯ, 25 ಗುಂಟೆ ಪ್ರದೇಶದಲ್ಲಿ ಸುಗಂಧಿತ ಸಸ್ಯ, 21717 ಎಕರೆ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಬೆಳೆಯಲಾಗಿದೆ.

    ತಾಲೂಕಿನಲ್ಲಿ 3500 ಎಕರೆ ಪ್ರದೇಶದಲ್ಲಿ ಟೊಮ್ಯಾಟೊ ಬೆಳೆದಿದ್ದು, ಈಗ ಫಸಲಿಗೆ ಬಂದಿರುವ ಟೊಮ್ಯಾಟೊ 15 ದಿನಗಳಿಂದ ಬೆಲೆ ಇಲ್ಲದೆ ರೈತರು ಮಾರುಕಟ್ಟೆಗೆ ತೆಗೆದುಕೊಂಡು ಹೋಗುವುದನ್ನೂ ಬಿಟ್ಟಿದ್ದಾರೆ. ಬೆಳೆ ತೋಟದಲ್ಲೇ ಕೊಳೆಯುತ್ತಿದೆ.

    ತಾಲೂಕಿನ ಎನ್.ವಡ್ಡಹಳ್ಳಿ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ 15 ಕೆಜಿ ಬಾಕ್ಸ್ ಟೊಮ್ಯಾಟೊ ಕೇವಲ 30ರಿಂದ 40 ರೂ.ಗೆ ಮಾರಾಟವಾಗುತ್ತಿದೆ. ಭಾನುವಾರ 50ರಿಂದ 70 ರೂ.ಗೆ ಮಾರಾಟವಾಗಿದ್ದು, ಸೋಮವಾರ 30ರಿಂದ 60 ರೂ.ಗೆ ಮಾರಾಟವಾಗಿದ್ದು, ಲಾಕ್‌ಡೌನ್ ಮುಂದುವರಿದರೆ ಮತ್ತೆ ತೀವ್ರ ಬೆಲೆ ಕುಸಿತ ಉಂಟಾಗಲಿದೆ. ವಡ್ಡಹಳ್ಳಿ ಮಾರುಕಟ್ಟೆಯಿಂದ ಚೆನ್ನೈ ಸೇರಿ ತಮಿಳುನಾಡಿಗೆ 50 ಲಾರಿ ಲೋಡ್ ಟೊಮ್ಯಾಟೊ ಹೋಗುತ್ತಿದ್ದು, ಉತ್ತರ ಭಾರತ ಸೇರಿ ಪಕ್ಕದ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಒರಿಸ್ಸಾ ಮತ್ತಿತತರೆಡೆ ಟೊಮ್ಯಾಟೊ ಹೋಗುತ್ತಿಲ್ಲ. ಇದರಿಂದಲೂ ಬೆಲೆ ಕುಸಿತ ಉಂಟಾಗಿದೆ.

    ತೋಟದಿಂದ ಟೊಮ್ಯಾಟೊ ಬಿಡಿಸಿ ಮಾರುಕಟ್ಟೆಗೆ ಸಾಗಿಸುವ ಖರ್ಚುವೆಚ್ಚವೂ ರೈತರಿಗೆ ಸಿಗುತ್ತಿಲ್ಲ. ಇದರಿಂದ ಹಣ್ಣು ಬಿಡಿಸದೆ ಕೈಚೆಲ್ಲಿದ್ದಾರೆ. ಬಹುತೇಕ ಹಣ್ಣು, ತರಕಾರಿ ವಹಿವಾಟು ಖಾಸಗಿ ವರ್ತಕರು, ಮಂಡಿ ಮಾಲೀಕರು, ವ್ಯಾಪಾರಿಗಳ ಕೈಯಲ್ಲೇ ಇದ್ದು ರೈತನಿಗೆ ಬೆಳೆಗೆ ತಕ್ಕ ಮೌಲ್ಯವೂ ಇಲ್ಲದಂತಾಗಿದೆ.

    3 ಎಕರೆ ಟೊಮ್ಯಾಟೊ ಬೆಳೆದಿದ್ದು, ಹಣ್ಣು ತೆಗೆದು ಮಾರುಕಟ್ಟೆ ಸಾಗಿಸಿದರೂ ಕೂಲಿ ಗೀಟುತ್ತಿಲ್ಲ. ಮನೆಯವರೇ ಗುಣಮಟ್ಟದ ಹಣ್ಣು ತೆಗೆದು ಅದನ್ನು ಮಾತ್ರ ಮಾರುಕಟ್ಟೆಗೆ ಸಾಗಿಸುತ್ತಿದ್ದು, ಸಾಗಾಣಿಕೆ ವೆಚ್ಚವೂ ಸಿಗುತ್ತಿಲ್ಲ, ಹಾಕಿದ ಬಂಡವಾಳ ಇಲ್ಲದಂತಾಗಿದೆ.
    ರತ್ನಯ್ಯ, ಸೊನ್ನವಾಡಿ ರೈತ, ಮುಳಬಾಗಿಲು

    ಎನ್.ವಡ್ಡಹಳ್ಳಿ ಮಾರುಕಟ್ಟೆಯಲ್ಲಿ ಪ್ರತಿದಿನ 100ಕ್ಕೂ ಹೆಚ್ಚು ಲಾರಿ ಲೋಡ್ ಹೊರ ರಾಜ್ಯಗಳಿಗೆ ಹೋಗುತ್ತಿತ್ತು. ಈಗ 40ರಿಂದ 50 ಲೋಡ್ ಮಾತ್ರ ಹೋಗುತ್ತಿದೆ. ಯಾವಾಗಲು ಬೇಸಿಗೆಯಲ್ಲಿ 15 ಕೆಜಿ ಬಾಕ್ಸ್ 500 ರೂ. ಮೇಲೆ ಮಾರಾಟವಾಗುತ್ತಿತ್ತು. ಈ ಬಾರಿ ಬೆಲೆ ಇಲ್ಲದೆ ರೈತರು ನಷ್ಟಕ್ಕೊಳಗಾಗಿದ್ದಾರೆ.
    ಕೆ.ಎಸ್.ಪ್ರಭಾಕರ್, ಎನ್.ವಡ್ಡಹಳ್ಳಿ ಮಂಡಿ ಮಾಲೀಕರ ಸಂಘದ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts