More

    ಅನಂತಕುಮಾರ್ ಹೆಗಡೆ ಗಡೀಪಾರಿಗೆ ಒತ್ತಾಯಿಸಿ ಕಾಂಗ್ರೆಸ್ ಪ್ರತಿಭಟನೆ

    ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಏಕವಚನ ಪ್ರಯೋಗ ಮಾಡಿದ ಆರೋಪದ ಮೇಲೆ ಸಂಸದ ಅನಂತಕುಮಾರ್ ಹೆಗಡೆ ಅವರನ್ನು ಗಡೀಪಾರು ಮಾಡಬೇಕೆಂಬ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

    ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ನೇತೃತ್ವದಲ್ಲಿ ನಗರದ ಮಹಾವೀರ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಅನಂತಕುಮಾರ್ ಹೆಗಡೆ ವಿರುದ್ಧ ಘೋಷಣೆ ಕೂಗಿದರು. ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
    ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನ ಪ್ರಯೋಗ ಮಾಡಿದ್ದಾರೆ ಮತ್ತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಹಾಗಾಗಿ ಅನಂತಕುಮಾರ್ ಹೆಗಡೆ ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
    ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್ ಮಾತನಾಡಿ, ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಜನಪ್ರಿಯ ನಾಯಕ. ಅಂತಹವರ ಬಗ್ಗೆ ಹೆಗಡೆ ಏಕವಚನದಲ್ಲಿ ಮಾತನಾಡಿರುವುದು ಖಂಡನೀಯ. ಬಿಜೆಪಿಯಲ್ಲಿ ಒಂದಿಷ್ಟು ಮಂದಿ ಹುಚ್ಚರಿದ್ದಾರೆ. ಅನಂತಕುಮಾರ ಹೆಗಡೆ, ಶೋಭಾ ಕರಂದ್ಲಾಜೆ, ಸಿ.ಟಿ.ರವಿ, ತೇಜಸ್ವಿ ಸೂರ್ಯ, ಪ್ರತಾಪ ಸಿಂಹ ಮತ್ತಿತರರು ಇದೇ ವರ್ಗದವರು. ಚುನಾವಣೆ ಸಂದರ್ಭದಲ್ಲಿ ಧರ್ಮ ಒಡೆಯುವ ಹೇಳಿಕೆಗಳನ್ನು ನೀಡಿ ಅದರ ಲಾಭ ಪಡೆಯುವುದು ಅವರಿಗಿರುವ ಕಾಯಿಲೆ. ಇವರೆಲ್ಲ ನರೇಂದ್ರ ಮೋದಿ ಅಣತಿಯಂತೆ ನಡೆದುಕೊಳ್ಳುತ್ತಾರೆ ಎಂದು ಆರೋಪಿಸಿದರು.
    ಸಿಎಂ ಸಿದ್ದರಾಮಯ್ಯ ಅವರಿಗಾಗಿ ಕಾರ್ಯಕರ್ತರು ಪ್ರಾಣ ಕೊಡಲೂ ಸಿದ್ಧರಿದ್ದೇವೆ. ಅವರ ವಿರುದ್ಧ ಯಾರೇ ಏಕವಚನ ಪದ ಪ್ರಯೋಗ ಮಾಡಿದರೂ ಸಹಿಸಿಕೊಳ್ಳುವುದಿಲ್ಲ. ಕಾರ್ಯಕ್ರಮವೊಂದರಲ್ಲಿ ಅನಂತಕುಮಾರ್ ಹೆಗಡೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ರಾಜ್ಯದಲ್ಲಿ ಕೋಮುದ್ವೇಷ ಹಚ್ಚುವ ಕೆಲಸ ಮಾಡಿದ್ದಾರೆ. ಹಾಗಾಗಿ ಅವರನ್ನು ರಾಜ್ಯದಿಂದ ಗಡೀಪಾರು ಮಾಡಬೇಕು ಎಂದು ಒತ್ತಾಯಿಸಿದರು.
    ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎನ್.ರಮೇಶ್, ಬಿ.ಎ.ರಮೇಶ್ ಹೆಗ್ಡೆ, ಕೆ.ರಂಗನಾಥ್, ವಿಜಯಲಕ್ಷ್ಮೀ ಪಾಟೀಲ್, ಧೀರರಾಜ್, ಎಸ್.ಪಿ.ಶೇಷಾದ್ರಿ, ಎಚ್.ಪಿ.ಗಿರೀಶ್, ಚಂದ್ರಶೇಖರ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts