More

    ಊಜಿ ನೊಣ ಕಾಟ ಮತ್ತು ಕರೊನಾ ಭೀತಿಗೆ ನೆಲ ಕಚ್ಚಿದ ಟೊಮ್ಯಾಟೊ ಬೆಲೆ

    ಎ.ಅಪ್ಪಾಜಿಗೌಡ ಮುಳಬಾಗಿಲು
    ಊಜಿ ನೊಣದ ಕಾಟಕ್ಕೆ ಬೆಲೆ ಇಲ್ಲದೆ ನೆಲ ಕಚ್ಚಿದ ಟೊಮ್ಯಾಟೊಗೆ ಈಗ ಕರೊನಾ ವೈರಸ್ ಹಾವಳಿ ಮತ್ತಷ್ಟು ಮಾರಕವಾಗಿದ್ದು, ಹಣ್ಣು ಹೊರ ರಾಜ್ಯಗಳಿಗೆ ಸಾಗಣೆಯಾಗದೆ, ಬೆಲೆಯೂ ಇಲ್ಲದೆ ರೈತರು ತೊಂದರೆಗೆ ಒಳಗಾಗಿದ್ದಾರೆ.

    ತಾಲೂಕಿನಲ್ಲಿ ಸಾವಿರಾರು ಎಕರೆಯಲ್ಲಿ ಟೊಮ್ಯಾಟೊ ಬೆಳೆದಿದ್ದು, ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದ ರೈತರು ತೋಟದಲ್ಲೇ ಹಣ್ಣು ಬಿಡಲು ಸಾಧ್ಯವಾಗದೆ ಮಾರುಕಟ್ಟೆಗೆ ತಂದು ಬಂದಷ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

    ಕೋಲಾರ ಟೊಮ್ಯಾಟೊ ಮಾರುಕಟ್ಟೆ ನಂತರ 2ನೇ ದೊಡ್ಡ ಮಾರುಕಟ್ಟೆ ತಾಲೂಕಿನ ಎನ್.ವಡ್ಡಹಳ್ಳಿ ಎಪಿಎಂಸಿ ಉಪಮಾರುಕಟ್ಟೆ. ಪ್ರತಿದಿನ 40-50 ಲೋಡ್ ಟೊಮ್ಯಾಟೊ ಈ ಮಾರುಕಟ್ಟೆಗೆ ಬರುತ್ತಿದ್ದು, ಇದರಲ್ಲಿ ಶೇ.80 ಊಜಿ ಕಾಟದ ಹಣ್ಣಾಗಿದ್ದರೆ, ಶೇ.20 ಗುಣಮಟ್ಟದ ಹಣ್ಣುಗಳಾಗಿವೆ.

    6 ತಿಂಗಳಿನಿಂದ ಬೆಲೆ ಕುಸಿತ: 400ರಿಂದ 500 ರೈತರು ಮಾರುಕಟ್ಟೆಗೆ ಪ್ರತಿದಿನ ಟೊಮ್ಯಾಟೊ ತಂದು ಮಾರಾಟ ಮಾಡುತ್ತಾರೆ. 15 ಕೆ.ಜಿ ಬಾಕ್ಸ್ 30ರಿಂದ 70 ರೂ,ಗೆ ಮಾರಾಟವಾಗುತ್ತಿದ್ದು, ತೋಟದಲ್ಲಿ ಕಿತ್ತು ಸಾಗಣೆ ಮಾಡಿದ ವೆಚ್ಚವೂ ರೈತರ ಕೈ ಸೇರುತ್ತಿಲ್ಲ. ಕಳೆದ 6 ತಿಂಗಳಿನಿಂದ ಟೊಮ್ಯಾಟೊಗೆ ಬೆಲೆ ಇಲ್ಲದೆ ರೈತ ಹೈರಾಣಾಗಿದ್ದಾನೆ.

    ಪಲ್ಪ್ ಜ್ಯೂಸ್‌ಗೆ ಮಾರಾಟ: ಆಂಧ್ರದ ಚಿತ್ತೂರು ಮತ್ತು ತಿರುಪತಿ ಸಮೀಪದ ರೇಣುಗುಂಟ ಬಳಿಯ ಟೊಮ್ಯಾಟೊ ಪಲ್ಪ್ ಜ್ಯೂಸ್ ಫ್ಯಾಕ್ಟರಿಗಳಿಗೆ ಊಜಿ ಕಾಟದ ಹಣ್ಣುಗಳು ಬಾಕ್ಸ್ 30ರಿಂದ 50 ರೂ.ಗೆ ಕೊಂಡೊಯ್ಯುತ್ತಿರುವುದರಿಂದ ತೋಟದಲ್ಲಿ ಕೊಳೆಯಬೇಕಾದ ಹಣ್ಣುಗಳಿಗೆ ಮಾರಾಟ ದಾರಿ ಸಿಕ್ಕಿದೆ ಎಂಬುದಷ್ಟೇ ರೈತರಿಗೆ ನೆಮ್ಮದಿಯಾಗಿದೆ.

    ಎನ್.ವಡ್ಡಹಳ್ಳಿ ಉಪಮಾರುಕಟ್ಟೆಯಲ್ಲಿ 50 ಮಂಡಿಗಳಿದ್ದರೂ ಬೆಲೆಯಿಲ್ಲದ ಕಾರಣ 20 ಮಂಡಿಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಚಿತ್ತೂರು ಮತ್ತು ರೇಣುಗುಂಟ ಜ್ಯೂಸ್ ಫ್ಯಾಕ್ಟರಿಗಳು ಮಾವು ಸೀಸನ್‌ನಲ್ಲಿ ಮಾವಿನ ಪಲ್ಪ್ ಜ್ಯೂಸ್ ಮಾಡಲು ಮುಂದಾದರೆ ಆಗ ಟೊಮ್ಯಾಟೊ ಕೇಳುವವರೇ ಇಲ್ಲದಂತಾಗುತ್ತದೆ.

    ತೋಟದಲ್ಲೇ ಬಿಟ್ಟರೆ ಭೂಮಿ ಹುಳಿಯಾಗಿ ಮತ್ತೊಂದು ಬೆಳೆ ಬೆಳೆಯಲು ಸಮಸ್ಯೆಯಾಗುತ್ತದೆ. ತೋಟದಿಂದ ಹಣ್ಣುಗಳನ್ನು ಹೊರಗೆ ಸಾಗಿಸಿದರೆ ಮಾತ್ರ ಭೂಮಿಯ ಆರೋಗ್ಯ ಕಾಪಾಡಲು ಸಾಧ್ಯವಾಗುತ್ತದೆ.

    ಸರ್ಕಾರ ಟೊಮ್ಯಾಟೊ ಬೆಳೆದ ರೈತರ ನೆರವಿಗೆ ಧಾವಿಸಬೇಕು. ಕನಿಷ್ಠ ಎಕರೆಗೆ 1.50 ಲಕ್ಷ ರೂ. ಪರಿಹಾರ ನೀಡಬೇಕು, ಊಜಿ ಹಾವಳಿಗೆ ನಿಯಂತ್ರಣಕ್ಕೆ ವಿಶೇಷವಾದ ಗಮನಹರಿಸಬೇಕಾಗಿದೆ.
    ನಗವಾರ ಎನ್.ಆರ್.ಸತ್ಯಣ್ಣ, ಎಪಿಎಂಸಿ ನಿರ್ದೇಶಕ ಮುಳಬಾಗಿಲು

    5 ಎಕರೆಯಲ್ಲಿ ಟೊಮ್ಯಾಟೊ ಬೆಳೆಯಲು 7.50 ಲಕ್ಷ ರೂ ವೆಚ್ಚ ಮಾಡಿದ್ದೇನೆ. ಊಜಿ ನಿಯಂತ್ರಣಕ್ಕೆ 1 ಲಕ್ಷಕ್ಕೂ ಹೆಚ್ಚು ಔಷಧ ಸಿಂಪಡಣೆ ಮಾಡಿದರೂ ನಿಯಂತ್ರಣವಾಗಿಲ್ಲ. ಈಗ ಬೆಲೆಯೂ ಇಲ್ಲದೆ 50 ಸಾವಿರ ರೂ. ಸಹ ಕೈ ಸೇರುತ್ತಿಲ್ಲ. ಕೂಲಿ ಮತ್ತು ಸಾಗಣೆ ವೆಚ್ಚಕ್ಕೆ ತಂದು ಮಾರಾಟ ಮಾಡುತ್ತಿದ್ದೇವೆ.
    ಎಂ.ಸೋಮಶೇಖರ್, ಶಿನಿಗೇನಹಳ್ಳಿ ರೈತ, ಮುಳಬಾಗಿಲು ತಾಲೂಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts