More

    ಹಾಳಾಗುವ ಭೀತಿಯಲ್ಲಿ ಜೋಳ, ಕಡಲೆ

    ಗಜೇಂದ್ರಗಡ: ತಾಲೂಕಿನಾದ್ಯಂತ ಅಕಾಲಿಕ ತುಂತುರು ಮಳೆ, ಮೋಡ ಕವಿದ ವಾತಾವರಣದಿಂದ ಹಿಂಗಾರಿನ ಬೆಳೆಗಳು ಹಾಳಾಗುವ ಭೀತಿ ಎದುರಾಗಿದೆ. ಜೋಳ, ಗೋಧಿ, ಕಡಲೆ, ಕುಸುಬೆ ಮತ್ತಿತರ ಹಿಂಗಾರಿನ ಬೆಳೆಗಳು ಹವಾಮಾನ ತಂಪಾಗಿದ್ದರೆ, ಚಳಿ ಹೆಚ್ಚಾದಷ್ಟು ಹುಲುಸಾಗಿ ಬರುತ್ತವೆ. ಆದರೆ, ಕಳೆದ ಭಾನುವಾರದಿಂದ ಮೋಡ ಕವಿದ ವಾತಾವರಣವಿದ್ದು, ಅಕಾಲಿಕ ತುಂತುರು ಮಳೆ ರೈತರ ನಿದ್ದೆಗೆಡಿಸಿದೆ.

    ತಾಲೂಕಿನ 22,950 ಹೆಕ್ಟೇರ್ ಪ್ರದೇಶದಲ್ಲಿ ಬಿಳಿ ಜೋಳ ಬಿತ್ತನೆಯಾಗಿದೆ. 20 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬೆಳೆಯಲಾಗಿದೆ. ಜೋಳ ಬೆಳೆ ತೆನೆ ಹಿರಿಯುವ, ಕಾಳು ಕಟ್ಟುವ ಹಂತಕ್ಕೆ ಬಂದಿದೆ. ಕಡಲೆ ಕಾಳು ಕಟ್ಟುವ ಹಂತದಲ್ಲಿದೆ. ಈ ಸಮಯದಲ್ಲಿ ಅಕಾಲಿಕ ಮಳೆಯಿಂದ ಕಡಲೆ ಹುಳಿ ತೊಳೆದರೆ ಹೂ, ಚಟ್ಟಿ ಕಟ್ಟಲು ಅಡ್ಡಿಯಾಗುತ್ತದೆ. ಜೋಳದ ತೆನೆಗೆ ನೀರು ಬಡಿದು ಸುಂಕ ತೊಳೆದರೆ ಕಾಳು ಕಪ್ಪಾಗುತ್ತದೆ. ಅಲ್ಲದೆ, ಕೀಟ ಬಾಧೆ ಹೆಚ್ಚಾಗಿ ಇಳುವರಿ ಕುಂಠಿತವಾಗುವ ಆತಂಕ ರೈತರಲ್ಲಿದೆ.

    ಎಪಿಎಂಸಿಯಲ್ಲಿ ಸದ್ಯ ಕ್ವಿಂಟಾಲ್ ಬಿಳಿ ಜೋಳಕ್ಕೆ 3 ಸಾವಿರ ರೂ. ದರವಿದೆ. ಚಿಲ್ಲರೆ ಅಂಗಡಿಗಳಲ್ಲಿ 3500 ರೂ.ಗಿಂತ ಹೆಚ್ಚು ಬೆಲೆಯಿದೆ. ಆದರೆ, ಈ ವರ್ಷ ಮುಂಗಾರಿನ ಕೊನೆ ಹಾಗೂ ಹಿಂಗಾರು ಆರಂಭದಲ್ಲಿ ಸುರಿದ ಅತಿಯಾದ ಮಳೆಯಿಂದ ಬಿತ್ತನೆಗೆ ತೊಂದರೆಯಾಗಿತ್ತು. ಕಷ್ಟಪಟ್ಟು ಬಿತ್ತನೆ ಮಾಡಿದ ಬೆಳೆಯೂ ಈಗ ಮೋಡ ಕವಿದ ವಾತಾವರಣ, ಅಕಾಲಿಕ ಮಳೆಯಿಂದ ಹಾಳಾಗುತ್ತಿದೆ. ಇದರಿಂದ ಮುಂಬರುವ ದಿನಗಳಲ್ಲಿ ಜೋಳದ ಬೆಲೆ ಮತ್ತಷ್ಟು ಏರಿಕೆಯಾಗಲಿದೆ.

    ‘ಒಂದು ಎಕರೆ ಜಮೀನಿನಲ್ಲಿ 6ರಿಂದ 8 ಕ್ವಿಂಟಾಲ್ ಜೋಳ ಬೆಳೆಯಲಾಗುತ್ತಿತ್ತು. ಈ ಬಾರಿ ಸತತ ಮಳೆ, ಸರಿಯಾದ ಸಮಯಕ್ಕೆ ಬಿತ್ತನೆಗೆ ಅವಕಾಶ ಸಿಗದ ಕಾರಣ 4-5 ಕ್ವಿಂಟಾಲ್ ಜೋಳ ಬೆಳೆಯುವ ಭರವಸೆ ಹೊಂದಿದ್ದೆ. ಮೋಡ ಕವಿದ ವಾತಾವರಣ, ತುಂತುರು ಮಳೆಯಿಂದ ಅದೂ ಇಲ್ಲವಾಗುವ ಆತಂಕವಿದೆ’ ಎನ್ನುತ್ತಾರೆ ನಿಡಗುಂದಿ ಗ್ರಾಮದ ರೈತ ಶಶಿಧರ ಹೊಟ್ಟಿನ.

    ಮುಂಗಾರಿನಲ್ಲಿ ಅತಿವೃಷ್ಟಿಯಿಂದ ಫಸಲು ಹಾಳಾಗಿ ಹೋದವು. ಈಗ ಸತತ ಮೋಡ, ತುಸು ಮಳೆ ಬಂದು ಹಾಳಾಗುತ್ತಿದೆ. ಹೀಗಾದರೆ ಮುಂದಿನ ದಿನಗಳಲ್ಲಿ ಏನು ತಿನ್ನಬೇಕು ಎಂಬ ಚಿಂತೆ ಎದುರಾಗಿದೆ. ಈ ಬಾರಿ ಮುನಿಸಿಕೊಂಡಿರುವ ಪರಿಸರ ಅನ್ನದಾತರನ್ನು ಸಂಕಷ್ಟದ ಸುಳಿಗೆ ಸಿಲುಕಿಸಿದೆ.

    | ಅಮರೇಶ ಮಾರನಬಸರಿ, ಜಕ್ಕಲಿ ಗ್ರಾಮದ ರೈತ

    ಅಕಾಲಿಕ ತುಂತುರು ಮಳೆ, ಮೋಡ ಕವಿದ ವಾತಾವರಣ ಇನ್ನೂ ಒಂದೆರಡು ದಿನ ಮುಂದುವರಿದರೆ ಬಿಳಿ ಜೋಳದ ಗುಣಮಟ್ಟ ಹಾಳಾಗುತ್ತದೆ. ಫಸಲು ಕಪ್ಪಾಗುವ ಸಂಭವವಿದೆ. ಈ ವಾತಾವರಣ ಕಡಲೆ ಫಸಲಿಗೂ ಹಿತವಲ್ಲ.

    | ಸಾವಿತ್ರಿ ಶಿವನಗೌಡ್ರ, ಕೃಷಿ ಅಧಿಕಾರಿ, ನರೇಗಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts