More

    ಧನಿಯಾ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳನ್ನು ತಿಳಿದರೆ ನಿಮಗೆ ಆಶ್ಚರ್ಯ ಖಚಿತ…

    ನಮ್ಮ ಭಾರತೀಯರ ಸಾಂಬಾರು ಪದಾರ್ಥಗಳಲ್ಲಿ ರಾಜನೆನಿಸಿರುವವನೇ ಧನಿಯಾ. ಈ ಧನಿಯಾ ಇಲ್ಲದೆ ಸಾಂಬಾರು ಪುಡಿಗೆ ಸುವಾಸನೆಯೇ ಬಾರದು. ಇದು ದಕ್ಷಿಣ ಭಾರತದ ಸಾಂಬಾರ್ ಆಗಿರಲಿ ಅಥವಾ ಉತ್ತರದವರ ನೆಚ್ಚಿನ ರಾಜ್ಮಾ ಮಸಾಲಾ ಆಗಿರಲಿ ಕೊತ್ತಂಬರಿ ಸೊಪ್ಪಿನ (ಧನಿಯಾ) ಸುವಾಸನೆ ಬೇಕೇ ಬೇಕು. ಅಂತೆಯೇ ಈ ಧನಿಯಾ (ಕೊತ್ತಂಬರಿ ಬೀಜ) ಪದಾರ್ಥವು ಆರೋಗ್ಯಕ್ಕೂ ಕೂಡ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ? ಈ ವಿಶಿಷ್ಟವಾದ ಮಸಾಲೆ, ವಾಸನೆ ಮತ್ತು ರುಚಿಯನ್ನು ಹೆಚ್ಚಿಸುವುದರೊಂದಿಗೆ ದೇಹದ ಆರೋಗ್ಯ ವೃದ್ಧಿಸುವುದರಲ್ಲೂ ಸೈ ಎನಿಸಿಕೊಂಡಿದೆ.

    ಧನಿಯಾ ಬೀಜಗಳಲ್ಲಿ ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು, ಆ್ಯಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಸಮೃದ್ಧವಾಗಿದೆ. ಇದರೊಂದಿಗೆ ಧನಿಯಾವು ಆ್ಯಂಟಿಆಕ್ಸಿಡೆಂಟ್, ಆ್ಯಂಟಿಕ್ಯಾನ್ಸರ್, ನ್ಯೂರೋಪ್ರೊಟಿಕ್ಟಿವ್, ಆಕ್ಸಿಯೋಲೈಟಿಕ್, ನೋವು ನಿವಾರಕ, ಮೈಗ್ರೇನ್ ನಿವಾರಕ, ಹೈಪೋಲಿಪಿಡೆಮಿಕ್, ಹೈಪೊಟೆನ್ಸಿವ್, ಆಂಟಿಮೈಕ್ರೊಬಿಯಲ್ ಚಟುವಟಿಕೆಗಳನ್ನು ಒಳಗೊಂಡಂತೆ ವ್ಯಾಪಕ ಶ್ರೇಣಿಯ ಜೈವಿಕ ಚಟುವಟಿಕೆಗಳಿಗೆ ಕಾರಣವಾಗುವ ಜೈವಿಕ ಸಕ್ರಿಯ ಫೈಟೊಕೆಮಿಕಲ್‌ಗಳನ್ನು ಹೊಂದಿದೆ. ಹಾಗಾಗಿ ಆಹಾರ ಪದಾರ್ಥಗಳ ಮೂಲಕ ಧನಿಯಾವನ್ನು ಸೇವಿಸುವುದಲ್ಲದೆ, ನೇರವಾಗಿ ದಿನನಿತ್ಯ ನೀರಿನೊಂದಿಗೆ ಧನಿಯಾವನ್ನು ಬೆರೆಸಿ ಕುಡಿಯುವುದರಿಂದ, ಚರ್ಮ ಮತ್ತು ಕೂದಲಿನ ಸಮಸ್ಯೆ ಗುಣಪಡಿಸಲು, ಮಧುಮೇಹ ಮತ್ತು ಕೊಲೆಸ್ಟ್ರಾಲನ್ನು ನಿಯಂತ್ರಿಸುವುದು ಸೇರಿದಂತೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.

    1. ಉತ್ಕರ್ಷಣ ನಿರೋಧಕಗಳ ಸಮೃದ್ಧ ಮೂಲ: ಕೊತ್ತಂಬರಿ ಸೊಪ್ಪಿನ ಎಲೆಗಳು ಮತ್ತು ಬೀಜಗಳೆರಡೂ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಇದು ದೇಹದಲ್ಲಿನ ಹಾನಿಕಾರಕ ರೋಗಮೂಲಹಾರಿಗಳನ್ನು ತಟಸ್ಥಗೊಳಿಸಲು ಸಹಾಯ ಮಾಡುವ ನೈಸರ್ಗಿಕ ಅಣುಗಳಾಗಿವೆ. ಮೆಡಿಕಲ್ ನ್ಯೂಸ್ ಟುಡೇ ಪ್ರಕಾರ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಹೃದ್ರೋಗ, ಕ್ಯಾನ್ಸರ್, ಸಂಧಿವಾತ, ಪಾರ್ಶ್ವವಾಯು, ಉಸಿರಾಟದ ಕಾಯಿಲೆಗಳು, ಪ್ರತಿರಕ್ಷಣಾ ಕೊರತೆ, ಎಂಫಿಸೆಮಾ, ಪಾರ್ಕಿನ್ಸನ್ ಕಾಯಿಲೆ ಮತ್ತು ಇತರೆ ಉರಿಯೂತ ಅಥವಾ ರಕ್ತಕೊರತೆಯ ಪರಿಸ್ಥಿತಿಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

    2. ಆತಂಕ ವಿರೋಧಿ ಪರಿಣಾಮ: ನಿದ್ರಾಹೀನತೆಯ ಚಿಕಿತ್ಸೆಗಾಗಿ ಕೊತ್ತಂಬರಿ ಸೊಪ್ಪನ್ನು ಇರಾನ್‌ನಲ್ಲಿ ಸಾಂಪ್ರಾದಾಯಿಕ ಔಷಧಿ ಪದ್ಧತಿಯಲ್ಲಿ ಬಳಸುತ್ತಾರೆ. ಕೊತ್ತಂಬರಿ ಸಾರವು ಸಂಭಾವ್ಯ ನಿದ್ರಾಜನಕ ಮತ್ತು ಸ್ನಾಯು ಸಡಿಲಗೊಳಿಸುವಿಕೆಯಾಗಿಯೂ ಬಳಸಲಾಗುತ್ತದೆ. ಇವೆಲ್ಲವೂ ಹೊಟ್ಟೆಯ ಸಮಸ್ಯೆ ಮತ್ತು ಆತಂಕಕ್ಕೆ ಸಂಬಂಧಿಸಿದ ನರಗಳನ್ನು ನಿಯಂತ್ರಿಸುತ್ತದೆ.

    3. ಜೀವನಶೈಲಿ ಸಂಬಂಧಿತ ಕಾಯಿಲೆಗಳನ್ನು ನಿಯಂತ್ರಿಸುತ್ತದೆ: ಮಧುಮೇಹ, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಇಂದಿನ ಸಾಮಾನ್ಯ ಜೀವನಶೈಲಿ ಕಾಯಿಲೆಗಳು. ಕೊತ್ತಂಬರಿಯು ವಿಟಮಿನ್ ಎ, ಸಿ ಮತ್ತು ಕೆ ಸೇರಿದಂತೆ ಹಲವು ಪೋಷಕಾಂಶಗಳನ್ನು ಒಳಗೊಂಡಿದೆ. ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಈ ಜೀವನಶೈಲಿ ರೋಗಗಳ ತೀವ್ರತೆಯನ್ನು ಕಡಿಮೆ ಮಾಡುತ್ತದೆ.

    4. ದೇಹವನ್ನು ತಂಪಾಗಿಸುತ್ತದೆ: ಬೇಸಿಗೆಯಲ್ಲಿ ಧನಿಯಾ ನೀರು ಅತ್ಯುತ್ತಮ ತಂಪು ಪಾನೀಯ. ಇದು ದೇಹವನ್ನು ತಂಪಾಗಿಸುವುದಲ್ಲದೆ, ಮೂತ್ರಪಿಂಡವನ್ನು ವಿಷಮುಕ್ತಗೊಳಿಸುತ್ತದೆ. ಜತೆಗೆ ದೇಹದ ನೀರಿನ ಧಾರಣ ಸಾಮರ್ಥ್ಯವನ್ನು ನಿರ್ವಹಿಸುತ್ತದೆ.

    5. ಸ್ಪಷ್ಟ ಚರ್ಮದ ರಚನೆ: ಕೊತ್ತಂಬರಿಯಲ್ಲಿರುವ ಕಬ್ಬಿಣದ ಅಂಶ ಮತ್ತು ಆ್ಯಂಟಿಫಂಗಲ್, ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಚರ್ಮವು ಮೊಡವೆಗಳ ವಿರುದ್ಧ ಹೋರಾಡಲು ಮತ್ತು ಹೊಳೆಯುವ ಸ್ಪಷ್ಟ ಚರ್ಮ ರಚನೆಗೆ ಸಹಾಯ ಮಾಡುತ್ತದೆ. ಇದು ಅನೇಕ ವಿಟಮಿನ್‌ಗಳ ಉಪಸ್ಥಿತಿಯಿಂದಾಗಿ ಕೂದಲಿನ ಆರೋಗ್ಯಕರ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕೂದಲಿನ ಎಣ್ಣೆಗೆ ಕೊತ್ತಂಬರಿ ಸೊಪ್ಪನ್ನು ಸೇರಿಸುವುದರಿಂದ ಕೂದಲು ಒಡೆಯುವುದು ಮತ್ತು ಉದುರುವುದನ್ನು ತಪ್ಪಿಸುತ್ತದೆ.

    ಇವುಗಳ ಹೊರತಾಗಿ ಕೊತ್ತಂಬರಿಯನ್ನು ಸಾಮಾನ್ಯ ನೆಗಡಿ, ಜ್ವರ, ವಾಕರಿಕೆ, ವಾಂತಿ, ಹೊಟ್ಟೆಯ ಅಸ್ವಸ್ಥತೆಗಳನ್ನು ಗುಣಪಡಿಸಲು ಮತ್ತು ಅಜೀರ್ಣ, ಜಂತುಹುಳುಗಳು, ಸಂಧಿವಾತ ಮತ್ತು ನೋವಿನ ವಿರುದ್ಧ ಔಷಧವಾಗಿ ಬಳಸಲಾಗುತ್ತದೆ.

    ಧನಿಯಾ ಅಥವಾ ಕೊತ್ತಂಬರಿ ನೀರನ್ನು ತಯಾರಿಸುವ ವಿಧಾನ
    • ಒಂದು ಚಮಚ ಕೊತ್ತಂಬರಿ ಬೀಜವನ್ನು ಎರಡು ಕಪ್ ನೀರಿನಲ್ಲಿ ಕುದಿಸಿ.
    • ಎರಡು ಕಪ್ ನೀರು ಒಂದು ಕಪ್ ನೀರಾಗುವಷ್ಟು ಕುದಿಸಬೇಕು.
    • ನೀರನ್ನು ಶೋಧಿಸಿಕೊಂಡು ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಕುಡಿಯಿರಿ. ಇದು ಕೂದಲಿನ ಆರೋಗ್ಯಕರ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕೂದಲಿನ ಎಣ್ಣೆಗೆ ಕೊತ್ತಂಬರಿ ಸೊಪ್ಪನ್ನು ಸೇರಿಸುವುದರಿಂದ ಕೂದಲು ಒಡೆಯುವುದು ಮತ್ತು ಉದುರುವುದನ್ನು ತಪ್ಪಿಸುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts