More

    ಸಾರಿಗೆ ಸಿಬ್ಬಂದಿಯ ಭದ್ರತಾ ಮಂಡಳಿ ರಚಿಸಿ: ಕುಪೇಂದ್ರ ಆಯನೂರು

    ಶಿವಮೊಗ್ಗ: ರಾಜ್ಯದ ಸಾರಿಗೆ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚಾಲಕರು ಮತ್ತು ಇತರ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ರಚಿಸುವಂತೆ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದ ಅಧ್ಯಕ್ಷ ಕುಪೇಂದ್ರ ಆಯನೂರು ಸರ್ಕಾರಕ್ಕೆ ಒತ್ತಾಯಿಸಿದರು.

    ರಾಜ್ಯದಲ್ಲಿ ವಿವಿಧ ಸಮಸ್ಯೆಗಳೊಂದಿಗೆ ಬದುಕು ಕಟ್ಟಿಕೊಂಡಿರುವ ಅಸಂಘಟಿತ ಕಾರ್ಮಿಕರ ಸಮೂಹ ತಮ್ಮ ಕಾಯಕವನ್ನು ಮಾಡುತ್ತಿವೆ. ಆದರೆ ರಾಜ್ಯ ಸರ್ಕಾರ ಅಸಂಘಟಿತ ಕಾರ್ಮಿಕರಿಗೆ ಮೂಲ ಸೌಲಭ್ಯ ನೀಡುವಲ್ಲಿ ವಿಲವಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
    ಚಾಲಕರು ಮತ್ತು ಇತರೆ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಅನುಷ್ಠಾನಗೊಳಿಸಿದರೆ ರಾಜ್ಯದ 25 ಲಕ್ಷ ಕುಟುಂಬಗಳಿಗೆ ಮೂಲ ಸೌಲಭ್ಯ ದೊರಕಲಿದೆ. ಆದರೆ ಇದನ್ನು ಸರ್ಕಾರ ಮಾಡದೆ ಹಿಂದೆ ಚಾಲಕ ಮತ್ತು ನಿರ್ವಾಹಕರಿಗಿದ್ದ ಅಪಘಾತ ವಿಮೆಯನ್ನು ಕ್ಲೀನರ್, ಟ್ಯಾಕ್ಸಿ ಹಾಗೂ ಆಟೋ ಚಾಲಕರಿಗೆ ವಿಸ್ತರಿಸಿದೆ. ಆದರೆ ಇದನ್ನೇ ಮಂಡಳಿಯನ್ನಾಗಿ ಮಾಡಿದ್ದರೆ ಇವರಿಗೆ ಮತ್ತಷ್ಟು ಸೌಲಭ್ಯಗಳು ಸಿಗುತ್ತಿದ್ದವು. ಹಾಗಾಗಿ ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಮಂಡಳಿ ರಚನೆ ಮಾಡಬೇಕಿದೆ ಎಂದು ಮನವಿ ಮಾಡಿದರು.
    ರಾಜ್ಯದಲ್ಲಿ ಚಾಲಕರು, ಕ್ಲೀನರ್ ಮತ್ತು ನಿರ್ವಾಹಕರಿಗೆ ಕಾರ್ಮಿಕ ಇಲಾಖೆ ನೀಡುವ 5 ಲಕ್ಷ ರೂ. ಅಪಘಾತ ವಿಮೆ ವಿತರಣೆಗೆ ಅರ್ಜಿ ಸಲ್ಲಿಕೆ ಸಂಖ್ಯೆ ಕಡಿಮೆ ಇದೆ. ಇದಕ್ಕೆ ಕಾರಣ ಮಾಹಿತಿ ಕೊರತೆಯಿಂದ ಈ ಯೋಜನೆ ಕಾರ್ಮಿಕರಿಗೆ ಸರಿಯಾಗಿ ತಲುಪುತ್ತಿಲ್ಲ. ಆದ್ದರಿಂದ ಇವರಿಗೆ ಮಾಹಿತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಬೇಕು ಎಂದ ಅವರು, ಡಿ.2ರಂದು ಶಿವಮೊಗ್ಗದ ಶಂಕರಮಠ ರಸ್ತೆಯ ಬಜಾಜ್ ಶೋರೂಂ ಆವರಣದಲ್ಲಿ ಅಸಂಘಟಿತ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
    ಸಂಘದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಹೊನ್ನಪ್ಪ, ಉಪಾಧ್ಯಕ್ಷೆ ರತ್ನಮಾಲಾ ಸುರೇಶ್ ಮೂಳೆ, ಸಂಘಟನಾ ಕಾರ್ಯದರ್ಶಿ ಮಹೇಶ್ ಪೇಟ್ಕರ್, ಕಾರ್ಯದರ್ಶಿ ನಿಷ್ಮಾ ರಾಘವೇಂದ್ರ, ಕಾನೂನು ಸಲಹೆಗಾರ ಚೇತನ್ ಲಕ್ಕಪ್ಪ, ಶಿವಮೊಗ್ಗ ಜಿಲ್ಲಾಧ್ಯಕ್ಷೆ ಸುರೇಖಾ ಪಾಲಾಕ್ಷಪ್ಪ, ನಗರ ಅಧ್ಯಕ್ಷ ವೈ.ಚಂದ್ರಶೇಖರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts