More

    ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣ ನಿಯಂತ್ರಿಸಿ

    ಹಾವೇರಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಬಾರದು. ಈ ಕುರಿತು ಜಾಗೃತಿ ಮೂಡಿಸಿ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚಿಸಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಜನರ ಮೇಲಿನ ದೌರ್ಜನ್ಯ ನಿಯಂತ್ರಣ ಹಾಗೂ ಜಿಲ್ಲಾ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದೌರ್ಜನ್ಯ ಪ್ರಕರಣಗಳಲ್ಲಿ ದೂರು, ಪ್ರತಿ ದೂರುಗಳ ಕುರಿತು ವಿಚಾರಣೆ ಅಧಿಕಾರವನ್ನು ಡಿವೈಎಸ್​ಪಿ ಮಟ್ಟದ ಅಧಿಕಾರಿಗಳಿಗೆ ನೀಡಲಾಗಿದೆ. ಜಿಲ್ಲೆಯಲ್ಲಿ ಕಳೆದ 3 ವರ್ಷಗಳಲ್ಲಿ ದೌರ್ಜನ್ಯ ಪ್ರಕರಣಗಳ ದಾಖಲು, ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಪ್ರಕರಣಗಳು, ದೌರ್ಜನ್ಯ ಪ್ರಕರಣಗಳಲ್ಲಿ ಪರಿಹಾರ ಪಾವತಿ ಕುರಿತು ಪೊಲೀಸ್ ಹಾಗೂ ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

    ಸಮಾಜ ಕಲ್ಯಾಣಾಧಿಕಾರಿ ಜಗದೀಶ ಹೆಬ್ಬಳ್ಳಿ ಮಾಹಿತಿ ನೀಡಿ, ಕಳೆದ 3 ವರ್ಷದಲ್ಲಿ 108 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. 96 ಪ್ರಕರಣಗಳು ರುಜುವಾತಾಗಿದ್ದು, 56.5 ಲಕ್ಷ ರೂ. ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 16 ಪ್ರಕರಣಗಳು ದಾಖಲಾಗಿದ್ದು, 10 ಪ್ರಕರಣಗಳಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಐದು ಪ್ರಕರಣಗಳು ತನಿಖಾ ಹಂತದಲ್ಲಿವೆ ಎಂದರು.

    ದೌರ್ಜನ್ಯ ಸಮಿತಿಯ ಸದಸ್ಯ ರಮೇಶ ಆನವಟ್ಟಿ ಮಾತನಾಡಿ, ದೌರ್ಜನ್ಯಕ್ಕೆ ಒಳಗಾಗಿ ನೊಂದವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರೆ, ಅವರ ವಿರುದ್ಧವೇ ಕೌಂಟರ್ ದೂರುಗಳನ್ನು ದಾಖಲಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದರು.

    ಎಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಕೆಲವು ಕಡೆ ಇಂತಹ ಘಟನೆಗಳು ನಡೆದಿವೆ. ಸತ್ಯಾಂಶವನ್ನು ಪರಿಶೀಲಿಸಿ ಬಿ ಪಾಲ್ಸ್ ಮಾಡಿದ್ದೇವೆ. ದೂರುಗಳನ್ನು ಯಾರೇ ನೀಡಿದರೂ ನಿರಾಕರಿಸುವಂತಿಲ್ಲ. ಆದರೆ, ಸತ್ಯಾಸತ್ಯತೆಗಳನ್ನು ಪರಿಶೀಲಿಸಲಾಗುವುದು ಎಂದರು.

    ಸಭೆಯಲ್ಲಿ ಜಿಲ್ಲಾ ಜಾಗ್ರತ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಕೃಷ್ಣ ಚವ್ಹಾಣ, ಸಿದ್ದಲಿಂಗಪ್ಪ ಹೊನ್ನಪ್ಪನವರ, ಹೊನಪ್ಪ ಯಲಿಗಾರ, ಫಕೀರೇಶ ಕಾಳಿ, ಎನ್.ಎಂ. ಗಾಳೆಮ್ಮನವರ, ಮುತ್ತುರಾಜ ಮಾದರ, ಶ್ರೀಧರ ಆನವಟ್ಟಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

    ಎಸ್​ಸಿ, ಎಸ್​ಟಿ ದೌರ್ಜನ್ಯ ತಡೆ ಕಾಯ್ದೆ ಕುರಿತು ಗ್ರಾಪಂವಾರು ಸೌಹಾರ್ದ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಅರಿವು ಮೂಡಿಸಲಾಗುವುದು. ಗ್ರಾಪಂಗಳಿಗೆ ಎಸ್​ಸಿ, ಎಸ್​ಟಿ ಅನುದಾನದಡಿ ಶೈಕ್ಷಣಿಕ ಚಟುವಟಿಕೆಗೆ ನಿಗದಿತ ಅನುದಾನ ಬಳಕೆಯಲ್ಲಿ ಲೋಪವಾದರೆ ಕ್ರಮ ವಹಿಸಲಾಗುವುದು.
    | ಮಹಮ್ಮದ್ ರೋಷನ್, ಜಿಪಂ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts