More

    ಕರ್ನಾಟಕದಲ್ಲಿ ಕಾಂಗ್ರೆಸ್ ಹೊಸ ಶಕೆ ಆರಂಭ: ಮಧು ಬಂಗಾರಪ್ಪ

    ಶಿಕಾರಿಪುರ: ಗ್ಯಾರಂಟಿಗಳ ಮೂಲಕ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಹೊಸ ಶಕೆ ಆರಂಭಿಸಿದೆ. ಕಾಂಗ್ರೆಸ್ ನುಡಿದಂತೆ ನಡೆದಿದೆ. ನಮಗೆ ಅನಗತ್ಯ ವಿವಾದಗಳಿಗಿಂತ ಜನಹಿತ ಮತ್ತು ಅಭಿವೃದ್ಧಿ ಕಾರ್ಯಗಳೇ ಮುಖ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

    ಪಟ್ಟಣದ ಆಡಳಿತ ಸೌಧದ ಮುಂಭಾಗದಲ್ಲಿ ಭಾನುವಾರ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿ, ಸರ್ಕಾರ ಜನತೆಯ ನಿರೀಕ್ಷೆ ಮತ್ತು ಆಶಯಗಳ ಅಡಿಪಾಯದ ಮೇಲೆ ಕೆಲಸ ಮಾಡುತ್ತಿದೆ. ನಮ್ಮ ಗ್ಯಾರಂಟಿ ಯೋನೆಗಳು ಅದೆಷ್ಟು ಜನಪ್ರಿಯವಾಗಿವೆ ಎಂದರೆ ಪ್ರತಿಪಕ್ಷಗಳು ನಮ್ಮ ಗ್ಯಾರಂಟಿ ಮಾದರಿಯಲ್ಲಿ ಯೋಜನೆಗಳನ್ನು ರೂಪಿಸುತ್ತಿವೆ. ಜನರಿಗೆ ಗ್ಯಾರಂಟಿಗಳಿಂದ ಅನುಕೂಲವಾಗಿದೆ. ನುಡಿದಂತೆ ನಡೆದ ನಮ್ಮನ್ನು ನೀವು ಆಶೀರ್ವದಿಸಿದ್ದೀರ. ಶಿಕಾರಿಪುರಕ್ಕೆ ಬಂದರೆ ನನಗೆ ನನ್ನ ಸಂಬಂಧಿಗಳ ಮನೆಗೆ ಬಂದ ಅನುಭವವಾಗುತ್ತದೆ. ಪಕ್ಷಾತೀತವಾಗಿ ಬಂದಿರುವ ನಿಮ್ಮನ್ನು ಕಂಡು ಸಂತಸವಾಗಿದೆ ಎಂದು ಹೇಳಿದರು.
    ನಿಮ್ಮೆಲ್ಲರ ಆಶೀರ್ವಾದ ಮತ್ತು ಗ್ಯಾರಂಟಿ ಯೋಜನೆಗಳ ಮೇಲೆ ವಿಶ್ವಾಸವಿಟ್ಟು ನೀವು ಬೆಂಬಲಿಸಿದ ಕಾರಣ ನಮ್ಮ ಸರ್ಕಾರ ಬಂದಿದೆ. ನಾನು ಸಚಿವನಾಗಿದ್ದೇನೆ. ಸಚಿವ ಸ್ಥಾನ ಶಾಶ್ವತವಲ್ಲ. ಆದರೆ ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಮುಖ್ಯ. ಜಾತ್ಯತೀತವಾಗಿ, ಪಕ್ಷಾತೀತವಾಗಿ ಅವಿರತ ಜನಪರ ಕೆಲಸಗಳನ್ನು ಮಾಡಿ ನಿಮ್ಮೆಲ್ಲರ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ. ಶಿಕಾರಿಪುರದಲ್ಲಿ ಒಂದರ್ಥದಲ್ಲಿ ಹಬ್ಬದ ವಾತಾವರಣವನ್ನು ನೀವು ಸೃಷ್ಟಿ ಮಾಡಿದ್ದೀರಿ ಎಂದು ಹೇಳಿದರು.
    ಶಿಕಾರಿಪುರ ತಾಲೂಕಿನಲ್ಲಿ ಗೃಹಲಕ್ಷ್ಮಿ ಯೋಜನೆಯಲ್ಲಿ 54,200 ಜನರು ಅರ್ಜಿ ಹಾಕಿದ್ದರು, ಅದರಲ್ಲಿ 53,708 ಜನರಿಗೆ ತಲುಪಿದೆ. ಉಳಿದದ್ದನ್ನು ಶೀಘ್ರದಲ್ಲಿ ಮನೆ ಮನೆಗೆ ಹೋಗಿ ತಲುಪಿಸಬೇಕು. ಉಚಿತ ವಿದ್ಯುತ್ ಯೋಜನೆಯಲ್ಲಿ ನಮ್ಮ ನಿರೀಕ್ಷೆಯನ್ನು ತಲುಪಿದೆ. ಪ್ರತಿ ಕುಟುಂಬ ನಿರ್ವಹಣೆ ಮಾಡುವವರು ಮಾತೆಯರು ಅವರಿಗೆ ಸರ್ಕಾರ ನೇರವಾಗಿ ಹಣವನ್ನು ತಲುಪಿಸುತ್ತಿದೆ. ಫೆ.24ರಂದು ಶಿವಮೊಗ್ಗದಲ್ಲಿ ನಡೆಯುವ ಸಮಾವೇಶಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗಮಿಸುತ್ತಿದ್ದಾರೆ ಎಂದು ತಿಳಿಸಿದರು.
    ರಾಜ್ಯದಲ್ಲಿರುವ ಸರ್ಕಾರಿ ಶಾಲೆಯ 60 ಲಕ್ಷ ಮಕ್ಕಳಿಗೆ ಉಚಿತ ಊಟ, ಹಾಲು, ಮೊಟ್ಟೆಯ ಜತೆಗೆ ಫೆ.27ರಿಂದ ವಾರದಲ್ಲಿ ಮೂರು ದಿನ ರಾಗಿ ಮಾಲ್ಟ್ ನೀಡುತ್ತೇವೆ. ಪಾಲಕರು ಸರ್ಕಾರಿ ಶಾಲೆಗಳನ್ನು ಪ್ರೋತ್ಸಾಹಿಸಿ. ನನ್ನ ಮುಖ್ಯ ಉದ್ದೇಶವೇ ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ನೀಡುವುದು ಎಂದರು.
    ತಂದೆಯವರಾದ ಎಸ್.ಬಂಗಾರಪ್ಪ ಅವರ ಗ್ರಾಮೀಣ ಕೃಪಾಂಕದಂತಹ ಅದ್ಭುತವಾದ ಯೋಜನೆಯಿಂದ ಲಕ್ಷಾಂತರ ಜನರ ಉದ್ಯೋಗಕ್ಕೆ ನಾಂದಿಯಾಯಿತು. ಅದು ಬಂಗಾರಪ್ಪಾಜೀ ಅವರ ದೂರದೃಷ್ಟಿ, ಬರಗಾಲ ಬಂದಾಗ ಸೊರಬ-ಶಿಕಾರಿಪುರ ತಾಲೂಕಿನ ರೈತರಿಗೆ ಉಚಿತ ಬಿತ್ತನೆ ಬೀಜ ನೀಡಿರುವುದು ಮತ್ತು ಉಚಿತ ವಿದ್ಯುತ್ ಯೋಜನೆ ನೀಡಿದ್ದನ್ನು ನಮ್ಮ ರೈತರು ಮರೆತಿಲ್ಲ. ಅಕ್ಷಯ, ಆಶ್ರಯ, ಆರಾಧನದಂತಹ ಯೋಜನೆಗಳು ಸಾಮಾಜಿಕ ಕಳಕಳಿಯ ಪ್ರತೀಕವಾಗಿದ್ದವು ಎಂದು ಹೇಳಿದರು.
    ಸರ್ಕಾರದ ಜನಪರವಾದ ಯೋಜನೆಗಳು ಮೊದಲು ಜನರಿಗೆ ತಲುಪಬೇಕು. ಆಗ ಸರ್ಕಾರದ ಶ್ರಮ ಸಾರ್ಥಕವಾಗುತ್ತದೆ. ಯಾವ ಕಾರಣಕ್ಕೂ ಅನಗತ್ಯ ಕಾರಣಗಳಿಂದ ಫಲಾನುಭವಿಗಳು ಇಂತಹ ಯೋಜನೆಗಳಿಂದ ವಂಚಿತರಾಗದಂತೆ ನೋಡಿಕೊಳ್ಳಿ. ನಮ್ಮದು ಸಂವಿಧಾನದ ಆಶಯಗಳಂತೆ ನಡೆಯುವ ಜಾತ್ಯತೀತ ಸರ್ಕಾರ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರೆಯಬೇಕು. ಶಾಂತಿ ಸೌಹಾರ್ದತೆಯ ಬದುಕು ನಮ್ಮ ಸರ್ಕಾರದ ಗುರಿ ಎಂದು ತಿಳಿಸಿದರು.
    ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಹುಲ್ಮಾರ್, ಪುರಸಭೆ ಸದಸ್ಯ ನಾಗರಾಜ್ ಗೌಡ ಮಾತನಾಡಿದರು. ಮಾಜಿ ಎಂಎಲ್‌ಸಿ ಆರ್.ಪ್ರಸನ್ನಕುಮಾರ್, ಕಾಡಾ ಮಾಜಿ ಅಧ್ಯಕ್ಷ ನಗರದ ಮಹದೇವಪ್ಪ, ಪುರಸಭೆ ಸದಸ್ಯ ಉಳ್ಳಿ ದರ್ಶನ್, ಉಪವಿಭಾಗಾಧಿಕಾರಿ ಯತೀಶ್, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಪ್ರಮುಖರಾದ ಉಮೇಶ್ ಮಾರವಳ್ಳಿ, ರುದ್ರಗೌಡ, ರಾಘವೇಂದ್ರ, ಶಿವಶಂಕರಪ್ಪ ಭಂಡಾರಿ, ಮಾಲತೇಶ್ ಇತರರಿದ್ದರು

    ಮೊದಲು ಪಾದಯಾತ್ರೆ ಮಾಡಿದ್ದು ನಾನು
    ಶಿಕಾರಿಪುರ ಹಾಗೂ ಸೊರಬ ತಾಲೂಕಿನಲ್ಲಿ ಶಾಶ್ವತ ನೀರಾವರಿಗೆ ಮೊದಲು ಪಾದಯಾತ್ರೆ ಮಾಡಿದ್ದು ನಾನು. ಅದಕ್ಕೆ ಮೊದಲು ಅನುದಾನ ನೀಡಿದ್ದು ಸಮ್ಮಿಶ ಸರ್ಕಾರದಲ್ಲಿ ಆಗ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ. ನಂತರ ಮುಖ್ಯಮಂತ್ರಿಯಾದ ಬಿ.ಎಸ್.ಯಡಿಯೂರಪ್ಪ ಅವರು ಆ ಯೋಜನೆಗೆ ಅನುದಾನ ನೀಡಿದರು. ಆಗ ಭವಿಷ್ಯದ ದೃಷ್ಟಿಕೋನವನ್ನು ಇಟ್ಟುಕೊಂಡು ನಾನು ಪಾದಯಾತ್ರೆ ಮತ್ತು ಹೋರಾಟ ಮಾಡಿದೆ. ಜನರಿಗೆ ನಮ್ಮ ಸರ್ಕಾರದ ಮೇಲೆ ಅಪಾರವಾದ ಅಭಿಮಾನವಿದೆ. ಅದರ ಧ್ಯೋತಕವೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 135 ಸ್ಥಾನಗಳನ್ನು ಪಡೆದು ಅಧಿಕಾರ ಹಿಡಿಯಲು ಮತ್ತು ಜನಸೇವೆ ಮಾಡಲು ಸಾಧ್ಯವಾಗಿದ್ದು ಎಂದು ಮಧು ಬಂಗಾರಪ್ಪ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts