More

    ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಹಕರಿಸಿ: ಭಕ್ತರಿಗೆ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ ಸಲಹೆ

    ಮೈಸೂರು: ಅಭಿನವ ಶಂಕರಾಲಯದ ಶತಮಾನೋತ್ಸವ ಅಂಗವಾಗಿ ನಗರದ ಮಠದ ಆವರಣದಲ್ಲಿ ನಿರ್ಮಿಸಿರುವ ಶ್ರೀಸಚ್ಚಿದಾನಂದ ವಿಲಾಸ ಗುರುಭವನದಲ್ಲಿ ನಿರಂತರವಾಗಿ ಧಾರ್ಮಿಕ, ವೈದಿಕ ಮತ್ತು ಸಾಂಸ್ಕೃತಿಕ ಮಹತ್ವ ಬಿಂಬಿಸುವ ಚಟುವಟಿಕೆಗಳು ನಡೆಯಲಿದ್ದು, ಎಲ್ಲರೂ ಸಹಕರಿಸುವಂತೆ ಶೃಂಗೇರಿ ಮಠದ ಶ್ರೀ ಶಂಕರಾಚಾರ್ಯ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ ಹೇಳಿದರು.
    ಗುರುಭವನದಲ್ಲಿ ಮಂಗಳವಾರ ಪಾದಪೂಜೆ, ಭಿಕ್ಷಾ ವಂದನೆ ಸ್ವೀಕರಿಸಿ ಆಶೀರ್ವಚನ ನೀಡಿ, ನಾಡಿನಲ್ಲಿ ಧರ್ಮದ ಉಳಿವಿಗಾಗಿ ನಮ್ಮ ಪೀಠದ 33ನೇ ಹಿರಿಯ ಗುರುಗಳಾಗಿದ್ದ ಶ್ರೀಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಸ್ವಾಮೀಜಿ ಅವರು ಅಹರ್ನಿಷಿ ಶ್ರಮಿಸಿದ್ದರು. ಅವರು ಜನಿಸಿದ ಮನೆಯಲ್ಲಿ ಮಾತೆ ಶೃಂಗೇರಿ ಶಾರದೆ ನೆಲೆಸಿ ಶತಮಾನ ಕಳೆದಿದೆ. ಅವರ ಹೆಸರಿನಲ್ಲಿ ನಿರ್ಮಿಸಿದ ನೂತನ ಭವನವೂ ನಿರಂತರ ಸಾತ್ವಿಕ ಚಟುವಟಿಕೆಗಳ ಮುಖ್ಯ ಕೇಂದ್ರವಾಗಲಿದೆ ಎಂದರು.
    ವೇದ ಸತ್ರ, ಜ್ಞಾನ ಸತ್ರ, ಗೋಷ್ಠಿ ಮತ್ತು ಸಮ್ಮೇಳನಗಳು, ಗುರುಗಳ ಜಯಂತ್ಯುತ್ಸವಗಳು ಇನ್ನಷ್ಟು ವಿಜೃಂಭಣೆಯಿಂದ ಇಲ್ಲಿ ನಡೆಸಲು ಯೋಜನೆ ರೂಪಿಸಲಾಗಿದೆ. ಮಠದ ಶಿಷ್ಯರು, ಸಾತ್ವಿಕರು ಇಂಥ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡರೆ ಗುರು ಸೇವೆ ಮಾಡಿದಂತಾಗುತ್ತದೆ. ನಮ್ಮ ಮುಂದಿನ ಪೀಳಿಗೆಗೆ ಧರ್ಮ, ಸಂಸ್ಕೃತಿ ಉಳಿಯುವಲ್ಲಿ ಕೊಡುಗೆ ನೀಡಿದಂತಾಗುತ್ತದೆ ಎಂದರು.
    ಶೃಂಗೇರಿಯ ವಿದ್ವಾನ್ ನರಹರಿ ಭಟ್ ನೇತೃತ್ವದಲ್ಲಿ ಶತ ಚಂಡಿ ಪಾರಾಯಣ, ನವಗ್ರಹ ಪ್ರತಿಷ್ಠಾಂಗ ಹೋಮ ನಡೆಸಲಾಯಿತು. ರಾತ್ರಿ ಶ್ರೀ ಮಠದಲ್ಲಿ ಗುರುಗಳು ಚಂದ್ರಮೌಳೇಶ್ವರ ಪೂಜೆ ನೆರವೇರಿಸಿದರು.
    ಕುಂಭಾಭಿಷೇಕ ಇಂದು:
    ಏ.3ರ ಬೆಳಗ್ಗೆ 9ಕ್ಕೆ ನಗರದ ಗೀತಾ ರಸ್ತೆಯ ಶ್ರೀ ಪ್ರಸನ್ನ ವಿಶ್ವೇಶ್ವರ ದೇವಸ್ಥಾನದಲ್ಲಿ ಆಯೋಜನೆಗೊಂಡಿರುವ ಕುಂಭಾಭಿಷೇಕವನ್ನು ಶ್ರೀಗಳು ನೆರವೇರಿಸಲಿದ್ದಾರೆ. ಸಂಜೆ ನಗರದ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಮರ್ಪಿಸಲಿದ್ದಾರೆ. ದ್ವಂದ್ವ ಗಾಯನ: ಏ. 3 ರಂದು ಸಂಜೆ 7ಕ್ಕೆ ಮಠದ ಆವರಣದಲ್ಲಿ ವಿದ್ವಾನ್ ಶ್ರೀನಾಥ ಮತ್ತು ಅಮೋಘ ಅವರ ದ್ವಂದ್ವ ಶಾಸ್ತ್ರೀಯ ಗಾಯನವಿದೆ.
    ಬಂಗಾರ ಲೇಪಿತ ಕಂಚಿನ ಕಳಸ ಸಿದ್ಧ :
    ಏ.5ರ ಬೆಳಗ್ಗೆ 8ಕ್ಕೆ ಶ್ರೀ ಶಾರದಾಂಬಾ ಹಾಗೂ ಶ್ರೀ ನೃಸಿಂಹ ಭಾರತೀ ಶ್ರೀಗಳ ಸನ್ನಿಧಿಗೆ ಶಿಖರ ಕುಂಭಾಭಿಷೇಕ ಆಯೋಜನೆಗೊಂಡಿದೆ. ಇದೇ ಸಂದರ್ಭ ದೇಗುಲಕ್ಕೆ ನೂತನ ಕಳಸ ಪ್ರತಿಷ್ಠಾಪನೆ ನೆರವೇರಲಿದೆ. ಅದಕ್ಕಾಗಿ 7 ಅಡಿ ಎತ್ತರದ ಬಂಗಾರ ಲೇಪಿತ ಕಂಚಿನ ಕಲಶ ಈಗಾಗಲೇ ಸಿದ್ಧಗೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts