More

    ಹುಲಿಗೆ ಸೆರೆಗೆ ಮುಂದುವರಿದ ಕೂಂಬಿಂಗ್

    ಶ್ರೀರಂಗಪಟ್ಟಣ: ತಾಲೂಕಿನ ಮಹದೇವಪುರ, ಚನ್ನಹಳ್ಳಿ ಬೋರೆ, ಬಿದರಹಳ್ಳಿಹುಂಡಿ ಗ್ರಾಮಗಳ ವ್ಯಾಪ್ತಿಯಲ್ಲಿ ಹುಲಿ ಸೆರೆಗೆ ಅರಣ್ಯ ಇಲಾಖೆ ಗುರುವಾರವೂ ತೀವ್ರ ಕಾರ್ಯಚರಣೆ ಮುಂದುವರೆಸಿದೆ.

    ಹುಲಿ ಸಂಚಾರ ಕಂಡುಬಂದಿರುವ ವ್ಯಾಪ್ತಿಯ ಗ್ರಾಮಗಳ ಜನರು ಗ್ರಾಮ ಹೊರಭಾಗದಲ್ಲಿ ಹಾಗೂ ಜಮೀನುಗಳಿಗೆ ಯಾರೂ ಸಹ ಒಂಟಿಯಾಗಿ ತೆರಳಿ ಓಡಾಟ ನಡೆಸದಂತೆ ಹಾಗೂ ಹುಲಿ ಸಂಚಾರ ಕಂಡುಬಂದಲ್ಲಿ ತಕ್ಷಣ ಅರಣ್ಯ ಇಲಾಖೆ ಗಮನಕ್ಕೆ ತರುವಂತೆ ಗ್ರಾಮೀಣ ಜನರಿಗೆ ಮನವಿ ಮಾಡಿದ್ದಾರೆ.
    ಇನ್ನು ಜಮೀನುಗಳಲ್ಲಿ ಹುಲಿ ಹೆಜ್ಜೆ ಗುರುತುಗಳನ್ನು ಪತ್ತೆ ಮಾಡುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ ವಿವಿಧೆಡೆ ಈಗಾಗಲೇ ಬೋನುಗಳನ್ನು ಇರಿಸಿದೆ.

    15 ಕ್ಯಾಮರಾ ಅಳವಡಿಕೆ: ಸಿಸಿಎಫ್ ಡಾ.ಮಾಲತಿ ಪ್ರಿಯ ಅವರ ನಿರ್ದೇಶನದಂತೆ ಹುಲಿಯ ಚಲನ ವಲನ ವೀಕ್ಷಿಸಲು 15ಕ್ಕೂ ಹೆಚ್ಚು ವಿಡಿಯೋ ಕ್ಯಾಮರಾಗಳನ್ನು ಅಲ್ಲಲ್ಲಿ ಮರಗಳಿಗೆ ಕಟ್ಟಲಾಗಿದೆ. ಇದರೊಂದಿಗೆ ಲೆಪರ್ಡ್ ಟಾಸ್ಕ್ ಫೋರ್ಸ್(ಎಲ್‌ಟಿಎಫ್) ತಂಡ ಹಾಗೂ ಅರಣ್ಯ ಇಲಾಖೆಯ ಒಟ್ಟು 40 ಜನರ ತಂಡ ನಿರಂತರವಾಗಿ ಕೂಂಬಿಂಗ್ ಕಾರ್ಯಚರಣೆ ನಡೆಸುತ್ತಿದೆ. ಇದರೊಂದಿಗೆ ಹುಲಿ ಬೇರೆಡೆ ತೆರಳದಿರುವ ಕಾರಣ ಹುಲಿ ಸೆರೆಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಿ ತಯಾರಿಸಲಾಗಿರುವ ತುಮಕೂರು ಬೋನು ಅನ್ನು ತಾಲೂಕಿಗೆ ತರಿಸಲಾಗಿದ್ದು, ಅದನ್ನು ಹುಲಿ ಸಂಚರಿಸುವ ಸ್ಥಳದಲ್ಲಿ ಅಳವಡಿಸುವ ಕ್ರಮ ಕೈಗೊಂಡಿದ್ದಾರೆ.

    ಇನ್ನು ಕಾರ್ಯಚರಣೆಗಾಗಿ ಗುರುವಾರ ಹುಲಿ ಯೋಜನೆಯ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಎಪಿಸಿಸಿಎಫ್) ಲಿಂಗರಾಜು, ಡಿಸಿಎಫ್ ಬಸವರಾಜು ಸ್ಥಳಕ್ಕೆ ಆಗಮಿಸಿ ಅರಣ್ಯ ಇಲಾಖೆಯ ಡಿಸಿಎಫ್ ರಾಜು, ಎಸಿಎಫ್ ಮಹದೇವಸ್ವಾಮಿ ಅವರೊಂದಿಗೆ ಚರ್ಚಿಸಿದ್ದು, ಜನ ಸೇರಿದಂತೆ ಯಾವುದೇ ಜಾನುವಾರು ಹಾಗೂ ಸಾಕುಪ್ರಾಣಿಗಳ ಮೇಲೆ ದಾಳಿ ನಡೆಯದಿರುವು ಕುರಿತು ಮಾಹಿತಿ ಪಡೆದಿದ್ದಾರೆ.

    ಗೆಂಡೆಹೊಸಹಳ್ಳಿ ಸೇರಿದ ಶಂಕೆ?: ಅಲ್ಲದೆ ಆರ್‌ಎಫ್‌ಒ ಪುಟ್ಟಸ್ವಾಮಿ ಹಾಗೂ ಡಿಆರ್‌ಎಫ್‌ಒ ಆನಂದೇಗೌಡ ತಾಲೂಕಿನ ಕಾವೇರಿ ನದಿಯ ಗೆಂಡೆಹೊಸಹಳ್ಳಿ ಪಕ್ಷಿಧಾಮದ ದ್ವೀಪದಲ್ಲಿ ಹುಲಿ ಸೇರಿಕೊಂಡಿರುವ ಅನುಮಾನ ವ್ಯಕ್ತಪಡಿಸಿದ್ದು, ಸಾಮಾನ್ಯವಾಗಿ ಪ್ರತಿನಿತ್ಯ 20 ಕಿ.ಮೀ. ಚಲಿಸಬೇಕಾದ ಹುಲಿ ಈ ವ್ಯಾಪ್ತಿಯಲ್ಲಿ ಬೀಡು ಬಿಡಲು ಕಾರಣವೇನು ಹಾಗೂ ಅದರ ಆಹಾರ ಮೂಲ ಏನು ಎಂಬುದರ ಕುರಿತು ಪರಿಶೀಲನೆ ನಡೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts