More

    ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಬೇಕು ರಾಜಕೀಯ ಇಚ್ಛಾಶಕ್ತಿ: ಬಿ.ವೈ.ರಾಘವೇಂದ್ರ

    ಶಿವಮೊಗ್ಗ: ರಾಜಕಾರಣವೇ ಬೇರೆ, ಸಹಕಾರ ಸಂಘಗಳ ಚಟುವಟಿಕೆಗಳೇ ಬೇರೆ. ಆದರೆ ರಾಜಕೀಯದಿಂದ ಸಹಕಾರ ಸಂಘಗಳ ಬೆಳವಣಿಗೆ ಸಾಧ್ಯವಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
    ಡಿಸಿಸಿ ಬ್ಯಾಂಕ್ ಆವರಣದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಘಟಕ ಭಾನುವಾರ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ರಾಜಕೀಯ ಇಚ್ಛಾಶಕ್ತಿ ಇದ್ದಾಗ ಸಹಕಾರ ಕ್ಷೇತ್ರ ವೇಗವಾಗಿ ಅಭಿವೃದ್ಧಿ ಹೊಂದುತ್ತದೆ. ಈ ಸಾಲಿಗೆ ಶಿವಮೊಗ್ಗದ ಡಿಸಿಸಿ ಬ್ಯಾಂಕ್ ಕೂಡ ಸೇರಿದೆ ಎಂದರು.
    ಶಿವಮೊಗ್ಗ ಆರೋಗ್ಯ, ಶಿಕ್ಷಣದ ಜತೆಗೆ ಸಹಕಾರ ಕ್ಷೇತ್ರದಲ್ಲೂ ಪ್ರಗತಿ ಸಾಧಿಸುತ್ತಿದೆ. ಸಹಕಾರ ಕ್ಷೇತ್ರವು ಸೇವಾ ಭಾವನೆ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಪ್ರಸ್ತುತ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಿದೆ. ಆಯುಷ್ಮಾನ್ ಭಾರತ್, ಯಶಸ್ವಿನಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಮುಖಾಂತರ ಸಾರ್ವಜನಿಕರಿಗೆ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರಗಳು ಪ್ರಯತ್ನ ನಡೆಸುತ್ತಿವೆ ಎಂದು ತಿಳಿಸಿದರು.
    ಬ್ಯಾಂಕ್ ಉಪಾಧ್ಯಕ್ಷ ಎಚ್.ಎಲ್.ಷಡಕ್ಷರಿ ಮಾತನಾಡಿ, ಪ್ರತಿ ವರ್ಷ ನಡೆಯುವ ಸಹಕಾರ ಸಪ್ತಾಹದಲ್ಲಿ ರಕ್ತದಾನ ಶಿಬಿರ ಆಯೋಜನೆ ಮಾಡಿದರೆ ದಾಖಲೆ ಪ್ರಮಾಣದಲ್ಲಿ ರಕ್ತ ಸಂಗ್ರಹವಾಗಲಿದೆ. ರಕ್ತದಾನದ ಬಗ್ಗೆ ಗ್ರಾಮೀಣ ಭಾಗದಲ್ಲೂ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಹೇಳಿದರು.
    ರಕ್ತದಾನದಿಂದ ಯಾವ ಆರೋಗ್ಯ ಸಮಸ್ಯೆಯೂ ಆಗುವುದಿಲ್ಲ. ಭಯಪಡದೆ ಆರೋಗ್ಯವಂತ ಯುವಕರು ರಕ್ತದಾನ ಮಾಡಬೇಕು ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಚೇರ್ಮನ್ ಎಸ್.ಪಿ.ದಿನೇಶ್ ಹೇಳಿದರು.
    1,300 ಜನ ನೋಂದಣಿ: ಡಿಸಿಸಿ ಬ್ಯಾಂಕ್‌ನಿಂದ ಆರ್ಥಿಕ ಚಟುವಟಿಕೆ ಮಾತ್ರವಲ್ಲದೆ ಸಾಮಾಜಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ. ಪ್ರಥಮ ಬಾರಿಗೆ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಸಿದ್ದು, 1,300 ಜನ ರಕ್ತದಾನಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಬ್ಯಾಂಕ್ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ ಹೇಳಿದರು. ರಕ್ತದಾನ ಮಾಡಿದರೆ ಜೀವ ಉಳಿಸುವ ಮಹಾತ್ಕಾರ್ಯದಲ್ಲಿ ನಾವೆಲ್ಲರೂ ಭಾಗಿಯಾದ ಪುಣ್ಯ ಸಿಗುತ್ತದೆ. ತುರ್ತು ಸಂದರ್ಭದಲ್ಲಿ ನಾವು ಮಾಡಿದ ರಕ್ತದಾನ ಅವಶ್ಯಕತೆ ಇದ್ದವರ ನೆರವಿಗೆ ಬರುತ್ತದೆ. ಹಾಗಾಗಿ ರಕ್ತದಾನ ಮಾಡುವಂತೆ ಇತರರನ್ನೂ ಪ್ರೇರೇಪಿಸಬೇಕು ಎಂದರು.
    ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಗೌರವ ಕಾರ್ಯದರ್ಶಿ ಡಾ. ದಿನೇಶ್, ಶಿಮುಲ್ ಅಧ್ಯಕ್ಷ ಎನ್.ಎಚ್.ಶ್ರೀಪಾದ ರಾವ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ವಿಜಯದೇವ್, ದುಗ್ಗಪ್ಪ ಗೌಡ, ಎಂ.ಎಂ.ಪರಮೇಶ್, ಜಿ.ಪಿ.ಯೋಗೇಶ್ವರ್, ಜಿ.ಎಂ.ಸುಧೀರ್, ಗುರುರಾಜ್, ಕೀರ್ತಿರಾಜ್, ಸಿಇಒ ನಾಗೇಶ ಡೋಂಗ್ರೆ, ಉದ್ಯಮಿ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ಪ್ರಮುಖರಾದ ವೆಂಕಟೇಶ್, ದಿವಾಕರ ಶೆಟ್ಟಿ, ಮಂಜುನಾಥ್ ಇತರರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts