More

    ಮಾ.7ಕ್ಕೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಉದ್ಘಾಟನೆ

    ಚಿಕ್ಕಬಳ್ಳಾಪುರ: ಅನ್ಯಾಯಕ್ಕೊಳಗಾದ ಜಿಲ್ಲೆಯ ಗ್ರಾಹಕರು ನ್ಯಾಯಕ್ಕಾಗಿ ಕೋಲಾರ ಇಲ್ಲವೇ ಬೆಂಗಳೂರಿಗೆ ಅಲೆದಾಡುವುದಕ್ಕೆ ಸದ್ಯದಲ್ಲೇ ಬ್ರೇಕ್ ಬೀಳಲಿದೆ, ಚಿಕ್ಕಬಳ್ಳಾಪುರದಲ್ಲಿಯೇ ನೂತನ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಸದ್ಯದಲ್ಲೇ ಕಾರ್ಯಾರಂಭ ಮಾಡುತ್ತಿದೆ.

    ತಾಲೂಕಿನ ಚದಲಪುರ ಕ್ರಾಸ್ ಸಮೀಪದ ಹಳೇ ಜಿಲ್ಲಾಡಳಿತದ (ರೇಷ್ಮೆ ಬಿತ್ತನೆ ಕೋಠಿ) ಕಟ್ಟಡದಲ್ಲಿ ಮಾ.7 ರಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಕಚೇರಿ ಉದ್ಘಾಟನೆಯಾಗುತ್ತಿದ್ದು ನಿವೃತ್ತ ನ್ಯಾಯಾಧೀಶ ಟಿ.ಎನ್.ಶ್ರೀನಿವಾಸಯ್ಯ ವೇದಿಕೆಯ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.

    ಅವಿಭಜಿತ ಕೋಲಾರ ಜಿಲ್ಲೆಯಿಂದ ಪ್ರತ್ಯೇಕಗೊಂಡು ಚಿಕ್ಕಬಳ್ಳಾಪುರ ಜಿಲ್ಲೆ ರಚನೆಯಾಗಿ ಬರೋಬ್ಬರಿ 12 ವರ್ಷ ಕಳೆದಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್ ಇಲಾಖೆ ಸೇರಿ ವಿವಿಧ ಕಚೇರಿಗಳು ನೂತನ ಜಿಲ್ಲೆಯಲ್ಲಿ ನಿರ್ಮಾಣವಾದರೂ ಪ್ರತ್ಯೇಕ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಮಾತ್ರ ಮಂಜೂರಾಗಿರಲಿಲ್ಲ. ನಗರದ ವಾಪಸಂದ್ರದ ಶಾಲೆಯ ಒಂದು ಕೊಠಡಿಯಲ್ಲಿ ನಾಮ ಕೆ ವಾಸ್ತೆಗೆ ಕಚೇರಿ ಪ್ರಾರಂಭಿಸಲಾಗಿತ್ತು. ಆದರೆ, ಸರಿಯಾಗಿ ಬಾಗಿಲು ತೆರೆಯುತ್ತಿರಲಿಲ್ಲ, ನೇಮಕವಾಗಿದ್ದ ಏಕೈಕ ಸಿಬ್ಬಂದಿ ಸಹ ಅಲ್ಲಿರುತ್ತಿರಲಿಲ್ಲ. ಇದರಿಂದಾಗಿ ಗ್ರಾಹಕರು ದೂರು ಸಲ್ಲಿಸಲು ಕೋಲಾರ ಇಲ್ಲವೇ ಬೆಂಗಳೂರಿಗೆ ತೆರಳಬೇಕಾಗಿತ್ತು. ಅಲ್ಲಿ ಕೆಲಸದ ಒತ್ತಡದಿಂದ ಅರ್ಜಿಗಳು ತ್ವರಿತವಾಗಿ ವಿಲೇವಾರಿಯಾಗುತ್ತಿರಲಿಲ್ಲ. ತುಂಬಾ ವಿಳಂಬದಿಂದ ಅನೇಕರು ಅರ್ಜಿ ಸಲ್ಲಿಸುವ ಗೋಜಿಗೇ ಹೋಗುತ್ತಿರಲಿಲ್ಲ.

    ಇದರ ನಡುವೆ ವಕೀಲರು ಸೇರಿ ಹಲವರು ಅನೇಕ ಬಾರಿ ಮನವಿ ಸಲ್ಲಿಸಿ, ಸರ್ಕಾರದ ಮೇಲೆ ಒತ್ತಡ ಹೇರಿದರಿಂದ ಚಿಕ್ಕಬಳ್ಳಾಪುರದಲ್ಲೇ ಪ್ರತ್ಯೇಕ ಕಚೇರಿ ಕಾರ್ಯಾರಂಭಿಸುತ್ತಿದ್ದು, ಗ್ರಾಹಕರು ಖರೀದಿಸಿದ ಉತ್ಪನ್ನ ಮತ್ತು ಸೇವೆಯಲ್ಲಿ ಅನ್ಯಾಯಕ್ಕೊಳಗಾದಾಗ ನಿಯಮಾನುಸಾರ ವೇದಿಕೆಯ ಮೂಲಕ ನ್ಯಾಯ ಪಡೆಯಬಹುದಾಗಿದೆ.

    ಚಿಕ್ಕಬಳ್ಳಾಪುರದಲ್ಲಿ ಮಾ.7 ರಿಂದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಕಚೇರಿ ಪ್ರಾರಂಭವಾಗುತ್ತಿದ್ದು ಜನರು ಸದ್ವಿನಿಯೋಗ ಮಾಡಿಕೊಳ್ಳಬೇಕು.
    ಟಿ.ಎನ್.ಶ್ರೀನಿವಾಸಯ್ಯ , ಪ್ರಭಾರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷ, ಚಿಕ್ಕಬಳ್ಳಾಪುರ

    ನೂತನ ಕಚೇರಿ ಸಿದ್ಧತೆ : ಜಿಲ್ಲಾಡಳಿತ, ಜಿಪಂ, ಜಿಲ್ಲಾ ಪೊಲೀಸ್ ಇಲಾಖೆ ಕಚೇರಿಗಳು ಹಲವು ವರ್ಷ ಕಾರ್ಯನಿರ್ವಹಿಸಿದ್ದ ರೇಷ್ಮೆ ಬಿತ್ತನೆ ಕೋಠಿ ಕಟ್ಟಡದಲ್ಲಿಯೇ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಕಚೇರಿ ಪ್ರಾರಂಭಿಸುತ್ತಿದ್ದು ಲೋಕೋಪಯೋಗಿ ಇಲಾಖೆಯು 8 ಲಕ್ಷ ರೂ ವೆಚ್ಚದಲ್ಲಿ ಕಟ್ಟಡ ನವೀಕರಣಗೊಳಿಸಿದೆ. ವೇದಿಕೆಯ ಪರವಾಗಿ ಅಧ್ಯಕ್ಷರು, ಇಬ್ಬರು ಸದಸ್ಯರು, ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಗುಮಾಸ್ತರು ಸೇರಿ 7 ಮಂದಿ ಕಾರ್ಯ ನಿರ್ವಹಿಸಲಿದ್ದಾರೆ. ಮಾ.7 ರಂದು ಬೆಳಗ್ಗೆ 10 ಕ್ಕೆ ನೂತನ ಕಚೇರಿಯನ್ನು ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಹುಲುವಾಡಿ ಬಿ.ರಮೇಶ್ ಉದ್ಘಾಟಿಸಲಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ.ಸುಧಾಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ, ವಿಧಾನಸಭಾ ಉಪ ಸಭಾಧ್ಯಕ್ಷ ಎಂ.ಕೃಷ್ಣಾರೆಡ್ಡಿ ಸೇರಿ ಹಲವರು ಭಾಗವಹಿಸಲಿದ್ದಾರೆ.

    ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಹಿಂದೆಯೇ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಕಚೇರಿ ಕಾರ್ಯಾರಂಭಿಸಬೇಕಾಗಿತ್ತು. ತುಂಬಾ ವಿಳಂಬವಾಗಿದೆ. ಇದರ ನಡುವೆ ಸ್ಥಳೀಯವಾಗಿ ಸೇವೆ ಸಿಗುತ್ತದೆ ಎಂಬುದು ಇದೀಗ ಖುಷಿ ಕೊಟ್ಟಿದೆ.
    ಎನ್.ಚಂದ್ರಶೇಖರ್, ವಕೀಲರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts