More

    ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿ

    ಚಿಕ್ಕಮಗಳೂರು: ವಿದ್ಯಾರ್ಥಿಗಳು ದೇಶದ ಭವಿಷ್ಯ ರೂಪಿಸುವ ಭಾವಿ ಪ್ರಜೆಗಳು. ಆಸಕ್ತಿಯಿರುವ ಕ್ಷೇತ್ರದಲ್ಲಿ ಸಾಧನೆ ಮಾಡಿದಾಗ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

    ಐಡಿಎಸ್‌ಜಿ ಸರ್ಕಾರಿ ಕಾಲೇಜಿನಲ್ಲಿ ನೆಹರು ಯುವ ಕೇಂದ್ರ ಹಾಗೂ ಜಿಲ್ಲಾಡಳಿತದಿಂದ ಶನಿವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೂ ಅದರಲ್ಲಿ ಚೆನ್ನಾಗಿ ಕಲಿತು ಯಶಸ್ವಿಯಾಗಬೇಕು ಎಂದು ತಿಳಿಸಿದರು.
    ಮಕ್ಕಳು ಉನ್ನತ ಮಟ್ಟಕ್ಕೇರಬೇಕು ಎನ್ನುವ ನಿರೀಕ್ಷೆ ಪ್ರತಿ ಪಾಲಕರದ್ದಾಗಿರುತ್ತದೆ. ನಾವು ಪಟ್ಟ ಕಷ್ಟವನ್ನು ಮಕ್ಕಳು ಪಡಬಾರದು ಎನ್ನುವ ಸಂಕಲ್ಪ ಅವರದ್ದಾಗಿರುತ್ತದೆ. ಈ ಕಾರಣಕ್ಕೆ ತುಂಬ ಕಷ್ಟಪಟ್ಟು ಶಾಲೆ, ಕಾಲೇಜಿಗೆ ಕಳಿಸುತ್ತಿರುತ್ತಾರೆ. ನಮ್ಮ ದೇಶದಲ್ಲಿ ಎಲ್ಲವೂ ಇದೆ. ನಮ್ಮ ಒಳ್ಳೆಯ ಕೆಲಸದಿಂದ ದೇಶ, ಗುರು, ತಂದೆ, ತಾಯಿಯಂದಿರ ಋಣ ತೀರಿಸಬಹುದು ಎಂದರು.
    ಭಾರತದ ಬಗ್ಗೆ ವಿದೇಶಿಗರಿಗಿದ್ದ ಕೀಳು ಭಾವನೆ ಬದಲಾಗಿದೆ. ಭಾರತದ ಪ್ರಧಾನಮಂತ್ರಿ ವಿದೇಶಕ್ಕೆ ಹೋದರೆ ಆದೇಶದ ಪ್ರಧಾನಿ ವಿಮಾನ ನಿಲ್ದಾಣಕ್ಕೆ ಬಂದು ಸ್ವಾಗತಿಸುತ್ತಾರೆ. ಇದು ನಮ್ಮ ದೇಶಕ್ಕೆ ಸಿಗುತ್ತಿರುವ ಗೌರವ ಎಂದರು.
    ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಸ್ಪರ್ಧೆಗಳಲ್ಲಿ ಗೆದ್ದವರು ಬೀಗದೆ, ಸೋತವರು ಬಾಗದೆ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
    ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ರಾಜ್ಯ, ದೇಶದ ಸಂಸ್ಕೃತಿ, ಸಂಪ್ರದಾಯಗಳನ್ನು ಬಿಂಬಿಸುವ ವಿವಿಧ ನೃತ್ಯ, ಗೀತ ಗಾಯನ ಇತರೆ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
    ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಪಂ ಸಿಇಒ ಗೋಪಾಲಕೃಷ್ಣ, ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿ ಅಭಿಷೇಕ್ ಚಾವರೆ, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಕಾಲೇಜಿನ ಪ್ರಾಂಶುಪಾಲ ಡಾ. ರಮೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts