More

    ಸಿಎಎ ಜಾರಿ ಮಾಡಿದ ಸಂದರ್ಭವನ್ನು ಪ್ರಶ್ನಿಸಿ ಪ್ರಧಾನಿ ಮೋದಿಯನ್ನು ಟೀಕಿಸಿದ ಕಾಂಗ್ರೆಸ್​!

    ನವದೆಹಲಿ: ಲೋಕಸಭಾ ಚುನಾವಣೆಗೆ ಇನ್ನೂ ಕೆಲವೇ ತಿಂಗಳುಗಳು ಬಾಕಿ ಇರುವಾಗಲೇ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ಜಾರಿ ಮಾಡಿದೆ. ಇದರ ಬೆನ್ನಲ್ಲೇ ಕೇಂದ್ರದ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್​, ಸಿಎಎ ಜಾರಿ ಮಾಡಿದ ಸಮಯವನ್ನು ಪ್ರಶ್ನೆ ಮಾಡಿದೆ.

    ಕಾಂಗ್ರೆಸ್​ ವಕ್ತಾರ ಜೈರಾಮ್​ ರಮೇಶ್​ ತಮ್ಮ ಎಕ್ಸ್​ ಖಾತೆಯಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. 2019ರ ಡಿಸೆಂಬರ್​ನಲ್ಲಿ ಸಂಸತ್ತು ಅಂಗೀಕರಿಸಿದ ಪೌರತ್ವ ತಿದ್ದುಪಡಿ ಕಾಯ್ದೆಯ ‘ಅಧಿಸೂಚನೆ ಪ್ರಕಟಿಸಲು ಮೋದಿ ಸರ್ಕಾರಕ್ಕೆ ನಾಲ್ಕು ವರ್ಷ ಮತ್ತು ಮೂರು ತಿಂಗಳುಗಳನ್ನು ತೆಗೆದುಕೊಂಡಿದೆ. ತಮ್ಮ ಸರ್ಕಾರವು ಉದ್ಯಮ ರೀತಿಯಲ್ಲಿ ಸಮಯಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಪ್ರಧಾನಿ ಸದಾ ಹೇಳಿಕೊಳ್ಳುತ್ತಾರೆ. ಆದರೆ, ಸಿಎಎ ಅಧಿಸೂಚನೆ ಪ್ರಕಟಿಸಲು ತೆಗೆದುಕೊಂಡ ಸಮಯವು ಪ್ರಧಾನಿ ಮೋದಿ ಅವರ ಮತ್ತೊಂದು ಹಸಿ ಸುಳ್ಳನ್ನು ಪ್ರದರ್ಶಿಸುತ್ತದೆ ಎಂದಿದ್ದಾರೆ.

    ಸಿಎಎ ಅಧಿಸೂಚನೆ ಪ್ರಕಟಿಸಲು ಸುಮಾರು 9 ಬಾರಿ ಕಾಲಾವಕಾಶ ತೆಗೆದುಕೊಂಡ ಬಳಿಕ ಲೋಕಸಭಾ ಚುನಾವಣೆಗೂ ಮುನ್ನವೇ ಸಿಎಎ ಜಾರಿ ಮಾಡಿರುವುದು ವಿಶೇಷವಾಗಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಲೋಕಸಭಾ ಚುನಾವಣಾ ಧ್ರುವೀಕರಣಕ್ಕಾಗಿ ಸ್ಪಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಚುನಾವಣಾ ಬಾಂಡ್‌ಗಳ ಹಗರಣದ ಕುರಿತು ಸುಪ್ರೀಂ ಕೋರ್ಟ್‌ನ ಕಟ್ಟುನಿಟ್ಟಿನ ಕ್ರಮದ ನಂತರ ತಮ್ಮ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನದಂತೆ ಕಂಡುಬರುತ್ತಿದೆ ಎಂದು ಜೈರಾಮ್​ ರಮೇಶ್​ ಟೀಕಾ ಪ್ರಹಾರ ನಡೆಸಿದ್ದಾರೆ.

    ಅಂದಹಾಗೆ ಸಿಎಎ ಕಾಯ್ದೆ ಸಂಸತ್ತಿನಲ್ಲಿ ಅಂಗೀಕಾರವಾದ 4 ವರ್ಷಗಳ ಬಳಿಕ ಜಾರಿಗೆ ಬಂದಿದೆ. 2019, ಡಿಸೆಂಬರ್​ 11ರಂದು ಸಂಸತ್ತಿನಲ್ಲಿ ಸಿಎಎ ಕಾಯ್ದೆ ಅಂಗೀಕಾರವಾಗಿತ್ತು. ಈ ಸಂದರ್ಭದಲ್ಲಿ ಸಿಎಎ ಕುರಿತು ರಾಷ್ಟ್ರವ್ಯಾಪಿ ಸಾಕಷ್ಟು ಚರ್ಚೆಯಾಗಿತ್ತು ಮತ್ತು ಪ್ರತಿಭಟನೆಗಳು ಸಹ ನಡೆದಿದ್ದವು. ಸಿಎಎ ವಿಚಾರದಲ್ಲಿ ಅನೇಕರು ವಿವಿಧ ರೀತಿಯ ಹೇಳಿಕೆಗಳನ್ನು ನೀಡಿ ಜನರಲ್ಲಿ ಗೊಂದಲ ಸೃಷ್ಟಿಸಿದ್ದರು. ಆದರೆ, ಕೇಂದ್ರ ಸರ್ಕಾರ ಗೊಂದಲ ಪರಿಹರಿಸುವ ಪ್ರಯತ್ನ ಮಾಡುತ್ತಲೇ ಬಂದಿತು. ಸುಮಾರು 4 ವರ್ಷಗಳ ಬಳಿಕ ಕೊನೆಗೂ ಕೇಂದ್ರ ಸರ್ಕಾರ ಕಾಯ್ದೆಯನ್ನು ಜಾರಿಗೆ ತಂದಿದೆ.

    ಏನಿದು ಸಿಎಎ?
    ಸಿಎಎ, 1955ರ ಪೌರತ್ವ ಕಾಯ್ದೆಯ ತಿದ್ದುಪಡಿಯಾಗಿದೆ. ಧಾರ್ಮಿಕ ಕಿರುಕುಳವನ್ನು ತಾಳಲಾರದೇ ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ 2014ರ ಡಿಸೆಂಬರ್​ 31ಕ್ಕೂ ಮುಂಚೆ ಭಾರತಕ್ಕೆ ಆಗಮಿಸಿರುವ ಸಿಖ್​, ಬೌದ್ಧರು, ಕ್ರಿಶ್ಚಿಯನ್​, ಜೈನರು ಮತ್ತು ಪಾರ್ಸಿಗಳಿಗೆ ಸಿಎಎ ಅಡಿಯಲ್ಲಿ ಭಾರತದ ಪೌರತ್ವವನ್ನು ನೀಡಲಾಗುತ್ತದೆ. (ಏಜೆನ್ಸೀಸ್​)

    ಲೋಕಸಭಾ ಚುನಾವಣೆಗೂ ಮುನ್ನವೇ ಜಾರಿಯಾಯ್ತು ಸಿಎಎ: ಕೇಂದ್ರದಿಂದ ಕೊನೆಗೂ ಅಧಿಸೂಚನೆ ಪ್ರಕಟ

    ಅಗ್ನಿ-5 ಕ್ಷಿಪಣಿ ಮೊದಲ ಹಾರಾಟ..ಮಿಷನ್ ದಿವ್ಯಾಸ್ತ್ರಕ್ಕಾಗಿ ಪ್ರಧಾನಿ ಮೋದಿ ಡಿಆರ್​ಡಿಒಗೆ ಶ್ಲಾಘನೆ

    ಆಮೆ ಮಾಂಸ ತಿಂದು 9 ಮಂದಿ ದುರ್ಮರಣ, 78 ಜನರ ಸ್ಥಿತಿ ಗಂಭೀರ! ವೈದ್ಯರಿಂದ ಶಾಕಿಂಗ್ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts