More

    ನಿರ್ಗತಿಕರ ಸಹಾಯಕ್ಕೆ ವೆಬ್‌ಸೈಟ್ ಆರಂಭ

    ಬೆಳಗಾವಿ: ಲಾಕ್‌ಡೌನ್‌ನಿಂದ ತೀವ್ರ ಸಮಸ್ಯೆ ಎದುರಿಸುತ್ತಿರುವ ಕೂಲಿ ಕಾರ್ಮಿಕರು ಮತ್ತು ನಿರಾಶ್ರಿತರಿಗಾಗಿ ಅಗತ್ಯ ದಿನಸಿ ಮತ್ತು ವೈದ್ಯಕೀಯ ಸಾಮಗ್ರಿಗಳನ್ನು ದಾನಿಗಳಿಂದ ಸ್ವೀಕರಿಸಲು ಮತ್ತು ಅರ್ಹರಿಗೆ ವಿತರಿಸುವ ನಿಟ್ಟಿನಲ್ಲಿ ವ್ಯಕ್ತಿ ಮತ್ತು ಸ್ವಯಂ-ಸಂಸ್ಥೆಗಳ ನೋಂದಣಿಗಾಗಿ ಜಿಲ್ಲಾ ವೆಬ್‌ಸೈಟ್ ಆರಂಭಿಸಲಾಗಿದೆ ಎಂದು ಜಿಲ್ಲಾ ಸಮನ್ವಯ ಸಮಿತಿ ಸಂಚಾಲಕ ಶಶಿಧರ ಕುರೇರ ಹೇಳಿದ್ದಾರೆ.
    ನಗರದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಅಧಿಕಾರಿಗಳು, ಎನ್‌ಜಿಒ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

    ವಲಸೆ ಬಂದ ಕೂಲಿ ಕಾರ್ಮಿಕರು ಮತ್ತು ನಿರಾಶ್ರಿತರಿಗೆ ದಿನನಿತ್ಯದ ಅವಶ್ಯಕ ಆಹಾರ ಪದಾರ್ಥ, ಮಾಸ್ಕ್, ಸ್ಯಾನಿಟೈಸರ್ ಮುಂತಾದವುಗಳನ್ನು ನೀಡಬೇಕಿದೆ. ಅವುಗಳನ್ನು ಉಚಿತವಾಗಿ ಒದಗಿಸಲು ಸ್ವಯಂ-ಪ್ರೇರಿತರಾಗಿ ಮುಂದೆ ಬಂದು ಜಿಲ್ಲಾಡಳಿತದೊಂದಿಗೆ ಸಹಾಯ ಹಸ್ತ ನೀಡುವ ವ್ಯಕ್ತಿಗಳು, ಸಂಘ-ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುವ ಕೆಲಸ ಮಾಡಲಾಗುತ್ತಿದೆ. ಜಿಲ್ಲೆಯ ಆಸಕ್ತ ಸರ್ಕಾರೇತರ ಸಂಸ್ಥೆಗಳು, ಸಾರ್ವಜನಿಕ ಸೇವಾ ಸಂಸ್ಥೆಗಳು, ಸಹಕಾರ ಗುಂಪುಗಳು, ವ್ಯಕ್ತಿಗಳು ಮತ್ತು ಮಧ್ಯಸ್ಥಗಾರರು ಸೇರಿ ಜಿಲ್ಲಾಡಳಿತದೊಂದಿಗೆ ಸಹಾಯ ಹಸ್ತ ನೀಡಲು ಕೋವಿಡ್-19 ವೇದಿಕೆಯಲ್ಲಿ ನೋಂದಣಿ ಮಾಡಬಹುದಾಗಿದೆ ಎಂದರು.

    ನೊಂದಣಿಗಾಗಿ ವೆಬ್ ವಿಳಾಸ: ಅಗತ್ಯ ಸೇವೆ ಮತ್ತು ವಸ್ತುಗಳನ್ನು ಪೂರೈಸಲು ಆಸಕ್ತ ದಾನಿಗಳು ಸಹ ನೋಂದಾಯಿಸಬಹುದಾಗಿದೆ. ಅಗತ್ಯ ವಸ್ತುಗಳ ಪೂರೈಕೆಗಾಗಿ, ಅಗತ್ಯತೆ ಮತ್ತು ವಸ್ತುಗಳ ಅವಶ್ಯಕತೆ ಇರುವ ಜನರು ಈ ವೆಬ್‌ಸೈಟ್ ಮೂಲಕ ತಮ್ಮ ಬೇಡಿಕೆ ಹಂಚಿಕೊಳ್ಳಬಹುದಾಗಿದೆ. ಸರ್ಕಾರೇತರ ಸಂಘ- ಸಂಸ್ಥೆಗಳಿಂದ ಒದಗಿಸಲಾದ ಪರಿಹಾರ ಮತ್ತು ನೀಡಿರುವ ಸಹಕಾರದ ಕುರಿತು ಅಂಕಿ-ಅಂಶಗಳ ಸಮೇತ ಜಿಲ್ಲಾ ವೆಬ್‌ಸೈಟ್‌ನಲ್ಲಿ ಅಪ್‌ಡೇಟ್ ಮಾಡಲಾಗುವುದು ಎಂದರು.

    ಜಿಲ್ಲಾ ಸಮಿತಿಯ ನಗರ ಪ್ರದೇಶದ ಅಧಿಕಾರಿಗಳು, ತಾಲೂಕು ಮಟ್ಟದಲ್ಲಿ ತಹಸೀಲ್ದಾರ್, ಗ್ರಾಮ ಪಂಚಾಯತಿ ಮಟ್ಟದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸ್ವಯಂ-ಸೇವಕರ ಮುಖಾಂತರ ಅಗತ್ಯವಿರುವ ಜನರಿಗೆ ಅವಶ್ಯಕ ವಸ್ತು ಪೂರೈಸಲಾಗುವುದು. ಮಾಹಿತಿಗಾಗಿ ಜಿಲ್ಲಾ ಸಹಾಯವಾಣಿ ಸಂಖ್ಯೆ: 0831-2424284 ಸಂಪರ್ಕಿಸಬಹುದು ಎಂದು ತಿಳಿಸಿದರು. ಸಮಿತಿಯ ಸದಸ್ಯರು, ರೆಡ್‌ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts