More

    ವನ್ಯಜೀವಿಗಳ ಸಂರಕ್ಷಣೆ ಅತ್ಯಗತ್ಯ

    ಚಾಮರಾಜನಗರ: ವನ್ಯಜೀವಿಗಳ ಸಂರಕ್ಷಣೆ ಅತ್ಯಂತ ಅಗತ್ಯವಾಗಿದ್ದು, ಒಂದು ದಿನಕ್ಕೆ ಸಿಮಿತವಾಗಿದ್ದ ದಿನಾಚರಣೆಯನ್ನು ಸಪ್ತಾಹವಾಗಿ ಆಚರಿಸುವ ಮೂಲಕ ಸಾರ್ವಜನಿಕರಿಗೆ ವನ್ಯಜೀವಿಗಳ ಮಹತ್ವದ ಅರಿವು ಮೂಡಿಸಲಾಗುತ್ತಿದೆ ಎಂದು ಬಂಡೀಪುರ ಹುಲಿಯೋಜನೆಯ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ನಿರ್ದೇಶಕ ಡಾ.ಪಿ.ರಮೇಶ್‌ಕುಮಾರ್ ಹೇಳಿದರು.

    ಅರಣ್ಯ ಇಲಾಖೆ ವತಿಯಿಂದ ಬುಧವಾರ ಗುಂಡ್ಲುಪೇಟೆ ಪಟ್ಟಣದ ಜೆಎಸ್‌ಎಸ್ ಕಲಾಮಂದಿರದಲ್ಲಿ ಆಯೋಜಿಸಿದ್ದ 69ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಬಂಡೀಪುರವು ಹುಲಿ ಚಿರತೆ ಹಾಗೂ ಆನೆಗಳ ಸಂಖ್ಯೆಯಲ್ಲಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿರುವ ಹೆಮ್ಮೆಗೆ ಪಾತ್ರವಾಗಿದ್ದು, ಸ್ವಚ್ಛತೆ ನಿರ್ಹವಣೆಯಲ್ಲಿ 2ನೇ ಸ್ಥಾನದಲ್ಲಿದೆ. ಬಂಡೀಪುರ ಹುಲಿ ಸಂರಕ್ಷಿತ ಯೋಜನೆ ಘೋಷಣೆಯಾದ 50ನೇ ವರ್ಷಚಾರಣೆ ಸಂದರ್ಭದಲ್ಲಿ ಬಂಡೀಪುರ ಯುವ ಮಿತ್ರ ಯೋಜನೆ ಆರಂಭಿಸಿ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ. 96 ದಿನಗಳು ಕಾರ್ಯಕ್ರಮ ನಡೆಸಿ ವಿವಿಧ ಶಾಲೆಗಳ 5400 ವಿದ್ಯಾರ್ಥಿಗಳಿಗೆ ಅರಣ್ಯದಲ್ಲಿ ಸಫಾರಿ, ಪ್ರಕೃತಿ ಶಿಕ್ಷಣ ನೀಡಿ ಅರಣ್ಯ ಸಂರಕ್ಷಣೆಯ ಮಹತ್ವ ಅರಿವು ಮೂಡಿಸಲಾಗಿದೆ ಎಂದರು.

    ವನ್ಯಜೀವಿ ಸಪ್ತಾಹದ ಅಂಗವಾಗಿ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಚರ್ಚಾಸ್ಪರ್ಧೆ, ಚಿತ್ರರಚನೆ ಹಾಗೂ ಪ್ರಬಂಧಸ್ಪರ್ಧೆ ಆಯೋಜಿಸಿ ಬಹುಮಾನ ನೀಡಲಾಗುವುದು. ಸಪ್ತಾಹದ ಸಮಾರೋಪ ಸಮಾರಂಭ ಅ.7ರಂದು ಮೈಸೂರಿನಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದರು.
    ಜೆಎಸ್‌ಎಸ್ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲೆ ಪಿ.ಮಹದೇವಮ್ಮ ಮಾತನಾಡಿ, ಕಾಡು ಮತ್ತು ನಾಡಿನ ಸಮತೋಲನಕ್ಕಾಗಿ ಅರಣ್ಯ ಸಂರಕ್ಷಣೆ ತುಂಬ ಅಗತ್ಯವಾಗಿದೆ. ಮನುಷ್ಯನ ದುರಾಸೆಗೆ ಅರಣ್ಯ ಹಾಗೂ ವನ್ಯಜೀವಿಗಳು ನಾಶವಾಗುತ್ತಿದೆ. ಮನುಷ್ಯರಂತೆಯೇ ವನ್ಯಜೀವಿಗಳು ಸೇರಿದಂತೆ ಪ್ರತಿ ಜೀವಿಯೂ ಬದುಕುವ ಹಕ್ಕು ಹೊಂದಿದ್ದು, ಪ್ರತಿಯೊಬ್ಬರೂ ಅರಣ್ಯ ಸಂರಕ್ಷಣೆಗೆ ತಮ್ಮದೇ ಆದ ಕೊಡುಗೆ ನೀಡಬೇಕಾಗಿದೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಜೆ.ರವೀಂದ್ರ, ನವೀನ್, ಕೆ.ಪರಮೇಶ್, ಆರ್.ಎಫ್.ಒಗಳಾದ ಎನ್.ಪಿ.ನವೀನ್ ಕುಮಾರ್, ಮಲ್ಲೇಶ್, ದೀಪಾ ಹಾಗೂ ಇತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts