More

    ಖಾನಾಪುರದ ಅಂಜಲಿಗೆ ಉತ್ತರ ಕನ್ನಡದ ಕಾಂಗ್ರೆಸ್‌ ಟಿಕೆಟ್‌!!

    ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಖಾನಾಪುರದ ಮಾಜಿ ಶಾಸಕಿ, ಹಾಲಿ ಕಾಂಗ್ರೆಸ್ ವಕ್ತಾರೆ ಡಾ.ಅಂಜಲಿ ನಿಂಬಾಳಕರ್ ಅವರಿಗೆ ನೀಡಲಾಗಿದೆ. ವಿಚಿತ್ರ ಎಂದರೆ, ಪಕ್ಷ ಹೆಸರು ಬಿಡುಗಡೆ ಮಾಡುವುದಕ್ಕೂ ಮುಂಚೆಯೇ ಅಸಮಾಧಾನ ಭುಗಿಲೆದ್ದಿದೆ. ಗೋ ಬ್ಯಾಕ್ ಅಂಜಲಿ’ ಅಭಿಯಾನದ ಪೋಸ್ಟರ್‌ಗಳು ಕಾಂಗ್ರೆಸ್ ಜಾಲತಾಣಗಳಲ್ಲಿ ಓಡಾಡತೊಡಗಿವೆ. ಕಾಂಗ್ರೆಸ್ ಅಭಿಮಾನಿಗಳು ಪತ್ರಿಕಾಗೋಷ್ಠಿ ನಡೆಸಿ ಅಸಮಾಧಾನ ತೋಡಿಕೊಂಡಿದ್ದಾರೆ.
    ಮರಾಠಾ ಮತಗಳ ಗುರಿ:
    ಕಳೆದ 20 ವರ್ಷಗಳಿಂದ ಬಿಜೆಪಿಯ ತೆಕ್ಕೆಯಲ್ಲಿದ್ದ ಕ್ಷೇತ್ರವನ್ನು ಗೆಲ್ಲಲು ಕಾಂಗ್ರೆಸ್ ವರಿಷ್ಠರು ಮಹಿಳೆ ಹಾಗೂ ಜಾತಿಯ ಅಸ್ತ್ರವನ್ನು ಹೂಡುವ ಯೋಜನೆ ರೂಪಿಸಿದ್ದಾರೆ. ಮಂಗಳವಾರ ನವದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಉತ್ತರ ಕನ್ನಡ ಕ್ಷೇತ್ರದ ಟಿಕೆಟ್ ಅಂತಿಮವಾಗಿದೆ. ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರನ್ನು ಹೊಂದಿದ ಮರಾಠಾ ಮತವನ್ನು ಗುರಿಯಾಗಿಟ್ಟುಕೊಂಡು ಆ ಸಮುದಾಯದ ಅಂಜಲಿ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಮಾ. 24 ರಂದು ಶಿರಸಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸಭೆ ಕರೆಯಲಾಗಿದ್ದು, ಅಂಜಲಿ ನಿಂಬಾಳಕರ್ ಅಂದು ಸಭೆಗೆ ಆಗಮಿಸಿ ಪಕ್ಷದ ಮುಖಂಡರ ಜತೆ ಚರ್ಚೆ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
    ಇನ್ನೂ ಕೆಲ ಆಕಾಂಕ್ಷಿಗಳು:
    ಕಾಂಗ್ರೆಸ್ ಟಿಕೆಟ್ ನೀಡುವಂತೆ ಕಾಂಗ್ರೆಸ್ ಸೇವಾದಳ ಅಧ್ಯಕ್ಷ ಆರ್.ಎಚ್.ನಾಯ್ಕ, ಕಾರವಾರದಲ್ಲಿರುವ ಸಿದ್ದಾಪುರ ಮೂಲದ ವಕೀಲ ಜಿ.ಟಿ.ನಾಯ್ಕ ಸೇರಿ ಹಲವರು ಪ್ರಯತ್ನ ನಡೆಸಿದ್ದರು. ಅದರಲ್ಲಿ ಕಾಂಗ್ರೆಸ್‌ನಿಂದ ಅರಣ್ಯ ಹಕ್ಕು ಹೋರಾಟಗಾರ, ವಕೀಲ ಎ.ರವೀಂದ್ರನಾಥ ನಾಯ್ಕ ಹಾಗೂ ಅಂಜಲಿ ನಿಂಬಾಳಕರ್ ಹೆಸರು ಅಂತಿಮ ಪಟ್ಟಿಯಲ್ಲಿ ದೆಹಲಿಗೆ ತೆರಳಿತ್ತು ಎನ್ನಲಾಗಿದೆ. ರವೀಂದ್ರನಾಥ ನಾಯ್ಕ ತಮ್ಮ ಸುದೀರ್ಘ ಜನಪರ ಹೋರಾಟ ಹಾಗೂ ಪ್ರಬಲ ಜಾತಿಯನ್ನು ಆಧಾರವಾಗಿಟ್ಟುಕೊಂಡು ಟಿಕೆಟ್‌ಗೆ ಪ್ರಯತ್ನ ನಡೆಸಿದ್ದರು.
    ಮೊದಲೇ ವಿರೋಧ:
    ಅಂಜಲಿ ನಿಂಬಾಳಕರ್ ಹೆಸರು ಅಧಿಕೃತವಾಗಿ ಘೋಷಣೆಯಾಗುವುದಕ್ಕೂ ಮೊದಲೇ ಅಸಮಾಧಾನ ಶುರುವಾಗಿದೆ. ಹಾಲಿ ಆಕಾಂಕ್ಷಿಗಳ ಬೆಂಬಲಿಗರು ಅಂಜಲಿ ಅವರಿಗೆ ಟಿಕೆಟ್ ನೀಡಬಾರದು ಎಂದು ಒತ್ತಾಯಿಸಿದ್ದಾರೆ. ಕಾರವಾರದಲ್ಲಿ ಸುದ್ದಿಗೋಷ್ಠಿ ನಡೆಸಿದ ಜಿ.ಟಿ.ನಾಯಕ ಅಭಿಮಾನಿ ಬಳಗದ ಅಧ್ಯಕ್ಷ ದಿವಾಕರ ನಾಯ್ಕ, ಅಂಜಲಿ ನಿಂಬಾಳಕರ್ ಅವರಿಗೆ ಜಿಲ್ಲೆಯ ಪರಿಚಯವಿಲ್ಲ. ಇಲ್ಲಿನ ಬಹು ಸಂಖ್ಯಾತರ ಭಾಷೆಯೂ ಅವರಿಗೆ ಬಾರದು. ಜಿಲ್ಲೆಯ ಯಾವುದೇ ಸಂಕಷ್ಟದ ಸಮಯದಲ್ಲೂ ಅವರು ಜಿಲ್ಲೆಗೆ ಬಂದಿಲ್ಲ. ಲೋಕಸಭಾ ಕ್ಷೇತ್ರದಲ್ಲಿ ಉತ್ತರ ಕನ್ನಡದ 6 ಕ್ಷೇತ್ರಗಳು ಹಾಗೂ ಬೆಳಗಾವಿಯ ಎರಡು ಕ್ಷೇತ್ರಗಳು ಸೇರಿವೆ. ಜಿಲ್ಲೆಯವರಿಗೇ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ವಿಶ್ವ ಗೌಡ ಹಾಗೂ ಇತರರು ಇದ್ದರು.

    ಮರಾಠಾ ಮತಗಳೆಷ್ಟು ..?
    ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 16.22 ಲಕ್ಷ ಮತದಾರರಿದ್ದಾರೆ. ಹಳಿಯಾಳ, ಕಿತ್ತೂರು, ಖಾನಾಪುರ ಕ್ಷೇತ್ರಗಳಲ್ಲಿ ಮರಾಠಾ ಮತಗಳೇ ಅಽಕವಾಗಿವೆ. ಸುಮಾರು 2 ಲಕ್ಷ ಮತಗಳಿವೆ ಎಂದು ಅಂದಾಜಿಸಲಾಗಿದೆ. ಇದರಿಂದ ಮರಾಠರಿಗೆ ಕಾಂಗ್ರೆಸ್ ಮಣೆ ಹಾಕಿದೆ.

    ಯಾರಿವರು ಅಂಜಲಿ..?
    ಅಂಜಲಿ ನಿಂಬಾಳಕರ್ ಖಾನಾಪುರ ಮೂಲದ ಸ್ತ್ರೀ ರೋಗ ವೈದ್ಯೆ. ಮರಾಠಾ ಸಮುದಾಯದವರು. ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ ಹೇಮಂತ ನಿಂಬಾಳಕರ್ ಅವರ ಪತ್ನಿ. 2018 ರಲ್ಲಿ ಅವರು ಬಿಜೆಪಿಯ ವಿಠ್ಠಲ ಹಳಗೇಕರ್ ಅವರನ್ನು ಸೋಲಿಸಿ ಖಾನಾಪುರದಿಂದ ಕಾಂಗ್ರೆಸ್ ಎಂಎಲ್‌ಎಯಾಗಿದ್ದರು. 2023 ರ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ 54,629 ಮತಗಳ ಅಂತರದಿAದ ಸೋಲು ಕಂಡಿದ್ದರು. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿರುವ ಎರಡನೇ ಮಹಿಳಾ ಅಭ್ಯರ್ಥಿ ಅಂಜಲಿ ಅವರಾಗಲಿದ್ದಾರೆ. 1999 ರಲ್ಲಿ ಮಾರ್ಗರೇಟ್ ಆಳ್ವಾ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಗೆದ್ದು ಸಂಸದರಾಗಿದ್ದರು. ನಂತರವೂ ಎರಡು ಬಾರಿ ಅವರು ಸ್ಪರ್ಧೆ ಮಾಡಿ ಸೋತಿದ್ದರು.
    10 ಬಾರಿ ಗೆದ್ದಿದ್ದ ಕಾಂಗ್ರೆಸ್
    ಇದುವರೆಗೆ ನಡೆದ 17 ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ 10 ಬಾರಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. ಬಿಜೆಪಿ 6 ಬಾರಿ ಹಾಗೂ ಒಮ್ಮೆ ಪಕ್ಷೇತರ ಅಭ್ಯರ್ಥಿ ಚುಟುಕು ಬ್ರಹ್ಮ ಡಾ.ದಿನಕರ ದೇಸಾಯಿ ಗೆಲುವು ಸಾಧಿಸಿದ್ದರು.

    ಇದನ್ನೂ ಓದಿ: ಅಕ್ರಮವಾಗಿ ಚಿನ್ನ ಸಾಗಣೆ ಭಟ್ಕಳದ ವ್ಯಕ್ತಿ ಬೆಂಗಳೂರಿನಲ್ಲಿ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts